
ಉತ್ತರಾಖಂಡ್ ಮಾಜಿ ಸಚಿವ ರಾಜೇಂದ್ರ ಬಹುಗುಣ
ಮೊಮ್ಮಗಳಿಗೆ ಲೈಂಗಿಕ ಕಿರುಕುಳ ನೀಡಿದ್ದಾರೆಂದು ಸೊಸೆ ಆರೋಪದಿಂದ ರಾಜೇಂದ್ರ ಬಹುಗುಣ ತೀವ್ರ ಬೇಸರಗೊಂಡು ಬುಧವಾರ ಡೆಹ್ರಾಡೂನ್ನ ತಮ್ಮ ನಿವಾಸದಲ್ಲಿ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಉತ್ತರಾಖಂಡ್: ಮೊಮ್ಮಗಳಿಗೆ ಲೈಂಗಿಕ ಕಿರುಕುಳ ನೀಡಿದ್ದಾರೆಂದು ಸೊಸೆ ಆರೋಪ ಮಾಡಿದ ಕೆಲ ದಿನಗಳ ಬಳಿಕ ಉತ್ತರಾಖಂಡ್ ಮಾಜಿ ಸಚಿವ ರಾಜೇಂದ್ರ ಬಹುಗುಣ ಡೆಹ್ರಾಡೂನ್ನ ತಮ್ಮ ನಿವಾಸದಲ್ಲಿ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮಾಜಿ ಸಚಿವರ ವಿರುದ್ಧ ಪೋಕ್ಸೋ ಕಾಯ್ದೆಯಡಿ ದೂರು ದಾಖಲಾಗಿತ್ತು. ಆತ್ಮಹತ್ಯೆಗೂ ಮೊದಲು ಪೊಲೀಸರಿಗೆ ಕರೆ ಮಾಡಿದ್ದ, ಪೊಲೀಸರು ಭೇಟಿ ನೀಡುವಷ್ಟರಲ್ಲಿ ಮಾಜಿ ಸಚಿವ ರಾಜೇಂದ್ರ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆತ್ಮಹತ್ಯೆಗೆ ಬಳಸಿದ್ದ ಪಿಸ್ತೂಲ್ ಮೃತದೇಹದ ಬಳಿ ಪತ್ತೆಯಾಗಿದೆ. ಪೊಲೀಸರು ಸ್ಥಳಕ್ಕೆ ಆಗಮಿಸಿದಾಗ ಬಹುಗುಣ ಅವರು ಟ್ಯಾಂಕ್ ಮೇಲೆ ಹತ್ತಿದ್ದರು. ಗುಂಡು ಹಾರಿಸಿಕೊಳ್ಳುವುದಾಗಿ ಬೆದರಿಕೆ ಹಾಕಿದ್ದು, ಅವರ ಜತೆ ಲೌಡ್ಸ್ಪೀಕರ್ ಸಹಾಯದಿಂದ ಪೊಲೀಸರು ಮಾತನಾಡಲು ಪ್ರಯತ್ನಿಸಿದ್ದಾರೆ. ಆದರೆ, ತಮ್ಮ ಮೇಲೆ ಸುಳ್ಳು ಆರೋಪ ಮಾಡಲಾಗಿದೆ ಎಂದು ಅವರು ಹೇಳುತ್ತಿದ್ದರು. ಆತ್ಮಹತ್ಯೆ ನಿರ್ಧಾರ ಕೈಬಿಟ್ಟು ಕೆಳಕ್ಕೆ ಇಳಿಯುವ ಸೂಚನೆ ನೀಡಿದ್ದರು. ಆದರೆ ಹಠಾತ್ತನೆ ತಮ್ಮ ಎದೆಗೆ ಗುಂಡು ಹಾರಿಸಿಕೊಂಡು ಸ್ಥಳದಲ್ಲಿಯೇ ಸಾವಿಗೀಡಾಗಿದ್ದಾರೆ.