ಧಾರವಾಡ: ಮುಖ್ಯಮಂತ್ರಿಯಾಗಿ ಬಿ.ಎಸ್ ಯಡಿಯೂರಪ್ಪ ಅವರು ಪ್ರಮಾಣವಚನ ಮಾಡಿದಾಗಿನಿಂದಲೂ ಸಂಕಷ್ಟಗಳ ಸರಮಾಲೆಯೇ ಎದುರಾಗಿದೆ ಎಂದು ಡಿಸಿಎಂ ಗೋವಿಂದ ಕಾರಜೋಳ ಹೇಳಿದ್ದಾರೆ.

ನಗರದಲ್ಲಿಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜನರ ನೆರವಿಗೆ ಬರುವುದಕ್ಕಾಗಿ 1250 ಕೋಟಿ ಪ್ಯಾಕೇಜ್ ನೀಡಿದ್ದಾರೆ. ದುಡಿಯುವ ವರ್ಗಕ್ಕೆ ಇದು ವಿಶೇಷವಾದ ಪ್ಯಾಕೇಜ್. ಕಳೆದ ವರ್ಷ 2,200 ಕೋಟಿ ಕೊಟ್ಟಿದ್ವಿ. ಈ ಸಲ ಅರ್ಥಿಕ ಸಂಕಷ್ಟದ ನಡುವೆಯೂ ಕೊಟ್ಟಿದ್ದೇವೆ. ನಾವು ಹೆಚ್ಚು ಕೊಟ್ಟಿದ್ದೇವೆ ಅಂತಾ ಈಗ ಹೇಳಿಕೊಳ್ಳುವ ಪರಿಸ್ಥಿತಿ ಇಲ್ಲ. ಆದರೆ ಈ ಸಂದರ್ಭದಲ್ಲಿ ನೆರವಿಗೆ ಬಂದಿದ್ದು ಬಹಳ ವಿಶೇಷ ಎಂದರು.

ಲಾಕ್‍ಡೌನ್ ಮುಂದುವರಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿ, ನಿತ್ಯದ ಸಾವು ನೋವಿನ ಸಂಖ್ಯೆ ನೋಡಿದಾಗ ಹಳ್ಳಿಗಳಿಗೆ ಕೊರೊನಾ ಹಬ್ಬಿದೆ. ಬಿಗಿಯಾದ ಲಾಕ್‍ಡೌನ್ ಅವಶ್ಯಕತೆ ಇದೆ ಎಂದು ತಿಳಿಸಿದರು.

ಕಾಂಗ್ರೆಸ್ಸಿನಿಂದ ಕಿಟ್ ಹಂಚಿಕೆ ವಿಚಾರದ ಕುರಿತು ಮಾತನಾಡಿ, ಒಳ್ಳೆಯದು ಯಾರೇ ಮಾಡಿದರೂ ನಾವು ಸ್ವಾಗತಿಸಿಕೊಳ್ಳುತ್ತೇವೆ. ಸರ್ಕಾರ ಎಲ್ಲಿಯೂ ವಿಫಲವಾಗಿಲ್ಲ. ಯಡಿಯೂರಪ್ಪ ಪ್ರಮಾಣ ವಚನ ಸ್ವೀಕಾರ ಮಾಡಿದಾಗಿನಿಂದಲೇ ಸಂಕಷ್ಟಗಳ ಸರಮಾಲೆ ಎದುರಾಗಿದೆ. ಪ್ರವಾಹ ಬಂತು, ಕೊರೊನಾ ಬಂತು. ಮತ್ತೇ ಪ್ರವಾಹ ಬಂತು ಕರೊನಾನೂ ಮತ್ತೇ ಬಂತು. ಎರಡು ವರ್ಷದ ಅವಧಿಯಲ್ಲಿ ಸರ್ಕಾರಕ್ಕೆ 60 ಸಾವಿರ ಕೋಟಿಯಷ್ಟು ಹಾನಿಯಾಗಿದೆ ಎಂದು ವಿವರಿಸಿದರು.

ನಿಗದಿತ ಆದಾಯವೂ ಬರುತ್ತಿಲ್ಲ. ಹೀಗಾಗಿ ನಾವು ಆರ್ಥಿಕ ಸಂಕಷ್ಟದಲ್ಲಿ ಇದ್ದೇವೆ. ಅದೇನು ಮುಚ್ಚುಮರೆ ಅನ್ನೋ ಪ್ರಶ್ನೆ ಇಲ್ಲ. ಆರ್ಥಿಕ ಸಂಕಷ್ಟದ ಮಧ್ಯೆಯೂ ನಿಭಾಯಿಸಿಕೊಂಡು ಹೊರಟಿದ್ದೇವೆ ಎಂದರು.

The post ಯಡಿಯೂರಪ್ಪ ಪ್ರಮಾಣ ವಚನ ಸ್ವೀಕರಿಸಿದಾಗಿನಿಂದ್ಲೇ ಸಂಕಷ್ಟಗಳ ಸರಮಾಲೆ ಎದುರಾಗಿದೆ: ಕಾರಜೋಳ appeared first on Public TV.

Source: publictv.in

Source link