ಸಿಕ್ಕ ಚೊಚ್ಚಲ ಅವಕಾಶದಲ್ಲೇ ಶ್ರೇಯಸ್ ಅಯ್ಯರ್ ಭರ್ಜರಿ ಶತಕ ಸಿಡಿಸಿದ್ದು, ಟೀಮ್ ಇಂಡಿಯಾ ಪಾಳಯದಲ್ಲಿ ಹೊಸ ಭರವಸೆ ಮೂಡಿಸಿದೆ. ಅದರ ಜೊತೆಗೆ ಇದೇ ಸೆಂಚುರಿ ಇನ್ನಿಂಗ್ಸ್ ಮುಂದಿನ ಪಂದ್ಯ ಪ್ಲೇಯಿಂಗ್ ಇಲೆವೆನ್ ಸ್ಥಾನದ ಬಗ್ಗೆಯೂ ಹೊಸ ಚರ್ಚೆ ಹುಟ್ಟು ಹಾಕಿದೆ.
ನ್ಯೂಜಿಲೆಂಡ್ ವಿರುದ್ಧದ ಟೆಸ್ಟ್ ಸರಣಿಯ ಮೊದಲ ಪಂದ್ಯ ಆರಂಭಕ್ಕೂ ಮುನ್ನ ಅನಾನುಭವಿಗಳ ತಂಡ ಎಂಬ ಹಣೆಪಟ್ಟಿ ಟೀಮ್ ಇಂಡಿಯಾಗೆ ಅಂಟಿತ್ತು. ಆದ್ರೆ, ಪಂದ್ಯದಲ್ಲಿ ಅನುಭವಿಗಳು ಜವಾಬ್ದಾರಿ ಮರೆತರೂ ಅನಾನುಭವಿ ಆಟಗಾರರು ಪ್ರಾಮಿಸಿಂಗ್ ಆಟವಾಡಿದ್ದಾರೆ. ಅದರಲ್ಲೂ ಮುಖ್ಯವಾಗಿ ತಂಡ ಅಲ್ಪ ಮೊತ್ತಕ್ಕೆ ಕುಸಿಯೋ ಬೀತಿಯಲ್ಲಿದ್ದಾಗ, ಆಸರೆಯಾಗಿದ್ದು ಚೊಚ್ಚಲ ಪಂದ್ಯವನ್ನಾಡಿದ ಶ್ರೇಯಸ್ ಅಯ್ಯರ್.
ಅನುಭವಿಗಳೇ ಕಿವೀಸ್ ಬೌಲರ್ಗಳಿಗೆ ಸುಲಭದ ತುತ್ತಾದಾಗ, ಡೆಬ್ಯೂ ಮ್ಯಾಚ್ನಲ್ಲೇ ಶ್ರೇಯಸ್ ಅಯ್ಯರ್ ದಿಟ್ಟ ಹೋರಾಟ ನಡೆಸಿದ್ರು. ಇಷ್ಟೇ ಅಲ್ಲ.. ಶತಕ ಇನ್ನಿಂಗ್ಸ್ ಕಟ್ಟಿ ತಂಡ ಗೌರವಯುತ ಮೊತ್ತ ಕಲೆ ಹಾಕುವಲ್ಲಿಯೂ ನೆರವಾಗಿದ್ದಾರೆ. ಹಾಗಿದ್ರೂ ಮುಂದಿನ 2ನೇ ಟೆಸ್ಟ್ನಲ್ಲಿ ಶ್ರೇಯಸ್ಗೆ ಪ್ಲೇಯಿಂಗ್ ಇಲೆವೆನ್ ಸ್ಥಾನ ಅನುಮಾನವಾಗಿದೆ. ಅದಕ್ಕೆ ಕಾರಣ ಖಾಯಂ ನಾಯಕ ವಿರಾಟ್ ಕೊಹ್ಲಿಯ ಕಮ್ಬ್ಯಾಕ್.
ಶತಕ ಸಿಡಿಸಿದ ಅಯ್ಯರ್ ಸ್ಥಾನ ಅಭದ್ರ..!
ವಿರಾಟ್ ಕೊಹ್ಲಿ ಅಲಭ್ಯರಾದ ಕಾರಣಕ್ಕೆ ಶ್ರೇಯಸ್ ಅಯ್ಯರ್ಗೆ ತಂಡದಲ್ಲಿ ಸ್ಥಾನ ಕಲ್ಪಿಸಲಾಗಿತ್ತು. ಆ ಅವಕಾಶವನ್ನ ಎರಡೂ ಕೈಗಳಲ್ಲಿ ಬಾಚಿಕೊಂಡಿರುವ ಅಯ್ಯರ್ ಶತಕ ಸಿಡಿಸಿ ಹೊಸ ಭರವಸೆಯನ್ನೂ ಮೂಡಿಸಿದ್ದಾರೆ. ಹಾಗಿದ್ರೂ, ಮುಂದಿನ ಪಂದ್ಯದಲ್ಲಿ ಮುಂಬೈಕರ್, ಕೊಹ್ಲಿ ಸ್ಥಾನ ಬಿಟ್ಟು ಕೊಡಬೇಕಾದ ಅನಿವಾರ್ಯತೆಯಲ್ಲಿದ್ದಾರೆ. ಅಮೋಘ ಫಾರ್ಮ್ನಲ್ಲಿದ್ರೂ ಸ್ಥಾನ ಕೈ ತಪ್ಪುತ್ತಾ ಅನ್ನೋದು ನಿಮ್ಮ ಪ್ರಶ್ನೆ ಆಗಿರಬಹುದು. ಇದಕ್ಕೆ ಸ್ವತಃ ಮಾಜಿ ಕ್ರಿಕೆಟಿಗ ವಿವಿಎಸ್ ಲಕ್ಷ್ಮಣ್ ತಮ್ಮ ಅಭಿಪ್ರಾಯ ತಿಳಿಸಿದ್ದಾರೆ ನೀವೇ ಕೇಳಿ.
‘ಭಾರತೀಯ ಕ್ರಿಕೆಟ್ನ ಅಲಿಖಿತ ನಿಯಮ’
‘ಭಾರತೀಯ ಕ್ರಿಕೆಟ್ನಲ್ಲಿ ಒಂದು ಅಲಿಖಿತ ನಿಯಮವಿದೆ. ನಾವು ಈ ಹಿಂದೆ ಕರುಣ್ ನಾಯರ್ ತ್ರಿಶತಕ ಹೊಡೆದ ಸಂದರ್ಭದಲ್ಲಿ ನೋಡಿದ್ದೇವೆ. ಯಾವಾಗ ಅಜಿಂಕ್ಯಾ ರಹಾನೆ ತಂಡಕ್ಕೆ ವಾಪಾಸ್ಸಾದ್ರೋ ಕರುಣ್ ನಾಯರ್ ಸ್ಥಾನದಿಂದ ವಂಚಿತರಾದರು. ಇದೀಗ ಮತ್ತದೆ ಮರುಕಳಿಸುವ ಸಾಧ್ಯತೆಯಿದೆ. ಅಯ್ಯರ್ ಆಡಿದ್ದು, ಕೊಹ್ಲಿ ಅಲಭ್ಯರಾಗಿದ್ದರು ಅನ್ನೋ ಕಾರಣಕ್ಕೆ’
ವಿವಿಎಸ್ ಲಕ್ಷ್ಮಣ್, ಮಾಜಿ ಕ್ರಿಕೆಟಿಗ
2016ರ ಇಂಡೋ-ಇಂಗ್ಲೆಂಡ್ ನಡುವಿನ ಟೆಸ್ಟ್ ಸರಣಿಯ 5ನೇ ಪಂದ್ಯದಲ್ಲಿ ಕನ್ನಡಿಗ ಕರುಣ್ ನಾಯರ್ ದಾಖಲೆ ಬರೆದಿದ್ರು. ಚೆನ್ನೈ ಅಂಗಳದಲ್ಲಿ ಅಮೋಘ ಇನ್ನಿಂಗ್ಸ್ ಕಟ್ಟಿದ್ದ ಕನ್ನಡಿಗ ತ್ರಿಶತಕ ಸಿಡಿಸಿದ್ರು. ಆ ಇನ್ನಿಂಗ್ಸ್ನ ಬಳಿಕ ರಹಾನೆ ಅಲಭ್ಯತೆಯಿಂದಾಗಿ ಆಸ್ಟ್ರೇಲಿಯಾ ವಿರುದ್ಧದ 3 ಪಂದ್ಯಗಳ ಸರಣಿಯಲ್ಲಿ ಸ್ಥಾನ ಗಿಟ್ಟಿಸಿಕೊಂಡಿದ್ರು. ಆದ್ರೆ, ಯಾವಾಗ ರಹಾನೆ ವಾಪಾಸ್ಸಾದ್ರೋ, ಕರುಣ್ ಸ್ಥಾನ ವಂಚಿತರಾದ್ರು. ಇನ್ಫ್ಯಾಕ್ಟ್ ಈವರೆಗೂ ತಂಡಕ್ಕೆ ಕಮ್ಬ್ಯಾಕ್ ಮಾಡೋ ಅವಕಾಶವೇ ಸಿಕ್ಕಿಲ್ಲ. ಇದೇ ಅಯ್ಯರ್ ವಿಚಾರದಲ್ಲಿ ಮತ್ತೆ ಮರುಕಳಿಸಲಿದೆ ಅನ್ನೋದು ಸದ್ಯ ಕ್ರಿಕೆಟ್ ಲೋಕದಲ್ಲಿರೋ ಟಾಕ್ ಆಗಿದೆ.