ಯಕ್ಷಗಾನ ಅಕಾಡೆಮಿ ಅಧ್ಯಕ್ಷರಾಗಿ ಜಿಎಲ್ ಹೆಗಡೆ ಮಣಕಿ ನೇಮಕ | Yakshagana Artist Writer GL Hegde Manki Appointed as President of Yakshagana Academy


ಯಕ್ಷಗಾನ ಅಕಾಡೆಮಿ ಅಧ್ಯಕ್ಷರಾಗಿ ಜಿಎಲ್ ಹೆಗಡೆ ಮಣಕಿ ನೇಮಕ

ಯಕ್ಷಗಾನ ಕಲಾವಿದ, ಸಾಹಿತಿ ಜಿ.ಎಲ್.ಹೆಗಡೆ ಮಣಕಿ

ಬೆಂಗಳೂರು: ಕರ್ನಾಟಕ ಯಕ್ಷಗಾನ ಅಕಾಡೆಮಿ ಅಧ್ಯಕ್ಷರಾಗಿ ಡಾ.ಜಿ.ಎಲ್.ಹೆಗಡೆ ಮಣಕಿ ಅವರನ್ನು ನೇಮಿಸಿ ಕರ್ನಾಟಕ ಸರ್ಕಾರವು ಆದೇಶ ಹೊರಡಿಸಿದೆ. ಉತ್ತರ ಕನ್ನಡ ಜಿಲ್ಲೆ ಕುಮಟಾದ ಹೆಗಡೆ ಮಣಕಿ ಅವರು, ಯಕ್ಷಗಾನ ವರ್ಣ ವೈಭವ, ಶೇಣಿ ರಾಮಾಯಣ, ನಮ್ಮ ಚಿಟ್ಟಾಣಿ, ಹಾಲಕ್ಕಿ ಅಧ್ಯಯನ ಸೇರಿದಂತೆ ಹಲವು ಕೃತಿಗಳನ್ನು ರಚಿಸಿದ್ದಾರೆ. ಸ್ವತಃ ಕಲಾವಿದರೂ ಆಗಿರುವ ಅವರು, ಉತ್ತಮ ವಾಗ್ಮಿ, ತಾಳಮದ್ದಳೆ ಅರ್ಥಧಾರಿಯೂ ಹೌದು.

ಯಕ್ಷಗಾನದ ಮೌಖಿಕ ಸಾಹಿತ್ಯಕ್ಕೆ ಲಿಖಿತ ರೂಪ ಕೊಡಲು ಹೆಗಡೆ ಮಣಕಿ ಅವರು ಶ್ರಮಿಸಿದ್ದರು. ಈ ಹಿನ್ನೆಲೆಯಲ್ಲಿ ಎರಡು ಕೃತಿಗಳನ್ನೂ ರಚಿಸಿದ್ದರು. ಈ ಹಿಂದೆ ಯಕ್ಷಗಾನ ಅಕಾಡೆಮಿ ಅಧ್ಯಕ್ಷರಾಗಿದ್ದ ಎಂ.ಎ.ಹೆಗಡೆ ದಂಟ್ಕಲ್ ಅವರು, ಏಪ್ರಿಲ್ 18, 2021ರಂದು ನಿಧನರಾದ ಹಿನ್ನೆಲೆಯಲ್ಲಿ ಯಕ್ಷಗಾನ ಅಕಾಡೆಮಿ ಅಧ್ಯಕ್ಷರ ಹುದ್ದೆ ತೆರವಾಗಿತ್ತು.

Yakshagana-Academy

ಯಕ್ಷಗಾನ ಅಕಾಡೆಮಿಗೆ ಜಿ.ಎಲ್.ಮಣಕಿ ನೇಮಕ

ಯಕ್ಷಗಾನ ಬಯಲಾಟ ಅಕಾಡೆಮಿ ಅಧ್ಯಕ್ಷ ಪ್ರೊ.ಎಂ.ಎ.ಹೆಗಡೆ ನಿಧನ
ಯಕ್ಷಗಾನ ಬಯಲಾಟ ಅಕಾಡೆಮಿ ಅಧ್ಯಕ್ಷ ಪ್ರೊ. ಮಹಾಬಲೇಶ್ವರ ಅಣ್ಣಪ್ಪ ಹೆಗಡೆ (73) ಅವರು ಏಪ್ರಿಲ್ 18, 2021ರಂದು ಬೆಂಗಳೂರಿನಲ್ಲಿ ನಿಧನರಾಗಿದ್ದರು. ತೀವ್ರ ಉಸಿರಾಟದ ತೊಂದರೆಯಿಂದಾಗಿ ಆಸ್ಪತ್ರೆಗೆ ಸೇರಿಸುವಾಗ ಮಾರ್ಗಮಧ್ಯೆಯೇ ಕೊನೆ ಉಸಿರೆಳೆದಿದ್ದರು.

ಎಂ.ಎ.ಹೆಗಡೆ ಅವರು ಸಿದ್ದಾಪುರ ತಾಲೂಕಿನ ಜೋಗಿನಮನೆಯವರು. ತಂದೆ ಅಣ್ಣಪ್ಪ ಹೆಗಡೆ, ತಾಯಿ ಕಾಮಾಕ್ಷಿ. ಜನನ 1948 ಜುಲೈ 3. ಹೆಗ್ಗರಣಿಯ ಸ್ವಾಮಿ ವಿವೇಕಾನಂದ ಹೈಸ್ಕೂಲಿನಲ್ಲಿ ಮಾಧ್ಯಮಿಕ ಶಿಕ್ಷಣ. ಶಿರಸಿಯ ಎಂ.ಎಂ. ಕಲಾ ಮತ್ತು ವಿಜ್ಞಾನ ಮಹಾವಿದ್ಯಾಲಯದಲ್ಲಿ ಪದವಿ ಶಿಕ್ಷಣ. ಕರ್ನಾಟಕ ವಿಶ್ವವಿದ್ಯಾಲಯದಿಂದ ಸಂಸ್ಕೃತದಲ್ಲಿ ಸ್ನಾತಕೋತ್ತರ ಪದವಿ ನಂತರ ಹುಬ್ಬಳ್ಳಿಯ ಕಾಡಸಿದ್ಧೇಶ್ವರ ಹಾಗೂ ಪಿ.ಸಿ.ಜಾಬಿನ್ ವಿಜ್ಞಾನ ಮಹಾವಿದ್ಯಾಲಯಗಳಲ್ಲಿ ಉಪನ್ಯಾಸಕ. 1973ರಿಂದ ಸಿದ್ದಾಪುರದ ಮಹಾತ್ಮಾ ಗಾಂಧಿ ಶತಾಬ್ದಿ ಮಹಾವಿದ್ಯಾಲಯದಲ್ಲಿ ಪ್ರಾಧ್ಯಾಪಕರಾಗಿ ಪ್ರಾಚಾರ್ಯರಾಗಿ 2006ರಲ್ಲಿ ನಿವೃತರಾಗಿದ್ದರು.

ಯಕ್ಷಗಾನವು ಅವರಿಗೆ ಪ್ರಿಯವಾದ ಹವ್ಯಾಸ. ಸುಮಾರು 11ನೆಯ ವರ್ಷದಲ್ಲಿ ಯಕ್ಷಗಾನ ತಾಳಮದ್ದಳೆಯ ಅರ್ಥಧಾರಿಯಾಗಿ ರಂಗವನ್ನು ಪ್ರವೇಶಿದರು. ಅನಂತರ ಕೆರೆಮನೆ ಶಂಭು ಹೆಗಡೆಯವರಲ್ಲಿ ನೃತ್ಯಾಭ್ಯಾಸ ಮಾಡಿ ಬಣ್ಣ ಹಚ್ಚಿದರು. ಕಾನಸೂರು ಕೆರೆಮನೆ, ಗಡಿಮನೆ ಮುಂತಾದ ಬಯಲಾಟದ ಮೇಳಗಳಲ್ಲದೆ ಇಡಗುಂಜಿ ಮೇಳದಲ್ಲಿ ಅತಿಥಿ ಕಲಾವಿದರಾಗಿ ಪ್ರಸಿದ್ಧಿಯನ್ನು ಪಡೆದರು. ತಾಳಮದ್ದಳೆಯ ಪ್ರಸಿದ್ಧ ಅರ್ಥಧಾರಿಯಾಗಿ ಶೇಣಿ, ಪೆರ್ಲ, ಆನಂದಮಾಸ್ತರ, ಜೋಶಿ ಮುಂತಾದವರೊಂದಿಗೂ ಹೊಸತಲೆಮಾರಿನ ಉಮಾಕಾಂತ ಭಟ್ಟ, ವಾಸುದೇವರಂಗ ಭಟ್ಟ, ಜಬ್ಬಾರ ಸಮೊ, ಕಲಚಾರ್, ಸುಣ್ಣಂಬಳ, ಸಂಕದಗುಂಡಿ ಮುಂತಾದ ಹೊಸ ತಲೆಮಾರಿನವರೊಂದಿಗೆ ಅರ್ಥ ಹೇಳಿದ ಅನುಭವ ಇವರದಾಗಿತ್ತು.

TV9 Kannada


Leave a Reply

Your email address will not be published. Required fields are marked *