ಮೊದಲ ಟೆಸ್ಟ್.. ಗೆಲ್ಲೋದು ಯಾರು..? -ಟಾಪ್ 10 ಸುದ್ದಿಗಳ ಕ್ವಿಕ್​ರೌಂಡಪ್


ಇಂದಿನಿಂದ ಸಂಸತ್ತು ಚಳಿಗಾಲದ ಅಧಿವೇಶನ ಆರಂಭ
ಪ್ರಸಕ್ತ ವರ್ಷದ ಸಂಸತ್ತು ಚಳಿಗಾಲದ ಅಧಿವೇಶನ ಇಂದಿನಿಂದ ಶುರುವಾಗಲಿದೆ. ಡಿಸೆಂಬರ್​ 23ರ ವರೆಗೆ ನಡೆಯಲಿರೋ ಅಧಿವೇಶನದಲ್ಲಿ 26ಕ್ಕೂ ಹೆಚ್ಚು ಮಸೂದೆಗಳು ಮಂಡನೆಯಾಗೋ ಸಾಧ್ಯತೆ ಇದೆ. ಪ್ರಮುಖವಾಗಿ ಮೂರು ಕೃಷಿ ಕಾಯಿದೆಗಳ ರದ್ದತಿ, ಕ್ರಿಪ್ಟೋ ಕರೆನ್ಸಿ ನಿಯಂತ್ರಣ, ಕೆಲ ಸರ್ಕಾರಿ ಬ್ಯಾಂಕ್ ಖಾಸಗೀಕರಣ, ಡ್ರಗ್ಸ್​​ ನಿಯಂತ್ರಣ ಸೇರಿ ಹಲವು ಮಸೂದೆಗಳು ಈ ಬಾರಿ ಮಂಡಿಸುವುದಕ್ಕಾಗಿ ಕೇಂದ್ರ ಅಣಿಯಾಗಿದೆ.. ಹೀಗಾಗಿ ಇಡೀ ದೇಶದ ಚಿತ್ತ ಚಳಿಗಾಲದ ಅಧಿವೇಶನದತ್ತ ನೆಟ್ಟಿದೆ. ಈ ಸಂಬಂಧ ಪ್ರಧಾನಿ ಮೋದಿ ಸುಸೂತ್ರ ಅಧಿವೇಶನ ನಡೆಸುವುದಕ್ಕಾಗಿ ಸರ್ವಪಕ್ಷಗಳ ಸಭೆ ಕರೆದು ಚರ್ಚಿಸಿದ್ರು.. ಆದರೆ ಪ್ರಧಾನಿ ಮೋದಿ ಸಭೆಗೆ ಗೈರಾಗಿದ್ದು, ವಿಪಕ್ಷ ನಾಯಕರ ಆಕ್ರೋಶಕ್ಕೆ ಕಾರಣವಾಗಿತ್ತು.

‘ಅಪ್ಪು’ ಅಗಲಿ ಇಂದಿಗೆ ಒಂದು ತಿಂಗಳು
ಕರ್ನಾಟಕ ರತ್ನ ಪುನೀತ್ ರಾಜ್​ಕುಮಾರ್​ ಅಗಲಿ ಇಂದಿಗೆ ಒಂದು ತಿಂಗಳು ತುಂಬಿದೆ. ಹೀಗಾಗಿ ಇವತ್ತು ಅಪ್ಪು ಕುಟುಂಬಸ್ಥರು ಪುನೀತ್​ ಸಮಾಧಿಗೆ ವಿಶೇಷ ಪೂಜೆ ಸಲ್ಲಿಸಲಿದ್ದಾರೆ. ಕಂಠೀರವ ಸ್ಟುಡಿಯೋದಲ್ಲಿರುವ ಅಪ್ಪು ಸಮಾಧಿಗೆ ಶಿವಣ್ಣ, ರಾಘವೇಂದ್ರ ರಾಜ್​ಕುಮಾರ್​ ಹಾಗೂ ಪುನೀತ್​ ಪತ್ನಿ ಅಶ್ವಿನಿ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಕೆ ಮಾಡಲಿದ್ದಾರೆ.

‘ಒಮಿಕ್ರಾನ್’ ತಳಿಯ ಲಕ್ಷಣಗಳೇ ಚಿತ್ರ-ವಿಚಿತ್ರ..!
ಹೊಸ ರೂಪ ತಾಳಿ, ದೇಹ ಹೊಕ್ಕುತ್ತಿರೋ ಕೊರೊನಾ ಮತ್ತಷ್ಟು ಬಲಶಾಲಿಯಾಗಿದೆ. ಹಿಂದಿಗಿಂತಲೂ ಐದಾರು ಪಟ್ಟು ಡೇಂಜರಸ್​ ಎನ್ನಲಾಗ್ತಿರೋ ಒಮಿಕ್ರಾನ್​​​​ ವೈರಸ್​ ಲಕ್ಷಣಗಳೇ ಚಿತ್ರ-ವಿಚಿತ್ರವಾಗಿದೆ. ಒಮಿಕ್ರಾನ್​ ಸೋಂಕಿತರಲ್ಲಿ ಸ್ನಾಯು ನೋವು, ಗಂಟಲಿನಲ್ಲಿ ಕೆಂಪು ಗೆರೆಗಳು, ಮತ್ತು ಒಣ ಕೆಮ್ಮು ಸೇರಿ ಹಲವು ಲಕ್ಷಣಗಳು ಪತ್ತೆಯಾಗಿವೆ. ಇದರ ಜೊತೆಗೆ ಕೆಲವರಲ್ಲಿ ಜ್ವರ ಹೆಚ್ಚಿನ ಪ್ರಮಾಣದಲ್ಲಿ ಕಾಣಿಸಿಕೊಂಡಿದೆ. ಇಂಟ್ರಸ್ಟಿಂಗ್​​ ಅಂದ್ರೆ, 30 ರೋಗಿಗಳ ಪೈಕಿ 7 ರೋಗಿಗಳಲ್ಲಿ ಡೆಲ್ಟಾ ಮಾದರಿ ಹೊಂದಿಕೆ ಆಗಿಲ್ಲ ಅಂತ ಆಫ್ರಿಕಾ ವೈದ್ಯರು ಮಾಹಿತಿ ನೀಡಿದ್ದಾರೆ.

‘ಒಮಿಕ್ರಾನ್’​ ಕಂಟ್ರೋಲ್​ಗೆ ಹೊಸ ಗೈಡ್​ಲೈನ್ಸ್!
ಕೊರೊನಾ ಸೋಂಕಿನಿಂದ ಒಂದೆರಡು ಬಾರಿ ಯಟ್ಟುವಟ್ಟು ಮಾಡಿಕೊಂಡಿರೋ ಭಾರತ ಈಗ ಫುಲ್ ಅಲರ್ಟ್ ಆಗಿದೆ. ದೇಶದ ಗಡಿಯೊಳಗೆ ಒಮಿಕ್ರಾನ್ ಎಂಟ್ರಿ ಕೊಡದಂತೆ ಕೇಂದ್ರ ಸರ್ಕಾರ ಕಠಿಣ ಕ್ರಮಕ್ಕೆ ಮುಂದಾಗಿದೆ. ಕಳೆದ ರಾತ್ರಿ ಕೇಂದ್ರ ಆರೋಗ್ಯ ಇಲಾಖೆ ಹೊಸ ಗೈಡ್​ಲೈನ್ಸ್​ ರಿಲೀಸ್ ಮಾಡಿದೆ. ಅದೇನಂದ್ರೆ ವಿದೇಶದಿಂದ ಯಾರೇ ಬಂದ್ರೂ ಕೆಲವೊಂದಿಷ್ಟು ರೂಲ್ಸ್​ ಫಾಲೋ ಮಾಡಲೇಬೇಕಾಗಿದೆ. ಕೋವಿಡ್ ನೆಗೆಟಿವ್​ ರಿಪೋರ್ಟ್​ ಇದ್ರೆ ಮಾತ್ರ ಪ್ರವೇಶ ನೀಡಲಾಗುತ್ತೆ. ಹೊರ ದೇಶಗಳಿಂದ ಬಂದ್ರೆ 14 ದಿನ ಕ್ವಾರೆಂಟೀನ್ ನಿಯಮ ಪಾಲಿಸಬೇಕು. ಜೊತೆಗೆ 20ಕ್ಕೂ ಹೆಚ್ಚು ಹೈರಿಸ್ಕ್​ ದೇಶಗಳಿಂದ ಬರುವ ಪ್ರಯಾಣಿಕರ ಮೇಲೆ ಕೇಂದ್ರ ಹೆಚ್ಚಿನ ನಿಗಾ ಇಟ್ಟಿದೆ.

ಚಿಕಿತ್ಸೆ ವೇಳೆ ವೈದ್ಯರಿಗೂ ಹೃದಯಾಘಾತ, ಇಬ್ಬರೂ ಸಾವು
ಹೃದಯಾಘಾತಕ್ಕೆ ಒಳಗಾಗಿದ್ದ ರೋಗಿಗೆ ಚಿಕಿತ್ಸೆ ನೀಡುತ್ತಿದ್ದ ವೇಳೆ ವೈದ್ಯರಿಗೂ ಹೃದಯಾಘಾತವಾಗಿ ಇಬ್ಬರೂ ಮೃತಪಟ್ಟಿರುವ ಘಟನೆ ತೆಲಂಗಾಣದಲ್ಲಿ ನಡೆದಿದೆ. ಕಾಮಾರೆಡ್ಡಿ ಜಿಲ್ಲೆಯ ಗಾಂಧಾರಿ ಮಂಡಲದ ಗುಜ್ಜು ತಾಂಡ ಎಂಬ ಪ್ರದೇಶಕ್ಕೆ ಸೇರಿದ ಸರ್ಜು ಎಂಬಾತನಿಗೆ ಹೃದಯಾಘಾತವಾಗಿತ್ತು. ಕುಟುಂಬಸ್ಥರು ತಕ್ಷಣ ಆತನನ್ನು ಗಾಂಧಾರಿಯ ಖಾಸಗಿ ನರ್ಸಿಂಗ್ ಹೋಮ್​ಗೆ ಕರೆ ತಂದಿದ್ದರು. ಖಾಸಗಿ ನರ್ಸಿಂಗ್ ಹೋಮ್​ನಲ್ಲಿ ರೋಗಿಗೆ ಚಿಕಿತ್ಸೆ ನೀಡುತ್ತಿದ್ದ ವೇಳೆ ವೈದ್ಯ ಲಕ್ಷ್ಮಣ್​ಗೂ ಹೃದಯಾಘಾತವಾಗಿದ್ದೂ, ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.

‘ವರುಣ’ನ ಭೀತಿ.. ತಮಿಳುನಾಡಿನ 7 ಜಿಲ್ಲೆಗಳಲ್ಲಿ ಅಲರ್ಟ್
ಮಳೆಯಿಂದ ತತ್ತರಿಸಿದ್ದ ತಮಿಳುನಾಡಿಗೆ ಮತ್ತೊಂದು ಶಾಕ್​​​ ಎದುರಾಗಿದೆ. ಚೆನ್ನೈ ಸೇರಿದಂತೆ ರಾಜ್ಯದ ಹಲವು ಜಿಲ್ಲೆಗಳಲ್ಲಿ ಭಾರೀ ಮಳೆಯಾಗಲಿದೆ ಅಂತಾ ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ. ಹವಾಮಾನ ಇಲಾಖೆ ಮಳೆಯ ಮುನ್ಸೂಚನೆ ನೀಡಿದ ಬೆನ್ನಲ್ಲೆ ರಾಜ್ಯದ ಏಳು ಜಿಲ್ಲೆಗಳಲ್ಲಿ ಶಾಲಾ ಕಾಲೇಜುಗಳಿಗೆ ಸರ್ಕಾರ ರಜೆ ಘೋಷಿಸಿದೆ. ತಿರುನಲ್​ವೇಲಿ, ಕನ್ಯಾಕುಮಾರಿ ಹಾಗೂ ರಾಮನಾಥ್​ಪುರಂನಲ್ಲಿ ಭಾರಿ ಮಳೆಯಾಗುವ ಸಾಧ್ಯತೆಗಳಿದ್ದು, ತಮಿಳುನಾಡು ಸರ್ಕಾರ ಹಲವು ಜಿಲ್ಲೆಗಳಲ್ಲಿ ಹೈ ಅಲರ್ಟ್ ಘೋಷಣೆ ಮಾಡಿದೆ.

800 ವರ್ಷಗಳಷ್ಟು ಹಳೆಯ ಮಮ್ಮಿ ಪತ್ತೆ..!


ಪೇರುವಿನ ಮಧ್ಯ ಕರಾವಳಿಯಲ್ಲಿ 800 ವರ್ಷಗಳಷ್ಟು ಹಳೆಯದಾದ ಮಮ್ಮಿ ಪತ್ತೆಯಾಗಿದೆ. ಲಿಮಾ ನಗರದ ಹೊರವಲಯದಲ್ಲಿ ಮಮ್ಮಿ ಪತ್ತೆಯಾಗಿದ್ದು, ಸಮಾಧಿಯಲ್ಲಿ ಪಿಂಗಾಣಿ, ತರಕಾರಿ ಅವಶೇಷಗಳು ಮತ್ತು ಕಲ್ಲಿನ ಉಪಕರಣಗಳು ಸೇರಿದಂತೆ ಹಲವು ರೀತಿಯ ವಸ್ತುಗಳು ಕಂಡುಬಂದಿವೆ. ಈ ಬಗ್ಗೆ ಮಾಹಿತಿ ನೀಡಿರುವ ಪುರಾತತ್ವ ಶಾಸ್ತ್ರಜ್ಞ ಪೀಟರ್ ವ್ಯಾನ್ ಡೇಲೆನ್ ಲೂನಾ, ಸಿಕ್ಕಿರುವ ಮಮ್ಮಿಯ ಇಡೀ ದೇಹವನ್ನು ಹಗ್ಗದಿಂದ ಕಟ್ಟಲಾಗಿದೆ. ಕೈಗಳಿಂದ ಮುಖ ಮುಚ್ಚಿದ ರೀತಿಯಲ್ಲಿ ಮಮ್ಮಿ ಇರಿಸಲಾಗಿದೆ. ಇನ್ನು ಸ್ಥಳೀಯ ಮಾದರಿಯಲ್ಲಿ ಅಂತ್ಯಕ್ರಿಯೆ ಮಾಡಲಾಗಿದೆ ಅಂತ ಹೇಳಿದ್ದಾರೆ.

ಅಮೆರಿಕಾದ ಉತ್ತರ ಪೆರುವಿನಲ್ಲಿ 7.5 ತೀವ್ರತೆಯ ಭೂಕಂಪ
ಉತ್ತರ ಅಮೆರಿಕಾದ ಪೆರುವಿನಲ್ಲಿ ಭಾರಿ ಪ್ರಮಾಣದ ಭೂಕಂಪ ಸಂಭವಿಸಿದೆ. ಉತ್ತರ ಪೆರುವಿನ ಬ್ಯಾರೆನ್ಸ್​ನಿಂದ ಸುಮಾರು 40 ಕಿಲೋ ಮೀಟರ್ ದೂರದವರೆಗೂ ಭೂಕಂಪನ ಸಂಭವಿಸಿದ್ದು, ಅಪಾರ ಆಸ್ತಿ ಪಾಸ್ತಿ ಹಾನಿಗೊಳಗಾಗಿದೆ. ರಿಕ್ಟರ್​​​ ಮಾಪಕದಲ್ಲಿ ಭೂಕಂಪದ ತೀವ್ರತೆ 7.5 ರಷ್ಟು ದಾಖಲಾಗಿದೆ. ಭೂಮಿಯಿಂದ ಸುಮಾರು 100 ಕಿಲೋ ಮೀಟರ್ ಆಳದಲ್ಲಿ ಭೂಂಕಪದ ಅಲೆಗಳು ಉಂಟಾಗಿದೆ ಎನ್ನಲಾಗಿದೆ. ಪೆರುವಿನ ರಾಜಧಾನಿ ಲೈಮಾದಲ್ಲೂ ಭೂಕಂಪನದ ಅನುಭವವಾಗಿದ್ದು, ಕೆಲವೆಡೆ ಮನೆಗಳು ಬಿರುಕು ಬಿಟ್ಟಿದೆ.

ರೇಸಿಂಗ್ ದಿಗ್ಗಜ ಫ್ರಾಂಕ್ ವಿಲಿಯಮ್ಸ್ ನಿಧನ
ವಿಲಿಯಮ್ಸ್ ಫಾರ್ಮುಲಾ ಒನ್ ರೇಸಿಂಗ್ ತಂಡದ ಸ್ಥಾಪಕ ಮತ್ತು ತಂಡದ ಮಾಜಿ ಮುಖ್ಯಸ್ಥರಾದ ಸರ್ ಫ್ರಾಂಕ್ ವಿಲಿಯಮ್ಸ್ 79ನೇ ವಯಸ್ಸಿನಲ್ಲಿ ನಿಧನರಾಗಿದ್ದಾರೆ. ಎಫ್1 ಕ್ರೀಡಾಲೋಕದ ದಂತಕಥೆ ವಿಲಿಯಮ್ಸ್, ಸುದೀರ್ಘ ಸೇವೆ ಸಲ್ಲಿಸಿ, ತಂಡದ ಮುಖ್ಯಸ್ಥರಾಗಿದ್ದರು. 2013 ರಿಂದ ತಂಡದ ಆಗು ಹೋಗುಗಳನ್ನು ಮಗಳು ಕ್ಲೇರ್ ಸೇರಿದಂತೆ ಕುಟುಂಬಸ್ಥರು ನೋಡಿಕೊಳ್ಳುತ್ತಿದ್ದರು. ಈ ವರ್ಷದ ಆರಂಭದಲ್ಲಿ ಕುಟುಂಬವು ತಂಡವನ್ನು ಹೂಡಿಕೆ ಸಂಸ್ಥೆ ಡೊರಿಲ್ಟನ್ ಕ್ಯಾಪಿಟಲ್‌ಗೆ ಮಾರಾಟ ಮಾಡಿದ ನಂತರ ಎಫ್ 1 ಕಣದಿಂದ ಹೊರಗುಳಿದಿದ್ದರು..

ಮೊದಲ ಟೆಸ್ಟ್.. ಗೆಲ್ಲೋದು ಯಾರು..?
ಕೀವಿಸ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯ ಗೆಲ್ಲಲು ಟೀಂ ಇಂಡಿಯಾಗೆ ಇನ್ನೂ 9 ವಿಕೆಟ್​ಗಳ ಅವಶ್ಯಕತೆ ಇದೆ. ನಾಲ್ಕನೇ ದಿನದಾಟದ ಅಂತ್ಯಕ್ಕೆ ನ್ಯೂಜಿಲೆಂಡ್​ ತಂಡ 1 ವಿಕೆಟ್​ ಕಳೆದುಕೊಂಡು 4 ರನ್​ ಗಳಿಸಿದೆ. ಸದ್ಯ ಟಾಮ್​ ಲಾಥಮ್​ ಹಾಗೂ ವಿಲಿಯಂ ಸೋಮರ್ವಿಲ್ಲೆ ಕ್ರೀಸ್​ನಲ್ಲಿದ್ದಾರೆ. ಶ್ರೇಯಸ್ ಅಯ್ಯರ್, ಸಹಾ ಅಮೋಘ ಬ್ಯಾಟಿಂಗ್ ಸಹಾಯದಿಂದ ಭಾರತ 234 ರನ್​ಗಳಿಗೆ ಡಿಕ್ಲೇರ್ ನೀಡಿತ್ತು. ಸದ್ಯ ಕೊನೆ ದಿನವಾದ ಇಂದು ಕೀವಿಸ್​​ ಗೆಲ್ಲಲು 280 ರನ್​ಗಳ ಅವಶ್ಯಕತೆ ಇದೆ.

News First Live Kannada


Leave a Reply

Your email address will not be published. Required fields are marked *