ಯಾರೇ ತಪ್ಪು ಮಾಡಿದ್ರೂ ಐಟಿ ಅಧಿಕಾರಿಗಳು ಬಿಡುವುದಿಲ್ಲ; ರಾಜಕೀಯ ಪ್ರೇರಿತ ದಾಳಿ ಅಲ್ಲ ಎಂದ ಬಿಎಸ್ ಯಡಿಯೂರಪ್ಪ | BS Yediyurappa BY Raghavendra on IT Raid on Umesh House and other parts of Karnataka

ಯಾರೇ ತಪ್ಪು ಮಾಡಿದ್ರೂ ಐಟಿ ಅಧಿಕಾರಿಗಳು ಬಿಡುವುದಿಲ್ಲ; ರಾಜಕೀಯ ಪ್ರೇರಿತ ದಾಳಿ ಅಲ್ಲ ಎಂದ ಬಿಎಸ್ ಯಡಿಯೂರಪ್ಪ

ಬಿ.ಎಸ್. ಯಡಿಯೂರಪ್ಪ

ಶಿವಮೊಗ್ಗ: ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಆಪ್ತ ಉಮೇಶ್ ಮನೆ ಮೇಲೆ ಐಟಿ ದಾಳಿ ಪ್ರಕರಣಕ್ಕೆ ಸಂಬಂಧಿಸಿ ಶಿವಮೊಗ್ಗ ಜಿಲ್ಲೆ ಶಿಕಾರಿಪುರದಲ್ಲಿ ಯಡಿಯೂರಪ್ಪ ಪ್ರತಿಕ್ರಿಯೆ ನೀಡಿದ್ದಾರೆ. ಉಮೇಶ್ ಮನೆ ಮೇಲೆ ಐಟಿ ದಾಳಿ ವಿಚಾರ ಮಾಧ್ಯಮಗಳಲ್ಲಿ ನೋಡಿದೆ. ಐಟಿ ಇಲಾಖೆ ಅಧಿಕಾರಿಗಳು ತಮ್ಮ ಕರ್ತವ್ಯ ಮಾಡುತ್ತಿದ್ದಾರೆ. ನಾಳೆ ಐಟಿ ದಾಳಿಯ ಕುರಿತು ಮಾಹಿತಿಯನ್ನು ನೀಡಲಿದ್ದಾರೆ. ಮಾಹಿತಿ ಕೊಟ್ಟ ಬಳಿಕ ನಾನು ಉತ್ತರವನ್ನು ನೀಡುತ್ತೇನೆ ಎಂದು ತಿಳಿಸಿದ್ದಾರೆ.

ಯಾರೇ ತಪ್ಪು ಮಾಡಿದ್ರೂ ಐಟಿ ಅಧಿಕಾರಿಗಳು ಬಿಡುವುದಿಲ್ಲ. ಅವರು ತಪ್ಪು ಮಾಡಿದವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುತ್ತಾರೆ ಎಂದು ಯಡಿಯೂರಪ್ಪ ಹೇಳಿದ್ದಾರೆ. ಇದು ರಾಜಕೀಯ ಪ್ರೇರಿತ ಐಟಿ ದಾಳಿ ಎಂಬ ಮಾತನ್ನು ಅವರು ಅಲ್ಲಗಳೆದಿದ್ದಾರೆ. ಉಪಚುನಾವಣೆಯ ಮೇಲೆ ಇದು ಪರಿಣಾಮವನ್ನು ಬೀರಲ್ಲ. ಉಪಚುನಾವಣೆ ನಡೆಯಲಿರುವ ಸಿಂದಗಿ ಹಾಗೂ ಹಾನಗಲ್ ಎರಡೂ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಗಳೇ ಗೆಲುವು ಸಾಧಿಸ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಈ ವಿಚಾರವಾಗಿ ಬಿ.ಎಸ್. ಯಡಿಯೂರಪ್ಪ ಪುತ್ರ ಬಿ.ವೈ. ರಾಘವೇಂದ್ರ ಕೂಡ ಮಾತನಾಡಿದ್ದಾರೆ. ಶಿವಮೊಗ್ಗದಲ್ಲಿ ಸಂಸದ ಬಿ.ವೈ. ರಾಘವೇಂದ್ರ ಪ್ರತಿಕ್ರಿಯೆ ನೀಡಿದ್ದಾರೆ. ಬೆಳಗ್ಗೆಯಿಂದ ಐಟಿ ರೇಡ್ ನಡೆಯುತ್ತಿದೆ. ದೇಶದಲ್ಲೇ ಈ ರೀತಿಯ ರೇಡ್ ನಡೆಯುತ್ತಿದೆ. ಬೆಂಗಳೂರಿನಲ್ಲಿ ಕೂಡ ಐಟಿ ರೇಡ್ ನಡೆದಿದೆ. ನಾಳೆ ಐಟಿ ರೇಡ್ ಕುರಿತು ಉಮೇಶ್ ಉತ್ತರ ನೀಡಲಿದ್ದಾರೆ. ಈ ದಾಳಿ ದುರುದ್ದೇಶದಿಂದ ಕೂಡಿದೆ ಎನ್ನುವುದು ತನಿಖೆಯಿಂದ ಗೊತ್ತಾಗಲಿದೆ. ಈ ದಾಳಿಯಿಂದ ಉಪಚುನಾವಣೆ ಮೇಲೆ ಪರಿಣಾಮ ಇರುವುದಿಲ್ಲ. ಎರಡು ಕ್ಷೇತ್ರದಲ್ಲೂ ಬಿಜೆಪಿ ಅಭ್ಯರ್ಥಿ ಗೆಲುವು ಸಾಧಿಸುತ್ತಾರೆ ಎಂದು ರಾಘವೇಂದ್ರ ತಿಳಿಸಿದ್ದಾರೆ.

ಬಿ.ಎಸ್‌. ಯಡಿಯೂರಪ್ಪ ಆಪ್ತ ಉಮೇಶ್ ಮನೆ ಮೇಲೆ ಐಟಿ ದಾಳಿ ಹಾಗೂ ಪರಿಶೀಲನೆ ಮುಂದುವರಿದಿದೆ. ಮಧ್ಯಾಹ್ನದ ಬಳಿಕ ಮತ್ತೆ 3 ಅಧಿಕಾರಿಗಳಿಂದ ಪರಿಶೀಲನೆ ನಡೆಸಲಾಗಿದೆ. ಮುಂಜಾನೆ ಸುಮಾರು 10 ಕ್ಕೂ ಹೆಚ್ಚು ಅಧಿಕಾರಿಗಳಿಂದ ರೇಡ್​ ಮಾಡಲಾಗಿದೆ. ಮಧ್ಯಾಹ್ನದ ವೇಳೆಗೆ 7 ಅಧಿಕಾರಿಗಳು ಮನೆಯಿಂದ ಹೊರಟಿದ್ದರು. ಒಂದು ಬ್ಯಾಗಿನಲ್ಲಿ ಅಧಿಕಾರಿಗಳು ಕೆಲ ದಾಖಲೆ ಕೊಂಡೊಯ್ದಿದ್ದರು, ಈಗ ಮೂವರು ಅಧಿಕಾರಿಗಳಿಂದ ಉಮೇಶ್ ತೀವ್ರ ವಿಚಾರಣೆ ನಡೆಸಲಾಗುತ್ತಿದೆ. ರಾಜಾಜಿನಗರದ ಭಾಷ್ಯಂ ಸರ್ಕಲ್ ಬಳಿ ಮನೆಯಲ್ಲಿ ವಿಚಾರಣೆ ನಡೆಸಲಾಗುತ್ತಿದೆ. ಬಾಗಲಗುಂಟೆ ಬಳಿಯ ಸೈಟ್​ಗಳು, ಸಹಕಾರನಗರದ ಮನೆ, ನೆಲಮಂಗಲ ಬಳಿಯ ಪ್ರಾಪರ್ಟಿ ಸಂಬಂಧ ವಿಚಾರಣೆ ಮಾಡಲಾಗುತ್ತಿದೆ.

ಎಸ್​ಎನ್​ಸಿ ಗುತ್ತಿಗೆ ಕಂಪೆನಿ, ಸಿವಿಲ್ ಕಂಟ್ರಾಕ್ಟರ್ ಉಪ್ಪಾರ್ ಕಚೇರಿ ಮೇಲೆ ಐಟಿ ದಾಳಿ
ತುಮಕೂರು ಜಿಲ್ಲೆಯಲ್ಲೂ ಐಟಿ ಅಧಿಕಾರಿಗಳ ಕಾರ್ಯಾಚರಣೆ ನಡೆಸಲಾಗಿದೆ. ಎಸ್​ಎನ್​ಸಿ ಗುತ್ತಿಗೆ ಕಂಪನಿ ಮೇಲೆ ಐಟಿ ಅಧಿಕಾರಿಗಳು ದಾಳಿ ಮಾಡಿದ್ದಾರೆ. ಕೊರಟಗೆರೆ ತಾಲೂಕಿನ ಸಿಂಗರೇಹಳ್ಳಿ ಬಳಿ ಇರುವ ಕಂಪನಿಗೆ ಇನ್ನೋವಾ ಕಾರಿನಲ್ಲಿ ಬಂದಿದ್ದ 8 ಅಧಿಕಾರಿಗಳಿಂದ ದಾಳಿ ಮಾಡಲಾಗಿದೆ. ಎತ್ತಿನಹೊಳೆ ಯೋಜನೆಯ ಟೆಂಡರ್ ಪಡೆದಿರುವ ಮಾಹಿತಿ ಮೇಲೆ ಟೆಂಡರ್ ಬಗ್ಗೆ ದಾಖಲೆಯನ್ನು ಅಧಿಕಾರಿಗಳು ಪರಿಶೀಲಿಸುತ್ತಿದ್ದಾರೆ.

ಸಿವಿಲ್ ಕಂಟ್ರ್ಯಾಕ್ಟರ್​ ಉಪ್ಪಾರ್​ ಕಚೇರಿ ಮೇಲೆ ಐಟಿ ದಾಳಿ ಮಾಡಲಾಗಿದೆ. ಉಪ್ಪಾರ್​ ಕಚೇರಿಯಲ್ಲಿ ದಾಖಲೆ ಪರಿಶೀಲನೆ ಮುಂದುವರಿದಿದೆ. ಸತತ 8 ಗಂಟೆಗಳಿಗೂ ಹೆಚ್ಚು ಕಾಲ ದಾಖಲೆ ಪರಿಶೀಲನೆ ಮಾಡಲಾಗಿದೆ. ದಾಳಿಗೂ ಮುನ್ನ ಕೆಲ ಮಹತ್ವದ ದಾಖಲೆ ಕಲೆಹಾಕಿದ್ದ ಐಟಿ, ಲಭ್ಯವಾದ ಮಾಹಿತಿ ಆಧರಿಸಿ ದಾಖಲೆಗಳ ಪರಿಶೀಲನೆ ಮಾಡಲಾಗುತ್ತಿದೆ. 4 ಕಾರುಗಳಲ್ಲಿ ಬಂದಿದ್ದ 7ಕ್ಕೂ ಹೆಚ್ಚು ಯಟಿ ಅಧಿಕಾರಿಗಳಿಂದ ರಾತ್ರಿವರೆಗೂ ಪರಿಶೀಲನೆ ಮುಂದುವರಿಯುವ ಸಾಧ್ಯತೆ ಇದೆ ಎಂದು ತಿಳಿದುಬಂದಿದೆ.

ಇದನ್ನೂ ಓದಿ: ಯಡಿಯೂರಪ್ಪ, ವಿಜಯೇಂದ್ರ ಆಪ್ತರ ವಿರುದ್ಧ ಶಾಸಕ ಯತ್ನಾಳ್ ಐಟಿ ದಾಳಿ ಮಾಡಿಸಿದ್ದಾರಾ ಹೇಗೆ: ಹೆಚ್​ಡಿ ಕುಮಾರಸ್ವಾಮಿ ಪ್ರಶ್ನೆ

ಇದನ್ನೂ ಓದಿ: ನೀರಾವರಿ ಗುತ್ತಿಗೆದಾರರ ಮನೆಗಳ ಮೇಲೆ ಐಟಿ ದಾಳಿ: ಮುಸುಕಿನ ಗುದ್ದಾಟದಿಂದ ಹೊರಬಂತೆ ಹುಳುಕು

TV9 Kannada

Leave a comment

Your email address will not be published. Required fields are marked *