– ಕೋವಿಡ್ ಕೇರ್ ಸೆಂಟರ್ ಗಳ ಮೂಲ ಸೌಕರ್ಯ, ಸ್ಥಿತಿಗತಿ ವಿಕ್ಷಣೆ
– ಸರ್ಕಾರದಿಂದ ಕೈಗೊಳ್ಳಲಾದ ಕ್ರಮಗಳ ವಿವರಿಸಿದ ಸಚಿವ ಸೋಮಶೇಖರ್
– ಜನಸೇವಾ ವಿದ್ಯಾಕೇಂದ್ರದ ನೂತನ ಕೇರ್ ಸೆಂಟರ್ಗೆ 16 ಬೆಡ್‍ಗಳಿಗೆ ಆಕ್ಸಿಜನ್ ಕಾನ್ಸಂಟ್ರೇಟರ್ ವ್ಯವಸ್ಥೆ ಮಾಡಿಸಿದ ಎಸ್‍ಟಿಎಸ್
– ಶಾಶ್ವತ ಸೌಕರ್ಯಗಳ ಬಗ್ಗೆ ಚಿಂತನೆ

ಬೆಂಗಳೂರು: ಯಶವಂತಪುರ ವಿಧಾನಸಭಾ ಕ್ಷೇತ್ರ ಹಾಗೂ ರಾಜರಾಜೇಶ್ವರಿ ನಗರ ವಲಯದ ಕೋವಿಡ್ ಕೇರ್ ಸೆಂಟರ್‌ಗಳ   ವ್ಯವಸ್ಥೆಗಳ ಬಗ್ಗೆ ಶನಿವಾರ ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರಗಳ ಖಾತೆ ಸಚಿವರಾದ ಡಿ.ವಿ.ಸದಾನಂದ ಗೌಡ ಹಾಗೂ ಯಶವಂತಪುರ ವಿಧಾನಸಭಾ ಕ್ಷೇತ್ರದ ಶಾಸಕರು, ಸಹಕಾರ ಸಚಿವರಾದ ಎಸ್.ಟಿ.ಸೋಮಶೇಖರ್ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಕೇಂದ್ರೀಯ ಆಯುರ್ವೇದ ಸಂಶೋಧನಾ ಸಂಸ್ಥೆಗೆ ಭೇಟಿ ನೀಡಿದ ಸಚಿವರುಗಳು, ಅಲ್ಲಿ ನೂತನವಾಗಿ ಪ್ರಾರಂಭಿಸಲು ಉದ್ದೇಶಿಸಿರುವ 100 ಆಕ್ಸಿಜನ್ ಬೆಡ್‍ಗಳ ಪರಿಶೀಲನೆ ನಡೆಸಿದರು. ಜೊತೆಗೆ ಮೂಲ ಸೌಕರ್ಯ ವ್ಯವಸ್ಥೆಗಳನ್ನು ಹೇಗೆ ಮಾಡಿಕೊಳ್ಳಲಾಗಿದೆ. ಸರ್ಕಾರದಿಂದ ಯಾವ ಯಾವ ವ್ಯವಸ್ಥೆಗಳನ್ನು ಮಾಡಲಾಗಿದೆ. ಇನ್ನೂ ಏನೇನು ಬೇಡಿಕೆಗಳು ಇವೆ ಎಂಬೆಲ್ಲ ಮಾಹಿತಿಗಳನ್ನು ಸಚಿವರಾದ ಸೋಮಶೇಖರ್ ಅವರು ಕೇಂದ್ರ ಸಚಿವರಾದ ಡಿ.ವಿ.ಸದಾನಂದಗೌಡ ಅವರಿಗೆ ವಿವರಿಸಿದರು.

ಮೂಲ ಸೌಲಭ್ಯ ಬಗ್ಗೆ ಮಾಹಿತಿ :
ಜ್ಞಾನಭಾರತಿ ಕೋವಿಡ್ ಕೇರ್ ಸೆಂಟರ್‍ಗೆ ಭೇಟಿ ನೀಡಿದ ಕೇಂದ್ರ ಸಚಿವರಾದ ಸದಾನಂದಗೌಡ ಅವರು ಹಾಗೂ ಸೋಮಶೇಖರ್ ಅವರು, ಅಲ್ಲಿನ ಮೂಲ ಸೌಲಭ್ಯಗಳ ಬಗ್ಗೆ ಚರ್ಚೆ ನಡೆಸಿದರು. ಜೊತೆಗೆ ಆಕ್ಸಿಜನ್ ಬೆಡ್‍ಗಳ ವ್ಯವಸ್ಥೆ, ಆಕ್ಸಿಜನ್ ಸಿಲಿಂಡರ್‍ಗಳ ಪೂರೈಕೆ, ರೋಗಿಗಳಿಗೆ ಲಭ್ಯವಾಗುತ್ತಿರುವ ಚಿಕಿತ್ಸೆ, ಔಷಧಗಳು, ವೈದ್ಯಕೀಯ ಕಿಟ್‍ಗಳು, ನೀರು-ಊಟದ ವ್ಯವಸ್ಥೆ ಸೇರಿದಂತೆ ಇನ್ನಿತರ ಸೌಕರ್ಯಗಳನ್ನು ಯಾವ ರೀತಿಯಾಗಿ ಕಲ್ಪಿಸಲಾಗಿದೆ. ತುರ್ತು ಅಗತ್ಯವಿರುವ ರೋಗಿಗಳಿಗೆ ಚಿಕಿತ್ಸೆ ನೀಡಲು ಯಾವ ರೀತಿ ಆಸ್ಪತ್ರೆ ಸಜ್ಜಾಗಿದೆ ಎಂಬ ಬಗ್ಗೆ ಸಚಿವರಾದ ಸೋಮಶೇಖರ್ ಅವರು ಕೇಂದ್ರ ಸಚಿವರಿಗೆ ವಿವರಣೆ ನೀಡಿದರು. ಅಲ್ಲದೆ, ಅಚ್ಚುಕಟ್ಟಿನ ವ್ಯವಸ್ಥೆ ಬಗ್ಗೆ ಈ ವೇಳೆ ಕೇಂದ್ರ ಸಚಿವರು ಮೆಚ್ಚುಗೆ ವ್ಯಕ್ತಪಡಿಸಿದರು.

ಆಕ್ಸಿಜನ್ ಕಾನ್ಸಂಟ್ರೇಟರ್ ಕೊಡಿಸಿದ ಎಸ್ ಟಿ ಎಸ್:
ಜನಸೇವಾ ವಿದ್ಯಾ ಕೇಂದ್ರದಲ್ಲಿ ನೂತನವಾಗಿ ಪ್ರಾರಂಭವಾಗಿರುವ 100 ಬೆಡ್‍ಗಳ ಕೋವಿಡ್ ಕೇರ್ ಸೆಂಟರ್‍ಗೆ ಭೇಟಿ ನೀಡಿದ ಕೇಂದ್ರ ಸಚಿವರಾದ ಸದಾನಂದಗೌಡ ಅವರು ಹಾಗೂ ಸಚಿವರಾದ ಸೋಮಶೇಖರ್ ಅವರು, ಅಲ್ಲಿನ ವ್ಯವಸ್ಥೆಯನ್ನು ಪರಿಶೀಲಿಸಿದರು. ಇದೇ ವೇಳೆ 16 ಬೆಡ್‍ಗಳಲ್ಲಿ ಆಕ್ಸಿಜನ್ ಕಾನ್ಸಂಟ್ರೇಟರ್‌ಗಳ ವ್ಯವಸ್ಥೆಗೆ ಬಿಬಿಎಂಪಿ ಮೂಲಕ ಸಚಿವರಾದ ಸೋಮಶೇಖರ್ ಅವರು ವ್ಯವಸ್ಥೆ ಮಾಡಿದ್ದರ ಬಗ್ಗೆ ವೈದ್ಯಾಧಿಕಾರಿಗಳು ಕೇಂದ್ರ ಸಚಿವರ ಗಮನಕ್ಕೆ ತಂದರು.

ಯಶವಂತಪುರ ವಿಧಾನಸಭಾ ಕ್ಷೇತ್ರ ಹಾಗೂ ರಾಜರಾಜೇಶ್ವರಿ ನಗರ ವಲಯ ವ್ಯಾಪ್ತಿಯಲ್ಲಿ ಹಾಲಿ ಎಲ್ಲ ಕಡೆಗಳಿಂದ ಸೌಲಭ್ಯಗಳನ್ನು ಒದಗಿಸಿಕೊಂಡು ಕೋವಿಡ್ ಕೇರ್ ಸೆಂಟರ್ ಗಳನ್ನು ತೆರೆಯಲಾಗಿದೆ. ಕೆಲವು ಆಸ್ಪತ್ರೆಗಳಲ್ಲಿ ತಾತ್ಕಾಲಿಕ ವ್ಯವಸ್ಥೆಗಳನ್ನು ಮಾಡಿಕೊಳ್ಳಲಾಗಿದೆ. ಆದರೆ, ಆಕ್ಸಿಜನ್ ಬೆಡ್ ಗಳು, ಆಕ್ಸಿಜನ್ ಕಾನ್ಸಂಟ್ರೇಟರ್‌ಗಳು, ಮೆಡಿಕಲ್ ಕಿಟ್ ಗಳು ಸೇರಿದಂತೆ ಆಸ್ಪತ್ರೆಗಳಲ್ಲಿ ಕೋವಿಡ್‍ಗೆ ಸಂಬಂಧಪಟ್ಟಂತೆ ಮೂಲಸೌಕರ್ಯವನ್ನು ಶಾಶ್ವತವಾಗಿ ಒದಗಿಸುವ ನಿಟ್ಟಿನಲ್ಲಿ ಚಿಂತನೆ ನಡೆಸುತ್ತಿದ್ದೇನೆ. ಈ ಬಗ್ಗೆ ಸರ್ಕಾರದೊಂದಿಗೆ ಮಾತನಾಡಿ ಮುಂಬರುವ ದಿನಗಳಲ್ಲಿ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಸಚಿವರಾದ ಸೋಮಶೇಖರ್ ಅವರು ತಿಳಿಸಿದರು.

ಈ ಸಂದರ್ಭದಲ್ಲಿ ಯಶವಂತಪುರ ವಿಧಾನಸಭಾ ಕ್ಷೇತ್ರ ಹಾಗೂ ರಾಜರಾಜೇಶ್ವರಿ ನಗರ ವಲಯ ವ್ಯಾಪ್ತಿಯ ವೈದ್ಯಾಧಿಕಾರಿಗಳು, ಬಿಬಿಎಂಪಿ ಅಧಿಕಾರಿಗಳು, ಆರೋಗ್ಯಾಧಿಕಾರಿಗಳು ಸೇರಿದಂತೆ ವೈದ್ಯರು ಹಾಗೂ ಸಿಬ್ಬಂದಿ ಹಾಜರಿದ್ದರು.

The post ಯಶವಂತಪುರ, ಆರ್‍ಆರ್ ವಲಯದ ಕೋವಿಡ್ ಕೇರ್ ಸೆಂಟರ್‌ಗೆ ಡಿವಿಎಸ್, ಎಸ್‌ಟಿಎಸ್‌ ಭೇಟಿ appeared first on Public TV.

Source: publictv.in

Source link