ಯುದ್ಧಭೀತಿ.. ಉಕ್ರೇನ್‌ನಲ್ಲಿ ಆತಂಕಕ್ಕೆ ಸಿಲುಕಿದ ಭಾರತೀಯರು


ಉಕ್ರೇನ್ ಬಿಕ್ಕಟ್ಟು ತಿಳಿಗೊಳ್ಳೋ ಯಾವುದೇ ಲಕ್ಷಣಗಳು ಸದ್ಯಕ್ಕೆ ಗೋಚರಿಸ್ತಿಲ್ಲ. ಬದಲಿಗೆ ದಿನೇ ದಿನೆ ಈ ಬಿಕ್ಕಟ್ಟು ಮತ್ತಷ್ಟು ಜಟೀಲಗೊಳ್ತಿದೆ. ನಿನ್ನೆ ಯುಎಸ್‌ ಅಧಿಕಾರಿಗಳಿಗೆ ರಾಯಭಾರಿ ಕಚೇರಿ ಖಾಲಿ ಮಾಡುವಂತೆ ಎಚ್ಚರಿಕೆ ನೀಡಿದ್ದ ರಷ್ಯಾಗೆ ಇಂದು ಅಮೆರಿಕಾ ತಿರುಗೇಟು ನೀಡಿದೆ. ಈ ವಿಚಾರ ಉಕ್ರೇನ್‌ನಲ್ಲಿನ ಯುದ್ಧಭೀತಿಯನ್ನ ಮತ್ತಷ್ಟು ಹೆಚ್ಚುವಂತೆ ಮಾಡಿದೆ.

ಜಗತ್ತಿನ ದೊಡ್ಡ ರಾಷ್ಟ್ರಗಳೆಂದೇ ಗುರುತಿಸಿಕೊಂಡ ಅಮೆರಿಕಾ ಮತ್ತು ರಷ್ಯಾ ಸಮರ ಸಾರೋ ಉತ್ಸುಕತೆಯಲ್ಲಿದ್ದಂತೆ ಕಾಣುತ್ತೆ. ಇಬ್ಬರ ಜಗಳಕ್ಕೆ ಉಕ್ರೇನ್‌ ನೆಲವನ್ನೇ ಬಳಸಿಕೊಳ್ತಾವಾ ಅನ್ನೋ ಆತಂಕವೂ ಬಲಗೊಳ್ತಿದೆ. ಎರಡೂ ರಾಷ್ಟ್ರಗಳು ಯುದ್ಧ ಸಾರೋ ಬಗ್ಗೆ ದಿನಕ್ಕೊಂದು ಹೇಳಿಕೆ ನೀಡಿ ಜಟಾಪಟಿಗೆ ಇಳಿದಿವೆ. 

ಒಂದ್ಕಡೆ ರಷ್ಯಾ ಅಧ್ಯಕ್ಷ ಪುಟಿನ್‌ ಉಕ್ರೇನ್‌ ಮೇಲೆ ಹಿಡಿತ ಸಾಧಿಸೋಕೆ ಹವಣಿಸುತ್ತಿದ್ದಾರೆ. ಈಗಾಗಲೇ ಉಕ್ರೇನ್‌ ಸುತ್ತಲೂ ರಷ್ಯಾ ಸೇನೆ ನಿಯೋಜಿಸಿ ರಣಜಾಲ ಹೆಣೆದಿದ್ದಾರೆ. ಅಲ್ಲದೆ, ಯುದ್ಧಕ್ಕೆ ಪ್ರಚೋಧಿಸುವ ಹೇಳಿಕೆಯನ್ನು ನೀಡಿ ಅಮೆರಿಕಾವನ್ನ ಕೆರಳುವಂತೆ ಮಾಡ್ತಿದ್ದಾರೆ.

ಇನ್ನು ರಷ್ಯಾ ಹೇಳಿಕೆಗೆ ಅಮೆರಿಕಾ ಕೂಡ ತಿರುಗುಬಾಣ ಬಿಟ್ಟಿದೆ. ಈ ಬಗ್ಗೆ ಅಂತಾರಾಷ್ಟ್ರೀಯವಾಗಿಯೇ ಹೇಳಿಕೆ ನೀಡಿರೋ ಯುಎಸ್‌ ಅಧ್ಯಕ್ಷ ಜೋ ಬೈಡೆನ್‌ ರಷ್ಯಾಗೆ ಎಚ್ಚರಿಕೆಯ ಸಂದೇಶ ರವಾನಿಸಿದ್ದಾರೆ. ರಾಜತಾಂತ್ರಿಕತೆಯ ಮೂಲಕ ಉಕ್ರೇನ್ ಬಿಕ್ಕಟ್ಟನ್ನು ಪರಿಹರಿಸಲು ಇನ್ನೂ ಸಮಯವಿದೆ. ಅಲ್ಲದೆ, ಈ ವಿಚಾರದಲ್ಲಿ ಏನೇ ಘಟನೆ ಸಂಭವಿಸಿದರೂ ಅದನ್ನೇದುರಿಸಲು ಯುಎಸ್‌ ಸಿದ್ಧವಾಗಿದೆ. ಉಕ್ರೇನ್ ಮೇಲಿನ ರಷ್ಯಾದ ದಾಳಿಗೆ ನಾವು ಪ್ರತ್ಯುತ್ತರ ನೀಡಲು ಬದ್ಧರಿದ್ದೇವೆ ಅಂತಾ ಹೇಳೋ ಮೂಲಕ ಯುದ್ಧಕ್ಕೆ ಅಮೆರಿಕಾ ಸಿದ್ಧ ಅಂತಾ ನೇರವಾಗಿಯೇ ಬೆಂಕಿಯುಂಡೆ ಹಾರಿಸಿದ್ದಾರೆ.

ಉಕ್ರೇನ್‌ ಮೇಲೆ ರಷ್ಯಾದಿಂದ ಸೈಬರ್‌ ಅಟ್ಯಾಕ್‌
ಇದಲ್ಲದೆ ಉಕ್ರೇನ್‌ನ ಸರ್ಕಾರಿ ಬ್ಯಾಂಕ್‌ಗಳು ಮತ್ತು ಸರ್ಕಾರಿ ಏಜೆನ್ಸಿಗಳ ಮೇಲೆ ಈಗಾಗ್ಲೆ ರಷ್ಯಾ ಸೈಬರ್ ದಾಳಿ ನಡೆಸಿದೆ ಎಂಬ ವಿಚಾರವೂ ಹೊರಬಿದ್ದಿದೆ. ಉಕ್ರೇನ್ ರಕ್ಷಣಾ, ವಿದೇಶಾಂಗ ಮತ್ತು ಸಂಸ್ಕೃತಿ ಸಚಿವಾಲಯಗಳು ಸೇರಿದಂತೆ ಉಕ್ರೇನ್‌ನ ಎರಡು ದೊಡ್ಡ ಸ್ಟೇಟ್ ಬ್ಯಾಂಕ್‌ಗಳ ಮೇಲೆ ಸೈಬರ್‌ ಅಟ್ಯಾಕ್‌ ನಡೆದಿದೆ. ದಾಳಿಯಿಂದಾಗಿ ಕನಿಷ್ಠ 10 ಉಕ್ರೇನಿಯನ್ ವೆಬ್‌ಸೈಟ್‌ಗಳು ಕಾರ್ಯನಿರ್ವಹಿಸುವುದನ್ನ ನಿಲ್ಲಿಸಿವೆ. ಈ ಸೈಬರ್‌ ದಾಳಿಯೇ ಉಕ್ರೇನ್‌ ಮೇಲಿನ ಯುದ್ಧದ ಮೊದಲನೇ ಹಂತ ಎಂದು ಪ್ರಚುರಗೊಂಡಿದೆ.

ಉಕ್ರೇನ್‌ನಿಂದ ಭಾರತೀಯರ ಕರೆತರಲು ಕೇಂದ್ರದ ಚಿಂತನೆ
ಉಕ್ರೇನ್‌ನಲ್ಲಿ ನೆಲೆಸಿರುವ ಭಾರತೀಯರನ್ನ ತಾಯ್ನಾಡಿಗೆ ವಾಪಸ್ ಕರೆಸಿಕೊಳ್ಳಲು ಭಾರತ ಸರ್ಕಾರ ನಿರ್ಧರಿಸಿದೆ. ಈ ಬಗ್ಗೆ ಉಕ್ರೇನ್‌ನ ಉನ್ನತ ಅಧಿಕಾರಿಗಳೊಂದಿಗೆ ಚರ್ಚಿಸಲು ಸಂಸದೀಯ ಸಮಿತಿ ಮುಂದಾಗಿದೆ. ವಿಮಾನ ಟಿಕೆಟ್ ಅಲಭ್ಯ ಬಗ್ಗೆ ಉಕ್ರೇನ್‌ನಲ್ಲಿರುವ ಭಾರತೀಯರು ಆತಂಕಕ್ಕೆ ಒಳಗಾಗಿದ್ದು, ನಿಮ್ಮ ಸುರಕ್ಷತೆ ನಮ್ಮ ಹೊಣೆ. ಯಾರೂ ಭೀತಿಗೆ ಒಳಗಾಗಬೇಡಿ ಎಂದು ಭಾರತ ಅಭಯ ನೀಡಿದೆ.

ಮಾತ್ರವಲ್ಲ, ಸಂಕಷ್ಟಕ್ಕೆ ಸಿಲುಕಿದವರ ರಕ್ಷಣೆಗಾಗಿ ಹೆಲ್ಪ್​ಲೈನ್ ತೆರೆಯಲಾಗಿದೆ. ಜೊತೆಗೆ ಭಾರತ ಮತ್ತು ಉಕ್ರೇನ್ ನಡುವೆ ಎಂದಿನಂತೆ ವಿಮಾನ ಸಂಚಾರ ಯಾವುದೇ ನಿರ್ಬಂಧ ಇಲ್ಲದೇ ಇರಲಿದೆ.

ಒಟ್ನಲ್ಲಿ, ಉಕ್ರೇನ್‌ ಬಿಕ್ಕಟ್ಟು ದಿನದಿನಕ್ಕೂ ಬಿಗಡಾಯಿಸುತ್ತಿದೆ. ಉಕ್ರೇನ್‌ ಯುದ್ಧವನ್ನ ರಷ್ಯಾ ಮತ್ತು ಅಮೆರಿಕಾ ಪ್ರತಿಷ್ಠೆಯಾಗಿ ಪರಿಗಣಿಸಿವೆ. ಎರಡೂ ಕೂಡ ಸೋಲೊಪ್ಪಿಕೊಳ್ಳುವುದಕ್ಕೆ ಸುತಾರಾಂ ತಯಾರಿಲ್ಲ. ಇದು ಹೀಗೆ ಮುಂದುವರೆದೂ ಇನ್ನೇನು ಅವಾಂತರ ಸೃಷ್ಟಿಸುತ್ತೋ ಅನ್ನೋ ಭೀತಿ ಜಗತ್ತನ್ನ ಕಾಡುತ್ತಿದೆ.

News First Live Kannada


Leave a Reply

Your email address will not be published. Required fields are marked *