ಯುರೋಪ್​ನಲ್ಲಿ ಕೊರೊನಾ ಹೆಚ್ಚಳದಿಂದ ಜಗತ್ತಿಗೆ ಆತಂಕ; ಆಸ್ಟ್ರಿಯಾ, ನೆದರ್​​ಲ್ಯಾಂಡ್ಸ್​ನಲ್ಲಿ ಲಾಕ್​ಡೌನ್! ಜನರ ಪ್ರತಿಭಟನೆ | Austria and Netherlands imposes lockdown due to increase in cases and cases in India is stable


ಯುರೋಪ್​ನಲ್ಲಿ ಕೊರೊನಾ ಹೆಚ್ಚಳದಿಂದ ಜಗತ್ತಿಗೆ ಆತಂಕ; ಆಸ್ಟ್ರಿಯಾ, ನೆದರ್​​ಲ್ಯಾಂಡ್ಸ್​ನಲ್ಲಿ ಲಾಕ್​ಡೌನ್! ಜನರ ಪ್ರತಿಭಟನೆ

ಆಸ್ಟ್ರಿಯಾದಲ್ಲಿ ಲಾಕ್​ಡೌನ್ ವಿರುದ್ಧ ಪ್ರತಿಭಟನೆಗೆ ಮುಂದಾಗಿರುವ ಜನರು

ಭಾರತದಲ್ಲಿ ಕೊರೋನ ವೈರಸ್ ಸಾಂಕ್ರಾಮಿಕವು ಪ್ರಸ್ತುತ ನಿಯಂತ್ರಣದಲ್ಲಿದ್ದರೂ ಕೂಡ, ಯುರೋಪಿನಲ್ಲಿ ಸೋಂಕು ಹೆಚ್ಚಾಗುತ್ತಿರುವುದು ಜಾಗತಿಕವಾಗಿ ಕಳವಳ ಸೃಷ್ಟಿ ಮಾಡಿದೆ. ಸೋಂಕು ಹೆಚ್ಚಳದಿಂದಾಗಿ ಹಲವಾರು  ಯುರೋಪಿಯನ್ ದೇಶಗಳು ನಿರ್ಬಂಧಗಳನ್ನು ಬಿಗಿಗೊಳಿಸಿವೆ. ಆಸ್ಟ್ರಿಯಾ ರಾಷ್ಟ್ರವ್ಯಾಪಿ ಲಾಕ್‌ಡೌನ್ ಅನ್ನು ಘೋಷಿಸಿದ್ದು, ನೆದರ್ಲ್ಯಾಂಡ್ಸ್ ಸಹ ಲಾಕ್‌ಡೌನ್ ಅನ್ನು ಜಾರಿಗೊಳಿಸಿದೆ. ಇದರೊಂದಿಗೆ ನೆದರ್​ಲ್ಯಾಂಡ್ಸ್​ನಲ್ಲಿ ಲಸಿಕೆ ಪಡೆಯದ ವ್ಯಕ್ತಿಗಳ ಮೇಲೆ ಕೆಲವು ನಿರ್ಬಂಧಗಳನ್ನು ಹಾಕಲು ಯೋಜಿಸಲಾಗುತ್ತಿದ್ದು, ಇದರಿಂದ  ಅಸಮಾಧಾನಗೊಂಡ ನಾಗರಿಕರು ಪ್ರತಿಭಟನೆಗೆ ಮುಂದಾಗಿದ್ದಾರೆ. ಶುಕ್ರವಾರ ರಾತ್ರಿ ಕೋವಿಡ್ ನಿರ್ಬಂಧಗಳ ವಿರುದ್ಧದ ಪ್ರತಿಭಟನೆಗಳು ಹಿಂಸಾತ್ಮಕವಾಗಿ ಮಾರ್ಪಟ್ಟು, ಡಚ್ ಪೊಲೀಸರು ಮುನ್ನೆಚ್ಚರಿಕಾ ಕ್ರಮವಾಗಿ ಗಾಳಿಯಲ್ಲಿ ಗುಂಡು ಹಾರಿಸಿ, ಜಲ ಫಿರಂಗಿ ಹಾರಿಸಿ ಗುಂಪು ಚದುರಿಸಿದ್ದಾರೆ. ಈ ಘಟನೆಯಲ್ಲಿ ಇಬ್ಬರು ಗಾಯಗೊಂಡಿದ್ದಾರೆ ಎಂದು ತಿಳಿಸಲಾಗಿದೆ.

ಯುರೋಪಿನ ಅತ್ಯಂತ ದೊಡ್ಡ ಆರ್ಥಿಕತೆ ಹೊಂದಿರುವ ರಾಷ್ಟ್ರ ಜರ್ಮನಿಯಲ್ಲೂ ಕೊರೊನಾ ಸೋಂಕಿನ ಪ್ರಮಾಣ ಏರಿಕೆಯಾಗುತ್ತಿದ್ದು, ಸರ್ಕಾರ, ಲಸಿಕೆಯೊಂದೇ ಸೋಂಕು ಕಡಿಮೆಗೊಳಿಸಲು ಸಾಧ್ಯವಿಲ್ಲ ಎಂದಿದೆ. ಈ ಮೂಲಕ ಮುಂದೆ ಲಾಕ್ ಡೌನ್ ಜಾರಿ ಮಾಡಬೇಕಾಗನಬಹುದು ಎಂದು ಅದು ನೇರವಾಗಿಯೇ ಎಚ್ಚರಿಕೆ ನೀಡಿದೆ. ಜರ್ಮನಿಯಲ್ಲಿ ಕಳೆದ 24  ಗಂಟೆಗಳಲ್ಲಿ 42,000 ಹೊಸ ಕೋವಿಡ್ -19 ಪ್ರಕರಣಗಳು ವರದಿಯಾಗಿದ್ದು, 75 ಜನರು ಮೃತಪಟ್ಟಿದ್ದಾರೆ. ಜರ್ಮನಿಯ ಆರೋಗ್ಯ ಸಚಿವ ಜೆನ್ಸ್ ಸ್ಪಾನ್ ಅವರಿಗೆ ಇತ್ತೀಚಿನ ಸುದ್ದಿಗೋಷ್ಠಿಯಲ್ಲಿ ಆಸ್ಟ್ರಿಯಾದಲ್ಲಿ ಜಾರಿ ಮಾಡಲಾದ ಲಾಕ್​ಡೌನ್​ನಂತೆ ಜರ್ಮನಿಯಲ್ಲೂ ಜಾರಿಗೊಳಿಸಲಾಗುತ್ತದೆಯೇ ಎಂದು ಪ್ರಶ್ನಿಸಲಾಗಿತ್ತು. ಅದಕ್ಕೆ ಉತ್ತರಿಸಿದ ಅವರು, ‘‘ಏನನ್ನೂ ತಳ್ಳಿಹಾಕಲು ಸಾಧ್ಯವಿಲ್ಲ. ನಾವು ರಾಷ್ಟ್ರೀಯ ತುರ್ತುಪರಿಸ್ಥಿಯ ಸಂದರ್ಭದಲ್ಲಿದ್ದೇವೆ’’ ಎಂದು ಉತ್ತರಿಸಿದ್ದಾರೆ.

Austria

ಆಸ್ಟ್ರಿಯಾದಲ್ಲಿ ಜನರ ಪ್ರತಿಭಟನೆ

ಏತನ್ಮಧ್ಯೆ, ಭಾರತದಲ್ಲಿ ಸೋಂಕು ಪೀಡಿತರಲ್ಲಿ 98.2% ಕ್ಕಿಂತ ಹೆಚ್ಚಿನ ಚೇತರಿಕೆಯ ಪ್ರಮಾಣ ದಾಖಲಾಗುತ್ತಿದೆ. ಇದು ಮಾರ್ಚ್ 2020 ರಿಂದ ಅತ್ಯಧಿಕವಾಗಿದ್ದು, ವ್ಯಾಕ್ಸಿನೇಷನ್ ಕೂಡ ತ್ವರಿತ ಗತಿಯಲ್ಲಿ ಸಾಗುತ್ತಿದೆ. ಈ ವಾರ ದೈನಂದಿನ ಸೋಂಕುಗಳು 10,000 ರ ಆಸುಪಾಸಿನಲ್ಲಿವೆ. ಶನಿವಾರ, ಭಾರತವು ಲಸಿಕೆಯಲ್ಲಿ 116 ಕೋಟಿ ಡೋಸ್ ಮೈಲಿಗಲ್ಲನ್ನು ದಾಟಿದೆ. ಶನಿವಾರ ಸಂಜೆ 7 ಗಂಟೆಯವರೆಗೆ 60 ಲಕ್ಷಕ್ಕೂ ಹೆಚ್ಚು ಕೋವಿಡ್ -19 ಲಸಿಕೆ ಡೋಸ್‌ಗಳನ್ನು ನೀಡಲಾಗಿದೆ. ಆದರೂ ಯುರೋಪಿಯನ್ ರಾಷ್ಟ್ರಗಳಲ್ಲಿ ಸೋಂಕು ಹೆಚ್ಚಾಗುತ್ತಿರುವುದು ಮತ್ತು ಅನಿವಾರ್ಯವಾಗಿ ಲಾಕ್​ಡೌನ್ ಹೇರಿರುವುದು, ಜಾಗತಿಕವಾಗಿ ಆತಂಕ ಹೆಚ್ಚಿಸಿದೆ.

ಇದನ್ನೂ ಓದಿ:

IFFI 2021: ಒಳ್ಳೆಯ ಚಲನಚಿತ್ರಗಳು ದೇಶ- ಭಾಷೆ ಗಡಿ ಮೀರಿ ಗುರುತಿಸಿಕೊಳ್ಳುತ್ತವೆ: ಸಚಿವ ಅನುರಾಗ್ ಠಾಕೂರ್

ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಗೆ ಮತ್ತೊಂದು ಗರಿಮೆ, ದೇಶದ 10 ಟಾಪ್ ಠಾಣೆಗಳಲ್ಲಿ ಮಾನ್ವಿ ಠಾಣೆಗೆ 5ನೇ ಸ್ಥಾನ

TV9 Kannada


Leave a Reply

Your email address will not be published. Required fields are marked *