ಯತಿರಾಜ್ ಹೆಚ್ಚಿನ ಚಿಕಿತ್ಸೆಗೆ ಬೆಂಗಳೂರಿನ ಆಸ್ಪತ್ರೆಗೆ ಶಿಫ್ಟ್: ಎಸ್‌ಪಿ ಮಿಥುನ್ ಕುಮಾರ್

ಚಿಕ್ಕಬಳ್ಳಾಪುರ: ಕಾರು ಅಪಘಾತದಲ್ಲಿ ಗಾಯಗೊಂಡಿದ್ದ ನಟ ಜಗ್ಗೇಶ್ ಪುತ್ರ ಯತಿರಾಜ್ ಅವರನ್ನು ಹೆಚ್ಚಿನ ಚಿಕಿತ್ಸೆಗೆ ಬೆಂಗಳೂರಿನ ಆಸ್ಪತ್ರೆಗೆ ರವಾನಿಸಲಾಗಿದೆ ಎಂದು ಚಿಕ್ಕಬಳ್ಳಾಪುರ ಎಸ್‌ಪಿ ಮಿಥುನ್ ಕುಮಾರ್ ತಿಳಿಸಿದ್ದಾರೆ.

ಅಪಘಾತ ಪ್ರಕರಣ ಸಂಬಂಧ ಮಾಧ್ಯಮಗಳಿಗೆ ಮಾಹಿತಿ ನೀಡಿದ ಅವರು, ಬೆಳಗ್ಗೆ 11.45-12 ಗಂಟೆ ಸುಮಾರಿಗೆ ಅಪಘಾತ ಸಂಭವಿಸಿದೆ. ಚಿಕ್ಕಬಳ್ಳಾಪುರ ಬೆಂಗಳೂರು ಹೈವೇಯಲ್ಲಿ ಅಗಲಗುರ್ಕಿ ಸೇತುವೆ ಬಳಿ ಅಡ್ಡ ಬಂದ ಬೈಕ್ ತಪ್ಪಿಸಲು ಹೋಗಿ ಕಾರು ಅಪಘಾತಕ್ಕೀಡಾಗಿದೆ. ಡಿವೈಡರ್ ಗೆ ಡಿಕ್ಕಿ ಹೊಡೆದು ಮೂರು ಪಲ್ಟಿಯಾಗಿ, ನಂತರ ರಸ್ತೆ ಬದಿ ಫುಟ್ ಪಾತ್ ಮೇಲೆ ಹರಿದು, ಮರಕ್ಕೆ ಡಿಕ್ಕಿ ಹೊಡೆದು ನಿಂತಿದೆ. ಅಪಘಾತ ನಂತರ ಸ್ಥಳೀಯರು ನೀರು ಕುಡಿಸಿ ಆರೈಕೆ ಮಾಡಿದ್ದಾರೆ. ಕಾರಿನಲ್ಲಿದ್ದ ಯತಿರಾಜ್ ನಮಗೆ ಸಿಕ್ಕಿದ್ದು, ಚಿಕ್ಕಬಳ್ಳಾಪುರ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗಿದೆ ಎಂದರು. ಇದನ್ನೂ ಓದಿ: ನಾಲ್ಕು ಬಾರಿ ಕಾರ್ ಪಲ್ಟಿಯಾಗಿ, ಮರಕ್ಕೆ ಡಿಕ್ಕಿ ಹೊಡಿತು: ಪ್ರತ್ಯಕ್ಷದರ್ಶಿ

ಇದಾದ ನಂತರ ವೈದ್ಯರ ಸೂಚನೆ ಮೇರೆಗೆ ಹೆಚ್ಚಿನ ಚಿಕಿತ್ಸೆಗೆ ಬೆಂಗಳೂರಿಗೆ ಕಳುಹಿಸಿಕೊಡಲಾಗಿದೆ. ನಟ ಜಗ್ಗೇಶ್ ಅವರ ಎರಡನೇ ಪುತ್ರ ಯತಿರಾಜ್ ಅವರು ಕಾರಿನಲ್ಲಿದ್ದವರು,ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಪ್ರತ್ಯಕ್ಷದರ್ಶಿಗಳ ಹೇಳಿಕೆ ಆಧರಿಸಿ ಚಿಕ್ಕಬಳ್ಳಾಪುರ ನಗರ ಸಂಚಾರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದೇವೆ. ಮುಖ, ಹಣೆ ಹಾಗೂ ಕಾಲಿಗೆ ಸ್ವಲ್ಪ ಗಾಯವಾಗಿದೆ. ತಲೆಯಲ್ಲಿ ಸ್ವಲ್ಪ ಮಟ್ಟಿಗೆ ಗುಂಗು ಬರುತ್ತಿದೆ ಎಂದು ಹೇಳಿದ್ದು, ಸಿ.ಟಿ.ಸ್ಕ್ಯಾನ್ ಗೆ ಬೆಂಗಳೂರಿಗೆ ಕಳುಹಿಸಲಾಗಿದೆ. ಜೊತೆಯಲ್ಲಿ ಪೊಲೀಸರೂ ಹೋಗಿದ್ದಾರೆ. ಚಿಕಿತ್ಸೆ ಮುಗಿದ ನಂತರ ವಿಚಾರಣೆ ಮಾಡಲಿದ್ದೇವೆ ಎಂದು ತಿಳಿಸಿದರು.

ಅಪಘಾತ ಸಂಭವಿಸಿದ್ದು ಎಲ್ಲಿ?:
ಚಿಕ್ಕಬಳ್ಳಾಪುರ ನಗರದ ಹೊರವಲಯದ ಹೈದರಾಬಾದ್ ಹೆದ್ದಾರಿಯ ಅಲಗುರ್ಕಿ ಬೈ ಪಾಸ್ ಬಳಿ ಅಪಘಾತ ಸಂಭವಿಸಿದೆ. ಯತಿರಾಜ್ ಬೆಂಗಳೂರಿನತ್ತ ಪ್ರಯಾಣ ಬೆಳೆಸುತ್ತಿರುವಾಗ ಅಪಘಾತ ನಡೆದಿದೆ. ಅಪಘಾತದ ತೀವ್ರತೆಗೆ ಬಿಎಂಡಬ್ಲ್ಯೂ ಕಾರ್ ಮುಂಭಾಗ ಸಂಪೂರ್ಣ ನಜ್ಜುಗುಜ್ಜಾಗಿದೆ. ಏರ್ ಬ್ಯಾಗ್ ಓಪನ್ ಆಗಿದ್ದು ಮತ್ತು ಸ್ಥಳೀಯರ ರಕ್ಷಣೆಯಿಂದ ಯತಿರಾಜ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಕಾರ್ ಜಗ್ಗೇಶ್ ಅವರ ಹೆಸರಿನಲ್ಲಿ ನೋಂದಣಿಯಾಗಿದೆ.

The post ಯತಿರಾಜ್ ಹೆಚ್ಚಿನ ಚಿಕಿತ್ಸೆಗೆ ಬೆಂಗಳೂರಿನ ಆಸ್ಪತ್ರೆಗೆ ಶಿಫ್ಟ್: ಎಸ್‌ಪಿ ಮಿಥುನ್ ಕುಮಾರ್ appeared first on Public TV.

Source: publictv.in

Source link