ಇತ್ತೀಚೆಗೆ ರಾಜಕಾರಣದಲ್ಲಿ ಹೆಚ್ಚು ಸದ್ದು-ಸುದ್ದಿ ಮಾಡ್ತಾ ಇರೋದು ಪಶ್ಚಿಮ ಬಂಗಾಳ. ಮಮತಾ ಬ್ಯಾನರ್ಜಿ ಕಾರಣಕ್ಕಾಗಿ, ಅಲ್ಲಿ ನಡೆದ ಚುನಾವಣೆ ಕಾರಣಕ್ಕಾಗಿ ವೆಸ್ಟ್ ಬೆಂಗಾಲ್ ದೇಶದ ರಾಜಕಾರಣದ ಗಮನ ಕೇಂದ್ರಿಕರಿಸಿಕೊಂಡಿತ್ತು. ಅದು ಈಗಲೂ ಮುಂದುವರೆದಿದೆ. ದೀದಿ-ಮೋದಿ ಸಮರ ಕಂಟಿನ್ಯೂ ಆಗಿದೆ.

ಮಮತಾ ಬ್ಯಾನರ್ಜಿ. ಭಾರತದ ರಾಜಕಾರಣದಲ್ಲಿ ಸದಾ ಸದ್ದು ಮಾಡುವ ರಾಜಕಾರಣಿ. ಮಮತಾ ಬ್ಯಾನರ್ಜಿ ದಿಟ್ಟತನ, ಹೋರಾಟ, ಛಲ, ನಿರಂತರ ಪ್ರವಾಹದಂತೆ ಅಬ್ಬರಿಸುವ ವ್ಯಕ್ತಿತ್ವ ಎಲ್ಲವೂ ಇವರನ್ನು ವಿಭಿನ್ನವಾಗಿ ನೋಡುವಂತೆ ಮಾಡಿದೆ. ಅದೆಷ್ಟೇ ಗಟ್ಟಿಗನಿರಲಿ, ಅದೆಷ್ಟೇ ದೊಡ್ಡ ಸಮಸ್ಯೆ ಇರಲಿ, ಅದ್ಯಾರೇ ಎದುರಾಗಲಿ ಮಧ್ಯ ರಸ್ತೆಯಲ್ಲೇ ನಿಂತು ಹೋರಾಟ ಮಾಡುವ ದಿಟ್ಟ ಹೋರಾಟಗಾರ್ತಿ ಮಮತಾ ಬ್ಯಾನರ್ಜಿ. ಇಂತಹ ಮಮತಾ ಬ್ಯಾನರ್ಜಿ ಕಳೆದ ಹಲವು ತಿಂಗಳುಗಳಿಂದ ಮಾಡುತ್ತಿರುವ  ಸುದ್ದಿ-ಸದ್ದು ಅಷ್ಟಿಷ್ಟಲ್ಲ. ಪಶ್ಚಿಮ ಬಂಗಾಳದಲ್ಲಿ ನಡೆದ ಚುನಾವಣೆಯು ಅದಕ್ಕೆ ಕಾರಣ. ಅಷ್ಟೇ ಅಲ್ಲ ಮೋದಿ-ಅಮಿತ್ ಷಾ ಜೋಡಿಗೂ ಬಗ್ಗದೇ ಗೆದ್ದು ಬಂದಿದ್ದು ಮತ್ತೊಂದು ಇತಿಹಾಸ.

ಪಶ್ಚಿಮ ಬಂಗಾಳ ಚುನಾವಣೆಗೆ ಮೊದಲೂ ಮೋದಿಗೆ ಸೆಡ್ಡು
ಚುನಾವಣೆ ವೇಳೆಯಲ್ಲೂ ಮೋದಿ-ಷಾ ವಿರುದ್ಧ ದೀದಿ ಯುದ್ಧ
ಚುನಾವಣೆ ಮುಗಿದ ಬಳಿಕವೂ ಸಮರ ನಿಲ್ಲಿಸದ ಮಮತಾ

ಮೊದಲಿನಿಂದಲೂ ನರೇಂದ್ರ ಮೋದಿ ವಿರುದ್ಧ ರಾಜಕೀಯವಾಗಿ ಎದುರು ನಿಂತ ಬೆರಳೆಣಿಕೆ ರಾಜಕಾರಣಿಗಳಲ್ಲಿ ಮಮತಾ ಬ್ಯಾನರ್ಜಿಗೆ ಮೊದಲ ಸ್ಥಾನ. ಈ ಹಿಂದೆಯೂ ಅಷ್ಟೇ..ಹಲವಾರು ಕಾರಣಕ್ಕೆ ಕೇಂದ್ರ ಸರ್ಕಾರದ ವಿರುದ್ಧ ಸಿಡಿದು ನಿಲ್ತಾ ಇದ್ದಿದ್ದೇ ದೀದಿ. ಚಂಡಮಾರುತ ಬಂದಿದೆ ಅಂತ ಮೋದಿಯೇ ರಾಜ್ಯಕ್ಕೆ ಬಂದು ಮೀಟಿಂಗ್ ಮಾಡಿದರೂ ದೀದಿ ಬರೋದೇ ಇಲ್ಲ. ವೈಯಕ್ತಿಕವಾಗಿ ಮೋದಿ ಬಗ್ಗೆ ದೀದಿಗೆ ಯಾವುದೇ ಭಿನ್ನಾಭಿಪ್ರಾಯವೂ ಇಲ್ಲ. ಆದರೆ, ರಾಜಕೀಯವಾಗಿ, ಆಡಳಿತಾತ್ಮಕವಾಗಿ ಮೋದಿ ವಿರುದ್ಧ ಸೆಣಸುವ ಸಿಂಹಿಣಿಯಂತೆ ಕಾಣ್ತಾ ಇರೋರು ಮಮತಾ ಬ್ಯಾನರ್ಜಿ. ಪಶ್ಚಿಮ ಬಂಗಾಳದ ಚುನಾವಣೆಗೆ ಮೊದಲೂ ಕೂಡ ಮೋದಿಗೆ ಸೆಡ್ಡು ಹೊಡೀತಾನೇ ಇದ್ರು ದೀದಿ. ಚುನಾವಣೆ ವೇಳೆಯಲ್ಲಂತೂ ಮೋದಿ-ಅಮಿತ್ ಷಾ ವಿರುದ್ಧ ದೀದಿ ನಡೆಸಿದ್ದ ಯುದ್ಧ ಐತಿಹಾಸಿಕ.

ಅದೆಷ್ಟೇ ಅಕ್ಷೋಹಿಣಿ ಸೈನ್ಯ ತಂದು ನಿಲ್ಲಿಸಿದ್ದರೂ ದೀದಿ ಮಣಿಯಲೇ ಇಲ್ಲ. ಕಾಲಿಗೆ ಗಾಯವಾಗಿ ಗಾಲಿ ಕುರ್ಚಿಯಲ್ಲೇ ರಾಜ್ಯ ಸುತ್ತಿ ಕೊನೆಗೂ ಮತ್ತೆ ಅಧಿಕಾರ ಹಿಡಿದುಬಿಟ್ಟರು ದೀದಿ. ಈಗ ಚುನಾವಣೆ ಮುಗಿದ ಬಳಿಕವೂ ದೀದಿ, ಮೋದಿಗೆ ಸೆಡ್ಡು ಹೊಡೆಯೋದನ್ನು, ಟಾಂಗ್ ಕೊಡೋದನ್ನು ಬಿಟ್ಟಿಲ್ಲ. ಇದಕ್ಕೊಂದು ತಾಜಾ ಉದಾಹರಣೆ ಮುಕುಲ್ ರಾಯ್ ಘರ್ ವಾಪಸಿ.

ಎಲೆಕ್ಷನ್ ಮೊದಲು ಟಿಎಂಸಿಯಿಂದ ಬಿಜೆಪಿಯತ್ತ ನಾಯಕರು
ಎಲೆಕ್ಷನ್ ಬಳಿಕ ಬಿಜೆಪಿಯಿಂದ ಟಿಎಂಸಿ ಕಡೆಗೆ ನಾಯಕರ ನಡೆ
ಇದರಿಂದ ದೀದಿ ರವಾನಿಸ್ತಾ ಇರೋ ಸಂದೇಶವಾದರೂ ಏನು?

ಪಶ್ಚಿಮ ಬಂಗಾಳದಲ್ಲಿ ಬಿಜೆಪಿಗೆ ನೆಲೆಯೇ ಇರಲಿಲ್ಲ. ಹೀಗಾಗಿ ಮೋದಿ-ಅಮಿತ್ ಷಾ ಜೋಡಿ ಸಂಕಲ್ಪ ಮಾಡಿಬಿಟ್ಟಿದ್ದರು. ಪಶ್ಚಿಮ ಬಂಗಾಳದಲ್ಲಿ ಒಂದೇ ಬಾರಿಗೆ ಅಧಿಕಾರ ಹಿಡಿಯಲೇಬೇಕೆಂದು ಅಂದುಕೊಂಡಿದ್ದರು. ಪಶ್ಚಿಮ ಬಂಗಾಳದಲ್ಲಿ ಬಲವಾಗಿ ಬೇರೂರಿರುವ ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್ ಮೇಲೆಯೇ ಗಮನ ಕೇಂದ್ರಿಕರಿಸಿದರು. ಹಲವಾರು ನಾಯಕರನ್ನು ಬಿಜೆಪಿಯತ್ತ ಬರುವಂತೆ ಮಾಡಿದ್ದರು. ಮುಕುಲ್ ರಾಯ್, ಸುವೆಂದು ಅಧಿಕಾರಿಯಂತಹ ಪ್ರಬಲ ನಾಯಕರೇ ಟಿಎಂಸಿಯಿಂದ ಬಿಜೆಪಿಗೆ ಬಂದು ಬಿಟ್ಟಿದ್ದರು. ಆದ್ರೆ ಪಶ್ಚಿಮ ಬಂಗಾಳ ಎಲೆಕ್ಷನ್ ನಲ್ಲಿ ಬಿಜೆಪಿ ನಾಯಕರು ಅಂದುಕೊಂಡ ಹಾಗೆ ಆಗಲಿಲ್ಲ. ಮಮತಾ ಬ್ಯಾನರ್ಜಿಯವರ ಟಿಎಂಸಿಯನ್ನು ಚುನಾವಣಾ ಅಖಾಡದಲ್ಲಿ ಸೋಲಿಸಲು ಆಗಲೇ ಇಲ್ಲ. ಯಾವಾಗ ಚುನಾವಣೆಯಲ್ಲಿ ಬಿಜೆಪಿ ಅಧಿಕಾರಕ್ಕೆ ಬರಲಿಲ್ಲವೋ ಆಗಲೇ ಟಿಎಂಸಿಯಿಂದ ಬಿಜೆಪಿ ಕಡೆ ಹೋದವರು ಈ ಕಡೆ ಮತ್ತೆ ನೋಡಲಾರಂಭಿಸಿದ್ದರು. ಮರಳಿ ಅಧಿಕಾರಕ್ಕೆ ಬಂದಿರೋದ್ರಿಂದ ದೀದಿಗೆ ಈಗ ಪಕ್ಷ ಬಿಟ್ಟು ಹೋದವರ ಅಗತ್ಯತೆಯೇ ಇರಲಿಲ್ಲ. ಆದರೂ ಮಮತಾ ಬ್ಯಾನರ್ಜಿ ಯಾರೆಲ್ಲ ಟಿಎಂಸಿಗೆ ಮರಳಿ ಬರಲು ಮುಂದಾಗಿದ್ದಾರೋ ಅವರನ್ನು ನಿಧಾನವಾಗಿ ಒಬ್ಬೊಬ್ಬರನ್ನೇ ಸೇರಿಸಿಕೊಳ್ಳಲು ಮುಂದಾಗಿದ್ದಾರೆ. ಇದಕ್ಕೆ ಬಲವಾದ ಕಾರಣಗಳೂ ಇದ್ದಾವೆ.

ಪ್ರಭಾವಿ ನಾಯಕ ಮುಕುಲ್ ರಾಯ್ ಘರ್ ವಾಪ್ಸಿ ಆರಂಭವಷ್ಟೆನಾ?
ಮುಂದಿನ ದಿನಗಳಲ್ಲಿ ಬಂಗಾಳದಲ್ಲಿ ಬಿಜೆಪಿಗೆ ಕಾದಿದ್ಯಾ ಮತ್ತಷ್ಟು ಶಾಕ್?
ಬಂಗಾಳದಲ್ಲಿ ಕೋಟೆ ಕಟ್ಟುತ್ತೇವೆ ಅಂತ ಬಂದವರಿಗೆ ಏನಾಗ್ತಾ ಇದೆ?

ಮಮತಾ ಬ್ಯಾನರ್ಜಿ ಹಿಡಿದ ಪಟ್ಟು ಬಿಡಲ್ಲ, ಅಂದುಕೊಂಡ ಕೆಲಸ ಮುಗಿಸದೇ ಬಿಡಲ್ಲ. ಎಲೆಕ್ಷನ್ ಸಂದರ್ಭದಲ್ಲೂ ಮಮತಾ ಮಾಡಿದ್ದು ಇದನ್ನೇ. ಅಮಿತ್ ಷಾ ಮತ್ತು ನರೇಂದ್ರ ಮೋದಿ ಪಶ್ಚಿಮ ಬಂಗಾಳದಲ್ಲಿ ಚುನಾವಣೆ ಗೆಲ್ಲಲೇಬೇಕೆಂದು ಬಂದಿದ್ದರು. ಈ ಮೂಲಕ ಬಿಜೆಪಿ ಪಶ್ಚಿಮ ಬಂಗಾಳದಲ್ಲಿ ಹಿಂದೆಂದಿಗಿಂತ ಶಕ್ತಿಯುತವಾಗಿದ್ದು ನಿಜ. ಆದ್ರೆ ಅಧಿಕಾರಕ್ಕೆ ಬರಲು ಸಾಧ್ಯವಾಗಲಿಲ್ಲ. ದೀದಿ ಅದೆಷ್ಟರ ಮಟ್ಟಿಗೆ ಮೋದಿ-ಷಾ ವಿರುದ್ಧ ಹಠ ತೊಟ್ಟಿದ್ದರೆಂದರೆ ತಮ್ಮ ಅತ್ಯಾಪ್ತ ಸುವೆಂದು ಅಧಿಕಾರಿ ಕ್ಷೇತ್ರದಲ್ಲೇ ಸ್ಪರ್ಧಿಸಿ ಸೆಡ್ಡು ಹೊಡೆದಿದ್ದರು. ನಂದಿ ಗ್ರಾಮದಲ್ಲಿ ದೀದಿ ಸೋತರು ಅಲ್ಲಿಂದ ರವಾನಿಸಿದ ಸಂದೇಶ ಮಾತ್ರ ಕಡಿಮೆ ಆಗಿದ್ದಿರಲಿಲ್ಲ.

ನಂದಿ ಗ್ರಾಮದಲ್ಲಿ ದೀದಿ ಸೋತರೂ ಪಶ್ಚಿಮ ಬಂಗಾಳದಲ್ಲಿ ಟಿಎಂಸಿ ಅಧಿಕಾರಕ್ಕೆ ಬಂದಿತ್ತು. ಮಮತಾ ಬ್ಯಾನರ್ಜಿ ಮತ್ತೆ ಮುಖ್ಯಮಂತ್ರಿ ಗಾದಿಗೇರಿದ್ದರು. ಈಗ, 2017ರಲ್ಲೇ ಟಿಎಂಸಿ ತೊರೆದು ಹೋಗಿದ್ದ ಮುಕುಲ್ ರಾಯ್ ಕೂಡ ವಾಪಸ್ ಬಂದಿದ್ದಾರೆ. ಮುಕುಲ್ ರಾಯ್ ಬಂಗಾಳದಲ್ಲಿ ಸಾಕಷ್ಟು ಪ್ರಭಾವಿ ನಾಯಕ. ಬಿಜೆಪಿ ಅವರನ್ನು ಕರೆದು ಉಪಾಧ್ಯಕ್ಷರನ್ನಾಗಿಯೂ ಮಾಡಿತ್ತು. ಆದರೆ, ಮುಕುಲ್ ಬಿಜೆಪಿ ನಮ್ಮಂತವರಿಗಲ್ಲ ಅಂತ ವಾಪಸ್ ಬಂದಿದ್ದಾರೆ. ಮಮತಾ ಬ್ಯಾನರ್ಜಿ, ಮುಕುಲ್ ರಾಯ್ ಅವರನ್ನು ಪಕ್ಷಕ್ಕೆ ಬರಮಾಡಿಕೊಂಡು ಮೋದಿ-ಅಮಿತ್ ಷಾಗೆ ಖಡಕ್ ಸಂದೇಶವನ್ನೂ ರವಾನಿಸಿದ್ದಾರೆ. ಮುಕುಲ್ ರಾಯ್ ಸೇರ್ಪಡೆ ಆರಂಭವಷ್ಟೇನಾ, ಮತ್ತಷ್ಟು ಜನ ಟಿಎಂಸಿ ಕಡೆ ಬರಲು ಒಲವು ತೋರಿದ್ದಾರಾ ಅನ್ನೋ ಚರ್ಚೆ ಶುರುವಾಗಿದೆ. ಹೀಗಾದರೆ ಬಂಗಾಳದಲ್ಲಿ ಮತ್ತೆ ವೀಕ್ ಆಗಿ ಹೋಗುತ್ತಾ ಬಿಜೆಪಿ? ಬಂಗಾಳದಲ್ಲಿ ಕೋಟೆ ಕಟ್ಟುತ್ತೇವೆ ಅಂತ ಬಂದವರಿಗೆ ಏನಾಗ್ತಾ ಇದೆ? ಇದೇ ಈಗ ದೇಶದ ರಾಜಕೀಯ ವಲಯದಲ್ಲಿ ಚರ್ಚೆ ಆಗ್ತಾ ಇರೋ ವಿಚಾರ.

ಬಿಜೆಪಿಯಿಂದ ಟಿಎಂಸಿಗೆ ಬರೋದ್ರಿಂದ ದೀದಿ ಬಲ ಹೆಚ್ಚಲ್ಲ
ನಾಯಕರ ವಾಪಸ್ಸಾತಿಯಿಂದ ಬಿಜೆಪಿ ಬಲವಂತೂ ಕುಗ್ಗಲಿದೆ
ಟಿಎಂಸಿ ಭವಿಷ್ಯ ಭದ್ರಗೊಳಿಸುವ ದೃಷ್ಟಿಯಿಂದ ದೀದಿ ಪ್ಲಾನ್

ಬಿಜೆಪಿಯಿಂದ ಟಿಎಂಸಿಗೆ ಈಗ ನಾಯಕರು ವಾಪಸ್ ಆಗೋದ್ರಿಂದ ದೀದಿ ಬಲ ಹೆಚ್ಚಾಗಲ್ಲ. ಆದರೆ, ಬಂಗಾಳದಲ್ಲಿ ಭಾರತೀಯ ಜನತಾ ಪಕ್ಷದ ಬಲವನ್ನು ಕುಗ್ಗಿಸೋದೇ ಮಮತಾ ಬ್ಯಾನರ್ಜಿಯ ತಂತ್ರ. ಟಿಎಂಸಿಗೆ ಭವಿಷ್ಯದಲ್ಲಿ ಬಿಜೆಪಿ ಅಡ್ಡಿಯಾಗಬಾರದು ಎನ್ನುವ ಮಮತಾ ಮುಂದಾಲೋಚನೆಯ ಫಲವೇ ಈಗ ಮುಕುಲ್ ರಾಯ್ ಸೇರ್ಪಡೆ. ಮಮತಾ ಬ್ಯಾನರ್ಜಿಯವರಿಗೂ ಗೊತ್ತು. ನರೇಂದ್ರ ಮೋದಿ ಮತ್ತು ಅಮಿತ್ ಷಾ ಮೊದಲ ಪ್ರಯತ್ನದಲ್ಲೇ ಬಂಗಾಳದಲ್ಲಿ ಬಿಜೆಪಿ ಬಲವನ್ನು ಝೀರೋದಿಂದ ಶತಕದ ಅಂಚಿಗೆ ತಂದು ನಿಲ್ಲಿಸಿದ್ದಾರೆ ಅಂದ್ರೆ ಇನ್ನೈದು ವರ್ಷದಲ್ಲಿ ಅದು ಒನ್ ಟು ಡಬಲ್ ಆಗೋದು ಕಷ್ಟವಲ್ಲ. ಈ ಸುಳಿವು ಅರಿತೇ ಈಗ ಮಮತಾ ಬ್ಯಾನರ್ಜಿ, ಬಿಜೆಪಿಯನ್ನು ಎಷ್ಟು ಸಾಧ್ಯವೋ ಅಷ್ಟು ದುರ್ಬಲಗೊಳಿಸಲು ಮುಂದಾಗ್ತಾ ಇದಾರೆ.

ಮಮತಾ ಬ್ಯಾನರ್ಜಿಯವರಿಗೆ ಒಂದಂತು ಸ್ಪಷ್ಟವಾಗಿ ಹೋಗಿದೆ. ಎಲೆಕ್ಷನ್​ಗೆ ಮುನ್ನ ಅನೇಕ ನಾಯಕರು ಪಕ್ಷ ಬಿಟ್ಟು ಹೋದರು ಕಾರ್ಯಕರ್ತರು ಮಾತ್ರ ಕದಲಲೇ ಇಲ್ಲ. ಇದು ಚುನಾವಣೆಯ ಫಲಿತಾಂಶದಲ್ಲಿ ಪಕ್ಕಾ ಆಗಿ ಹೋಗಿದೆ. ಹೀಗಾಗಿ ದೀದಿ ಮತ್ತಷ್ಟು ರಣೋತ್ಸಾಹದಿಂದ ಮೋದಿ ವಿರುದ್ಧ ಸಮರ ಮುಂದುವರೆಸಲು ತಯಾರಾಗಿ ಬಿಟ್ಟಿದ್ದಾರೆ.

ಮೋದಿ-ಅಮಿತ್ ಷಾಗೆ ಸಮಾನರಿಲ್ಲ ಅನ್ನೋ ಮಾತಿಗೆ ತಿರುಗೇಟು
ಬಂಗಾಳದಿಂದಲೇ ಪರ್ಯಾಯ ಶಕ್ತಿ ಆವಿರ್ಭವಿಸುವ ಸಂದೇಶ?
ಮೋದಿ ಎದುರಾಳಿಗಳನ್ನು ಒಗ್ಗೂಡಿಸುವ ವೇದಿಕೆ ಸಿದ್ಧವಾಗುತ್ತಾ?

ಪಶ್ಚಿಮ ಬಂಗಾಳ ಚುನಾವಣೆ ರಾಷ್ಟ್ರಮಟ್ಟದಲ್ಲಿ ಗಮನ ಸೆಳೆದಿದ್ದೇ ಮತ್ತೊಂದು ಕಾರಣಕ್ಕೆ. ಮೋದಿ-ಅಮಿತ್ ಷಾ ವಿರುದ್ಧ ಸೆಣಸೋದು ಸುಲಭ ಅಲ್ಲ ಅಂತಾನೇ ಈಗ ದೇಶದ ರಾಜಕಾರಣದಲ್ಲಿ ಕೇಳಿ ಬರ್ತಾ ಇರುವ ಮಾತು. ಆದ್ರೆ ಮಮತಾ ಬ್ಯಾನರ್ಜಿ ಇದಕ್ಕೆಲ್ಲ ಸೊಪ್ಪು ಹಾಕಿರಲಿಲ್ಲ. ಪಶ್ಚಿಮ ಬಂಗಾಳ ಚುನಾವಣೆಯಲ್ಲಿ ಮಮತಾ ಬ್ಯಾನರ್ಜಿ ಏಕಾಂಗಿಯಾಗಿ ತಮ್ಮ ಪಕ್ಷವನ್ನು ಅಧಿಕಾರಕ್ಕೆ ತಂದುಬಿಟ್ಟರು. ಮಮತಾ ಮತ್ತೆ ಅಧಿಕಾರಕ್ಕೆ ಬಂದರೆ ದೇಶದಲ್ಲಿ ಮೋದಿ ವಿರೋಧಿ ನಾಯಕರು ಮತ್ತೆ ಒಂದಾಗೋದಕ್ಕೆ ಕಾರಣವಾಗುತ್ತೆ ಅಂತಾನೂ ವಿಶ್ಲೇಷಣೆ ಮಾಡಲಾಗ್ತಾ ಇತ್ತು. ಮೋದಿ ವಿರುದ್ಧ ಸೆಣಸಲು ಮಮತಾರನ್ನೇ ಮುಂದಿಟ್ಟುಕೊಂಡು ಹೋರಾಟ ಮಾಡಬಹುದು ಅನ್ನೋ ಚರ್ಚೆಗಳು ಶುರುವಾಗಿದ್ದವು. ಹೀಗಾಗಿ ಮಮತಾ ಬ್ಯಾನರ್ಜಿಯವರಿಗೆ ಕಳೆದ ಚುನಾವಣೆ ದೇಶಮಟ್ಟದಲ್ಲಿ ಇಮೇಜ್ ವೃದ್ಧಿಯಾಗಲು ಕಾರಣವಾಗಿ ಹೋಯ್ತು. ಹೀಗಾಗಿ ಮೋದಿ ವಿರುದ್ಧದ ದೀದಿ ಸಮರ ಕಂಟಿನ್ಯೂ ಆಯ್ತು. ಇದು ಪಶ್ಚಿಮ ಬಂಗಾಳಕ್ಕೆ ಸೀಮಿತವಾಗುತ್ತಾ ಅಥವಾ ಮಮತಾ ಬ್ಯಾನರ್ಜಿ ಅವರ ಪ್ರಭಾವದಿಂದ ಮುಂದಿನ ಲೋಕಸಭೆ ಚುನಾವಣೆ ಹೊತ್ತಿಗೆ ಹೊಸ ಧ್ರುವೀಕರಣಕ್ಕೆ ಕಾರಣವಾಗುತ್ತಾ ಗೊತ್ತಿಲ್ಲ. ಕಾರಣ ದೇಶದಲ್ಲಿನ ಅನೇಕ ರಾಜಕೀಯ ಪಕ್ಷಗಳಿಗೆ ಮೋದಿಗೆ ಸರಿಸಮಾನವಾಗಬಲ್ಲಂತಹ ನಾಯಕನ ಸೃಷ್ಟಿ ಆಗಬೇಕಾಗಿದೆ.

ಮಮತಾ ಬ್ಯಾನರ್ಜಿ ಬಂಗಾಳಕ್ಕೆ ಸೀಮಿತವಾಗಿ ಇರ್ತಾರಾ?
ಮುಂದೆ ರಾಷ್ಟ್ರ ರಾಜಕಾರಣದ ಮುಂಚೂಣಿಗೆ ಬಂದು ನಿಲ್ತಾರಾ?

ಮಮತಾ ಬ್ಯಾನರ್ಜಿ ನಡೆದು ಬಂದ ದಾರಿಯೇ ಹಾಗಿದೆ. ಮೊದಲಿನಿಂದಲೂ ಹೋರಾಟದ ಹಾದಿ ಇವರದ್ದು. ಯಾರಿಗೂ ಮಣಿಯಲ್ಲ, ಯಾರಿಗೂ ಕೇರ್ ಮಾಡದ ವ್ಯಕ್ತಿತ್ವ. ತಮ್ಮ ಹೋರಾಟ ಮತ್ತು ದಿಟ್ಟತನದಿಂದಲೇ ರಾಜಕಾರಣದಲ್ಲಿ ಇಷ್ಟು ಎತ್ತರಕ್ಕೆ ಬೆಳೆದಿರುವ ಮಮತಾ ಬ್ಯಾನರ್ಜಿ, ತಮ್ಮ ರಾಜಕೀಯವನ್ನು ಬಂಗಾಳಕ್ಕೇ ಸೀಮಿತ ಮಾಡಿಕೊಳ್ತಾರಾ  ಅಥವಾ ದೆಹಲಿಯ ಗಾದಿಯ ಮೇಲೂ ಒಂದು ಕಣ್ಣು ಇಡುತ್ತಾರಾ ಗೊತ್ತಿಲ್ಲ. ಬಂಗಾಳದ ಮಟ್ಟಿಗಂತೂ ಮಮತಾ ಬ್ಯಾನರ್ಜಿಯವರಿಗೆ ಸರಿಸಾಟಿಯಾದ ನಾಯಕರಿಲ್ಲ. ಈಗ ಮಮತಾ ಬ್ಯಾನರ್ಜಿಯವರನ್ನು ಮೋದಿ ಎದುರಾಳಿಯಾಗಿ ಬಿಂಬಿಸಬೇಕೆಂಬ ಇಚ್ಛೆಯೂ ಹಲವು ನಾಯಕರಲ್ಲಿದೆ. ಆದ್ರೆ ದೀದಿಗೆ ದೆಹಲಿ ರಾಜಕಾರಣದ ಬಗ್ಗೆ ಆಸಕ್ತಿ ಇದೆಯೋ ಇಲ್ಲವೋ ಗೊತ್ತಿಲ್ಲ. ಆದ್ರೆ ತಮ್ಮ ಕೋಟೆಗೆ ನುಸುಳಲು ಬಂದವರನ್ನು ಹಿಂದಕ್ಕೆ ಕಳಿಸುವಲ್ಲಿಯಂತೂ ದೀದಿ ಯಶಸ್ವಿಯಾಗಿದ್ದಾರೆ. ಅಷ್ಟೇ ಅಲ್ಲ, ಯಾವತ್ತೂ ಸಮರ ಸನ್ನದ್ಧ ಅನ್ನೋ ಸಂದೇಶವನ್ನುೂ ರವಾನಿಸಿದ್ದಾರೆ. ಅದರ ಮುಂದುವರೆದ ಭಾಗವೇ ಮುಕುಲ್ ರಾಯ್ ಅಂಥವರ ಮರು ಸೇರ್ಪಡೆ. ಆ ಮೂಲಕ ಮೋದಿ-ಅಮಿತ್ ಷಾ ಜೋಡಿಗೆ ಒಂದು ಖಡಕ್ ಸಂದೇಶ.

ಬೇರೆಲ್ಲಾ ರಾಜಕಾರಣಿಗಳಿಗಿಂತ ಮಮತಾ ಬ್ಯಾನರ್ಜಿಯ ರಾಜಕೀಯ ವಿಭಿನ್ನ. ಕಾರಣ ಇವರಲ್ಲಿರುವ ದಿಟ್ಟತನ. ಪಶ್ಚಿಮ ಬಂಗಾಳದಲ್ಲಿ ಇನ್ನೂ ಏನೇನಾಗುತ್ತೋ, ಅಲ್ಲಿನ ರಾಜಕಾರಣ ಬೇರೆ ಕಡೆ ಯಾವ ರೀತಿ ಪರಿಣಾಮ ಬೀರುತ್ತೋ ಕಾದು ನೋಡಬೇಕು.

 

The post ಮೋದಿ ವಿರುದ್ಧ ದೀದಿ ಯುದ್ಧ.. ಎಲೆಕ್ಷನ್ ಬಳಿಕ BJPಯಿಂದ TMCಯತ್ತ ನಾಯಕರ ನಡೆ appeared first on News First Kannada.

Source: newsfirstlive.com

Source link