ಮಂಗಳೂರು: ಉಂಡು ಹೋದ ಕೊಂಡು ಹೋದ ಅನ್ನೋ ಗಾದೆ ಮಾತು ಈತನನ್ನ ನೋಡಿಯೇ ಮಾಡಿರಬೇಕು. ತಾನು ಕೆಲಸ ಮಾಡೋ ಬ್ಯಾಂಕ್ಗೆ ಕನ್ನ ಬಗೆದಿರೋ ಮಹಾಶಯ ಈತ. ತನ್ನ ಕಂತ್ರಿ ಕೆಲಸಕ್ಕೆ ಹಳ್ಳಿಯ ಮುಗ್ಧ ಜನರನ್ನ ಇದೀಗ, ಪೊಲೀಸ್ ಠಾಣೆ ಮೆಟ್ಟಿಲೇರುವಂತೆ ಮಾಡಿದ್ದಾನೆ ಇಲ್ಲೊಬ್ಬ ಚಾಲಾಕಿ.
ಕರ್ನಾಟಕ ಗ್ರಾಮೀಣ ವಿಕಾಸ್ ಬ್ಯಾಂಕನ ಚಿನ್ನದ ಪರಿವೀಕ್ಷಕ ಮನ್ಮಥ ಆಚಾರಿ. ಒಂದಲ್ಲ, ಎರಡಲ್ಲ. ಬರೋಬ್ಬರಿ 52 ಮಂದಿಯ ಹಣವನ್ನ ಗುಳುಂ ಸ್ವಾಹಃ ಮಾಡಿ, ಬ್ಯಾಂಕ್ಗೆ ವಂಚನೆ ಮಾಡಿದ್ದಾನೆ.
ಬರೋಬ್ಬರಿ 52 ಮಂದಿ ಹೆಸರಲ್ಲಿ ನಕಲಿ ಚಿನ್ನವಿಟ್ಟು ಮೋಸ
ಬರೋಬ್ಬರಿ 52 ಮಂದಿ ಹೆಸರಲ್ಲಿ ನಕಲಿ ಚಿನ್ನವಿಟ್ಟು ಬೆಳ್ತಂಗಡಿಯ ಅರಸಿನಮಕ್ಕಿ ಬ್ಯಾಂಕಿಗೆ 38 ಲಕ್ಷ ರೂಪಾಯಿ ದೋಖಾ ಮಾಡಿದ್ದಾನೆ ಈ ಮನ್ಮಥರಾಯ. ಬ್ಯಾಂಕ್ನಲ್ಲಿ ಕಳೆದ 10 ವರ್ಷಗಳಿಂದ ಈ ವಂಚನೆ ನಡೆಯುತ್ತಲೇ ಇತ್ತು. ನಕಲಿ ಚಿನ್ನ ಅಡವಿಟ್ಟು ಚಿನ್ನದ ಪರಿವೀಕ್ಷಕ ಸಾಲ ಪಡೆಯುತ್ತಿದ್ದ. ಜನರಿಗೆ ನಕಲಿ ಚಿನ್ನವನ್ನ ಈ ಮನ್ಮಥನೇ ಕೊಟ್ಟು ಬ್ಯಾಂಕ್ನಲ್ಲಿ ಅಡವಿರಿಸುತ್ತಿದ್ದ. ಬಳಿಕ ನಕಲಿ ಚಿನ್ನ ಅಡವಿಟ್ಟು ₹40 ಸಾವಿರದಿಂದ ₹2 ಲಕ್ಷ ಸಾಲ ತೆಗೆಸುತ್ತಿದ್ದ. ಹೀಗೆ, ಅರಸಿನಮಕ್ಕಿ, ಶಿಬಾಜೆ, ಹತ್ಯಡ್ಕ, ಶಶಿಲ ಗ್ರಾಮದ 52 ಮಂದಿಗೆ ಮೋಸ ಮಾಡಿದ್ದಾನೆ. ಈ ವಂಚನೆಯಲ್ಲಿ ಬ್ಯಾಂಕ್ ಮ್ಯಾನೇಜರ್ಗಳು ಶಾಮೀಲು ಆಗಿರುವ ಶಂಕೆ ವ್ಯಕ್ತವಾಗಿದೆ.
ಸಹಾಯ ಮಾಡಲು ಹೋಗಿ ಇವರೇ ಪೊಲೀಸ್ ಠಾಣೆ ಮೆಟ್ಟಿಲೇರುವಂತಾಗಿದೆ. ಈ ಸಂಬಂಧ ವಂಚನೆಗೆ ಒಳಗಾದ 52 ಜನರ ಜೊತೆಗೆ ಚಿನ್ನ ಪರಿವೀಕ್ಷಕ ಮನ್ಮಥನ ಮೇಲೂ ಕೇಸ್ ದಾಖಲಾಗಿದೆ.
ಒಟ್ಟಿನಲ್ಲಿ ಯಾರೋ ಮಾಡಿದ ತಪ್ಪಿಗೆ, ಅಮಾಯಕರು ಪೊಲೀಸ್ ಠಾಣೆ, ಕೇಸ್ ಅಂತ ಅಲೆಯುವಂತಾಗಿದೆ. ಉಂಡ ಮನೆಗೆ ಕನ್ನ ಬಗೆದ ಚಿನ್ನದ ಪರಿವೀಕ್ಷಕ ಮನ್ಮಥ ಆಚಾರಿಯನ್ನ ತಕ್ಷಣವೇ ಬಂಧಿಸಿ, ತಕ್ಕ ಶಿಕ್ಷೆ ನೀಡಬೇಕಿದೆ.