‘ಯಾವ ಉಡುಪು ಧರಿಸಬೇಕು ಎಂಬ ಅರಿವಿರದ ದಡ್ಡಿ ನಾನಲ್ಲ’; ಟ್ರೋಲಿಗರಿಗೆ ಖಾರವಾಗಿ ಪ್ರತಿಕ್ರಿಯಿಸಿದ ಮಲೈಕಾ | Malaika Arora talks about dresses and says I am not silly and stupid


‘ಯಾವ ಉಡುಪು ಧರಿಸಬೇಕು ಎಂಬ ಅರಿವಿರದ ದಡ್ಡಿ ನಾನಲ್ಲ’; ಟ್ರೋಲಿಗರಿಗೆ ಖಾರವಾಗಿ ಪ್ರತಿಕ್ರಿಯಿಸಿದ ಮಲೈಕಾ

ಮಲೈಕಾ ಅರೋರಾ

ಮಲೈಕಾ ಅರೋರಾ ಬಾಲಿವುಡ್ ಡಾನ್ಸರ್ ಆಗಿ, ನಟಿಯಾಗಿ ಖ್ಯಾತಿ ಗಳಿಸಿದವರು. ಅದರಲ್ಲೂ ಅವರು ಐಟಂ ಸಾಂಗ್​ಗಳಿಗೆ (Item Songs) ಹೆಜ್ಜೆ ಹಾಕಲು ಹೆಸರುವಾಸಿ. ಸದ್ಯ ಯಾವುದೇ ಚಿತ್ರಗಳಲ್ಲಿ ಅವರು ಕಾಣಿಸಿಕೊಳ್ಳುತ್ತಿಲ್ಲವಾದರೂ, ರಿಯಾಲಿಟಿ ಶೋಗಳಲ್ಲಿ ಸಕ್ರಿಯರಾಗಿದ್ದಾರೆ. ಮಲೈಕಾಗೆ (Malaika Arora) ದೊಡ್ಡ ಅಭಿಮಾನಿ ಬಳಗವೇ ಇದೆ ಹಾಗೇ ಅವರನ್ನು ಕಾಲೆಳೆಯುವವರೂ ಇದ್ದಾರೆ. ವಿಶೇಷವಾಗಿ ಬೋಲ್ಡ್ ಡ್ರೆಸ್​​ಗಳ ಮೂಲಕ ಈ ಬಾಲಿವುಡ್ ಬೆಡಗಿ ಆಗಾಗ ಸುದ್ದಿಯಾಗುತ್ತಾರೆ. ಇತ್ತೀಚೆಗಷ್ಟೇ ನಟಿ ಮತ್ತೊಮ್ಮೆ ತಮ್ಮ ಡ್ರೆಸ್ ಕಾರಣದಿಂದ ಟೀಕೆಗೆ ಗುರಿಯಾಗಿದ್ದರು. ಸಾಮಾಜಿಕ ಜಾಲತಾಣಗಳಲ್ಲಿ (Social Media) ಜನರು ಇಷ್ಟೆಲ್ಲಾ ಟೀಕೆ ಎದುರಾದರೂ ಅವೆಲ್ಲವನ್ನೂ ನಿರ್ಲಕ್ಷದಿಂದ ನೋಡುತ್ತಾರೆ ಮಲೈಕಾ. ಅಲ್ಲದೇ ತಾವು ಏನು ಧರಿಸಬೇಕು ಎಂಬುದು ತಮ್ಮ ಆಯ್ಕೆ ಎಂದು ಅವರು ಕಟ್ಟುನಿಟ್ಟಾಗಿ ಹೇಳಿದ್ದಾರೆ. ‘‘ಏನು ಧರಿಸಬೇಕು, ಏನು ಧರಿಸಬಾರದು ಎಂಬುದು ನಮ್ಮ ಆಯ್ಕೆ, ಯಾವುದು ನನಗೆ ಹೊಂದುತ್ತದೆ ಎಂಬುದನ್ನು ತಿಳಿಯದಷ್ಟು ದಡ್ಡಿ ನಾನಲ್ಲ’’ ಎಂದು ಖಾರವಾಗಿ ಪ್ರತಿಕ್ರಿಯಿಸಿದ್ದಾರೆ ಮಲೈಕಾ.

ಬಾಲಿವುಡ್ ಬಬಲ್ ಜತೆ ಮಾತನಾಡಿರುವ ಮಲೈಕಾ, ಉಡುಪಿನ ಬಗ್ಗೆ ಮೊದಲಿನಿಂದಲೂ ತಾವು ಪ್ರಶ್ನೆಗಳನ್ನು ಎದುರಿಸುತ್ತಲೇ ಬಂದಿದ್ದೇನೆ ಎಂದು ಹೇಳಿಕೊಂಡಿದ್ದಾರೆ. ‘‘ಮಹಿಳೆಯರ ಉಡುಪಿನ ಆಧಾರದಲ್ಲಿ ಅವರನ್ನು ಸಮಾಜ ಅಳೆಯುತ್ತದೆ. ನಾನು ನನ್ನ ಬದುಕನ್ನು ಬೇರೆಯವರು ಹೇಳುತ್ತಾರೆ ಎಂದು ಅವರಿಗೆ ಬೇಕಾದಂತೆ ಬದುಕಬೇಕಾಗಿಲ್ಲ. ನಾನೂ ಇತರರಿಗೆ ನೀನ್ಯಾಕೆ ಹೀಗೆ ಬಟ್ಟೆ ಧರಿಸಿದ್ದಿ? ಎಂದು ಪ್ರಶ್ನಿಸುವುದಿಲ್ಲ. ಹಾಗೆಯೇ ನನ್ನ ಕುರಿತೂ ಇತರರು ಪ್ರಶ್ನಿಸಿದರೆ ತಲೆಕೆಡಿಸಿಕೊಳ್ಳುವುದಿಲ್ಲ’’ ಎಂದಿದ್ದಾರೆ ಮಲೈಕಾ.

‘‘ಯಾವುದೇ ಉಡುಪು ಧರಿಸಿದಾಗ ನಮಗೆ ಹಿತವಾದ ಅನುಭವವಾಗಬೇಕು. ನನಗೆ ಯಾವ ದಿರಿಸು ಹೊಂದುತ್ತದೆ ಅಥವಾ ಹೊಂದುವುದಿಲ್ಲ ಎಂಬುದರ ಅರಿವು ನನಗಿದೆ. ನಾನೇನು ಸಿಲ್ಲಿ ಅಥವಾ ದಡ್ಡಿಯಲ್ಲ. ಯಾವುದು ಅತಿಯಾಯ್ತು ಅನ್ನಿಸುತ್ತದೋ ಅದನ್ನು ನಾನು ಧರಿಸುವುದಿಲ್ಲ. ಒಂದು ವೇಳೆ ಧರಿಸಿದರೆ ಅದನ್ನು ನನ್ನ ಆಯ್ಕೆಯೇ ಹೊರತು ಬೇರೆಯವರು ಅದರಲ್ಲಿ ಮೂಗು ತೂರಿಸುವ ಅವಶ್ಯಕತೆ ಇಲ್ಲ’’ ಎಂದು ಮಲೈಕಾ ಕಾಲೆಳೆಯುವವರಿಗೆ ಖಡಕ್ ಆಗಿ ಉತ್ತರಿಸಿದ್ದಾರೆ.

ಮಲೈಕಾ ಅರೋರಾ ಬಾಲಿವುಡ್​ನಲ್ಲಿ ನೃತ್ಯದಿಂದಲೇ ಛಾಪು ಮೂಡಿಸಿದವರು. ‘ಚಯ್ಯ ಚಯ್ಯ’, ‘ಮಾಹಿ ವೆ’, ‘ಕಾಲ್ ಧಮಾಲ್’, ‘ಮುನ್ನಿ ಬದನಾಮ್ ಹೋಯಿ’ ಮೊದಲಾದ ಸೂಪರ್ ಹಿಟ್ ಗೀತೆಗಳಿಗೆ ಹೆಜ್ಜೆ ಹಾಕುವ ಮೂಲಕ ಜನಪ್ರಿಯತೆ ಪಡೆದವರು.

TV9 Kannada


Leave a Reply

Your email address will not be published. Required fields are marked *