ಮೈ ಜುಂ ಎನಿಸುವ ‘ಮಡ್ಡಿ’ ಚಿತ್ರ; ಇದು ಭಾರತದ ಮೊದಲ ಮಡ್​ ರೇಸ್​ ಸಿನಿಮಾ | India’s first mud race movie Muddy releasing on December 10th in 6 languages


ಮೈ ಜುಂ ಎನಿಸುವ ‘ಮಡ್ಡಿ’ ಚಿತ್ರ; ಇದು ಭಾರತದ ಮೊದಲ ಮಡ್​ ರೇಸ್​ ಸಿನಿಮಾ

‘ಮಡ್ಡಿ’ ಸಿನಿಮಾ ಪೋಸ್ಟರ್​

ಚೊಚ್ಚಲ ಸಿನಿಮಾದಲ್ಲಿ ರಿಸ್ಕ್​ ತೆಗೆದುಕೊಳ್ಳುವವರು ಕಡಿಮೆ. ಆದ್ರೆ ‘ಮಡ್ಡಿ’ (Muddy Movie) ಚಿತ್ರದ ನಿರ್ದೇಶಕ ಪ್ರಗ್ಬಲ್​ ಅವರು ತಮ್ಮ ಮೊದಲ ಸಿನಿಮಾದಲ್ಲಿಯೇ ಒಂದು ಚಾಲೆಂಜಿಂಗ್​ ಸ್ಕ್ರಿಪ್ಟ್​ ಆಯ್ಕೆ ಮಾಡಿಕೊಂಡಿದ್ದಾರೆ. ಮಡ್​ ರೇಸ್​ (Mud Race) ಕುರಿತಾದ ಕಥೆಯನ್ನು ಅವರು ಈ ಸಿನಿಮಾ ಮೂಲಕ ಹೇಳುತ್ತಿದ್ದಾರೆ. ಅಂದಾಜು 25 ಕೋಟಿ ರೂ. ಬಜೆಟ್​ನಲ್ಲಿ ತಯಾರಾಗಿರುವ ಈ ಸಿನಿಮಾ 6 ಭಾಷೆಯಲ್ಲಿ ಬಿಡುಗಡೆ ಆಗುತ್ತಿದೆ. ಕನ್ನಡ, ತೆಲುಗು, ತಮಿಳು, ಮಲಯಾಳಂ ಭಾಷೆಗಳಲ್ಲಿ ಏಕಕಾಲಕ್ಕೆ ಇದು ಚಿತ್ರೀಕರಣಗೊಂಡಿದೆ. ಹಿಂದಿ ಮತ್ತು ಇಂಗ್ಲಿಷ್​ಗೆ ಡಬ್​ ಆಗಿದೆ. ಒಟ್ಟು ಆರು ಭಾಷೆಗಳಲ್ಲಿ ಡಿ.10ರಂದು ‘ಮಡ್ಡಿ’ ಚಿತ್ರ ಬಿಡುಗಡೆ ಆಗುತ್ತಿದೆ. ‘ಕೆಜಿಎಫ್​: ಚಾಪ್ಟರ್​ 2’ ಸಂಗೀತ ನಿರ್ದೇಶಕ ರವಿ ಬಸ್ರೂರು (Ravi Basrur) ಅವರು ‘ಮಡ್ಡಿ’ ಸಿನಿಮಾಗೂ ಸಂಗೀತ ಸಂಯೋಜನೆ ಮಾಡಿದ್ದಾರೆ. ಯುವನ್​ ಕೃಷ್ಣ (Yuvan Krishna) ಮತ್ತು ರಿಧಾನ್​ ಕೃಷ್ಣ (Ridhaan Krishna) ಈ ಚಿತ್ರದ ಮುಖ್ಯಭೂಮಿಕೆಯಲ್ಲಿ ಅಭಿನಯಿಸಿದ್ದಾರೆ.

ಹಲವು ರಾಜ್ಯಗಳ ತಂತ್ರಜ್ಞರು ಈ ಸಿನಿಮಾಗಾಗಿ ಕೆಲಸ ಮಾಡಿದ್ದಾರೆ. ಬಾಹರ್​ ಎಂಟರ್​ಪ್ರೈಸಸ್​ ಬಾಷಾ ಅವರು ಈ ಸಿನಿಮಾವನ್ನು ವಿತರಣೆ ಮಾಡುತ್ತಿದ್ದಾರೆ. ಈ ಚಿತ್ರದ ಟ್ರೇಲರ್​ ನೋಡಿದರೆ ಕಥಾಹಂದರ ಮತ್ತು ಮೇಕಿಂಗ್​ ಹೇಗಿದೆ ಎಂಬುದರ ಸುಳಿವು ಸಿಗುತ್ತಿದೆ. ಮೈ ಜುಂ ಎನಿಸುವ ಮಡ್​ ರೇಸಿಂಗ್​ ದೃಶ್ಯಗಳಿವೆ. ಇಂಥ ಸಿನಿಮಾದಲ್ಲಿ ಕೆಲಸ ಮಾಡಿದ್ದು ಒಂದೊಳ್ಳೆಯ ಅನುಭವ ಎಂದಿದ್ದಾರೆ ರವಿ ಬಸ್ರೂರು.

‘ಈ ಚಿತ್ರದಲ್ಲಿ ಹಿನ್ನೆಲೆ ಸಂಗೀತಕ್ಕೆ ತುಂಬ ಮಹತ್ವ ಇದೆ. ಚಿತ್ರತಂಡದವರು ತೋರಿಸಿದ ದೃಶ್ಯಗಳನ್ನು ನೋಡಿದ ಬಳಿಕ ಸಂಗೀತ ನಿರ್ದೇಶನ ಮಾಡಲು ಒಪ್ಪಿಕೊಂಡೆ. ಹಲವು ರಾಜ್ಯಗಳ ಪ್ರತಿಭಾನ್ವಿತ ತಂತ್ರಜ್ಞರ ಸಮಾಗಮ ಈ ಚಿತ್ರದಲ್ಲಿ ಆಗಿದೆ. ನನಗೆ ಹೇಳಿಮಾಡಿಸಿದ ಪ್ರಾಜೆಕ್ಟ್​ ಇದು. ಮೊದಲ ಸಿನಿಮಾಗೆ ನಿರ್ದೇಶಕ ಪ್ರಗ್ಬಲ್​ ಅವರು ತುಂಬ ಅಧ್ಯಯನ ಮಾಡಿದ್ದಾರೆ. ಇಡೀ ಚಿತ್ರ ಅತ್ಯದ್ಭುತವಾಗಿ ಮೂಡಿಬಂದಿದೆ’ ಎಂದು ರವಿ ಬಸ್ರೂರು ಹೇಳಿದ್ದಾರೆ.

ರಿಯಲ್​ ಮಡ್​ ರೇಸರ್​ಗಳು ಇದರಲ್ಲಿ ನಟಿಸಿದ್ದಾರೆ. ಇನ್ನುಳಿದ ಕಲಾವಿದರಿಗೆ 2 ವರ್ಷಗಳ ಕಾಲ ಮಡ್​ ರೇಸ್​ ತರಬೇತಿ ಕೊಡಿಸಿ, ನಂತರ ಚಿತ್ರೀಕರಣ ಮಾಡಲಾಗಿದೆ. ಎಲ್ಲರೂ ಡೂಪ್​ ಬಳಸದೇ ಮಡ್​ ರೇಸ್​​ ದೃಶ್ಯಗಳಲ್ಲಿ ನಟಿಸಿದ್ದಾರೆ. ಒಂದು ಶಾಟ್​ ಕೂಡ ಗ್ರಾಫಿಕ್ಸ್​ ಇಲ್ಲ. ಎಲ್ಲವನ್ನೂ ನೈಜವಾಗಿ ಚಿತ್ರೀಕರಿಸಲಾಗಿದೆ ಎಂಬುದು ಈ ಸಿನಿಮಾದ ಹೆಚ್ಚುಗಾರಿಕೆ. ರತೀಶ್ ಛಾಯಾಗ್ರಹಣ, ಸ್ಯಾನ್ ಲೋಕೇಶ್ ಸಂಕಲನ ಹಾಗೂ ರನ್ ರವಿ ಅವರ ಸಾಹಸ ನಿರ್ದೇಶನ ಈ ಚಿತ್ರಕ್ಕಿದೆ. ಪ್ರೇಮಕೃಷ್ಣ ದಾಸ್ ಈ ಸಿನಿಮಾ ನಿರ್ಮಾಣ ಮಾಡಿದ್ದಾರೆ.

(ನಿರ್ದೇಶಕ ಪ್ರಗ್ಬಲ್, ವಿತರಕ ಬಾಷಾ, ಸಂಗೀತ ನಿರ್ದೇಶಕ ರವಿ ಬಸ್ರೂರು)

ನಿರ್ದೇಶಕ ಪ್ರಗ್ಬಲ್​ ಅವರಿಗೆ ಈ ಸಿನಿಮಾ ಮೇಲೆ ಸಖತ್​ ಭರವಸೆ ಇದೆ. ಈ ಚಿತ್ರಕ್ಕಾಗಿ ಅವರು 5 ವರ್ಷ ಶ್ರಮಿಸಿದ್ದಾರೆ. ದಟ್ಟ ಕಾಡಿನ ಒಳಗೆ ಶೂಟಿಂಗ್​ ನಡೆದಿದೆ. ಅದಕ್ಕಾಗಿ ಸಂಬಂಧಿಸಿದ ಇಲಾಖೆಯಿಂದ ಅನುಮತಿ ಪಡೆಯುವುದು ಕಷ್ಟ ಆಗಿತ್ತು. ಪ್ರತಿ ದಿನ ಕೆಲವೇ ಗಂಟೆಗಳು ಮಾತ್ರ ಶೂಟಿಂಗ್​ ಮಾಡಬೇಕಿತ್ತು. ಈ ಎಲ್ಲ ಅಡೆತಡೆಗಳ ನಡುವೆಯೂ ಅವರು ಒಂದು ಉತ್ತಮ ಸಿನಿಮಾ ನಿರ್ದೇಶನ ಮಾಡಿದ ಹೆಮ್ಮೆಯ ಭಾವ ಹೊಂದಿದ್ದಾರೆ.

ಕರ್ನಾಟಕದಲ್ಲಿ 75 ಹಾಗೂ ದೇಶಾದ್ಯಂತ ಅಂದಾಜು 400 ಚಿತ್ರಮಂದಿರಗಳಲ್ಲಿ ಡಿ.10ರಂದು ‘ಮಡ್ಡಿ’ ಸಿನಿಮಾ ಬಿಡುಗಡೆ ಆಗುತ್ತಿದೆ.

TV9 Kannada


Leave a Reply

Your email address will not be published. Required fields are marked *