ಯಾದಗಿರಿ: ಕೆಲಸವಿಲ್ಲದೆ ಖಾಲಿ ಕುಳಿತುಕೊಂಡ ಹಮಾಲರು; ಸರ್ಕಾರದಿಂದ ಸಹಾಯಧನದ ನಿರೀಕ್ಷೆ – Yadagiri: Porters sitting idle without work: Expect subsidy from Govt


ಯಾದಗಿರಿ ಕೃಷಿ ಮಾರುಕಟ್ಟೆಯಲ್ಲಿ 400 ಕ್ಕೂ ಅಧಿಕ ಜನ ಹಮಾಲು ಕೆಲಸವನ್ನ ನಂಬಿಕೊಂಡು ಜೀವನ ನಡೆಸುತ್ತಿದ್ದಾರೆ. ಇದರಿಂದ ಬಂದ ಹಣದಲ್ಲಿ ಕುಟುಂಬವನ್ನ ನಡೆಸುತ್ತಿದ್ದಾರೆ. ಆದರೆ ಕಳೆದ ಒಂದು ತಿಂಗಳಿನಿಂದ ಆ ಹಮಾಲರು ಕೆಲಸವಿಲ್ಲದೆ ನಿರುದ್ಯೋಗಿಗಳಾಗಿದ್ದಾರೆ.

ಯಾದಗಿರಿ: ಈ ಬಾರಿ ಮಳೆ ಅವಾಂತರದಿಂದ ಕೇವಲ ರೈತರಷ್ಟೇ ಅಲ್ಲದೆ ರೈತರ ಬೆಳೆಯಿಂದ ಕೆಲಸ ಪಡೆಯುತ್ತಿದ್ದ ಹಮಾಲರು ಸಹ ಹೈರಾಣಾಗಿದ್ದಾರೆ. ಮಳೆಯಿಂದಾಗಿ ಸಾಕಷ್ಟು ಬೆಳೆ ಹಾನಿಯಾಗಿದೆ. ಹೀಗಾಗಿ ರೈತರು ಕಡಿಮೆ ಪ್ರಮಾಣದಲ್ಲಿ ಬೆಳೆಯನ್ನು ಬೆಳೆಯುತ್ತಿದ್ದಾರೆ. ಈ ಕಾರಣಕ್ಕೆ ಮಾರಾಟಕ್ಕಾಗಿ ಎಪಿಎಂಸಿಗೆ ಬೆಳೆ ಬರುತ್ತಿಲ್ಲ. ಬೆಳೆ ಬರದಿದ್ದರಿಂದ ಎಪಿಎಂಸಿಯಲ್ಲಿರುವ ಹಮಾಲರಿಗೆ ಕೆಲಸವಿಲ್ಲದಂತಾಗಿದೆ. ಯಾದಗಿರಿ ಎಪಿಎಂಸಿಗೆ ಅತಿಯಾಗಿ ಹೆಸರು ಹಾಗೂ ಉದ್ದಿನ ಬೆಳೆ ಮಾರಾಟಕ್ಕೆ ಬರುತ್ತದೆ. ಆದರೆ ಕಳೆದ ಒಂದು ತಿಂಗಳ ಹಿಂದೆ ಕಡಿಮೆ ಪ್ರಮಾಣದಲ್ಲಿ ಬೆಳೆ ಮಾರಟಕ್ಕೆ ಬಂದಿದೆ. ಆದರೂ ಇಲ್ಲಿರುವ ಹಮಾಲರಿಗೆ ಸುಮಾರು ಎರಡು ತಿಂಗಳ ಕಾಲ ಕೆಲಸ ಸಿಕ್ಕಿದೆ. ಆದರೆ ಹೆಸರು ಮತ್ತು ಉದ್ದಿನ ಸೀಸನ್ ಮುಗಿದಿರುವ ಕಾರಣಕ್ಕೆ ಈಗ ಎಪಿಎಂಸಿಗೆ ಯಾವುದೇ ಬೆಳೆ ಮಾರಾಟಕ್ಕೆ ಬರುತ್ತಿಲ್ಲ. ಹೀಗಾಗಿ ಇಲ್ಲಿರುವ ಹಮಾಲರು ಕೆಲಸವಿಲ್ಲದೆ ನಿರುದ್ಯೋಗಿಗಳಾಗಿದ್ದಾರೆ.

ವರ್ಷದ 12 ತಿಂಗಳಲ್ಲಿ ಹಮಾಲರಿಗೆ 4 ತಿಂಗಳು ಮಾತ್ರ ಕೆಲಸವಿರುತ್ತದೆ. ಉಳಿದ ದಿನಗಳು ನಿರುದ್ಯೋಗಿಗಳಾಗಿರುತ್ತಾರೆ. ಕೆಲವರು ಜಮೀನು ಕೆಲಸಕ್ಕೆ ಹೋದರೆ ಉಳಿದವರು ಎಪಿಎಂಸಿ ಯಾರ್ಡ್​ನಲ್ಲಿ ಕೆಲಸಕ್ಕಾಗಿ ಅಲೆಯುತ್ತಾರೆ. ಹೀಗಾಗಿ ನಮಗೆ ನಿರುದ್ಯೋಗ ಭತ್ಯೆ ಕೊಟ್ಟು ನಮ್ಮ ಕುಟುಂಬ ನಿರ್ವಹಣೆಗೆ ಅನುಕೂಲ ಮಾಡಿಕೊಡಬೇಕು ಎಂದು ಇಲ್ಲಿನ ಹಮಾಲರು ಮನವಿ ಮಾಡಿಕೊಂಡಿದ್ದಾರೆ. ಇನ್ನು ಹೆಸರು ಮತ್ತು ಉದ್ದಿನ ಸೀಸನ್ ಮುಗಿದಿರುವ ಕಾರಣಕ್ಕೆ ಇಲ್ಲಿನ ಹಮಾಲರಿಗೆ ಯಾವುದೇ ಕೆಲಸವಿಲ್ಲದಂತಾಗಿದೆ. ಆದರೆ ಯಾವುದಾದರೂ ಕೆಲಸ ಸಿಗುತ್ತದೆ, ಎಂದು ನಿತ್ಯ ನೂರಾರು ಜನ ಹಮಾಲರು ಎಪಿಎಂಸಿ ಯಾರ್ಡ್​ಗೆ ಬರುತ್ತಾರೆ.ಆದರೆ ಯಾವುದೇ ಕೆಲಸ ಸಿಗದ ಕಾರಣಕ್ಕೆ ಇಲ್ಲಿಯೇ ಕುಳಿತು ವಾಪಾಸ್ಸು ಮನೆಗೆ ಹೋಗುತ್ತಾರೆ.

ಸದ್ಯ ಜಿಲ್ಲೆಯಲ್ಲಿ ಹತ್ತಿ ಮತ್ತು ಭತ್ತದ ರಾಶಿಯ ಸೀಸನ್ ನಡೆದಿದೆ. ಆದರೆ ಯಾದಗಿರಿ ಎಪಿಎಂಸಿ ಯಾರ್ಡ್ ನಲ್ಲಿ ಭತ್ತ ಮತ್ತು ಹತ್ತಿ ಖರೀದಿ ಆಗುವುದಿಲ್ಲ. ಒಂದು ವೇಳೆ ಹತ್ತಿ ಮತ್ತು ಭತ್ತ ಖರೀದಿಯಾದರೆ ಹಮಾಲರಿಗೆ ಕೆಲಸ ಸಿಗುತಿತ್ತು. ಇನ್ನು ಒಂದುವರೆ ತಿಂಗಳು ಹಮಾಲರು ಕೆಲಸವಿಲ್ಲದೆ ನಿರುದ್ಯೋಗಿಗಳಾಗುತ್ತಾರೆ. ಬಳಿಕ ತೊಗರಿ ಬೆಳೆ ಮಾರಾಟಕ್ಕೆ ಬರುವುದರಿಂದ ಕೆಲಸ ಸಿಗುತ್ತದೆ. ಇನ್ನು ಯಾದಗಿರಿ ಎಪಿಎಂಸಿಯಲ್ಲಿ ಸುಮಾರು 400 ಕ್ಕೂ ಅಧಿಕ ಜನ ಹಮಾಲರು ಕೆಲಸ ಮಾಡುತ್ತಿದ್ದಾರೆ. ಈಗ ಯಾವುದೇ ಬೆಳೆ ಮಾರಾಟಕ್ಕೆ ಬರದಿದ್ದರಿಂದ ಹಮಾಲರು ಕೆಲಸವಿಲ್ಲದೆ ನಿರುದ್ಯೋಗಿಗಳಾಗಿದ್ದಾರೆ. ಇತ್ತ ಎಪಿಎಂಸಿಯಲ್ಲಿರುವ ವರ್ತಕರು ಸಹ ಯಾವುದೇ ಖರೀದಿಯಲ್ಲಿದೆ ಸ್ವಲ್ಪ ಹೊತ್ತ ಅಂಗಡಿಯನ್ನ ಓಪನ್ ಮಾಡಿಕೊಂಡು ವಾಪಸ್ ಮನೆಗೆ ಹೋಗುತ್ತಿದ್ದಾರೆ.

TV9 Kannada


Leave a Reply

Your email address will not be published.