ಯಾದಗಿರಿ: ಮೈದುಂಬಿ ಹರಿಯುವ ಗವಿ ಫಾಲ್ಸ್​ ಜತೆಗೆ ಗವಿ ಸಿದ್ದಲಿಂಗೇಶ್ವರ ದೇವರ ದರ್ಶನ ಪಡೆಯಿರಿ | Gavi Siddalingeshwara temple and Gavi Falls attracting tourists in yadgir


ಯಾದಗಿರಿ: ಮೈದುಂಬಿ ಹರಿಯುವ ಗವಿ ಫಾಲ್ಸ್​ ಜತೆಗೆ ಗವಿ ಸಿದ್ದಲಿಂಗೇಶ್ವರ ದೇವರ ದರ್ಶನ ಪಡೆಯಿರಿ

ಗವಿ ಸಿದ್ದಲಿಂಗೇಶ್ವರ ದೇವಸ್ಥಾನ

ಯಾದಗಿರಿ: ಜಿಲ್ಲೆಯ ಗುರುಮಠಕಲ್ ತಾಲೂಕಿನ ಚಿಂತನಹಳ್ಳಿ ಗ್ರಾಮದ ಗುಡ್ಡಗಾಡು ಪ್ರದೇಶದಲ್ಲಿರುವ ಗವಿ ಫಾಲ್ಸ್ ಎಲ್ಲರನ್ನು ಕೈಬಿಸಿ ಕರೆಯುತ್ತಿದೆ. ಮಳೆಗಾಲ ಆರಂಭವಾದರೆ ಸಾಕು ಗವಿ ಫಾಲ್ಸ್​ನಿಂದ ದುಮ್ಮಿಕ್ಕುವ ನೀರು ನೋಡುಗರ ಮನ ಸೆಳೆಯುತ್ತದೆ. ಪ್ರಕೃತಿ ಸೌಂದರ್ಯ ಸವಿಯಲು ಈ ಸ್ಥಳಕ್ಕೆ ನಿತ್ಯ ನೂರಾರು ಮಂದಿ ಪ್ರವಾಸಿಗರು ಬರುತ್ತಾರೆ. ಇನ್ನು ಯಾದಗಿರಿ ಜಿಲ್ಲಾ ಕೇಂದ್ರದಿಂದ 35 ಕಿ.ಮೀ ದೂರದಲ್ಲಿರುವ ಚಿಂನತಹಳ್ಳಿ ಗ್ರಾಮದ ಹೊರ ಭಾಗದಲ್ಲಿರುವ ಗುಡ್ಡಗಾಡು ಪ್ರದೇಶದ ತಗ್ಗು ಪ್ರದೇಶದಲ್ಲಿ ಗವಿ ಸಿದ್ದಲಿಂಗೇಶ್ವರ ದೇವಸ್ಥಾನವಿದೆ. ದೇವಸ್ಥಾನ ನೋಡುಗರಿಗೆ ಅಷ್ಟು ಸುಲಭವಾಗಿ ಕಾಣುವುದಿಲ್ಲ. ದೇವಸ್ಥಾನ ನೋಡಬೇಕು ದೇವರ ದರ್ಶನ ಪಡೆಯಬೇಕು ಅಂದರೆ ಮೈ ಒದ್ದೆ ಮಾಡಿಕೊಂಡು ಹೋಗಬೇಕು ಆಗ ಮಾತ್ರ ದೇವರ ದರ್ಶನ ಸಿಗಲು ಸಾಧ್ಯ.

ಗವಿಯೊಳಗೆ ಸಿದ್ದಲಿಂಗೇಶ್ವರ
ಗವಿ ಸಿದ್ದಲಿಂಗೇಶ್ವರ ದೇವಸ್ಥಾನ ಸಾಕಷ್ಟು ಶಕ್ತಿವಂತ ದೇವರು ಎಂದು ಭಕ್ತರು ನಂಬುತ್ತಾರೆ. ಸಿದ್ದಲಿಂಗೇಶ್ವರ ದೇವರು ಇದೆ ಪ್ರಕೃತಿ ಸೌಂದರ್ಯದ ಮಧ್ಯ ಅಂದರೆ ಈ ಬೆಟ್ಟದ ಮದ್ಯ ಇರುವ ಸಣ್ಣ ಗವಿಯೊಳಗೆ ಇದ್ದಾನೆ. ಗವಿ ಮೇಲಿಂದ ನಿರಂತವಾಗಿ ನೀರು ದುಮ್ಮಿಕ್ಕುತ್ತದೆ. ಹೀಗಾಗಿ ದೇವರ ದರ್ಶನ ಪಡೆಯಬೇಕು ಅಂದರೆ ಮೇಲಿಂದ ಬಿಳುವ ನೀರಿನಲ್ಲಿ ಒದ್ದೆಯಾಗಿಯೇ ಹೋಗಬೇಕು. ಇನ್ನು ಈ ಗವಿ ಅಷ್ಟೋಂದು ದೊಡ್ಡದೆನಲ್ಲ ಏಕಕಾಲಕ್ಕೆ ನಾಲ್ಕು ಮಂದಿ ಹೋಗಿ ದರ್ಶನ ಪಡೆದುಕೊಂಡು ಬರಬಹುದಾಗಿದೆ.

ವರ್ಷದ 12 ತಿಂಗಳು ಜಲಧಾರೆ
ಗವಿ ಸಿದ್ದಲಿಂಗೇಶ್ವರ ಸನ್ನಿಧಾನದಲ್ಲಿ ವರ್ಷದ 12 ತಿಂಗಳು ಜಲಧಾರೆ ದುಮ್ಮಿಕ್ಕುತ್ತಿರುತದೆ. ಬೆಟ್ಟದಿಂದ ಹರಿದು ಬರುವ ನೀರು ನೇರವಾಗಿ ಗವಿ ಮೇಲಿಂದ ಬಿಳುತ್ತದೆ. ಹೀಗಾಗಿ ಸಾವಿರಾರು ಮಂದಿ ಪ್ರವಾಸಿಗರು ನೀರು ಬಿಳುವ ದೃಶ್ಯ ನೋಡಲು ಆಗಮಿಸುತ್ತಾರೆ. ಇನ್ನು ಭಾನವಾರು ಸೇರಿದಂತೆ ರಜಾ ದಿನಗಳು ಬಂದರೆ ಸಾಕು ಇಲ್ಲಿ ಪ್ರವಾಸಿಗರ ದಂಡೆ ಹರಿದು ಬರುತ್ತದೆ. ಇಲ್ಲಿ ಜನರು ಮೇಲಿಂದ ಬೀಳುವ ನೀರಿನಲ್ಲಿ ಮಿಂದೆದ್ದು, ದೇವರ ದರ್ಶನಕ್ಕೆ ಹೋಗುತ್ತಾರೆ.

ಜಲಧಾರೆ ಮೂಲ ಇನ್ನು ತಿಳಿದಿಲ್ಲ
ಗವಿ ಸಿದ್ದಲಿಂಗೇಶ್ವರ ಗವಿ ಮೇಲೆ ದುಮ್ಮಿಕ್ಕುವ ಜಲಧಾರೆಯ ಮೂಲ ಈವರೆಗೂ ಯಾರಿಗೂ ಗೊತ್ತಾಗಿಲ್ಲ. ಎಲ್ಲಿಂದಲೋ ಗುಡ್ಡದಿಂದ ಹರಿದು ಬರುವ ನೀರು ವರ್ಷದ 12 ತಿಂಗಳು ಇದೆ ರೀತಿ ಹರಿಯುತ್ತದೆ. ಆದರೆ ಗವಿ ಬಳಿ ಬರುವ ನೀರು ಎಲ್ಲಿಂದ ಬರುತ್ತಿವೆ ಎನ್ನುವ ಬಗ್ಗೆ ಯಾರಿಗೂ ಗೊತ್ತಾಗಿಲ್ಲ. ಇನ್ನು ಯಾರೂ ಕೂಡ ಹುಡುಕುವ ಗೋಜಿಗೆ ಹೋಗಿಲ್ಲ.
ಕಲ್ಯಾಣ ಕರ್ನಾಟಕ ಭಾಗದಲ್ಲಿ ಇತ್ತೊಂದೊಂದು ಪ್ರವಾಸಿ ತಾಣ ಇರುವುದು ನಮ್ಮ ಭಾಗದ ಜನರ ಪುಣ್ಯ. ಇಂತಹ ಸ್ಥಳಗಳನ್ನು ನೋಡಲು ನಾವು ಮೈಸೂರು, ಶಿವಮೊಗ್ಗ ಕಡೆ ಹೋಗುತ್ತಿದ್ದೆವೆ. ಆದರೆ ಇಲ್ಲಿಯೇ ಸ್ಥಳೀಯವಾಗಿರುವ ಗವಿ ಸಿದ್ದಲಿಂಗೇಶ್ವರ ಫಾಲ್ಸ್ ನೋಡಿದರೆ ಯಾವ ಜೋಗ ಜಲಾಪಾತಕ್ಕೂ ಕಮ್ಮಿ ಇಲ್ಲ ಅನಿಸುತ್ತದೆ ಎಂದು ಪ್ರವಾಸಿಗರಾದ ಬಸವರಾಜ್ ಹೇಳಿದ್ದಾರೆ.

ಮೂಲಸೌಕರ್ಯಗಳ ಕೊರತೆ
ಗವಿ ಸಿದ್ದಲಿಂಗೇಶ್ವರ ದೇವರ ದರ್ಶನ ಜೊತೆ ಪ್ರವಾಸಿ ತಾಣವಾಗಿರುವ ಈ ಸ್ಥಳವನ್ನು ನೋಡಲು ನಾನಾ ಕಡೆಯಿಂದ ಸಾವಿರಾರು ಮಂದಿ ಪ್ರವಾಸಿಗರು ಬರುತ್ತಾರೆ. ಆದರೆ ಇಲ್ಲಿಗೆ ಬರುವ ಪ್ರವಾಸಿಗರಿಗೆ ಸರಿಯಾದ ಮೂಲ ಸೌಕರ್ಯಗಳನ್ನು ಒದಗಿಸಿಲ್ಲ. ಮಹಿಳೆಯರು ಗವಿ ದರ್ಶನ ಪಡೆಯಲು ಮೈ ಒದ್ದೆ ಮಾಡಿಕೊಂಡೆ ಹೋಗಬೇಕು ಹೀಗಾಗಿ ವಾಪಸ್ ದರ್ಶನ ಪಡೆದುಕೊಂಡು ಬಂದ ಮಹಿಳೆಯರಿಗೆ ಬಟ್ಟೆ ಬದಲಿಸಲು ವ್ಯವಸ್ಥೆ ಮಾಡಿಲ್ಲ. ಇನ್ನು ಕುಡಿಯಲು ನೀರಿನ ವ್ಯವಸ್ಥೆ ಸಹ ಇಲ್ಲಿ ಇಲ್ಲ.

ಗವಿ ಸಿದ್ದಲಿಂಗೇಶ್ವರ ಫಾಲ್ಸ್ ಮತ್ತು ದೇವರ ದರ್ಶನ ಪಡೆಯಲು ಸಾಕಷ್ಟು ಮಂದಿ ಬರುತ್ತಾರೆ. ಕುಟುಂಬ ಸಮೇತರಾಗಿ ಬರಲು ಹೇಳಿ ಮಾಡಿಸಿದಂತ ಸ್ಥಳವಿದು. ಆದರೆ ಇಲ್ಲಿ ಮಹಿಳೆಯರಿಗೆ ಮೂಲಭೂತ ಸೌಕರ್ಯಗಳನ್ನು ಮಾಡಿಲ್ಲ. ಮಹಿಳೆಯರು ಗವಿ ದರ್ಶನ ಪಡೆದು ಬಂದ ಮೇಲೆ ಬಟ್ಟೆ ಬದಲಿಸಲು ವ್ಯವಸ್ಥೆ ಮಾಡಿದರೆ ಅನುಕೂಲ ಆಗುತ್ತದೆ ಎಂದು ಪ್ರವಾಸಿಗರಾದ ವೀಣಾ ಹೇಳಿದ್ದಾರೆ.

ವರದಿ: ಅಮೀನ್ ಹೊಸುರ್

ಇದನ್ನೂ ಓದಿ:
Benki Falls: ಶಿಂಷಾನದಿ ತುಂಬಿ ಹರಿದಾಗ ಸೃಷ್ಟಿಯಾಗುವ, ಕಾಡಿನ ಮರೆಯಲ್ಲಿ ಮೆರೆಯುತ್ತಿರುವ ಬೆಂಕಿಫಾಲ್ಸ್‌ ಗತವೈಭವ ಕಂಡಿರಾ?

Jog Falls : ಧಾರಾಕಾರ ಮಳೆ ಹಿನ್ನೆಲೆ ವಿಶ್ವ ವಿಖ್ಯಾತ ಜೋಗ್ ಫಾಲ್ಸ್​ಗೆ ಮತ್ತೆ ಜೀವ ಕಳೆ

TV9 Kannada


Leave a Reply

Your email address will not be published. Required fields are marked *