ಬಾಗಲಕೋಟೆ: ಕೊರೊನಾ ಎರಡನೇ ಅಲೆ ತಡೆಯುವಲ್ಲಿ ಮೋದಿ ಮತ್ತು ಯಡಿಯೂರಪ್ಪ ಸರ್ಕಾರ ಸಂಪೂರ್ಣ ವಿಫಲವಾಗಿದೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯನವರು ದೂರಿದ್ದಾರ.

ಬಾಗಲಕೋಟೆ ಜಿಲ್ಲೆಯ ಬಾದಾಮಿ ಪಟ್ಟಣಕ್ಕೆ ಆಗಮಿಸಿ, ಕ್ಷೇತ್ರದಲ್ಲಿ ಕೊರೊನಾ ನಿಯಂತ್ರಣ ಕುರಿತಾದ ಕ್ರಮಗಳ ಬಗ್ಗೆ ಅಧಿಕಾರಿಗಳೊಂದಿಗೆ ಸಭೆ ನಡೆಸಿ, ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಅವರು, 2ನೇ ಅಲೆಯ ಬಗ್ಗೆ ಮಾಹಿತಿ ಇದ್ದರೂ ಸರ್ಕಾರ ಜಾಗೃತಿ ವಹಿಸಲಿಲ್ಲ. ಆಕ್ಸಿಜನ್, ರೆಮ್ ಡಿಸಿವರ್, ವೆಂಟಿಲೇಟರ್ ಬೆಡ್‍ಗಳ ಸಿದ್ದತೆ ನಡೆಸಲಿಲ್ಲ. ರೋಗಿಗಳಿಗೆ ಆಕ್ಸಿಜನ್, ರೆಮ್‍ಡಿಸಿವರ್ ಇಂಜೆಕ್ಷನ್ ಪೂರೈಸುವಲ್ಲಿ ಸರ್ಕಾರ ವಿಫಲವಾಗಿದೆ ಎಂದು ಟೀಕಿಸಿದರು.

ರಾಜ್ಯದಲ್ಲಿ ಸಿಎಂ ಬದಲಾವಣೆ ವಿಚಾರವಾಗಿ ಪ್ರತಿಕ್ರಿಯೆ ನೀಡಿ, ಅದು ನಮ್ಮ ರೋಗವಲ್ಲ. ಬಿಜೆಪಿಯವರಿಗೆ ಬಂದ ರೋಗ. ಬಿಜೆಪಿ ಅವರು ಬೀದಿ ಜಗಳ ಮಾಡುತ್ತಿದ್ದಾರೆ. ಮಾಡಲಿ ಎಂದು ಲೇವಡಿ ಮಾಡಿದರು. ರಾಜ್ಯದಲ್ಲಿ ಮೊದಲೇ ಆಡಳಿತ ಇಲ್ಲ, ಈ ಬೀದಿ ಜಗಳದಿಂದ ಇನ್ನಷ್ಟು ಆಡಳಿತ ಕುಸಿದು ಹೋಗುತ್ತದೆ ಎಂದು ಹೇಳಿದರು.

ಸಿಎಂ ಬದಲಾವಣೆ ಆಗುತ್ತದೆ ಎಂಬ ಮಾಹಿತಿ ನನಗಿದೆ. ಆದರೆ ಕೊರೊನಾ ಹಿನ್ನೆಲೆ ಮುಂದಕ್ಕೆ ಹಾಕುತ್ತಾ ಇರಬೇಕು, ನನಗೆ ಗೊತ್ತಿಲ್ಲ ಎಂದರು. ಇದೇ ಸಮಯದಲ್ಲಿ ಹಕ್ಕು ಚ್ಯುತಿ ಮಂಡನೆ ವಿಚಾರವಾಗಿ ಮಾತನಾಡಿ, ಜಿಲ್ಲಾಧಿಕಾರಿಗಳ ಜೊತೆ ಝೂಮ್ ಮೀಟ್‍ಗೆ ಅವಕಾಶ ಕೇಳಿದ್ದೆ. ಕೊಡುವುದಕ್ಕೆ ಆಗಲ್ಲ ನೀವು ಸರ್ಕಾರದ ಭಾಗವಲ್ಲ ಅಂದರು. ನಾನೊಬ್ಬ ವಿರೋಧ ಪಕ್ಷದ ನಾಯಕ, ನಾನು ಎಕ್ಸ್ ಚೀಫ್ ಮಿನಿಸ್ಟರ್. ವಿರೋಧ ಪಕ್ಷದ ನಾಯಕ ಅಂದರೆ ಶ್ಯಾಡೋ ಆಫ್ ಚೀಫ್ ಮಿನಿಸ್ಟರ್ ಇದ್ದಾಂಗೆ ನಾನು ಮಾಹಿತಿ ತಿಳಿದುಕೊಳ್ಳುವಂತಿಲ್ಲ ಎಂದರೆ ಇದು ಪ್ರಜಾಪ್ರಭುತ್ವದ ವ್ಯವಸ್ಥೆ ನಾ ಎಂದು ಆಕ್ಷೇಪಿಸಿ ಪ್ರಶ್ನೆ ಮಾಡಿದರು.

The post ಮೋದಿ ಮತ್ತು ಯಡಿಯೂರಪ್ಪ ಸರ್ಕಾರ ಸಂಪೂರ್ಣ ವಿಫಲವಾಗಿದೆ – ಸಿದ್ದರಾಮಯ್ಯ appeared first on Public TV.

Source: publictv.in

Source link