ಯಾವುದಕ್ಕೂ ಇರಲಿ ಎಂದು ಬಾಟಲಿಯಲ್ಲಿ ಮೂತ್ರ ಮಾಡಿಟ್ಟುಕೊಂಡಿದ್ದೆವು; ರೋಪ್​ ವೇದಲ್ಲಿ ಸಿಲುಕಿದವರ ಭಯಾನಕ ಅನುಭವ | Urinated in bottle to drink says Jharkhand Deoghar ropeway survivor


ಯಾವುದಕ್ಕೂ ಇರಲಿ ಎಂದು ಬಾಟಲಿಯಲ್ಲಿ ಮೂತ್ರ ಮಾಡಿಟ್ಟುಕೊಂಡಿದ್ದೆವು; ರೋಪ್​ ವೇದಲ್ಲಿ ಸಿಲುಕಿದವರ ಭಯಾನಕ ಅನುಭವ

ರೋಪ್​ ವೇ ದುರಂತ ನಡೆದ ಸ್ಥಳ

ಜಾರ್ಖಂಡ್​ನ ದಿಯೋಘಡ್​​ನಲ್ಲಿ ನಡೆದ ಕೇಬಲ್​ ಕಾರು ಅಪಘಾತದಲ್ಲಿ ಇದುವರೆಗೆ ಮೃತಪಟ್ಟವರು ಮೂರು ಮಂದಿ. 45 ತಾಸುಗಳ ಕಾರ್ಯಾಚರಣೆ ಬಳಿಕ ಇಂದು ರೋಪ್​ ವೇದಲ್ಲಿ ಸಿಕ್ಕಿಬಿದ್ದವರ ಕಾರ್ಯಾಚರಣೆ ಪೂರ್ಣಗೊಂಡಿದೆ.ಇಂದು 15 ಜನರನ್ನು ರಕ್ಷಿಸಲಾಗಿದೆ. ಈ ಕಾರ್ಯಾಚರಣೆಯಲ್ಲಿ ಭಾರತೀಯ ವಾಯುಸೇನೆಯೂ ಪಾಲ್ಗೊಂಡಿತ್ತು. ಹೀಗೆ ಕೇಬಲ್​ ಕಾರು ಅಪಘಾತದಲ್ಲಿ ಸಿಲುಕಿ, ಪಾರಾಗಿ ಬಂದವರದು ಒಬ್ಬೊಬ್ಬರದೂ ಒಂದೊಂದು ಅನುಭವ. ಅದರಲ್ಲಿ ತಮ್ಮ ಕುಟುಂಬದ ಆರು ಮಂದಿಯೊಂದಿಗೆ ಸಿಲುಕಿದ್ದ ವಿನಯ್​ ಕುಮಾರ್ ದಾಸ್​ ಪ್ರತಿಕ್ರಿಯಿಸಿ, ನಾವಲ್ಲಿ ಸಿಲುಕಿದ್ದು ನಿಜಕ್ಕೂ ಭಯಾನಕವಾಗಿತ್ತು. ನಾವು ಬಾಟಲಿಯಲ್ಲಿ ನಮ್ಮ ಮೂತ್ರವನ್ನು ತುಂಬಿಸಿಕೊಂಡಿದ್ದೆವು. ಒಂದೊಮ್ಮೆ ಕುಡಿಯಲು ನೀರು ಬೇಕೆಂದಾದರೆ ಅದು ಸಿಗುವುದಿಲ್ಲ. ಆಗ ಮೂತ್ರವನ್ನೇ ಕುಡಿಯಬಹುದು ಎಂಬುದು ನಮ್ಮ ಆಲೋಚನೆಯಾಗಿತ್ತು ಎಂದು ಹೇಳಿದ್ದಾರೆ. 

ಹಾಗೇ, ರೋಪ್​ವೇ ಟ್ರೋಲಿಯಲ್ಲಿ ಸಿಲುಕಿದ್ದ ಬಿಹಾರದ ಮಧುಬಾನಿ ಜಿಲ್ಲೆಯ ನಿವಾಸಿಯೊಬ್ಬರು ಮಾತನಾಡಿ, ನಾವು ಬದುಕಿ ಬರುತ್ತೇವೆ ಎಂಬ ಯಾವುದೇ ಭರವಸೆಯೂ ಇರಲಿಲ್ಲ. ಆದರೆ ರಕ್ಷಣಾ ತಂಡದವರು ನಮ್ಮನ್ನು ಕಾಪಾಡಿದರು ಎಂದು ಹೇಳಿದ್ದಾರೆ. ಆದರೆ ಅವರ ಜತೆಗಿದ್ದ ಮಗುವೊಂದು ಏನೂ ಅರಿಯದೆ, ನಾವಲ್ಲಿ ಇದ್ದಿದ್ದು ತುಂಬ ಫನ್ನಿಯಾಗಿತ್ತು. ಆ ಹಗ್ಗವನ್ನು ಎಳೆದಾಗ ಬಾರಿ ಮಜಾ ಬಂತು ಎಂದು ಹೇಳಿದೆ. ಹಾಗೇ ಇನ್ನೊಬ್ಬಳು ಹುಡುಗಿ ಪ್ರತಿಕ್ರಿಯೆ ನೀಡಿ, ನನಗಂತೂ ಸಿಕ್ಕಾಪಟೆ ಭಯವಾಗಿತ್ತು. ಅದರಲ್ಲೂ ಟ್ರೋಲಿ ಚಲಿಸುತ್ತಿದ್ದಾಗಂತೂ ಜೀವವೇ ಬಾಯಿಗೆ ಬಂದಿತ್ತು. ಆದರೆ ರಾತ್ರಿಯಿಡೀ ನಾವು ಹಸಿವಿನಿಂದ ಕಳೆಯಬೇಕಾಯಿತು. ಮರುದಿನ ಬೆಳಗ್ಗೆ (ಮಂಗಳವಾರ) 11.30ರ ಹೊತ್ತಿಗೆ ನಾವು ತಿಂಡಿ ತಿಂದಿದ್ದೇವೆ ಎಂದು ಹೇಳಿಕೊಂಡಿದ್ದಾಳೆ.

ಏನಾಗಿತ್ತು?

ಜಾರ್ಖಂಡದ ಅತ್ಯಂತ ಎತ್ತರದ ರೋಪ್​ ವೇಯಾದ ತ್ರಿಕೂಟ್​-ದಿಯೋಘರ್​ನಲ್ಲಿ ಭಾನುವಾರ ಸಂಜೆ 5ಗಂಟೆ ಹೊತ್ತಿಗೆ ಎರಡು ಕೇಬಲ್​ ಕಾರುಗಳು ಡಿಕ್ಕಿ ಹೊಡೆದುಕೊಂಡಿದ್ದವು. ಹೀಗಾಗಿ ಇಡೀ ರೋಪ್​ ವೇಯ ಕಾರ್ಯಾಚರಣೆ ಸ್ಥಗಿತಗೊಂಡಿತ್ತು. ಈ ಕಾರಣದಿಂದಾಗಿ ಸುಮಾರು 70 ಮಂದಿ ರೋಪ್​ ವೇ ಟ್ರೋಲಿಗಳ ಮೇಲೆ ಸಿಲುಕಿದ್ದರು. ಅವರನ್ನು ರಕ್ಷಿಸುವ ಕಾರ್ಯ ಕೂಡಲೇ ಪ್ರಾರಂಭವಾಗಿ, ಭಾರತೀಯ ವಾಯುಸೇನೆಯೂ ಕೈಜೋಡಿಸಿತ್ತು. ಆದರೆ ಈ ವೇಳೆ ಮೂವರು ಮೃತಪಟ್ಟಿದ್ದರು. ಅಲ್ಲಿ ಸಿಲುಕಿದ್ದವರಿಗೆ ಆಹಾರ ಮತ್ತು ನೀರನ್ನು ಡ್ರೋನ್​ ಮೂಲಕ ಕೊಡಲಾಗಿತ್ತು.

TV9 Kannada


Leave a Reply

Your email address will not be published.