ನರೇಂದ್ರ ಮೋದಿ ಎನ್ನುವ ಹೆಸರು ವಿಶ್ವದಲ್ಲೇ ಜನಪ್ರಿಯ. ಅದು ಕೇವಲ ವ್ಯಕ್ತಿಯಿಂದಲ್ಲ, ಆ ವ್ಯಕ್ತಿಯ ಭರವಸೆಯ ಮಾತುಗಳು, ದೇಶದಲ್ಲಿನ ಆರ್ಥಿಕ ಸ್ಥಿತಿ, ಲಂಚ- ಮೋಸ.. ಎಲ್ಲವನ್ನು ತಿದ್ದಿ ಬಿಡುವ ಮಾತುಗಳ ಭರವಸೆ. ಕಳೆದ ದಶಕದಿಂದ ಈ ಹೆಸರು ಹಾಗೇ ಇದೆ. ಆದರೆ ಆ ಭರವಸೆಯ ಮಾತುಗಳು ಅದರಿಂದ ಸಿಕ್ಕ ಜನಪ್ರಿಯತೆ ಈಗಲೂ ಹಾಗೆ ಇದೆಯಾ ಅಂದರೆ ಅದಕ್ಕೆ ಉತ್ತರ ಸ್ವಲ್ಪ ಕಷ್ಟ. ಪ್ರಧಾನಿ ನರೇಂದ್ರ ಮೋದಿಯವರ ಬಗ್ಗೆ ಲೋಕಲ್ ಸರ್ಕಲ್ ಅನ್ನೋ ಸಂಸ್ಥೆ ಒಂದು ಸಮೀಕ್ಷೆ ನಡೆಸಿದೆ.

2014ರಲ್ಲಿ ಭಾರತದಲ್ಲಿ ಒಂದು ಬದಲಾವಣೆ ಕಂಡಿತ್ತು. ಹಲವು ವರ್ಷಗಳಿಂದ ಅಸ್ಥಿತ್ವವನ್ನು ಕಾಪಾಡಿಕೊಂಡು ಬಂದಿದ್ದ ಯುಪಿಎ ಸರ್ಕಾರಕ್ಕೆ ಎನ್​​ಡಿಎ ಸರ್ಕಾರ ಬ್ರೇಕ್ ಕೊಟ್ಟಿತ್ತು. ಅದಕ್ಕೆ ಕಾರಣವೇ ಮೋದಿ ವರ್ಚಸ್ಸು. ತನ್ನ ದಿಟ್ಟ ಹೆಜ್ಜೆ, ತುಂಡರಿಸುವಂತಹ ಮಾತುಗಳು, ಆಕರ್ಷಕ ವ್ಯಕ್ತಿತ್ವದಿಂದ ಸ್ಟೇಜ್ ಮೇಲೆ ನಿಂತು ಭಾಷಣ ಶುರು ಮಾಡಿದರೆ ಸಭೆಯಲ್ಲಿ ನೆರೆದಿದ್ದ ಎಲ್ಲರ ಮೈ-ರೋಮಾಂಚನವಾಗೋ ರೀತಿಯಲ್ಲಿ ಇರ್ತಿತ್ತು. ಆ ಮಾತುಗಳಲ್ಲಿ ಎಷ್ಟೋ ಭಾರತೀಯರ ಕನಸುಗಳು ಅಡಗಿತ್ತು. ದೇಶ ಬಲಿಷ್ಠವಾಗುವಂತ ಭರವಸೆ ಇತ್ತು. ದೇಶದ ನಾಗರೀಕರ ನರನಾಡಿಗಳಲ್ಲಿ ಹುಮ್ಮಸ್ಸು ಹೆಚ್ಚಿಸಿತ್ತು. ಅಂದು ಭಾರತೀಯರ ಬಹುದಿನದ ಕನಸನ್ನು ಹೊತ್ತು ಎನ್​​​ಡಿಎ ಧ್ವಜವನ್ನು ಹಿಡಿದು ಪ್ರಧಾನ ಮಂತ್ರಿಯಾಗಿದ್ದರು ನರೇಂದ್ರ ಮೋದಿ.

ರಾಷ್ಟ್ರ ರಕ್ಷಣಾ ಪಡೆ ಗಟ್ಟಿಗೊಳಿಸಬೇಕು, ರಾಮ ಮಂದಿರ ನಿರ್ಮಾಣ ಆಗಬೇಕು, ನಿರುದ್ಯೋಗದ ಸಮಸ್ಯೆ ಬಗೆಹರಿಯಬೇಕು, ಲಂಚಕೋರರನ್ನು ಮಟ್ಟ ಹಾಕಬೇಕು, ಜಾಗತೀಕವಾಗಿ ದೇಶ ಮುಂದುವರಿದ ರಾಷ್ಟ್ರವಾಗಿ ನಿಲ್ಲಬೇಕು, ಜನರ ಅಗತ್ಯ ವಸ್ತುಗಳ ನಿರ್ವಹಣೆ, ಮಧ್ಯಮ ವರ್ಗದವರ ಬೆಳವಣಿಗೆ ಹೀಗೆ ಹಲವು ಜವಾಬ್ದಾರಿಗಳು ಎನ್.ಡಿ.ಎ ಸರ್ಕಾರದ ಮೇಲೆ ಇತ್ತು. ಅದೆಲ್ಲವನ್ನು ತನ್ನ ಪ್ರಣಾಳಿಕೆಯಲ್ಲಿ ಹೇಳಿಕೊಂಡಿತ್ತು. ಹೀಗೆ ಒಂದೊಂದಾಗಿ ಭರವಸೆಯನ್ನ ಈಡೇರಿಸುತ್ತಾ ಬರುತ್ತಿದ್ದ ಎನ್​ಡಿಎ ಸರ್ಕಾರಕ್ಕೆ ಒಂದು ಸಮೀಕ್ಷೆ ನಿರಾಸೆ ಮೂಡಿಸಿದೆ. ಅದಕ್ಕೆ ಕಾರಣ ಮಹಾಮಾರಿ ಕೊರೊನಾ.

ಲೋಕಲ್ ಸರ್ಕಲ್ ನಡೆಸಿದ ಸಮೀಕ್ಷೆ ಬಿಚ್ಚಿಟ್ಟ ಕಟುಸತ್ಯ
ಹೌದು.. ಲೋಕಲ್ ಸರ್ಕಲ್ ಸಂಸ್ಥೆ ನಡೆಸಿದ ಸಮೀಕ್ಷೆ ಸದ್ಯದ ಎನ್​ಡಿಎ ಭವಿಷ್ಯವನ್ನ ನಿರ್ಧರಿಸುವಂತಿದೆ. ಯಾಕಂದ್ರೆ ಇದೇ ಸಂಸ್ಥೆ 2014ರಲ್ಲಿ ಮೊದಲ ಬಾರಿಗೆ ನಡೆಸಿದ್ದ ಸಮೀಕ್ಷೆ ಹೇಳಿದಂತೆ ಯಶಸ್ಸು ಕಂಡಿತ್ತು. ಎನ್.ಡಿ.ಎ ಸರ್ಕಾರದ ನಿರ್ವಹಣೆಯಲ್ಲಿ ಶೇಕಡ 75ರಷ್ಟು ಯಶಸ್ಸನ್ನು ಕಂಡಿತ್ತು, ಇದು ಅಂದಿನ ಸಮಿಕ್ಷೆ ಆಗಿತ್ತು. ಆದ್ರೆ ಈಗ ಮತ್ತೆ ಲೋಕಲ್ ಸರ್ಕಲ್ ಸಂಸ್ಥೆ ನಡೆಸಿರೋ ಸಮೀಕ್ಷೆ ಕಳೆದ ಬಾರಿಗಿಂತ ತದ್ವಿರುದ್ದವಾಗಿದೆ. ಸಮೀಕ್ಷೆಯ ಪ್ರಕಾರ ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಸರ್ಕಾರದ ಜನಪ್ರಿಯತೆ ಹಿಂದೆಂದಿಗಿಂತ ಕುಗ್ಗಿದೆ.

70 ಸಾವಿರ ಮಂದಿಯ ಪ್ರತಿಕ್ರಿಯೆ ಪಡೆದ ಸಂಸ್ಥೆ
ಹೌದು, ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ-2 ಸರ್ಕಾರದ ಜನಪ್ರಿಯತೆ ಕುಗ್ಗಿದೆ. 2020ಕ್ಕೆ ಹೋಲಿಸಿದರೆ ಮೋದಿ ನೇತೃತ್ವದ ಸರ್ಕಾರದ ಜನಪ್ರಿಯತೆಯಲ್ಲಿ 11 ಶೇಕಡಾವಾರು ಅಂಶಗಳಷ್ಟು ಇಳಿಕೆಯಾಗಿದೆಯಂತೆ. ಕೋವಿಡ್‌ನ ಎರಡನೇ ಅಲೆಯನ್ನು ಪರಿಣಾಮಕಾರಿಯಾಗಿ ನಿರ್ವಹಿಸುವಲ್ಲಿ ವಿಫಲವಾದದ್ದೇ ಜನಪ್ರಿಯತೆ ಇಳಿಕೆಗೆ ಕಾರಣ ಎನ್ನಲಾಗ್ತಾ ಇದೆ. ಈ ಸಮೀಕ್ಷೆಯಲ್ಲಿ 70 ಸಾವಿರ ಜನರು ಭಾಗವಹಿಸಿದ್ದು, 1.69 ಲಕ್ಷ ಪ್ರತಿಕ್ರಿಯೆಗಳನ್ನು ನೀಡಿದ್ದಾರೆ. ಇವುಗಳ ಆಧಾರದ ಮೇಲೆ ಸಮೀಕ್ಷೆಯ ವರದಿಯನ್ನು ಸಿದ್ಧಪಡಿಸಲಾಗಿದೆ.

ಕೋವಿಡ್ ಮೊದಲ ಅಲೆ ನಿರ್ವಹಣೆ ಮಾಡುವಲ್ಲಿ ಯಶಸ್ವಿ
ಇಡೀ ವಿಶ್ವಕ್ಕೆ 2019ರಲ್ಲಿ ಕೋವಿಡ್ ಸಾಂಕ್ರಾಮಿಕ ಅಪ್ಪಳಿಸಿತ್ತು. ಅಮೆರಿಕದಂತಹ ಬಲಿಷ್ಟ ರಾಷ್ಟ್ರಗಳೇ ಮೊದಲ ಅಲೆ ಹೊಡೆತಕ್ಕೆ ತತ್ತರಿಸಿ ಹೋಗಿದ್ದವು. ಜಗತ್ತಿನ ಬೇರೆ ಬೇರೆ ರಾಷ್ಟ್ರಗಳು ಕೊರೊನಾದಿಂದ ಸಾವು ನೋವುಗಳನ್ನು ನೋಡುತ್ತಿದ್ದರೆ, ಭಾರತ ಸೇಫ್ ಆಗಿ ನಿರ್ವಹಣೆ ಮಾಡುತ್ತಿತ್ತು. ಇದರಿಂದ ಕೋವಿಡ್ ಮೊದಲ ಅಲೆಯನ್ನು ಸುಧಾರಿಸುವಲ್ಲಿ ಎನ್.ಡಿ.ಎ ಸರ್ಕಾರ ಯಶಸ್ಸನ್ನು ಕಂಡಿದೆ. ಇದರ ಬಗ್ಗೆ ಸಮೀಕ್ಷೆಯು ಧನಾತ್ಮಕ ವರದಿಯನ್ನೆ ನೀಡಿದೆ. ವರದಿ ಪ್ರಕಾರ ಕೋವಿಡ್‌ ಮೊದಲ ಅಲೆಯನ್ನು ಸರ್ಕಾರ ಉತ್ತಮವಾಗಿ ನಿರ್ವಹಣೆ ಮಾಡಿದೆ ಎಂದು ಶೇಕಡ 66ರಷ್ಟು ಜನರು ಹೇಳಿದ್ದಾರೆ.

ಕೋವಿಡ್ ಲಸಿಕೆ ನೀಡುವ ಕಾರ್ಯಕ್ರಮದಲ್ಲಿ ಅರ್ಧದಷ್ಟು ಯಶಸ್ವಿ
ಇನ್ನು ಈ ಸಾಂಕ್ರಾಮಿಕದಿಂದ ದೇಶವನ್ನು ಕಾಪಾಡಲು ಇರುವ ಒಂದೇ ಒಂದು ಅಸ್ತ್ರ ಎಂದರೆ ಅದು ಲಸಿಕೆ. ಈಗಾಗ್ಲೆ ವಿಶ್ವದ ದೊಡ್ಡಣ್ಣ ಅಮೆರಿಕಾ ಈ ಕಾರ್ಯಕ್ರಮದಲ್ಲಿ ಸಂಪೂರ್ಣ ಯಶಸ್ಸು ಕಂಡಿದ್ದಾನೆ. ಇನ್ನು ರಷ್ಯಾ ಸಹ ಜನರಿಗೆ ಲಸಿಕೆ ನೀಡುವಲ್ಲಿ ಗೆದ್ದಾಗಿದೆ. ಜನಸಂಖ್ಯೆ ಹೆಚ್ಚಾಗಿರುವ ರಾಷ್ಟ್ರಗಳ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿರುವ ಭಾರತಕ್ಕೆ ಲಸಿಕೆ ವಿತರಣೆ ಸ್ವಲ್ಪ ಕಷ್ಟದ ಕೆಲಸವೇ. ಆದರೂ ಸರ್ಕಾರದ ಲಸಿಕೆ ಉತ್ಸವಗಳಂತಹ ಕಾರ್ಯಕ್ರಮಗಳು ಸಾಕಷ್ಟು ಜನರಿಗೆ ವ್ಯಾಕ್ಸಿನ್ ಸಿಗುವುದರಲ್ಲಿ ಸಹಾಯಕವಾಗಿದೆ. ಕೋವಿಡ್‌ ಲಸಿಕೆ ಕಾರ್ಯಕ್ರಮವನ್ನು ಸರ್ಕಾರ ಉತ್ತಮವಾಗಿ ನಿರ್ವಹಣೆ ಮಾಡಿದೆ ಎಂದು ಶೇಕಡ 55ರಷ್ಟು ಜನರು ಸಮೀಕ್ಷೆಯಲ್ಲಿ ನೀಡಿರುವ ವರದಿ ಸರ್ಕಾರದ ಪಾಲಿಗೆ ಧನಾತ್ಮಕ ಪ್ರತಿಕ್ರಿಯೆ ಎನ್ನಿಸಿಕೊಳ್ಳುತ್ತಿದೆ.

ನಿರುದ್ಯೋಗ ಸಮಸ್ಯೆ ನಿವಾರಣೆ ಮಾಡುವಲ್ಲಿ ಸರ್ಕಾರ ವಿಫಲ
ಈ ಹಿಂದೆ ನಿರುದ್ಯೋಗದ ಸಮಸ್ಯೆಯ ಬಗ್ಗೆ ಮನ್ ಕಿ ಬಾತ್ ಕಾರ್ಯಕ್ರಮದಲ್ಲಿ ಮಾತನಾಡುವಾಗ ಮೋದಿ, ಪಕೋಡ ಮಾರುವುದು ಕೂಡ ಉದ್ಯೋಗವೇ ಎಂದು ಹೇಳಿದ್ದರು. ಇದಕ್ಕೆ, ಎಷ್ಟೊ ಯುವಕರಿಂದ ಬೇಸರ ವ್ಯಕ್ತವಾಗಿತ್ತು. ಬೀದಿ ಬದಿಯಲ್ಲಿ ಡಿಗ್ರೀ ಸರ್ಟಿಫಿಕೇಟ್ ಹಿಡಿದು ಹಲವು ಯುವಕರು ಪಕೋಡ ಮಾರುವ ಪ್ರೊಟೆಸ್ಟ್ಗೆ ಇಳಿದಿದ್ದರು. ಅಂದಿನಿಂದ ನಿರುದ್ಯೋಗಿಗಳಿಗೆ ಸರ್ಕಾರದಿಂದ ಯಾವ ಸಂತಸದ ಸುದ್ದಿಗಳು ಬಂದಿಲ್ಲ ಅನ್ನುವುದು ಈ ಸಮೀಕ್ಷೆಯಿಂದ ತಿಳಿದು ಬಂದಿದೆ. ದೇಶದಲ್ಲಿ ನಿರುದ್ಯೋಗ ಸಮಸ್ಯೆಯನ್ನು ನಿವಾರಿಸುವಲ್ಲಿ ಸರ್ಕಾರ ವಿಫಲವಾಗಿದೆ ಎಂದು ಶೇಕಡ 61ರಷ್ಟು ಜನರು ಹೇಳಿದ್ದಾರೆ. ಆದರೆ ಶೇಕಡ 27ರಷ್ಟು ಜನರು ಮಾತ್ರ ನಿರುದ್ಯೋಗ ಸಮಸ್ಯೆಯನ್ನು ಸರಿಯಾಗಿ ನಿರ್ವಹಿಸಿದೆ ಎನ್ನುವುದರ ಜೊತೆಗೆ ಮಿಶ್ರ ಪ್ರತಿಕ್ರಿಯೆ ಸಿಕ್ಕಿದೆ.

ಭ್ರಷ್ಟಾಚಾರ ನಿರ್ವಹಿಸುವಲ್ಲಿ ಎನ್​​ಡಿಎ ಸರ್ಕಾರ ವಿಫಲ
ದೇಶದಲ್ಲಿ ಹಲವು ವರ್ಷಗಳಿಂದ ಕಾಡುತ್ತಿರುವ ಸಮಸ್ಯೆ ಎಂದರೆ ಭ್ರಷ್ಟಾಚಾರ. ಇದರಿಂದ ಹೊರ ಬರಬೇಕಾದರೆ ಬೇರುಮಟ್ಟದಿಂದ ಕೀಳಬೇಕು ಎಂದು ನರೇಂದ್ರ ಮೋದಿ ತಮ್ಮ ಭಾಷಣದಲ್ಲಿ ಆಗ್ಗಾಗೆ ಹೇಳಿ ಭ್ರಷ್ಟಾಚಾರದ ವಿರುದ್ದ ಹೋರಾಡುವ ಭರವಸೆ ಕೊಟ್ಟಿದ್ದರು. ಈ ವಿಷಯದ ನಿರ್ವಹಣೆಗೆ ಡಿಮಾನಿಟೈಸೇಷನ್ ಎನ್ನುವ ದಿಟ್ಟ ಹೆಜ್ಜೆಯನ್ನೆ ಇಟ್ಟಿದ್ದರು ನರೇಂದ್ರ ಮೋದಿ. ಅಂದಿನ ದಿನ ಅವರು ಕೊಟ್ಟ ಹೇಳಿಕೆ ಎಷ್ಟೊ ಜನರಲ್ಲಿ ಭ್ರಷ್ಟಾಚಾರದ ವಿರುದ್ದ ಶಕ್ತಿಯುತ ಹೋರಾಟ ಎನಿಸಿದರು, ಇದರ ನಿರ್ವಾಹಣೆಯಲ್ಲಿ ಸೋತಿದ್ದಾರೆ ಎನ್ನುವುದು ತಜ್ಙರ ಅಭಿಪ್ರಾಯವಾಗಿತ್ತು. ಆದರೆ ಎ.ಡಿ.ಎ-2 ರಲ್ಲಿ ದೇಶದಲ್ಲಿ ಕಳೆದ ಎರಡು ವರ್ಷದಲ್ಲಿ ಭ್ರಷ್ಟಾಚಾರದ ಪ್ರಮಾಣ ಇಳಿಕೆಯಾಗಿಲ್ಲ ಎಂದು ಶೇಕಡ 51ರಷ್ಟು ಜನರು ಅಭಿಪ್ರಾಯಪಟ್ಟಿದ್ದಾರೆ. ಅಲ್ಲದೆ ಸರ್ಕಾರವು ಭ್ರಷ್ಟಾಚಾರವನ್ನು ನಿಯಂತ್ರಿಸಿದೆ ಎಂದು ಶೇಕಡ 39ರಷ್ಟು ಜನರು ಹೇಳಿದ್ದಾರೆ.

ಜಾಗತಿಕ ಮಟ್ಟದಲ್ಲಿ ದೇಶ ಹೆಸರುವಾಸಿಯೇ?
ಹಿಂದೆ ಇದ್ದ ಸರ್ಕಾರಗಳು ಜಾಗತಿಕ ಮಟ್ಟದಲ್ಲಿ ದೇಶದ ಹೆಸರು ಸ್ಥಾಪಿಸಲು ಸೋತಿದ್ದವು. ಆದರೆ ಮೋದಿ ಅವರ ಜೊತೆಗಿನ ವಿಶ್ವದ ಬೇರೆ ಬೇರೆ ರಾಷ್ಟ್ರಗಳ ಒಡನಾಟ ಚನ್ನಾಗಿದೆ. ಮೋದಿ ಪ್ರಧಾನ ಮಂತ್ರಿ ಆದಾಗಿನಿಂದ ಹಲವು ರಾಷ್ಟ್ರಗಳಿಗೆ ಭೇಟಿ ನೀಡಿ ದೇಶದ ಸಂಬಂಧವನ್ನು ಹೆಚ್ಚಿಸುತ್ತಲೆ ಇದ್ದಾರೆ. ಮೊದಲ ಬಾರಿ ಪ್ರಧಾನಿ ಆದಾಗ ಅಮೆರಿಕಾ ಅದ್ಯಕ್ಷ ಟ್ರಂಪ್ ಜೊತೆ ನಡೆದಿದ್ದ ಹೌಡಿ ಮೋದಿ ಕಾರ್ಯಕ್ರಮ ಅದ್ಭುತ ಯಶಸ್ಸು ಕಂಡಿತ್ತು. ಅದಲ್ಲದೆ ಬಲಿಷ್ಟ ರಾಷ್ಟಗಳ ಜೊತೆಗೆ ಮಾತು ಕತೆ ನಡೆಸಿ ಭಾರತದ ಹೆಸರು ಎಲ್ಲೆಲ್ಲೂ ಜನಪ್ರಿಯವಾಗುವಂತೆ ಮಾಡಿದ್ದಾರೆ ಮೋದಿ. ಇನ್ನು ಕೋವಿಡ್ ಸಂಕಷ್ಟದಲ್ಲಿ ಬಡರಾಷ್ಟ್ರಗಳಿಗೆ ಸಹಾಯ ಹಸ್ತ ಚಾಚಿ, ಹಲವು ರಾಷ್ಟ್ರಗಳಿಗೆ ಲಸಿಕೆ ವಿತರಿಸಿ ಭಾರತದ ವರ್ಚಸ್ಸು ಹೆಚ್ಚಾಗಿದೆ. ಸಮೀಕ್ಷೆಯ ಪ್ರಕಾರ ಜಾಗತಿಕ ಮಟ್ಟದಲ್ಲಿ ಭಾರತದ ವರ್ಚಸ್ಸು ಏರಿಕೆಯಾಗಿದೆ ಎನ್ನುವ ಮಾಹಿತಿಯನ್ನ ಶೇಕಡ 59ರಷ್ಟು ಜನರು ಹೇಳಿದ್ದರೆ,  ಇಳಿಕೆಯಾಗಿದೆ ಎಂದು ಶೇಕಡ 35ರಷ್ಟು ಜನರು ಹೇಳಿದ್ದಾರೆ.

ಸಂಸದೀಯ ವ್ಯವಹಾರದಲ್ಲಿ ಕೇಂದ್ರ ಸರ್ಕಾರ ಯಶಸ್ವಿ
ಮೋದಿ ಅವರ ಎನ್‌ಡಿಎ-2 ಸರ್ಕಾರವು ಸಂಸದೀಯ ಕಾರ್ಯವನ್ನು ಪರಿಣಾಮಕಾರಿಯಾಗಿ ನಿರ್ವಹಿಸಿದೆ ಎಂದು ಶೇಕಡ 61ರಷ್ಟು ಜನರು ಅಭಿಪ್ರಾಯಪಟ್ಟಿದ್ದಾರೆ. ಮೋದಿ ಸರ್ಕಾರ ಆಡಳಿತಕ್ಕೆ ಬಂದ ವರ್ಷದಿಂದ ಸಂವಿಧಾನದ ಪದ್ಧತಿಯನ್ನು ಉಲ್ಲಂಘನೆ ಮಾಡದೆ ಸರಿಯಾದ ಸಮಯಕ್ಕೆ ಸಂಸದೀಯ ವ್ಯವಹಾರವನ್ನು ನಿರ್ವಹಿಸಿದೆ ಎನ್ನುವುದಕ್ಕೆ ಈ ಸಮೀಕ್ಷೆ ಸಾಕ್ಷಿಯಾಗಿದೆ. ಆದರೆ ಇದನ್ನು ವಿರೋಧಿಸಿ ಸರಿಯಾಗಿ ನಿರ್ವಹಿಸಿಲ್ಲ ಎಂದು ಶೇಕಡ 33ರಷ್ಟು ಜನರು ಹೇಳಿದ್ದಾರೆ.

ಜನ ಜೀವನ ವ್ಯವಸ್ಥೆಯಲ್ಲಿ ಸೋತ ಎನ್.ಡಿ.ಎ-2
ಮೋದಿಯವರ ಭಾಷಣದಲ್ಲಿ ಹೆಚ್ಚಾಗಿ ಕೇಳಿ ಬರುತ್ತಿದ್ದುದೇ ಬಡವರು ಹಾಗೂ ಮಧ್ಯಮ ವರ್ಗದವರ ಏಳಿಗೆ. ಆದರೆ ಈ ಸಮೀಕ್ಷೆಯ ಪ್ರಕಾರ ಎನ್.ಡಿ.ಎ- 2 ಜನ ಜೀವನದ ಖರ್ಚಿನ ವ್ಯವಸ್ಥೆಯಲ್ಲಿ ಸಾಕಷ್ಟು ಹಿಂದಿದೆ. ಅಗತ್ಯ ವಸ್ತುಗಳು, ಪೆಟ್ರೋಲ್, ಡೀಸಲ್ ದರ ಗಗನಕ್ಕೆರಿದೆ. ದಿನ ನಿತ್ಯದ ಅಗತ್ಯ ವಸ್ತುಗಳ ನಿರ್ವಹಣೆಯಲ್ಲಿ ಹೆಚ್ಚು ಭರವಸೆ ಕೊಟ್ಟ ಎನ್.ಡಿ.ಎ ಸರ್ಕಾರ ಅದನ್ನು ಪ್ರಣಾಳಿಕೆಯಿಂದ ಕಾರ್ಯ ರೂಪಕ್ಕೆ ತರುವಲ್ಲಿ ಸೋತಿದೆ. ಇದಕ್ಕೆ ಹೋಲುವಂತೆ ಎನ್.ಡಿ.ಎ ಸರ್ಕಾರದ ಸಮೀಕ್ಷೆ ಎರಡು ವರ್ಷಗಳಲ್ಲಿ ಅಗತ್ಯವಸ್ತುಗಳ ಬೆಲೆ ಮತ್ತು ಜೀವನ ನಿರ್ವಹಣೆ ವೆಚ್ಚವು ಇಳಿಕೆಯಾಗಿಲ್ಲ ಎಂದು ಶೇಕಡ 77ರಷ್ಟು ಜನರು ಹೇಳಿದ್ದಾರೆ. ಇಳಿಕೆಯಾಗಿದೆ ಎಂದು ಶೇಕಡ 19ರಷ್ಟು ಜನರು ಮಾತ್ರ ಹೇಳಿದ್ದಾರೆ.

ಒಟ್ಟಾರೆ ಮೋದಿ ಜನಪ್ರಿಯತೆ ಈಗ ಕೇವಲ 51%
ಇದೆಲ್ಲವನ್ನು ಹೊರತುಪಡಿಸಿ ಎನ್.ಡಿ.ಎ-2 ಸರ್ಕಾರ ನಮ್ಮ ನಿರೀಕ್ಷೆಯನ್ನು ಈಡೇರಿಸಿದೆ ಎಂದು ಈ ಆನ್ಲೈನ್ ಸಮೀಕ್ಷೆಯಲ್ಲಿ ಭಾಗವಹಿಸಿದ ಶೇಕಡ 50ಕ್ಕೂ ಹೆಚ್ಚು ಜನರು ಹೇಳಿದ್ದಾರೆ. 2019ರಲ್ಲಿ ಮೋದಿ ಜನಪ್ರಿಯತೆ ಶೇಕಡ 75 ರಷ್ಟು ಇದ್ದಿದ್ದು 2021ರ ಸಮೀಕ್ಷೆಯಲ್ಲಿ ಶೇಕಡ 51ಕ್ಕೆ ಇಳಿಕೆಯಾಗಿದೆ. ಇನ್ನು ಶೇಕಡ 49ರಷ್ಟು ಜನರು ತಮ್ಮ ನಿರೀಕ್ಷೆಯನ್ನು ಮೋದಿ ಈಡೇರಿಸಿಲ್ಲ ಎಂದಿದ್ದಾರೆ. ಶೇಕಡ 21ರಷ್ಟು ಜನರು ಮಾತ್ರ ತಮ್ಮ ನಿರೀಕ್ಷೆಗೂ ಮೀರಿ ಮೋದಿ ಸರ್ಕಾರ ಕಾರ್ಯ ನಿರ್ವಹಿಸಿದೆ ಎಂದಿರುವುದು ಸರ್ಕಾರದ ಪಾಲಿಗೆ ಮಿಶ್ರ ವರದಿ ದೊರೆತಂತಾಗಿದೆ.

ಸರ್ಕಾರದ ಅಂಕ ಪಟ್ಟಿ
49 % – ನಿರೀಕ್ಷೆ ಈಡೇರಿಸಿಲ್ಲ
30 % – ನಿರೀಕ್ಷೆ ಈಡೇರಿಸಿದೆ
29 %- ನಿರೀಕ್ಷೆಗೂ ಮೀರಿದೆ

ಸರ್ಕಾರ ಹೇಗೆಲ್ಲ ಕಾರ್ಯ ನಿರ್ವಹಿಸುತ್ತಿದೆ ಎನ್ನುವುದರ ಬಗ್ಗೆ ಲೋಕಲ್ ಸರ್ಕಲ್ಸ್ ವರದಿಯಲ್ಲಿ ಪ್ರತಿ ವರ್ಷಕ್ಕಿಂತ ಈ ಬಾರಿ ಹೆಚ್ಚಾಗಿ ಜನ ಭಾಗವಹಿಸಿದ್ದಾರೆ. ಅಲ್ಲದೆ ಎನ್.ಡಿ.ಎ- 2ರ ಜನಪ್ರಿಯತೆ ಕುಸಿದಿದೆ ಎನ್ನುವುದು ಈ ವರದಿಯ ಮೂಲಕ ಸಂಕ್ಷಿಪ್ತವಾಗಿ ತಿಳಿಯುತ್ತದೆ.

The post ಮೋದಿ ಸರ್ಕಾರದ ಬಗ್ಗೆ ಲೋಕಲ್ ಸರ್ಕಲ್ ಸಮೀಕ್ಷೆ; ಸರ್ಕಾರದ ಮೇಲೆ ವಿಶ್ವಾಸ ಕಳೆದುಕೊಂಡ್ರಾ ಜನ? appeared first on News First Kannada.

Source: newsfirstlive.com

Source link