ಮೊದಲೆರಡು ಪಂದ್ಯ ಸೋತರೂ ಫೈನಲ್​ಗೆ ಎಂಟ್ರಿ! ಟಿ20 ವಿಶ್ವಕಪ್‌ನಲ್ಲಿ ಪಾಕ್ ಪ್ರಯಾಣವೇ ರೋಚಕ – pakistan road to t20 world cup 2022 final cricket news in kannada


T20 World Cup 2022: ಈ ಟಿ20 ವಿಶ್ವಕಪ್​ನಲ್ಲಿ ಪಾಕಿಸ್ತಾನದ ಪಯಣ ಅದ್ಭುತವಾಗಿತ್ತು. ಭಾರತ ಮತ್ತು ಜಿಂಬಾಬ್ವೆ ವಿರುದ್ಧ ಸೋತು ಟೂರ್ನಿಯಲ್ಲಿ ತನ್ನ ಅಭಿಯಾನ ಆರಂಭಿಸಿದ್ದ ಪಾಕಿಸ್ತಾನ ತಂಡ ಇನ್ನೇನು ಗತಿಸುವ ಹಂತದಲ್ಲಿತ್ತು.

2022ರ ಟಿ20 ವಿಶ್ವಕಪ್‌ನಲ್ಲಿ (T20 World Cup 2022) ಪಾಕಿಸ್ತಾನ ಫೈನಲ್ ತಲುಪಿದೆ. ಬುಧವಾರ ಸಿಡ್ನಿಯಲ್ಲಿ ನಡೆದ ಸೆಮಿಫೈನಲ್ ಪಂದ್ಯದಲ್ಲಿ ಪಾಕಿಸ್ತಾನ 7 ವಿಕೆಟ್‌ಗಳಿಂದ ನ್ಯೂಜಿಲೆಂಡ್ ತಂಡವನ್ನು ಸೋಲಿಸಿತು. ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ನ್ಯೂಜಿಲೆಂಡ್ ಬಾಬರ್ ಅಜಮ್ (Babar Azam) ತಂಡಕ್ಕೆ 153 ರನ್​ಗಳ ಗುರಿ ನೀಡಿತು. ಪಾಕಿಸ್ತಾನ (Pakistan) 3 ವಿಕೆಟ್ ನಷ್ಟಕ್ಕೆ 5 ಎಸೆತಗಳು ಬಾಕಿ ಇರುವಂತೆಯೇ ಗುರಿ ಸಾಧಿಸಿತು. ಪಾಕಿಸ್ತಾನದ ಗೆಲುವಿನಲ್ಲಿ ಬಾಬರ್ ಅಜಮ್ ಮತ್ತು ಮೊಹಮ್ಮದ್ ರಿಜ್ವಾನ್ ಜೋಡಿ ಪ್ರಮುಖ ಪಾತ್ರವಹಿಸಿತ್ತು. ಇಬ್ಬರೂ 117 ರನ್‌ಗಳ ಅಪ್ರತಿಮ ಜೊತೆಯಾಟವನ್ನು ಹಂಚಿಕೊಂಡರು. ನವೆಂಬರ್ 13 ರಂದು ನಡೆಯಲಿರುವ ಫೈನಲ್‌ನಲ್ಲಿ, ಪಾಕಿಸ್ತಾನವು ನವೆಂಬರ್ 10 ರಂದು ನಡೆಯಲಿರುವ ಇಂಗ್ಲೆಂಡ್ ಮತ್ತು ಭಾರತ (England and India) ನಡುವಿನ ಎರಡನೇ ಸೆಮಿಫೈನಲ್‌ನ ವಿಜೇತ ತಂಡವನ್ನು ಎದುರಿಸಲಿದೆ.

ಈ ಟಿ20 ವಿಶ್ವಕಪ್​ನಲ್ಲಿ ಪಾಕಿಸ್ತಾನದ ಪಯಣ ಅದ್ಭುತವಾಗಿತ್ತು. ಭಾರತ ಮತ್ತು ಜಿಂಬಾಬ್ವೆ ವಿರುದ್ಧ ಸೋತು ಟೂರ್ನಿಯಲ್ಲಿ ತನ್ನ ಅಭಿಯಾನ ಆರಂಭಿಸಿದ್ದ ಪಾಕಿಸ್ತಾನ ತಂಡ ಇನ್ನೇನು ಗತಿಸುವ ಹಂತದಲ್ಲಿತ್ತು. ಆದರೆ ಪ್ರಮುಖ ಪಂದ್ಯಗಳಲ್ಲಿ ತಾನು ಸೋಲುವ ಚಾಳಿಯನ್ನು ದಕ್ಷಿಣ ಆಫ್ರಿಕಾ ಮುಂದುವರಿಸಿದರಿಂದ ಪಾಕಿಸ್ತಾನಕ್ಕೆ ಬಯಸದೆ ಬಂದ ಭಾಗ್ಯದಂತೆ ಸೆಮಿಫೈನಲ್‌ ಬಾಗಿಲು ತೆರೆಯಿತು. ಇಡೀ ವಿಶ್ವಕಪ್‌ನಲ್ಲಿ ಮಿಶ್ರ ಹೋರಾಟ ನೀಡಿದ ಪಾಕಿಸ್ತಾನ ತಂಡದ ಪ್ರದರ್ಶನ ಹೇಗಿತ್ತು ಎಂಬುದರ ಪೂರ್ಣ ವಿವರ ಇಲ್ಲಿದೆ.

23 ಅಕ್ಟೋಬರ್ 2022

ಈ ಪಂದ್ಯಾವಳಿಯಲ್ಲಿ ಭಾರತ ಮತ್ತು ಪಾಕಿಸ್ತಾನ ಮೆಲ್ಬೋರ್ನ್‌ನಲ್ಲಿ ಪರಸ್ಪರ ಮುಖಾಮುಖಿಯಾಗುವುದರೊಂದಿಗೆ ತಮ್ಮ ಅಭಿಯಾನವನ್ನು ಪ್ರಾರಂಭಿಸಿದ್ದವು. ಈ ಪಂದ್ಯದಲ್ಲಿ ಟೀಂ ಇಂಡಿಯಾ ಕೊನೆಯ ಎಸೆತದಲ್ಲಿ ಪಾಕಿಸ್ತಾನವನ್ನು ಮಣಿಸುವುದರೊಂದಿಗೆ 4 ವಿಕೆಟ್‌ಗಳಿಂದ ಗೆಲುವು ಸಾಧಿಸಿತ್ತು. ಪಾಕ್ ವಿರುದ್ಧ ಅಬ್ಬರಿಸಿದ್ದ ವಿರಾಟ್ ಕೊಹ್ಲಿ ಪಂದ್ಯದ ಆಟಗಾರನೆನಿಸಿಕೊಂಡರೆ, ಪಾಕಿಸ್ತಾನ ಸೋಲಿನೊಂದಿಗೆ ಟೂರ್ನಿ ಆರಂಭಿಸಿತ್ತು.

27 ಅಕ್ಟೋಬರ್ 2022

ಪಾಕಿಸ್ತಾನ ತನ್ನ ಎರಡನೇ ಪಂದ್ಯದಲ್ಲಿ ಜಿಂಬಾಬ್ವೆ ವಿರುದ್ಧ 1 ರನ್‌ಗಳ ಸೋಲನ್ನು ಎದುರಿಸಬೇಕಾಯಿತು. ಈ ಸೋಲು ಪಾಕಿಸ್ತಾನದ ಸೆಮಿಫೈನಲ್ ಆಸೆಗೆ ದೊಡ್ಡ ಪೆಟ್ಟು ನೀಡಿತ್ತು. ಈ ಸೋಲಿನ ನಂತರ ಪಾಕಿಸ್ತಾನ ತಂಡದ ಸೆಮಿಫೈನಲ್‌ ಕನಸು ಇತರ ತಂಡಗಳ ಫಲಿತಾಂಶದ ಮೇಲೂ ಅವಲಂಬಿತವಾಯಿತು.

30 ಅಕ್ಟೋಬರ್ 2022

ಎರಡು ಸೋಲಿನ ಬಳಿಕ ಪಾಕಿಸ್ತಾನ ತಂಡ ನೆದರ್ಲೆಂಡ್ಸ್ ತಂಡವನ್ನು 6 ವಿಕೆಟ್‌ಗಳಿಂದ ಸೋಲಿಸಿ ಟೂರ್ನಿಯಲ್ಲಿ ಗೆಲುವಿನ ಖಾತೆ ತೆರೆಯಿತು. ಈ ಪಂದ್ಯದಲ್ಲಿ ಭರ್ಜರಿ ಜಯ ಸಾಧಿಸಿದ ಪಾಕಿಸ್ತಾನ ರನ್ ರೇಟ್​ನಲ್ಲೂ ಲಾಭ ಪಡೆಯಿತು. ಬಳಿಕ ಪಾಕಿಸ್ತಾನ, ದಕ್ಷಿಣ ಆಫ್ರಿಕಾ ವಿರುದ್ಧದ ಭಾರತದ ಗೆಲುವಿಗಾಗಿ ಪ್ರಾರ್ಥಿಸುತ್ತಿತ್ತು. ಆದರೆ ಭಾರತ 5 ವಿಕೆಟ್‌ಗಳಿಂದ ಸೋತು ಪಾಯಿಂಟ್ ಪಟ್ಟಿಯಲ್ಲಿ ಎರಡನೇ ಸ್ಥಾನಕ್ಕೆ ಕುಸಿಯಿತು. ಅಗ್ರಸ್ಥಾನವನ್ನು ದಕ್ಷಿಣ ಆಫ್ರಿಕಾ ವಶಪಡಿಸಿಕೊಂಡಿತು. ಇದಾದ ಬಳಿಕ ಪಾಕಿಸ್ತಾನ ಟೂರ್ನಿಯಿಂದ ಹೊರಬೀಳುವುದು ಬಹುತೇಕ ಖಚಿತವಾಗಿತ್ತು.

3 ನವೆಂಬರ್ 2022

ಬಳಿಕ ಪಾಕಿಸ್ತಾನ, ದಕ್ಷಿಣ ಆಫ್ರಿಕಾವನ್ನು 33 ರನ್‌ಗಳಿಂದ ಸೋಲಿಸಿ ಎರಡನೇ ಗೆಲುವು ದಾಖಲಿಸಿತು. ಕೊನೆಯ ಎರಡು ಪಂದ್ಯಗಳನ್ನು ದೊಡ್ಡ ಅಂತರದಿಂದ ಗೆದ್ದ ಕಾರಣ ಅವರ ರನ್ ರೇಟ್ ಹೆಚ್ಚು ಉತ್ತಮವಾಯಿತು. ಆದರೆ ಈ ಗೆಲುವಿನ ಹೊರತಾಗಿಯೂ, ಅವರು ಇತರ ತಂಡಗಳ ನಡುವೆ ಸಿಲುಕಿಕೊಂಡರು. ಏಕೆಂದರೆ ಅಗ್ರ 2 ಸ್ಥಾನವನ್ನು ಭಾರತ ಮತ್ತು ದಕ್ಷಿಣ ಆಫ್ರಿಕಾ ಆಕ್ರಮಿಸಿಕೊಂಡಿತ್ತು. ಹೀಗಾಗಿ ಬಾಂಗ್ಲಾದೇಶ, ಭಾರತವನ್ನು ಸೋಲಿಸಬೇಕೆಂದು ಪಾಕ್ ಪ್ರಾರ್ಥಿಸಲು ಪ್ರಾರಂಭಿಸಿತು. ಆದರೆ ಅದು ಕೂಡ ಫಲಿಸದೆ ಟೀಂ ಇಂಡಿಯಾ ಬಾಂಗ್ಲಾದೇಶವನ್ನು ಮಣಿಸುವಲ್ಲಿ ಯಶಸ್ವಿಯಾಯಿತು. ಈ ಪಂದ್ಯದ ನಂತರ ಭಾರತ 6 ಅಂಕಗಳೊಂದಿಗೆ ಅಗ್ರಸ್ಥಾನ ಪಡೆದರೆ, ದಕ್ಷಿಣ ಆಫ್ರಿಕಾ 5 ಅಂಕಗಳೊಂದಿಗೆ ಎರಡನೇ ಸ್ಥಾನ ಮತ್ತು ಪಾಕಿಸ್ತಾನ 4 ಅಂಕಗಳೊಂದಿಗೆ ಮೂರನೇ ಸ್ಥಾನವನ್ನು ತಲುಪಿತು. ಇಲ್ಲಿಂದ ಪಾಕಿಸ್ತಾನದ ಸೇಮಿಸ್ ಪ್ರಯಾಣ ಕಷ್ಟಕರವಾಯಿತು, ಏಕೆಂದರೆ ನವೆಂಬರ್ 6 ರಂದು ಎಲ್ಲಾ ಮೂರು ತಂಡಗಳು ಗ್ರೂಪ್ 2 ರ ತಮ್ಮ ಕೊನೆಯ ಪಂದ್ಯವನ್ನು ಆಡಬೇಕಾಗಿತ್ತು. ಭಾರತ, ಜಿಂಬಾಬ್ವೆಯನ್ನು ಎದುರಿಸಬೇಕಾಗಿದ್ದರೆ, ದಕ್ಷಿಣ ಆಫ್ರಿಕಾ, ನೆದರ್ಲ್ಯಾಂಡ್ಸ್ ಮತ್ತು ಪಾಕಿಸ್ತಾನ, ಬಾಂಗ್ಲಾದೇಶವನ್ನು ಎದುರಿಸಬೇಕಾಗಿತ್ತು. ಪಾಕಿಸ್ತಾನಕ್ಕೆ ಇಲ್ಲಿಂದ ಸೆಮಿಫೈನಲ್ ತಲುಪುವುದು ಕಷ್ಟವಾಗಿತ್ತು.

6 ನವೆಂಬರ್ 2022

ಬೆಳಿಗ್ಗೆಯೇ ನೆದರ್ಲೆಂಡ್ಸ್ ತಂಡ ದಕ್ಷಿಣ ಆಫ್ರಿಕಾವನ್ನು 13 ರನ್‌ಗಳಿಂದ ಸೋಲಿಸಿ, ಹರಿಣಗಳಿಗೆ ಶಾಕ್ ನೀಡಿತ್ತು. ದಕ್ಷಿಣ ಆಫ್ರಿಕಾದ ಸೋಲಿನೊಂದಿಗೆ, ಭಾರತ ತನ್ನ ಕೊನೆಯ ಪಂದ್ಯಕ್ಕೂ ಮೊದಲೇ ಸೆಮಿಫೈನಲ್ ಪ್ರವೇಶಿಸಿತ್ತು. ಆದರೆ ನೆದರ್ಲ್ಯಾಂಡ್ಸ್ ಗೆಲುವಿನೊಂದಿಗೆ ಪಾಕಿಸ್ತಾನದ ಸೇಮಿಸ್ ಕನಸಿಗೆ ಗರಿ ಬಂದಿತು. ಇದರ ನಂತರ, ಪಾಕಿಸ್ತಾನ ಬಾಂಗ್ಲಾದೇಶವನ್ನು 5 ವಿಕೆಟ್‌ಗಳಿಂದ ಸೋಲಿಸುವುದರೊಂದಿಗೆ 6 ಅಂಕಗಳನ್ನು ಸಂಪಾಧಿಸಿ ಸೆಮಿಫೈನಲ್ ಪ್ರವೇಶಿಸಿತ್ತು.

ತಾಜಾ ಸುದ್ದಿ

TV9 Kannada


Leave a Reply

Your email address will not be published.