ಯಮುನಾ ಎಕ್ಸ್​ಪ್ರೆಸ್​ ವೇ ಮರುನಾಮಕರಣಕ್ಕೆ ಸಿದ್ಧವಾಗಿರುವ ಯೋಗಿ ಸರ್ಕಾರ; ಮಾಜಿ ಪ್ರಧಾನಿಯ ಹೆಸರಿಡಲು ನಿರ್ಧಾರ ! | Yamuna Expressway in Uttar Pradesh is likely to be renamed after Atal Bihari Vajpayee says Source


ಯಮುನಾ ಎಕ್ಸ್​ಪ್ರೆಸ್​ ವೇ ಮರುನಾಮಕರಣಕ್ಕೆ ಸಿದ್ಧವಾಗಿರುವ ಯೋಗಿ ಸರ್ಕಾರ; ಮಾಜಿ ಪ್ರಧಾನಿಯ ಹೆಸರಿಡಲು ನಿರ್ಧಾರ !

ಯಮುನಾ ಎಕ್ಸ್​ಪ್ರೆಸ್​ ವೇ

ಉತ್ತರಪ್ರದೇಶ ಅದೆಷ್ಟೋ ಪ್ರದೇಶಗಳಿಗೆ ಮರುನಾಮಕರಣ ಮಾಡಿದೆ. ನದಿಗಳ, ಜಿಲ್ಲೆಗಳ ಹೆಸರನ್ನು ಬದಲು ಮಾಡಿದೆ. ಹಾಗೇ ಇದೀಗ ಯಮುನಾ ಎಕ್ಸ್​​ಪ್ರೆಸ್​ ವೇ(Yamuna Expressway) ಗೂ ಕೂಡ ಮರುನಾಮಕರಣವಾಗುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ. ಈ ಎಕ್ಸ್​ಪ್ರೆಸ್​ ವೇಗೆ ಮಾಜಿ ಪ್ರಧಾನಿ ಅಟಲ್​ ಬಿಹಾರಿ ವಾಜಪೇಯಿ ಹೆಸರನ್ನು ಇಡಲು ಸರ್ಕಾರ ಮುಂದಾಗಿದೆ. ಅದೂ ಕೂಡ ನವೆಂಬರ್​ 25ರಂದು ಗೌತಮ ಬುದ್ಧ ನಗರದ ಜೇವಾರ್​​ನಲ್ಲಿ ನಡೆಯಲಿರುವ ನೊಯ್ಡಾ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಅಡಿಗಲ್ಲು ಸ್ಥಾಪನೆ ಕಾರ್ಯದಲ್ಲಿ ಈ ಘೋಷಣೆಯಾಗಲಿದೆ ಎಂದೂ ತಿಳಿದುಬಂದಿದೆ ಎಂದು ಇಂಡಿಯಾ ಟುಡೆ ವರದಿ ಮಾಡಿದೆ. 

ನೊಯ್ಡಾ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಅಡಿಗಲ್ಲು ಸ್ಥಾಪನೆ ಮಾಡುವ ಸಮಾರಂಭದಲ್ಲಿ ಪ್ರಧಾನಿ ನರೇಂದ್ರ ಮೋದಿ, ಸಿಎಂ ಯೋಗಿ ಆದಿತ್ಯನಾಥ್​ ಸೇರಿ ಹಲವು ಬಿಜೆಪಿ ನಾಯಕರು ಪಾಲ್ಗೊಳ್ಳಲಿದ್ದಾರೆ. ಇದೇ ವೇಳೆ ಯಮುನಾ ಎಕ್ಸ್​ಪ್ರೆಸ್​ ವೇ ಹೆಸರನ್ನು ಅಟಲ್​ ಬಿಹಾರಿ ವಾಜಪೇಯಿ ಎಕ್ಸ್​ಪ್ರೆಸ್ ವೇ ಎಂದು ಬದಲಿಸಿ, ಅಧಿಕೃತವಾಗಿ ಘೋಷಿಸಲು ಸಿದ್ಧತೆ ನಡೆದಿದೆ ಎನ್ನಲಾಗಿದೆ.

ಈ ಬಗ್ಗೆ ಹೆಸರು ಹೇಳಲು ಇಚ್ಛಿಸದ ಬಿಜೆಪಿ ನಾಯಕರೊಬ್ಬರು ಮಾಹಿತಿ ನೀಡಿದ್ದಾರೆಂದು ಇಂಡಿಯಾ ಟುಡೆ ಹೇಳಿದೆ. ಭಾರತದಲ್ಲಿ ಅತ್ಯಂತ ಪ್ರೀತಿಸಲ್ಪಟ್ಟ ರಾಜಕಾರಣಿ ಅಟಲ್​ ಬಿಹಾರಿ ವಾಜಪೇಯಿ. ಅವರನ್ನು ಪಕ್ಷಾತೀತವಾಗಿ ಎಲ್ಲರೂ ಗೌರವಿಸುತ್ತಾರೆ. ಆದರಿಸುತ್ತಾರೆ. ಮುಂದಿನ ಪೀಳಿಗೆಗೆ ವಾಜಪೇಯಿಯ ಸಾಧನೆ, ಮೌಲ್ಯಗಳನ್ನು ಅರ್ಥ ಮಾಡಿಸುವ ಸದುದ್ದೇಶದಿಂದ ಎಕ್ಸ್​ಪ್ರೆಸ್ ವೇಗೆ ಅವರ ಹೆಸರು ಇಡಲು ನಿರ್ಧರಿಸಲಾಗಿದೆ ಎಂದು ಬಿಜೆಪಿ ನಾಯಕರು ತಿಳಿಸಿದ್ದಾರೆ ಎನ್ನಲಾಗಿದೆ.

ಉತ್ತರಪ್ರದೇಶದಲ್ಲಿ ಚುನಾವಣೆ
ಉತ್ತರಪ್ರದೇಶದಲ್ಲಿ 2022ರಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದೆ. ಬಿಜೆಪಿಗೆ ಹೇಗಾದರೂ ಸರಿ ಮತ್ತೆ ಅಧಿಕಾರ ಹಿಡಿಯುವ ತವಕ. ಅದರಲ್ಲೂ ಬಿಜೆಪಿ ಸೇರಿ ಬಹುತೇಕ ಪ್ರತಿಪಕ್ಷಗಳು ಬ್ರಾಹ್ಮಣ ಮತವನ್ನು ಬಹುಮುಖ್ಯವೆಂದು ಪರಿಗಣಿಸಿವೆ. ಇದೀಗ ಅಟಲ್​ ಬಿಹಾರಿ ವಾಜಪೇಯಿ ಹೆಸರನ್ನು ಯಮುನಾ ಎಕ್ಸ್​ಪ್ರೆಸ್​ ವೇಗೆ ಇಟ್ಟರೆ ಅವರನ್ನು ಪ್ರೀತಿಸುವ ಅಭಿಮಾನಿಗಳು, ಅದರಲ್ಲೂ ಮುಖ್ಯವಾಗಿ ಬ್ರಾಹ್ಮಣ ಸಮುದಾಯದವರು ತುಂಬ ಖುಷಿಯಾಗುತ್ತಾರೆ ಎಂಬ ಲೆಕ್ಕಾಚಾರವೂ ಇರಬಹುದು. ಇನ್ನೊಂದು ಬದಿ ಯೋಚಿಸುವುದಾರೆ, ಬಿಜೆಪಿಯಲ್ಲಿ ವಾಜಪೇಯಿ ಅವರಿಗೆ ಅಪಾರ ಗೌರವ ಇದೆ. ಅವರ ಹೆಸರನ್ನು ಈಗಾಗಲೇ ಸ್ಥಳಗಳಿಗೆ ಮತ್ತು ಯೋಜನೆಗಳಿಗೆ ಇಟ್ಟಿದೆ.

ಇದನ್ನೂ ಓದಿ: ಜವಹರಲಾಲ್ ನೆಹರು ಸಂಶೋಧನಾ ಕೇಂದ್ರಕ್ಕೆ ನೀರು ನುಗ್ಗಿ ಕೋಟ್ಯಾಂತರ ರೂ. ಬೆಲೆ ಬಾಳುವ ಲ್ಯಾಬ್ ಮಷಿನ್​ ಹಾಳು

TV9 Kannada


Leave a Reply

Your email address will not be published. Required fields are marked *