
ಶಶಿ ತರೂರ್
ಅಕ್ಕಿ, ಗೋಧಿ ಸೇರಿದಂತೆ ಮುಂತಾದ ಅಗತ್ಯ ವಸ್ತುಗಳ ಬೆಲೆಗಳನ್ನು ಯುಪಿಎ ಮತ್ತು ಎನ್ಡಿಎಗೆ ಹೋಲಿಕೆ ಮಾಡಿ ಕಾಂಗ್ರೆಸ್ ಸಂಸದ ಶಶಿ ತರೂರ್, ಟ್ವಿಟರ್ ಖಾತೆಯಲ್ಲಿ ಪೋಸ್ಟರ್ ಹಂಚಿಕೊಂಡಿದ್ದಾರೆ.
ಸದ್ಯ ದೇಶದಲ್ಲಿ ಅಗತ್ಯ ವಸ್ತುಗಳ ಬೆಲೆ ದುಬಾರಿಯಾಗುತ್ತಿದ್ದು, ಜನರ ಜೇಬಿಗೆ ಕತ್ತರಿ ಬಿದ್ದಂತಾಗಿದೆ. ಅಲ್ಲದೆ, ಬೆಲೆ ಏರಿಕೆ ಬಗ್ಗೆ ಕೇಂದ್ರ ಸರ್ಕಾರದ ವಿರುದ್ಧ ವಿಪಕ್ಷಗಳು ಟೀಕೆ ವ್ಯಕ್ತಪಡಿಸುತ್ತಿದ್ದು, ಪ್ರತಿಭಟನೆಗಳನ್ನೂ ನಡೆಸಿವೆ. ಜೊತೆಗೆ ಸಾಮಾಜಿಕ ಜಾಲತಾಣಗಳಲ್ಲೂ ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಇದೀಗ ಕಾಂಗ್ರೆಸ್ ಸಂಸದ ಶಶಿ ತರೂರ್ (Shashi Tharoor) ಒಂದು ಟ್ವೀಟ್ (Tweet) ಮಾಡಿದ್ದು, ಆಗಿನ ಯುಪಿಎ (UPA) ಅವಧಿಯಲ್ಲಿ ಇದ್ದ ಬೆಲೆಯನ್ನು ಈಗಿನ ಎನ್ಡಿಎ (NDA) ಸರ್ಕಾರದ ಅವಧಿಯಲ್ಲಿನ ಬೆಲೆಗೆ ತಾಳೆ ಮಾಡಿ ಪೋಸ್ಟರ್ ಹಂಚಿಕೊಂಡಿದ್ದಾರೆ.
ಅಕ್ಕಿ, ಗೋಧಿ ಸೇರಿದಂತೆ ಮುಂತಾದ ಅಗತ್ಯ ವಸ್ತುಗಳ ಬೆಲೆಗಳನ್ನು ಯುಪಿಎ ಮತ್ತು ಎನ್ಡಿಎಗೆ ಹೋಲಿಕೆ ಮಾಡಿ ಪೋಸ್ಟರ್ ಅನ್ನು ಹಂಚಿಕೊಂಡಿದ್ದಾರೆ. 2014ರ ಮೇ 1ರ ಸಮಯದಲ್ಲಿ ಇದ್ದ ಬೆಲೆ ಹಾಗೂ 2022ರ ಮೇ 1 ರವರೆಗಿನ ಬೆಲೆಯನ್ನು ಪೋಸ್ಟರ್ನಲ್ಲಿ ತೋರಿಸಲಾಗಿದೆ.
ಯುಪಿಎ ಅವಧಿಯಲ್ಲಿ ಇದ್ದ 26.17 ರೂ. ಅಕ್ಕಿ ಬೆಲೆ ಎನ್ಡಿಎ ಅವಧಿಯಲ್ಲಿ 35.85 ರೂ. ಆಗಿದ್ದು, ಶೇ.37ರಷ್ಟು ಹೆಚ್ಚಳವಾಗಿದೆ. ಗೋಧಿ ಬೆಲೆ ಅಂದು 20.5 ರೂ. ಇತ್ತು. ಎನ್ಡಿಎ ಅವಧಿಯಲ್ಲಿ 28.01ಕ್ಕೆ ಏರುವ ಮೂಲಕ ಶೇ.37ರಷ್ಟು ಗೋಧಿ ಬೇಲೆ ಏರಿಕೆ ಕಂಡಿದೆ. ಗೋಧಿ ಪುಡಿಗೆ ಯುಪಿಎ ಅವಧಿಯಲ್ಲಿ 22.41 ರೂ. ಇತ್ತು. ಎನ್ಡಿಎ ಅವಧಿಗೆ ಆ ಬೆಲೆ 32.02ಕ್ಕೆ ಏರುವ ಮೂಲಕ ಗೋಧಿ ಹಿಟ್ಟಿನ ಬೆಲೆ ಶೇ.43ಕ್ಕೆ ಏರಿದೆ. ಯುಪಿಎ ಅವಧಿಯಲ್ಲಿ ಉದ್ದಿನಬೇಳೆಯ ಬೆಲೆ 65.06 ರೂ. ಇತ್ತು. ಎನ್ಡಿಎ ಅವಧಿಯಲ್ಲಿ 103.55 ರೂ.ಗೆ ತಲುಪುವ ಮೂಲಕ ಉದ್ದಿನಬೆಳೆಯ ಬೆಲೆಯಲ್ಲಿ ಶೇ.59ರಷ್ಟು ಏರಿಕೆಯಾಗಿದೆ ಎಂದು ಪೋಸ್ಟರ್ನಲ್ಲಿ ತಿಳಿಸಲಾಗಿದೆ.