ಚೆನ್ನೈ : ಪಂಜಾಬ್‌ನಿಂದ ಕೈಬಿಡಲ್ಪಟ್ಟ ಗ್ಲೆನ್‌ ಮ್ಯಾಕ್ಸ್‌ವೆಲ್‌ ಈಗ ಆರ್‌ಸಿಬಿ ತಂಡದ ಬೆಲೆಬಾಳುವ ಸದಸ್ಯ. ಕಳೆದ ವರ್ಷ ಪಂಜಾಬ್‌ ಪರ ಒಂದೂ ಸಿಕ್ಸರ್‌ ಸಿಡಿಸದ ಮ್ಯಾಕ್ಸ್‌ವೆಲ್‌ ಆರ್‌ಸಿಬಿಯ ಮೊದಲ ಪಂದ್ಯದಲ್ಲೇ 2 ಸಿಕ್ಸರ್‌ ಬಾರಿಸಿ ಮರಳಿ ಫಾರ್ಮ್ಗೆ ಮರಳುವ ಸೂಚನೆ ನೀಡಿದ್ದಾರೆ.

ಈ ಸಂದರ್ಭದಲ್ಲಿ ಆರ್‌ಸಿಬಿ ಸೊಗಸಾದ ಟ್ವೀಟ್‌ ಮೂಲಕ ಪಂಜಾಬ್‌ ತಂಡದ ಕಾಲೆಳೆದಿದೆ. “ಕೆಂಪು ಮತ್ತು ಬಂಗಾರ ಬಣ್ಣದ ಜೆರ್ಸಿಯಲ್ಲಿ ಮೊದಲ ಮ್ಯಾಕ್ಸಿ-ಮಮ್‌! ಚೆಂಡು ಚೆನ್ನೈನಿಂದ ಹೊರಕ್ಕೆ ಸಿಡಿಯುವ ರೀತಿಯಲ್ಲಿತ್ತು. ಥ್ಯಾಂಕ್ಯೂ ಪಂಜಾಬ್‌ ಕಿಂಗ್ಸ್‌. ಸಾಮಾಜಿಕ ಅಂತರ ಇಲ್ಲದೇ ಹೋಗಿದ್ದರೆ ನಾವು ನಿಮ್ಮನ್ನು ತಬ್ಬಿಕೊಳ್ಳುತ್ತಿದ್ದೆವು’ ಎಂದಿದೆ!

ಇದಕ್ಕೆ ಪಂಜಾಬ್‌ ಒಂದು ಗಂಟೆಯ ಬಳಿಕ ಅಷ್ಟೇ ಸೊಗಸಾದ ಪ್ರತ್ಯುತ್ತರ ನೀಡಿತು. “ಆ್ಯಂಡ್‌ ಥ್ಯಾಂಕ್ಯೂ ಫಾರ್‌ ಗೇಲ್‌, ಕೆ.ಎಲ್‌., ಮ್ಯಾಂಡಿ, ಸರ್ಫರಾಜ್‌, ಮಾಯಾಂಕ್‌’ ಎಂದು ಟ್ವೀಟ್‌ ಮಾಡಿತು.

ಈಗಿನ ಪಂಜಾಬ್‌ ತಂಡದ ಸ್ಟಾರ್‌ ಆಟಗಾರರಾದ ನಾಯಕ ಕೆ.ಎಲ್‌. ರಾಹುಲ್‌, ಕ್ರಿಸ್‌ ಗೇಲ್‌, ಮನ್‌ದೀಪ್‌ ಸಿಂಗ್‌, ಸಫ‌ìರಾಜ್‌ ಖಾನ್‌ ಮತ್ತು ಮಾಯಾಂಕ್‌ ಅಗರ್ವಾಲ್‌ ಅವರೆಲ್ಲ ಒಂದು ಕಾಲದಲ್ಲಿ ಆರ್‌ಸಿಬಿ ತಂಡದ ಸದಸ್ಯರಾಗಿದ್ದನ್ನು ನೆನಪಿಸಿತು!
ಈ ಟ್ವೀಟ್‌ ವಾರ್‌ ಇಲ್ಲಿಗೇ ನಿಲ್ಲಲಿಲ್ಲ. “ಈ ಎಲ್ಲ ಆಟಗಾರರ ಜತೆಗೆ ನಮ್ಮ ಜೆರ್ಸಿ, ಹೆಲ್ಮೆಟ್‌, ಪ್ಯಾಡ್‌ ಮತ್ತು ಲಾಂಛನವನ್ನೂ ನೀವು ಉಲ್ಲೇಖೀಸಲು ಮರೆತಿದ್ದೀರಿ…’ ಎಂದು ಆರ್‌ಸಿಬಿ ಬೌನ್ಸರ್‌ ಎಸೆಯಿತು. “ಇಂಥ ಅಪೂರ್ವ ಬಣ್ಣಗಳನ್ನು ಕಂಡುಹಿಡಿದ ನಿಮಗೆ ಧನ್ಯವಾದಗಳು!’ ಎಂದು ಪಂಜಾಬ್‌ ಯಾರ್ಕರ್‌ ಎಸೆಯಿತು!

ಕ್ರೀಡೆ – Udayavani – ಉದಯವಾಣಿ
Read More