ಹಾಸನ: ಕಳೆದ ತಿಂಗಳು ಯುವತಿ ವಿಚಾರಕ್ಕೆ ಗಲಾಟೆ ಮಾಡಿಕೊಂಡಿದ್ದ ಯುವಕನೊಬ್ಬ ನಿಗೂಢ ರೀತಿಯಲ್ಲಿ ಸಾವನ್ನಪ್ಪಿದ್ದಾನೆ. ಅಶ್ವಥ್​(24) ಮೃತ ಯುವಕ

ಹಾಸನ ತಾಲ್ಲೂಕಿನ ಎಸ್.ಬಂಡೀಹಳ್ಳಿಯಲ್ಲಿ ಏ.28 ರಂದು ಅಶ್ವಥ್​​ಗೆ ಕಲ್ಲು, ದೊಣ್ಣೆಗಳಿಂದ ಥಳಿಸಲಾಗಿತ್ತು ಎಂದು ಪೋಷಕರು ಆರೋಪ ಮಾಡಿದ್ದಾರೆ. ಇತ್ತೀಚೆಗೆ ಅಶ್ವಥ್ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದಿದ್ದ. ತಲೆಯಲ್ಲಿ ರಕ್ತ ಹಪ್ಪುಗಟ್ಟಿ ಆತ ಕೊನೆಯುಸಿರೆಳೆದಿದ್ದಾನೆ ಅಂತ ವೈದ್ಯರು ಹೇಳಿದ್ದಾರೆ. ಆದ್ರೆ ಹಲ್ಲೆಯಿಂದಲೇ ತಮ್ಮ ಮಗ ಸಾವನ್ನಪ್ಪಿದ್ದಾನೆ ಅನ್ನೋದು ಪೋಷಕರ ಆರೋಪ. ಹೀಗಾಗಿ ಯುವಕನ ಸಾವಿನ ಸುತ್ತ ಹಲವು ಅನುಮಾನಗಳು ಮೂಡಿವೆ.

ಏನಿದು ಪ್ರಕರಣ?
ಯುವತಿ ವಿಚಾರಕ್ಕೆ ಸಂಬಂಧಪಟ್ಟಂತೆ ನಡೆದ ಗಲಾಟೆಯಲ್ಲಿ ಹಲ್ಲೆಗೊಳಗಾಗಿ ಹಾಸನ ತಾಲೂಕಿನ ಗಾಡೇನಹಳ್ಳಿ ಗ್ರಾಮದ ಅಶ್ವಥ್ ಮೃತಪಟ್ಟಿದ್ದಾನೆಂದು ಹೇಳಲಾಗ್ತಿದೆ. ಗಾಡೇನಹಳ್ಳಿ ಗ್ರಾಮದ ಅಶ್ವಥ್ ಎಸ್.ಬಂಡೀಹಳ್ಳಿಯಲ್ಲಿರೋ ಯುವತಿಯನ್ನ ಪ್ರೀತಿಸುತ್ತಿದ್ದನಂತೆ. ಆದ್ರೆ ಯುವತಿಗೆ ಮತ್ತು ಗ್ರಾಮಸ್ಥರಿಗೆ ಈ ಬಗ್ಗೆ ತೀವ್ರ ಅಸಮಧಾನವಿತ್ತು. ಹಲವು ಬಾರಿ ಅಶ್ವಥ್ ಬಂಡೀಹಳ್ಳಿ ಗ್ರಾಮಕ್ಕೆ ಹೋಗಿ ಗಲಾಟೆಗಳು ಸಹ ಸಂಭವಸಿವೆ. ಬಂಡೀಹಳ್ಳಿ ಗ್ರಾಮಸ್ಥರು ಅಶ್ವಥ್​​ನ ಪೋಷಕರನ್ನ ಕರೆದು ನಿಮ್ಮ ಮಗನಿಗೆ ಬುದ್ಧಿ ಹೇಳಿ ಅಂತ ತಿಳಿಸಿದ್ದರು. ಆದ್ರೆ ಅಶ್ವಥ್ ಮಾತ್ರ ಸುಮ್ಮನಾಗಿರಲಿಲ್ಲ ಅನ್ನೋದು ಗ್ರಾಮಸ್ಥರ ವಾದ. ಕಳೆದ ತಿಂಗಳು ಏಕಾಎಕಿ ಬಂಡಿಹಳ್ಳಿ ಗ್ರಾಮಕ್ಕೆ ಕಂಠಪೂರ್ತಿ ಕುಡಿದು ಅಶ್ವಥ್​​ ಎಂಟ್ರಿ ಕೊಟ್ಟಿದ್ದ ಎನ್ನಲಾಗಿದೆ. ಈ ವೇಳೆ ಗ್ರಾಮಸ್ಥರು ಅಶ್ವಥ್​​ಗೆ ಥಳಿಸಿದ್ದರು ಅಂತ ಪೋಷಕರು ಆರೋಪ ಮಾಡಿದ್ದಾರೆ. ನಂತ್ರ ರಾಜಿ ಪಂಚಾಯಿತಿ ಮೂಲಕ ಸಮಸ್ಯೆ ಬಗೆಹರಿದಿತ್ತು. ಆದ್ರೆ ಕಳೆದ ಮೂರು ದಿನಗಳ ಹಿಂದೆ ಗದ್ದೆಯಲ್ಲಿ ಕೆಲಸ ಮಾಡುತ್ತಿದ್ದ ಅಶ್ವಥ್​​ ಇದಕ್ಕಿದ್ದಂತೆ ತಲೆಸುತ್ತಿ ಬಿದಿದ್ದಾನೆ. ಕೂಡಲೇ ಪೋಷಕರು ಹಾಸನದ ಖಾಸಗಿ ಆಸ್ಪತ್ರೆಗೆ ಆತನನ್ನು ದಾಖಲಿಸಿದ್ದರು. ಆದ್ರೆ ಚಿಕಿತ್ಸೆ ಫಲಕಾರಿಯಾಗದೆ ಅಶ್ವಥ್ ಮೃತಪಟ್ಟಿದ್ದಾನೆ.

ಅಶ್ವಥ್​​​ ತಲೆಯಲ್ಲಿ ರಕ್ತ ಹೆಪ್ಪುಗಟ್ಟಿತ್ತು ಅಂತಾ ವೈದ್ಯರು ಹೇಳುತ್ತಿದ್ದಾರೆ.  ಹಿಂದೆ ನಡೆದ ಗಲಾಟೆಯಲ್ಲಿ ಏನಾದ್ರು ತಲೆಗೆಪೆಟ್ಟು ಬಿತ್ತೋ ಅಥವಾ ಸ್ವಾಭಾವಿಕವಾಗಿ ಏನಾದ್ರು ಅಶ್ವಥ್ ಮೃತಪಟ್ಟನೋ ಅನ್ನೋದು ಮರಣೋತ್ತರ ಪರೀಕ್ಷೆ ನಂತ್ರ ತಿಳಿಯಬೇಕಿದೆ.

ಈ ಸಂಬಂಧ ಮೃತ ಯುವಕನ ಪೋಷಕರು, ಕೊಲೆ ಆರೋಪದಡಿ ಕೆಲ ಗ್ರಾಮಸ್ಥರ ವಿರುದ್ಧ ಶಾಂತಿಗ್ರಾಮ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಪ್ರಕರಣ ದಾಖಲಸಿಕೊಂಡಿರುವ ಪೋಲಿಸರು ತನಿಖೆ ನಡೆಸುತ್ತಿದ್ದಾರೆ.

The post ಯುವತಿ ವಿಚಾರಕ್ಕೆ ಗಲಾಟೆ; ಯುವಕನ ಸಾವಿನ ಸುತ್ತ ಅನುಮಾನದ ಹುತ್ತ appeared first on News First Kannada.

Source: newsfirstlive.com

Source link