ಜಿನೀವಾ: ಕೋವಿಡ್ 19 ಸೋಂಕಿತರಿಗೆ ರೆಮೆಡಿಸಿವಿರ್ ಔಷಧಿ ನೀಡುವುದನ್ನು ವಿಶ್ವ ಆರೋಗ್ಯ ಸಂಸ್ಥೆ ಕೈಬಿಟ್ಟಿದೆ.

ಈ ಸಂಬಂಧ ಸುದ್ದಿ ಸಂಸ್ಥೆಗೆ ಪ್ರತಿಕ್ರಿಯಿಸಿದ ಡಬ್ಯೂಎಚ್‍ಒ ವಕ್ತಾರ ತಾರಿಕ್ ಜಸರೆವಿಕ್, ರೆಮಿಡಿಸಿವಿರ್ ಔಷಧಿಯನ್ನು ಕೊರೊನಾಗೆ ನೀಡುವ ಔಷಧಿಗಳ ಪಟ್ಟಿಯಿಂದ ಅಮಾನತಿನಲ್ಲಿಟ್ಟಿದ್ದೇವೆ. ಅನಾರೋಗ್ಯದಲ್ಲಿರುವ ರೋಗಿಗಳ ಮೇಲೆ ಈ ಔಷಧ ಪರಿಣಾಮಕಾರಿಯಾಗಿ ಬಳಕೆಯಾಗುತ್ತದೆ ಎಂಬುದಕ್ಕೆ ಯಾವುದೇ ಪುರಾವೆಗಳಿಲ್ಲ ಎಂದು ತಿಳಿಸಿದ್ದಾರೆ.

ಪ್ರಪಂಚಾದ್ಯಂತ ಕೊರೋನಾ 2, 3ನೇ ಅಲೆ ತಾಂಡವ ಆಡ್ತಿದೆ. ಅದರಲ್ಲೂ ಭಾರತದಲ್ಲಿ 2ನೇ ಅಲೆಯಲ್ಲಿ ಅಪಾರ ಪ್ರಮಾಣದಲ್ಲಿ ಸಾವು-ನೋವಾಗ್ತಿರೋದಕ್ಕೆ ವಿಶ್ವದ ರಾಷ್ಟ್ರಗಳು ಆತಂಕ ವ್ಯಕ್ತಪಡಿಸಿವೆ. ಈ ಹೊತ್ತಲ್ಲೇ, ಡೆಡ್ಲಿ ವೈರಸ್‍ನಿಂದ ಐಸಿಯು ಸೇರಿ ಜೀವನ್ಮರಣದ ಹೋರಾಟ ನಡೆಸೋ ಸೋಂಕಿತರಿಗೆ ಸಂಜೀವಿನಿ, ಲೈಫ್‍ಲೈನ್ ಅಂತಲೇ ಬಿಂಬಿತವಾಗಿದ್ದ ರೆಮ್‍ಡಿಸಿವಿರ್ ಇಂಜೆಕ್ಷನ್‍ಗೆ ವಿಶ್ವ ಆರೋಗ್ಯ ಸಂಸ್ಥೆ(ಡಬ್ಲ್ಯೂಎಚ್‍ಒ) ಬ್ರೇಕ್ ಹಾಕಿದೆ. ಕರ್ನಾಟಕದಲ್ಲಿ ಕಳೆದ ತಿಂಗಳಿಂದ ರೆಮ್‍ಡಿಸಿವಿರ್ ದಂಧೆಯೇ ನಡೆದಿತ್ತು. ಆಸ್ಪತ್ರೆಗೆ ದಾಖಲಾದ ಎಲ್ಲಾ ಸೋಂಕಿತರಿಗೂ ರೆಮ್‍ಡಿಸಿವಿರ್ ಕೊಡಬೇಕು ಅನ್ನೋ ಮಟ್ಟಿಗೆ ಚರ್ಚೆ ಆಗಿತ್ತು. ಆದರೀಗ, ಡಬ್ಲ್ಯೂಎಚ್‍ಒ ಆದೇಶ ಆತಂಕ ಹೆಚ್ಚಿಸಿದೆ.

ಸೋಂಕಿತರಿಗೆ ರೆಮ್‍ಡಿಸಿವಿರ್ ಪರಿಣಾಮಕಾರಿ ಎಂಬ ಬಗ್ಗೆ ದಾಖಲೆ ಇಲ್ಲ ಎಂದು ಡಬ್ಲ್ಯೂಎಚ್‍ಒ ತಿಳಿಸಿದೆ. ಮೊದಲಿಗೆ ಪ್ಲಾಸ್ಮಾ ಥೆರಪಿಯನ್ನು ಕೈಬಿಡಲಾಗಿತ್ತು. ಬಳಿಕ ಬ್ಲಾಕ್ ಫಂಗಸ್‍ನಿಂದಾಗಿ ಸ್ಟಿರಾಯ್ಡ್ ಕಡಿಮೆ ಬಳಕೆಗೆ ಸೂಚಿಸಿದೆ. ಆದರೆ ಕೊರೊನಾಗೆ ಪರ್ಯಾಯ ಚಿಕಿತ್ಸಾ ವಿಧಾನವನ್ನು ಡಬ್ಲ್ಯೂಎಚ್‍ಓ ಸೂಚಿಸಿಲ್ಲ. ಹೀಗಾಗಿ ಕೊರೊನಾ ಸೋಂಕಿತರಿಗೆ ಯಾವ ಚಿಕಿತ್ಸೆ ನೀಡಬೇಕು ಎಂಬ ಆತಂಕ ಕಾಡುತ್ತಿದೆ. ಡಬ್ಲ್ಯೂಎಚ್‍ಓ ಸೂಚನೆ ಬೆನ್ನಲ್ಲೇ ಕೇಂದ್ರ ಆರೋಗ್ಯ ಇಲಾಖೆ ಎಚ್ಚರಿಕೆ ನೀಡಿದೆ.

ಕೊರೊನಾ ವೈರಸ್ ವಿರುದ್ಧದ ಪ್ರಗತಿ ‘ದುರ್ಬಲ’ವಾಗಿದೆ. ಹೀಗಾಗಿ ಅಂತರಾಷ್ಟ್ರೀಯ ಪ್ರಯಾಣವನ್ನು ತಪ್ಪಿಸಬೇಕು. ಆದರೆ ಕೊರೊನಾ ವಿರುದ್ಧದ ಅಧಿಕೃತ ಲಸಿಕೆಗಳು ರೂಪಾಂತರಿ ವೈರಸ್ ವಿರುದ್ಧ ಸಹ ಪರಿಣಾಮಕಾರಿಯಾಗಿವೆ ಎಂದು ವಿಶ್ವ ಆರೋಗ್ಯ ಸಂಸ್ಥೆಯ ಯುರೋಪ್ ನಿರ್ದೇಶಕ ಹ್ಯಾನ್ಸ್ ಕ್ಲುಗೆ ತಿಳಿಸಿದ್ದಾರೆ.

ಈ ಕುರಿತು ಸುದ್ದಿಗೋಷ್ಠಿಯಲ್ಲಿ ತಿಳಿಸಿರುವ ಅವರು, ನಿರಂತರ ಹೆದರಿಕೆ ಹಾಗೂ ಹೊಸ ಅನಿಶ್ಚಿತತೆಯ ಹಿನ್ನೆಲೆಯಲ್ಲಿ ನಾವು ಎಚ್ಚರಿಕೆಯಿಂದ ಮುಂದುವರಿಯಬೇಕು. ಅಂತರಾಷ್ಟ್ರೀಯ ಪ್ರಯಾಣ ಮಾಡುವಾಗ ಆಲೋಚಿಸಬೇಕು, ಇಲ್ಲವೇ ಸ್ಥಗಿತಗೊಳಿಸಬೇಕು. ಕೊರೊನಾ ಪ್ರಕರಣಗಳು ಹೆಚ್ಚಿರುವುದರಿಂದ ಬೇಗ ಹರಡುತ್ತದೆ ಎಂದು ಅವರು ತಿಳಿಸಿದ್ದಾರೆ.

ಭಾರತದಲ್ಲಿರುವ ವೈರಸ್ ಬಹುಬೇಗ ಹರಡುತ್ತಿದೆ. ಡಬ್ಲ್ಯೂಎಚ್‍ಒ ಯುರೋಪ್ ಪ್ರದೇಶದ 53 ದೇಶಗಳ ಪೈಕಿ ಕನಿಷ್ಠ 26 ದೇಶಗಳಲ್ಲಿ ಈ ವೈರಸ್ ಪತ್ತೆಯಾಗಿದೆ. ಆದರೆ ಅಧಿಕೃತ ಲಸಿಕೆಗಳು ರೂಪಾಂತರಿ ವಿರುದ್ಧ ಪರಿಣಾಮಕಾರಿಯಾಗಿವೆ. ಎಲ್ಲ ರೂಪಾಂತರಿ ವೈರಸ್ ವಿರುದ್ಧ ಸಹ ವ್ಯಾಕ್ಸಿನ್ ಗಳು ಪ್ರಬಲ ಪರಿಣಾಮ ಬೀರುತ್ತವೆ. ಅಲ್ಲದೆ ಸಾರ್ವಜನಿಕ ಆರೋಗ್ಯ ಹಾಗೂ ಸಾಮಾಜಿಕ ಕ್ರಮಗಳಿಂದ ಎಲ್ಲ ರೂಪಾಂತರಿ ವೈರಸ್‍ನ್ನು ನಿಯಂತ್ರಿಸಬಹುದು ಎಂದು ಕ್ಲುಗೆ ಹೇಳಿದ್ದಾರೆ.

ಲಸಿಕೆಗಳು ಸುರಂಗದ ಕೊನೆಯಲ್ಲಿನ ಬೆಳಕಾಗಿರಬಹುದು, ಆ ಬೆಳಕಿನಿಂದ ನಾವು ಕುರುಡಾಗಲು ಸಾಧ್ಯವಿಲ್ಲ ಎಂದು ತಿಳಿಸಿದ್ದಾರೆ. ಈ ಮೂಲಕ ಲಸಿಕೆ ಮಹತ್ವವನ್ನು ವಿವರಿಸಿದ್ದು, ಎಲ್ಲ ರೂಪಾಂತರಿ ವೈರಸ್‍ಗಳಿಗೆ ಲಸಿಕೆಗಳು ಪರಿಣಾಮಕಾರಿ ಎಂದು ಒತ್ತಿ ಹೇಳಿದ್ದಾರೆ.

The post ಯಾವುದೇ ಪುರಾವೆಗಳಿಲ್ಲ – ರೆಮಿಡಿಸಿವಿರ್ ಔಷಧಿಯನ್ನು ಕೈಬಿಟ್ಟ ಡಬ್ಲ್ಯೂಎಚ್‍ಒ appeared first on Public TV.

Source: publictv.in

Source link