ಮೋದಿ ಕಾರನ್ನು ನಡೆದುಕೊಂಡೇ ಹಿಂಬಾಲಿಸಿದ ಯೋಗಿ -ಟಾಪ್ 10 ಸುದ್ದಿಗಳ ಕ್ವಿಕ್​ರೌಂಡಪ್


ಸಿಎಂ ಬೊಮ್ಮಾಯಿಯ 6 ಕೋಟಿ ಮುತ್ತಿನ ರಹಸ್ಯ
ನಟ ಪುನೀತ್​​​​ಗೆ ಕನ್ನಡ ಚಿತ್ರರಂಗ ನುಡಿ ನಮನ ಸಲ್ಲಿಸಿದ್ದು, ಯುವರತ್ನನಿಗೆ ರಾಜ್ಯ ಸರ್ಕಾರ ಕರ್ನಾಟಕ ರತ್ನವನ್ನ ಘೋಷಿಸಿದೆ. ಇದೇ ವೇಳೆ ಪುನೀತ್ ಹಣೆಗೆ ಮುತ್ತಿಟ್ಟಿದ್ದ ರಹಸ್ಯವನ್ನೂ ಸಿಎಂ ಬೊಮ್ಮಾಯಿ ಬಿಚ್ಚಿಟ್ಟಿದ್ದಾರೆ. ಅಪ್ಪು ಅಂತ್ಯಕ್ರಿಯೆಗೆ ಮುನ್ನ ಅವರ ಹಣೆಗೆ ಮುತ್ತಿಟ್ಟಿದ್ದೆ. ಆ ಬಗ್ಗೆ ಸಾಕಷ್ಟು ಮಂದಿ ಬೇರೆ ರೀತಿಯಲ್ಲಿ ವ್ಯಾಖ್ಯಾನಿಸಿದ್ರು. ಅಂದು ಮುತ್ತಿಟ್ಟಿದ್ದು, 6 ಕೋಟಿ ಜನರ ಜನಪ್ರತಿನಿಧಿಯಾಗಿ. ನನ್ನ ಹೃದಯದಿಂದ ಕೊಟ್ಟಿದ್ದೇ ಹೊರತೂ, ಯಾವುದೇ ಪ್ರಚಾರಕ್ಕೆ ಅಲ್ಲ ಅಂತಾ ಸಿಎಂ ಮುತ್ತಿನ ರಹಸ್ಯ ಬಿಚ್ಚಿಟ್ಟಿದ್ದಾರೆ.

ಕಲಬುರಗಿ, ಬಳ್ಳಾರಿ ಮೇಯರ್ ಚುನಾವಣೆ ಮುಂದೂಡಿಕೆ
ಕಲಬುರ್ಗಿ ಹಾಗೂ ಬಳ್ಳಾರಿ ಪಾಲಿಕೆ ಮೇಯರ್​ ಹಾಗೂ ಉಪ ಮೇಯರ್​ ಚುನಾವಣೆ ಮುಂದೂಡಿಕೆಯಾಗಿದೆ. ಇದೇ ತಿಂಗಳು 20ರಂದು ನಡೆಯಬೇಕಾಗಿದ್ದ ಕಲಬುರಗಿ ಪಾಲಿಕೆ ಮೇಯರ್ ಚುನಾವಣೆಯನ್ನು ಮುಂದೂಡಿ ಪ್ರಾದೇಶಿಕ ಆಯುಕ್ತರು ಆದೇಶ ಹೊರಡಿಸಿದ್ದಾರೆ. ಇತ್ತ ನವೆಂಬರ್​ 18ರಂದು ನಡೆಯಬೇಕಿದ್ದ ಬಳ್ಳಾರಿ ಚುನಾವಣೆ ಕೂಡ ಅಂತಿಮ ಗಳಿಗೆಯಲ್ಲಿ ಮುಂದೂಡಿಕೆಯಾಗಿದೆ. ವಿಧಾನ ಪರಿಷತ್ ಚುನಾವಣೆಗೆ ಅಧಿಸೂಚನೆ ಹೊರಡಿಸಿರುವ ಹಿನ್ನೆಲೆ ಪಾಲಿಕೆ ಮೇಯರ್ ಚುನಾವಣೆ ಮುಂದೂಡಲಾಗಿದೆ.

ಬಿಟ್​ ಕಾಯಿನ್​ ದರದಲ್ಲಿ ಭಾರೀ ಕುಸಿತ
ರಾಜ್ಯದಲ್ಲಿ ಬಿಟ್​ ಕಾಯಿನ್​ ಹಗರಣ ಸದ್ದು ಮಾಡುತ್ತಿರುವ ಹೊತ್ತಲ್ಲೇ ಅತ್ತ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬಿಟ್​ ಕಾಯಿನ್​ ದರದಲ್ಲಿ ಭಾರೀ ಕುಸಿತ ಕಂಡಿದೆ. ಕಳೆದ ವಾರವಷ್ಟೇ 69 ಸಾವಿರ ಡಾಲರ್​ ತಲುಪಿದ್ದ ಬಿಟ್​ ಕಾಯಿನ್​ ಈ ವಾರ 58 ಸಾವಿರ ಡಾಲರ್​ಗೆ ಕುಸಿದಿದೆ. ನವೆಂಬರ್​​ ತಿಂಗಳಿನಲ್ಲಿ ಮೊದಲ ಬಾರಿಗೆ ಇಷ್ಟೊಂದು ಇಳಿಕೆ ಕಂಡಿರುವ ಬಿಟ್​​ ಕಾಯಿನ್ ಜೊತೆಗೆ ಕ್ರಿಪ್ಟೊ ಕರೆನ್ಸಿಯಲ್ಲೂ ಭಾರೀ ಇಳಿಕೆಯಾಗಿದೆ.

‘ನಮ್ಮವರು ಬಿಟ್​ ಕಾಯಿನ್​ ಹಗರಣದಲ್ಲಿ ಭಾಗಿಯಾಗಿಲ್ಲ’
ನನ್ನ ಪ್ರಕಾರ ನಮ್ಮ ಪಕ್ಷದವರು ಯಾರು ಬಿಟ್​ ಕಾಯಿನ್​ ಹಗರಣದಲ್ಲಿ ಭಾಗಿಯಾಗಿಲ್ಲ ಅಂತಾ ಬಿಜೆಪಿ ಶಾಸಕ ಯತ್ನಾಳ್ ಹೇಳಿದ್ದಾರೆ. ಕಾಂಗ್ರೆಸ್​ನವರು ಸುಖಾ ಸುಮ್ಮನೆ ಆರೋಪ ಮಾಡ್ತಿದ್ದಾರೆ. ಆದ್ರೆ ಯಾವುದೇ ದಾಖಲೆಯನ್ನು ಅವ್ರು ನೀಡ್ತಿಲ್ಲ, ಅವರ ಆರೋಪಗಳು ಕೇವಲ ಗಾಳಿಯಲ್ಲಿ ಗುಂಡು ಹಾರಿಸಿದ್ದಂತೆ ಅಂತಾ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಕಾಂಗ್ರೆಸ್ ವಿರುದ್ಧ ಕಿಡಿಕಾರಿದ್ದಾರೆ.

ಯುಪಿಯಲ್ಲಿ ಬಿಜೆಪಿಗೆ 239-245 ಸ್ಥಾನದ ಗೆಲುವು?
2022ರ ಉತ್ತರಪ್ರದೇಶ ಚುನಾವಣೆಯಲ್ಲಿ ಬಿಜೆಪಿ ಮತ್ತೆ ಅಧಿಕಾರಕ್ಕೆ ಬರಲಿದೆ ಅಂತ ಟೈಮ್ಸ್​​ ನೌ ಸಮೀಕ್ಷೆ ಹೇಳಿದೆ. ಚುನಾವಣೆಗೂ ಮುನ್ನ ಜನರ ನಾಡಿಮಿಡಿತದ ಪರೀಕ್ಷೆಯಲ್ಲಿ ಬಿಜೆಪಿ 239-245 ಸ್ಥಾನ ಪಡೆದಿದ್ದು, ಯೋಗಿ ಆದಿತ್ಯಾನಾಥ್ ಮತ್ತೆ ಸಿಎಂ ಆಗ್ತಾರೆ ಎಂಬ ಫಲಿತಾಂಶ ಹೊರಬಿದ್ದಿದೆ. ಇನ್ನು ಸಮಾಜವಾದಿ ಪಕ್ಷಕ್ಕೆ 119-125, ಬಿಎಸ್​ಪಿಗೆ 28-32 ಸ್ಥಾನಗಳು ಹಾಗೂ ಕಾಂಗ್ರೆಸ್​ಗೆ 5-8, ಇತರೆ 0-1 ಸ್ಥಾನ ಸಿಗಲಿದೆ ಅಂತ ಸಮೀಕ್ಷೆ ಹೇಳಿದೆ.

‘ತೈಲ ಬೆಲೆ ಏರಿಕೆಗೆ ರಾಜ್ಯ ಸರ್ಕಾರಗಳೇ ಜವಾಬ್ದಾರಿ’
ಪೆಟ್ರೋಲ್​, ಡೀಸೆಲ್​ ಬೆಲೆ ಏರಿಕೆಗೆ ಆಯಾ ರಾಜ್ಯಗಳ ಸರ್ಕಾರವೇ ಜವಾಬ್ದಾರಿ, ಈ ಬಗ್ಗೆ ತಮ್ಮದೇ ರಾಜ್ಯ ಸರ್ಕಾರಗಳನ್ನು ಪ್ರಶ್ನೆ ಮಾಡಿ ಎಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್​ ಹೇಳಿದ್ದಾರೆ. ಇನ್ನು ಇದೇ ವೇಳೆ ಜಿಎಸ್​ಟಿ ಕೌನ್ಸಿಲ್​ ದರ ನಿಗದಿಪಡಿಸುವವರೆಗೆ ಪೆಟ್ರೋಲ್​ ಮತ್ತು ಡೀಸೆಲ್​ನ್ನು ಸರಕು ಮತ್ತು ಸೇವಾ ತೆರಿಗೆ ವ್ಯಾಪ್ತಿಗೆ ಸೇರಿಸಲಾಗುವುದಿಲ್ಲ ಎಂದು ವಿತ್ತ ಸಚಿವೆ ಹೇಳಿದ್ದಾರೆ.

ಮೆಟ್ರೋ ರೈಲುಗಳ ಸಂಚಾರದ ಸಮಯ ವಿಸ್ತರಣೆ
ನವೆಂಬರ್ 18 ರಿಂದ ನಮ್ಮ ಮೆಟ್ರೋ ರೈಲು ಸಂಚಾರದ ಸಮಯವನ್ನ ವಿಸ್ತರಿಸಲಾಗಿದೆ. ಸೋಮವಾರದಿಂದ ಶನಿವಾರದವರೆಗೆ ಬೆಳಗ್ಗೆ 6 ಗಂಟೆಯಿಂದ ರಾತ್ರಿ 11 ಗಂಟೆವರೆಗೂ ಮೆಟ್ರೋ ರೈಲು ಸಂಚಾರ ಇರಲಿದೆ. ಆದ್ರೆ ಭಾನುವಾರ ಬೆಳಗ್ಗೆ 7 ಗಂಟೆಗೆ ರೈಲು ಸಂಚಾರ ಶುರುವಾಗಲಿದೆ. ಇನ್ನು ನಾಗಸಂದ್ರ, ಸಿಲ್ಕ್ ಬೋರ್ಡ್, ಕೆಂಗೇರಿ ಮತ್ತು ಬೈಯಪ್ಪನಹಳ್ಳಿ ನಿಲ್ದಾಣಗಳಿಂದ ಮೊದಲ ರೈಲು ಬೆಳಗ್ಗೆ 6 ಗಂಟೆಗೆ ಹೊರಡಲಿದೆ. ಮೆಜೆಸ್ಟಿಕ್​​ನಿಂದ 4 ದಿಕ್ಕುಗಳ ಕಡೆಗೆ ರಾತ್ರಿ 11.30ಕ್ಕೆ ರೈಲುಗಳ ಕೊನೆಯ ಸಂಚಾರ ಇರಲಿದೆ.

ಮುಂದಿನ 4 ದಿನ ತಮಿಳುನಾಡಿನಲ್ಲಿ ಭಾರೀ ಮಳೆ
ಚೆನ್ನೈ, ಕಾಂಚೀಪುರಂ, ತಿರುವಳ್ಳೂರು ಮತ್ತು ರಾಣಿಪೇಟ್ ಜಿಲ್ಲೆಗಳಲ್ಲಿ ಮುಂದಿನ ನಾಲ್ಕು ದಿನಗಳ ಕಾಲ ಮತ್ತೆ ಭಾರೀ ಮಳೆಯಾಗಲಿದೆ ಅಂತ ಹವಾಮಾನ ಇಲಾಖೆ ತಿಳಿಸಿದೆ. ಗುಡುಗು ಸಹಿತ ಭಾರೀ ಮಳೆಯಾಗುವ ಸಾಧ್ಯತೆಯಿರುವ ಹಿನ್ನೆಲೆ ರೆಡ್ ಅಲರ್ಟ್​​​ ಘೋಷಿಸಲಾಗಿದೆ. ಇನ್ನು ರಾಣಿಪೇಟ್, ಚೆಂಗಲ್ಪಟ್ಟು, ಸೇಲಂ, ಅರಿಯಲೂರು, ಪೆರಂಬಲೂರು, ಡೆಲ್ಟಾ ಜಿಲ್ಲೆಗಳು, ಪುದುಚೇರಿ ಮತ್ತು ಕಾರೈಕಲ್‌ನಲ್ಲಿ ಗುಡುಗು ಸಹಿತ ಮಳೆಯಾಗಲಿದೆ ಅಂತಾ ಹವಾಮಾನ ಇಲಾಖೆ ಮಾಹಿತಿ ನೀಡಿದೆ.

ಮೋದಿ ಕಾರನ್ನು ವೇಗವಾಗಿ ನಡೆದು ಹಿಂಬಾಲಿಸಿದ ಯೋಗಿ
ಪ್ರಧಾನಿ ಮೋದಿಯವರ ಬೆಂಗಾವಲು ಪಡೆ ಮತ್ತು ಕಾರಿನ ಹಿಂದೆ ಉತ್ತರಪ್ರದೇಶ ಸಿಎಂ ಯೋಗಿ ಆದಿತ್ಯನಾಥ್‌ ವೇಗವಾಗಿ ನಡೆಯುತ್ತಿರುವ ವೀಡಿಯೊವೊಂದು ವೈರಲ್‌ ಆಗಿದೆ. ಉತ್ತರ ಪ್ರದೇಶದ ಪೂರ್ವಾಂಚಲ್ ಹೆದ್ದಾರಿಯನ್ನು ಉದ್ಘಾಟಿಸಲು ಬಂದಿದ್ದ ಪ್ರಧಾನಿ ಮೋದಿಯವರನ್ನ ಸ್ವಾಗತಿಸಲು ಸಿಎಂ ಆದಿತ್ಯನಾಥ್ ಆಗಮಿಸಿದ್ದರು. ಈ ವೇಳೆ ಪ್ರಧಾನಿಯನ್ನು ಸ್ವಾಗತಿಸಲು ಅವರ ಕಾರಿನ ಹಿಂದೆ ಆದಿತ್ಯನಾಥ್‌ ಓಡೋಡಿ ಬರುತ್ತಿವ ದೃಶ್ಯ ಕ್ಯಾಮೆರಾದಲ್ಲಿ ಸೆರೆಯಾಗಿದೆ.

ಗಾಂಧೀಜಿ ಅಹಿಂಸಾ ಮಂತ್ರವನ್ನೇ ಗೇಲಿ ಮಾಡಿದ ಕಂಗನಾ
ಬಾಲಿವುಡ್‌ ನಟಿ ಕಂಗನಾ ರಣಾವತ್‌ ಇದೀಗ ಮಹಾತ್ಮ ಗಾಂಧೀಜಿ ಅವರ ಅಹಿಂಸಾ ಮಂತ್ರವನ್ನೇ ಗೇಲಿ ಮಾಡಿದ್ದಾರೆ. ಗಾಂಧೀಜಿ ಅವರಿಂದ ಸುಭಾಷ್‌ ಚಂದ್ರ ಬೋಸ್‌, ಭಗತ್‌ ಸಿಂಗ್‌ಗೆ ಬೆಂಬಲವೇ ಸಿಗಲಿಲ್ಲ. ಒಂದು ಕೆನ್ನೆಗೆ ಹೊಡೆದರೆ ಇನ್ನೊಂದು ಕೆನ್ನೆ ತೋರಿಸು ಎಂಬ ಬಾಪು ಮಂತ್ರ ಅನುಸರಿಸಿದರೆ ಸ್ವಾತಂತ್ರ್ಯ ಸಿಗುವುದಿಲ್ಲ, ಬದಲಾಗಿ ಭಿಕ್ಷೆ ಮಾತ್ರ ಸಿಗುತ್ತದೆ. ಹೀಗಾಗಿ ನಿಮ್ಮ ನಾಯಕರನ್ನು ನೀವು ಬುದ್ಧಿವಂತಿಕೆಯಿಂದ ಆರಿಸಿಕೊಳ್ಳಿ ಅಂತಾ ಕಂಗನಾ ತಮ್ಮ ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್‌ ಮಾಡಿದ್ದಾರೆ.

News First Live Kannada


Leave a Reply

Your email address will not be published. Required fields are marked *