ಕೊವ್ಯಾಕ್ಸಿನ್
ಭಾರತ್ ಬಯೋಟೆಕ್ನ ಕೊವ್ಯಾಕ್ಸಿನ್ ಲಸಿಕೆಯನ್ನು ಮಕ್ಕಳ ಮೇಲೆ ತುರ್ತು ಬಳಕೆಗೆ ಅನುಮೋದನೆ ನೀಡಬೇಕು ಎಂದು ಯುಎಸ್ ಆಹಾರ ಮತ್ತು ಔಷಧ ಆಡಳಿತ (US Food And Drug Administration)ಕ್ಕೆ ಭಾರತ್ ಬಯೋಟೆಕ್ ಕಂಪನಿಯ ಅಮೆರಿಕ ಪಾಲುದಾರ ಕಂಪನಿ Ocugen Inc ಮನವಿ ಸಲ್ಲಿಸಿದೆ. ಭಾರತದಲ್ಲಿ ಭಾರತ್ ಬಯೋಟೆಕ್ ಕಂಪನಿಯು 2-18ವರ್ಷದ ಸುಮಾರು 526 ಜನರ ಮೇಲೆ ಕೊವ್ಯಾಕ್ಸಿನ್ 2/3ನೇ ಹಂತದ ಪ್ರಯೋಗ ನಡೆಸಿದ ವರದಿಯನ್ನು ಆಧರಿಸಿ ಈ Ocugen Inc (ಒಕುಜೆನ್) ಕಂಪನಿ ಅಮೆರಿಕದಲ್ಲೂ ಮಕ್ಕಳ ಮೇಲೆ ಕೊವ್ಯಾಕ್ಸಿನ್ ಲಸಿಕೆ ಬಳಸಲು ಅನುಮತಿ ನೀಡಬೇಕು ಎಂದು ಮನವಿ ಮಾಡಿದೆ.
ಯುಎಸ್ನಲ್ಲಿ ಮಕ್ಕಳ ಮೇಲೆ ಕೊವ್ಯಾಕ್ಸಿನ್ ಲಸಿಕೆಯ ತುರ್ತು ಬಳಕೆಗೆ ಅವಕಾಶ ಕೋರಿ ಮನವಿ ಮಾಡಿರುವುದು ಕೊವಿಡ್ 19 ವಿರುದ್ಧ ಹೋರಾಟದಲ್ಲಿ ಇಟ್ಟ ಮತ್ತೊಂದು ಮಹತ್ವದ ಹೆಜ್ಜೆಯಾಗಿದೆ ಎಂದು ಒಕುಜೆನ್ ಕಂಪನಿಯ ಸಹ-ಸಂಸ್ಥಾಪಕ, ಸಿಇಒ ಶಂಕರ್ ಮುಸುನುರಿ ತಿಳಿಸಿದ್ದಾರೆ. ಹಾಗೇ, ಕೊವಿಡ್ 19 ಸಾಂಕ್ರಾಮಿಕ ಜಗತ್ತಿನಾದ್ಯಂತ 5 ಮಿಲಿಯನ್ ಗೂ ಅಧಿಕ ಜನರನ್ನು ಬಲಿಪಡೆದಿದೆ. ಈ ರೋಗದ ವಿರುದ್ಧ ಮಕ್ಕಳಿಗೆ ಲಸಿಕೆ ನೀಡುವುದು ಅತ್ಯಗತ್ಯ. ಇದೀಗ ಕೊವ್ಯಾಕ್ಸಿನ್ ಲಸಿಕೆಯನ್ನು 2-18ವರ್ಷದವರೆಗಿನವರಿಗೆ ನೀಡಲು ಯುಎಸ್ ಆಹಾರ ಮತ್ತು ಔಷಧ ಆಡಳಿತ ಅನುಮತಿ ನೀಡಿದರೆ, ಪಾಲಕರಿಗೆ ತಮ್ಮ ಮಕ್ಕಳನ್ನು ಕೊವಿಡ್ 19 ನಿಂದ ಸುರಕ್ಷಿತ ಮಾಡಲು ದಾರಿ ಸಿಕ್ಕಂತಾಗುತ್ತದೆ ಎಂದೂ ಶಂಕರ್ ಅಭಿಪ್ರಾಯಪಟ್ಟಿದ್ದಾರೆ.