ಕೊಲಂಬೋ: ಶಿಖರ್ ಧವನ್, ಇಶಾನ್ ಕಿಶನ್, ಪೃಥ್ವಿ ಶಾ ಅವರ ಭರ್ಜರಿ ಬ್ಯಾಟಿಂಗ್‍ನಿಂದಾಗಿ ಭಾರತ ತಂಡ ಶ್ರೀಲಂಕಾ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ 7 ವಿಕೆಟ್‍ಗಳ ಭರ್ಜರಿ ಜಯ ಸಾಧಿಸಿದೆ. ಈ ಮೂಲಕ ಮೂರು ಪಂದ್ಯಗಳ ಸರಣಿಯಲ್ಲಿ 1-0 ಮುನ್ನಡೆ ಪಡೆದುಕೊಂಡಿದೆ.

ಶ್ರೀಲಂಕಾ ನೀಡಿದ 262 ರನ್‍ಗಳ ಗುರಿ ಪಡೆದ ಭಾರತಕ್ಕೆ ಆರಂಭಿಕ ಜೋಡಿ ಶಿಖರ್ ಧವನ್ ಮತ್ತು ಪೃಥ್ವಿ ಶಾ ಮೊದಲ ವಿಕೆಟ್‍ಗೆ 58ರನ್ (33 ಎಸೆತ) ಕಲೆ ಹಾಕಿ ಭರ್ಜರಿ ಆರಂಭ ಒದಗಿಸಿತ್ತು. ಅದರಲ್ಲೂ ಆರಂಭದಲ್ಲೇ ಪೃಥ್ವಿ ಶಾ ಬೌಂಡರಿಗಳ ಮಳೆ ಸುರಿಸುತ್ತಿದ್ದರು. ಈ ವೇಳೆ ದಾಳಿಗಿಳಿದ ಧನಂಜಯ ಡಿಸಿಲ್ವ ಉತ್ತಮವಾಗಿ ಆಡುತ್ತಿದ್ದ ಪೃಥ್ವಿ ಶಾ 43ರನ್(24 ಎಸೆತ, 9 ಬೌಂಡರಿ) ವಿಕೆಟ್ ಕಿತ್ತರು. ಬಳಿಕ ಒಂದಾದ ಬರ್ತ್‍ಡೆ ಬಾಯ್ ಇಶಾನ್ ಕಿಶನ್ ಮತ್ತು ಧವನ್ ಜೋಡಿ ಶ್ರೀಲಂಕಾ ಬೌಲರ್‍ ಗಳ ಬೆವರಿಳಿಸಿತು.

ಇಶಾನ್ ಕಿಶನ್ ಹೊಡಿ ಬಡಿ ಆಟದ ಮೂಲಕ ತನ್ನ ಮೊದಲ ಏಕದಿನ ಪಂದ್ಯದಲ್ಲೇ ಭರ್ಜರಿ ಅರ್ಧಶತಕ ಸಿಡಿಸಿ ಸ್ಮರಣೀಯಗೊಳಿಸಿಕೊಂಡರು. 59 ರನ್(42 ಎಸೆತ, 8 ಬೌಂಡರಿ, 2 ಸಿಕ್ಸರ್) ಸಿಡಿಸಿದ್ದ ವೇಳೆ ದೊಡ್ಡ ಹೊಡೆತಕ್ಕೆ ಕೈ ಹಾಕಿ ದಸುನ್ ಶನಕ ಅವರಿಗೆ ಕ್ಯಾಚ್ ನೀಡಿ ಔಟ್ ಆದರು. ಆದರೆ ಇತ್ತ ಧವನ್ ಮಾತ್ರ ನಾಯಕನ ಆಟವಾಡುತ್ತ ಸಾಗಿದರು.

ಮನೀಶ್ ಪಾಂಡೆ 26ರನ್(40 ಎಸೆತ, 1 ಬೌಂಡರಿ, 1 ಸಿಕ್ಸ್) ವಿಕೆಟ್ ಒಪ್ಪಿಸಿದರು. ನಂತರ ಬಂದ ಸೂರ್ಯಕುಮಾರ್ ಯಾದವ್ ಜೊತೆ ಸೇರಿ ಬೊಂಬಾಟ್ ಬ್ಯಾಟಿಂಗ್ ನಡೆಸಿದ ಧವನ್ 86ರನ್(95 ಎಸೆತ, 6 ಬೌಂಡರಿ, 1 ಸಿಕ್ಸ್) ಸಿಡಿಸಿ ಗೆಲುವಿನ ರೊವಾರಿಯಾದರು. ಇವರಿಗೆ ಉತ್ತಮ ಸಾಥ್ ನೀಡಿದ ಯಾದವ್ 31ರನ್(20 ಎಸೆತ, 5 ಬೌಂಡರಿ) ಸಿಡಿಸಿ, 36.4 ಓವರ್‍ ಗಳಲ್ಲಿ 263ರನ್ ಬಾರಿಸಿ ಗೆಲುವಿನ ನಗೆ ಬೀರಲು ಕಾರಣರಾದರು.

ಈ ಮೊದಲು ಟಾಸ್ ಗೆದ್ದು ಬ್ಯಾಟಿಂಗ್ ಮಾಡಿದ ಶ್ರೀಲಂಕಾ ತಂಡಕ್ಕೆ ಅವಿಷ್ಕಾ ಫರ್ನಾಂಡೊ ಮತ್ತು ಮಿನೋದ್ ಭಾನುಕ ಜೋಡಿ ಮೊದಲ ವಿಕೆಟ್‍ಗೆ 49ರನ್(56 ಎಸೆತ)ಗಳ ಜೊತೆಯಾಟವಾಡಿತು. ಈ ವೇಳೆ ಉತ್ತಮವಾಗಿ ಆಡುತ್ತಿದ್ದ ಅವಿಷ್ಕಾ ಫರ್ನಾಂಡೊ 33ರನ್(35 ಎಸೆತ, 2ಬೌಂಡರಿ, 1 ಸಿಕ್ಸ್) ಚಹಲ್‍ಗೆ ವಿಕೆಟ್ ಒಪ್ಪಿಸಿದರು. ನಂತರ ದಾಳಿಗಿಳಿದ ಕುಲ್‍ದೀಪ್ ಯಾದವ್, ಮಿನೋದ್ ಭಾನುಕ 27ರನ್(44 ಎಸೆತ, 3 ಬೌಂಡರಿ, 1 ಸಿಕ್ಸ್) ಅವರಿಗೆ ಪೆವಿಲಿಯನ್ ಹಾದಿ ತೋರಿಸಿದರು.

ಭಾನುಕ ರಾಜಪಕ್ಷ 24 ರನ್(22 ಎಸೆತ, 2 ಬೌಂಡರಿ, 2 ಸಿಕ್ಸ್), ಧನಂಜಯ ಡಿಸಿಲ್ವಾ 14ರನ್(27 ಎಸೆತ, 1 ಬೌಂಡರಿ), ಚರಿತ್ ಅಸಲಂಕ 39ರನ್(50 ಎಸೆತ, 2 ಬೌಂಡರಿ, 1 ಸಿಕ್ಸ್) ಸಿಡಿಸಿ ಔಟ್ ಆದರು. ಕಡೆಯಲ್ಲಿ ಚಮಿಕಾ ಕರುಣಾರತ್ನೆ 43ರನ್(35 ಎಸೆತ, 1 ಬೌಂಡರಿ, 2 ಸಿಕ್ಸ್) ಸಿಡಿಸಿ ಶ್ರೀಲಂಕಾ ಸ್ಕೋರ್ 250 ರನ್ ದಾಟುವಂತೆ ಮಾಡಿದರು. ಅಂತಿಮವಾಗಿ ನಿಗದಿತ 50 ಓವರ್‍ ಗಳಲ್ಲಿ ಶ್ರೀಲಂಕಾ ತಂಡ 9 ವಿಕೆಟ್ ನಷ್ಟಕ್ಕೆ 262 ರನ್ ಗಳಿಸಿತು.

ಭಾರತ ಪರ ದೀಪಕ್ ಚಹರ್, ಯಜುವೇಂದ್ರ ಚಹಲ್ ಮತ್ತು ಕುಲ್‍ದೀಪ್ ಯಾದವ್ ತಲಾ 2 ವಿಕೆಟ್ ಪಡೆದರು. ಪಾಂಡ್ಯಸಹೋದರರು ತಲಾ 1 ವಿಕೆಟ್ ಕಿತ್ತರು.

The post ಮೊದಲ ಪಂದ್ಯದಲ್ಲೇ ಇಶಾನ್ ಕಿಶನ್ ಅಬ್ಬರ – ಭಾರತಕ್ಕೆ 7 ವಿಕೆಟ್‍ಗಳ ಭರ್ಜರಿ ಜಯ appeared first on Public TV.

Source: publictv.in

Source link