ಮೊದಲ ಪಂದ್ಯದಲ್ಲೇ ಶತಕ ಬಾರಿಸಿದ್ರು, 11 ಪಂದ್ಯಗಳಲ್ಲಿ ಕೆರಿಯರ್ ಕೂಡ ಕೊನೆಗೊಂಡಿತು..! | Pravin Amre scores a gem of a hundred on debut


Pravin Amre: ಡೆಲ್ಲಿ ಕ್ಯಾಪಿಟಲ್ಸ್ ತಂಡದ ಸಹಾಯಕ ಕೋಚ್ ಆಗಿ ಕಾರ್ಯ ನಿರ್ವಹಿಸುತ್ತಿರುವ ಪ್ರವೀಣ್ ಆಮ್ರೆ ಅವರು ಮುಂಬರುವ ದಿನಗಳಲ್ಲಿ ರಾಷ್ಟ್ರೀಯ ತಂಡದ ಕೋಚ್ ಸ್ಥಾನ ಅಲಂಕರಿಸುವ ವಿಶ್ವಾಸದಲ್ಲಿದ್ದಾರೆ.

ಪ್ರವೀಣ್ ಆಮ್ರೆ…ಈ ಹೆಸರು ನೀವು ಖಂಡಿತವಾಗಿಯೂ ಕೇಳಿರುತ್ತೀರಿ. ಐಪಿಎಲ್​ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್​ ತಂಡದ ಸಹಾಯಕ ಕೋಚ್ ಆಗಿರುವ ಆಮ್ರೆ ಅವರು ಟೀಮ್ ಇಂಡಿಯಾದ ಮಾಜಿ ಆಟಗಾರ ಎಂಬುದು ಅನೇಕರಿಗೆ ಗೊತ್ತಿಲ್ಲ. ಅದರಲ್ಲೂ ಅಬ್ಬರೊಂದಿಗೆ ವೃತ್ತಿಜೀವನ ಆರಂಭಿಸಿ ಬಹುಬೇಗನೆ ಮರೆಯಾದ ಆಟಗಾರನಾಗಿ ಪ್ರವೀಣ್ ಆಮ್ರೆ ಅವರು ಗುರುತಿಸಿಕೊಳ್ಳುತ್ತಾರೆ. ಅಷ್ಟಕ್ಕೂ ಆಮ್ರೆ ಅವರ ವಿಷಯ ಈಗ ಯಾಕಪ್ಪಾ ಅಂದರೆ, ಇಂದು ಅವರ ಜನ್ಮದಿನ.

1968, ಆಗಸ್ಟ್ 14 ರಂದು ಮುಂಬೈನಲ್ಲಿ ಜನಿಸಿದ ಪ್ರವೀಣ್ ಆಮ್ರೆ ಅವರು ಒಂದು ಕಾಲದಲ್ಲಿ ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್ ಆಗಿ ದೇಶೀಯ ಅಂಗಳದಲ್ಲಿ ಸಂಚಲ ಸೃಷ್ಟಿಸಿದ ಆಟಗಾರ. ಈ ಅಬ್ಬರದ ಬ್ಯಾಟಿಂಗ್ ಪರಿಣಾಮ ಅವರಿಗೆ 1992 ರಲ್ಲಿ ಟೀಮ್ ಇಂಡಿಯಾದಲ್ಲೂ ಚಾನ್ಸ್ ಲಭಿಸಿತ್ತು. ಅದು ಕೂಡ ಸೌತ್ ಆಫ್ರಿಕಾ ವಿರುದ್ದ. ಡರ್ಬನ್​ನಲ್ಲಿ ಆಡಲಾದ ತಮ್ಮ ಚೊಚ್ಚಲ ಪಂದ್ಯದಲ್ಲೇ ಆಮ್ರೆ 103 ರನ್​ ಬಾರಿಸಿ ಅಬ್ಬರಿಸಿದ್ದರು.

ಈ ಶತಕದ ನೆರವನಿಂದ ಅಂದು ಭಾರತ ಪಂದ್ಯವನ್ನು ಡ್ರಾ ಮಾಡಿಕೊಳ್ಳಲು ನೆರವಾಯಿತು. ಇದಾದ ಬಳಿಕ ಟೀಮ್ ಇಂಡಿಯಾ ಪರ 11 ಟೆಸ್ಟ್ ಪಂದ್ಯಗಳನ್ನು ಆಡಿದ್ದ ಆಮ್ರೆ ಮೂರು ಅರ್ಧಶತಕ ಬಾರಿಸಿದ್ದರು. ಇದಾಗ್ಯೂ  1993 ರಲ್ಲಿ ಶ್ರೀಲಂಕಾ ವಿರುದ್ದ ಕೊನೆಯ ಪಂದ್ಯದ ಬಳಿಕ ತಂಡದಿಂದ ಕೈ ಬಿಡಲಾಯಿತು.

ವಿಶೇಷ ಎಂದರೆ ಆಮ್ರೆ ತಮ್ಮ ಮೊದಲ ಟೆಸ್ಟ್‌ನಲ್ಲಿ ಶತಕ ಗಳಿಸಿದರೆ,  ಮೊದಲ ಏಕದಿನ ಪಂದ್ಯದಲ್ಲಿ ಅರ್ಧಶತಕವನ್ನು ಬಾರಿಸಿದ್ದರು. ಅಂದು ದಕ್ಷಿಣ ಆಫ್ರಿಕಾ ವಿರುದ್ಧ ಆಡಿದ ಚೊಚ್ಚಲ ಏಕದಿನ ಪಂದ್ಯದಲ್ಲಿ 55 ರನ್ ಗಳಿಸಿ ಮಿಂಚಿದ್ದರು. ಆದರೆ ಇಲ್ಲೂ ಕೂಡ ಅದೃಷ್ಟ ಕೈಕೊಟ್ಟಿತ್ತು. ಕೇವಲ ನಾಲ್ಕು ವರ್ಷಗಳಲ್ಲಿ ಅವರ ಏಕದಿನ ವೃತ್ತಿಜೀವನ ಕೂಡ ಕೊನೆಗೊಂಡಿತು.

ಭಾರತದ ಪರ 11 ಟೆಸ್ಟ್ ಪಂದ್ಯಗಳಲ್ಲಿ 425 ರನ್​ಗಳಿಸಿರುವ ಪ್ರವೀಣ್ ಆಮ್ರೆ ಒಂದು ಶತಕ ಮತ್ತು ಮೂರು ಅರ್ಧ ಶತಕಗಳನ್ನು ಬಾರಿಸಿದ್ದಾರೆ. ಇನ್ನು 37 ಏಕದಿನ ಪಂದ್ಯಗಳಲ್ಲಿ ಎರಡು ಅರ್ಧಶತಕದೊಂದಿಗೆ ಒಟ್ಟು 513 ರನ್ ಗಳಿಸಿದ್ದಾರೆ. ಮತ್ತೊಂದೆಡೆ ಪ್ರಥಮ ದರ್ಜೆ ಕ್ರಿಕೆಟ್​ನಲ್ಲಿ 86 ಪಂದ್ಯಗಳನ್ನು ಆಡಿರುವ ಆಮ್ರೆ ಒಟ್ಟು 5815 ರನ್ ಗಳಿಸಿದ್ದಾರೆ.

ಈ ವೇಳೆ 17 ಶತಕಗಳು ಮತ್ತು 25 ಅರ್ಧ ಶತಕಗಳನ್ನು ಬಾರಿಸಿದ್ದರು ಎಂಬುದು ವಿಶೇಷ. ಹಾಗೆಯೇ 113 ಲಿಸ್ಟ್-ಎ ಪಂದ್ಯಗಳಿಂದ 2383 ರನ್ ಕಲೆಹಾಕಿದ್ದಾರೆ. ಈ ವೇಳೆ ಒಂದು ಶತಕ ಮತ್ತು 14 ಅರ್ಧ ಶತಕಗಳನ್ನು ಬಾರಿಸಿದ್ದಾರೆ. ಸದ್ಯ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಸಹಾಯಕ ಕೋಚ್ ಆಗಿ ಕಾರ್ಯ ನಿರ್ವಹಿಸುತ್ತಿರುವ ಪ್ರವೀಣ್ ಆಮ್ರೆ ಅವರು ಮುಂಬರುವ ದಿನಗಳಲ್ಲಿ ರಾಷ್ಟ್ರೀಯ ತಂಡದ ಕೋಚ್ ಸ್ಥಾನ ಅಲಂಕರಿಸುವ ವಿಶ್ವಾಸದಲ್ಲಿದ್ದಾರೆ.

TV9 Kannada


Leave a Reply

Your email address will not be published. Required fields are marked *