ಬೆಂಗಳೂರು: ಬಿಜೆಪಿ & ಆರ್ಎಸ್ಎಸ್ ನಾಯಕರ ಹೆಸರು ಹೇಳಿ ವಂಚನೆ ಮಾಡಿದ ಆರೋಪಿ ಯುವರಾಜ್ ಅಲಿಯಾಸ್ ಸ್ವಾಮಿ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದೆ. ಇದೀಗ ರಾಜ್ಯ ಎಸಿಬಿ ಅಧಿಕಾರಿಗಳ ಮೂಲಕ ಪ್ರಕರಣದ ತನಿಖೆಯ ಜವಾಬ್ದಾರಿ ಸಿಬಿಐಗೆ ಹೆಗಲಿಗೆ ಬಿದ್ದಿದೆ ಅನ್ನೋ ಮಾಹಿತಿ ಸಿಕ್ಕಿದೆ. ಈ ಮೂಲಕ ಯುವರಾಜ್ ಸ್ವಾಮಿ ಪ್ರಕರಣ ರಾಷ್ಟ್ರ ಮಟ್ಟದ ಪ್ರಕರಣವಾಗಿದೆ.
ಅದರಲ್ಲೂ ಪ್ರಮುಖ ಎರಡು ಪ್ರಕರಣವನ್ನ ಎಸಿಬಿ ಟೀಂ, ಸಿಬಿಐಗೆ ವರ್ಗಾಯಿಸಿದೆ. ಹೈಕೋರ್ಟ್ ನಿವೃತ್ತ ಜಡ್ಜ್ ಇಂದ್ರಕಲಾ ಅವರಿಗೆ ಸಂಬಂಧಿಸಿದ 8.7 ಕೋಟಿ ರೂಪಾಯಿ ಪ್ರಕರಣ ಹಾಗೂ ಬಿಜೆಪಿ ಮುಖಂಡ ಎನಿತ್ ಕುಮಾರ್ಗೆ ಸೇರಿದ 30 ಲಕ್ಷದ ಪ್ರಕರಣವನ್ನ ಸಿಬಿಐ, ಎಸಿಬಿ ನೀಡಿದೆ.
ಪ್ರಕರಣವನ್ನ ಸಿಬಿಐಗೆ ನೀಡುತ್ತಿರೋದಾಗಿ ಎಸಿಬಿ ಅಧಿಕಾರಿಗಳು ದೂರುದಾರಿಗೆ ಲಿಖಿತ ರೂಪದಲ್ಲಿ ಬರೆದುಕೊಟ್ಟಿದ್ದಾರೆ. ನಿಮ್ಮಿಬ್ಬರ ಕೇಸ್ ನಮ್ಮ ವ್ಯಾಪ್ತಿಗೆ ಬರುವುದಿಲ್ಲ, ಹೀಗಾಗಿ ಪ್ರಕರಣವನ್ನ ಸಿಬಿಐಗೆ ನೀಡುತ್ತಿದ್ದೇವೆ ಎಂದು ಹಿಂಬದಿಯಲ್ಲಿ ಎಸಿಬಿ ಅಧಿಕಾರಿಗಳು ಬರೆದುಕೊಟ್ಟಿದ್ದಾರೆ. ಅವರು ಬರೆದುಕೊಟ್ಟಿರುವ ಪ್ರತಿ ನ್ಯೂಸ್ಫಸ್ಟ್ಗೆ ಲಭ್ಯವಾಗಿದೆ.
5 ಮಂದಿಯ ವಿರುದ್ಧ ಲಂಚ ಕೊಟ್ಟ ಆರೋಪದಡಿ ದೂರು ನೀಡಲಾಗಿತ್ತು. ಜನಾಧಿಕಾರ ಸಂಘರ್ಷ ಪರಿಷತ್ ಸಹ ಅಧ್ಯಕ್ಷ ಆದರ್ಶ ಐಯ್ಯರ್ 5 ಮಂದಿಯ ವಿರುದ್ಧ ಭ್ರಷ್ಟಚಾರ ಆರೋಪ ಮಾಡಿ ದೂರು ನೀಡಿದ್ದರು
ಯಾರ ವಿರುದ್ಧ ದೂರು..?
1 ಎನಿತ್ ಕುಮಾರ್ ಎಂ.ಸಿ, ರಾಜಕಾರಣಿ
2 ಕೆ.ಪಿ ಸುಧೀಂದ್ರ ರೆಡ್ಡಿ, ಖಾಸಗಿ ವ್ಯಕ್ತಿ
3 ಗೋವಿಂದಯ್ಯ, ಖಾಸಗಿ ವ್ಯಕ್ತಿ
4 ಜಿ ನರಸಿಂಹ ಸ್ವಾಮಿ, ಖಾಸಗಿ ವ್ಯಕ್ತಿ
ಆದರೆ ಎಸಿಬಿ ಅಧಿಕಾರಿಗಳು ಕೇವಲ 3 ಮಂದಿಯ ವಿರುದ್ಧ ಎಫ್ಐಆರ್ ಹಾಕಿದ್ದಾರೆ. ಇಲ್ಲಿ ನಿವೃತ್ತ ಜಡ್ಜ್ & ಆರ್ಎಸ್ಎಸ್ ಸದಸ್ಯನ ವಿರುದ್ಧ ಕೇಸ್ ಮಾಡಿಲ್ಲ. ಈಗ ಈಬಗ್ಗೆ ಎಸಿಬಿ ಅಧಿಕಾರಿಗಳು, ‘ಪ್ರಕರಣವನ್ನ ಸಿಬಿಐಗೆ ನೀಡಲಾಗಿದೆ’ ಎಂದು ಸ್ಪಷ್ಟಣೆ ನೀಡಿದ್ದಾರೆ.
ಎಸಿಬಿಗೆ ಅಧಿಕಾರ ಇದ್ಯಾ..?
ಎಸಿಬಿಗೆ ಸಿಬಿಐಗೆ ವರ್ಗಾವಣೆ ಮಾಡಲು ಅಧಿಕಾರ ಇದೆಯಾ ಅಂತಾ ನೋಡೋದಾದ್ರೆ, ಯಾವುದೇ ಕೇಸ್ ಕೇಂದ್ರ ತನಿಖಾ ಸಂಸ್ಥೆಗೆ ಸರ್ಕಾರ ವರ್ಗಾಯಿಸಬೇಕು. ಆದರೆ ಇಲ್ಲಿ ತನ್ನ ಹಿಂಬರಹದಲ್ಲಿ ಎಸಿಬಿ ವರ್ಗಾವಣೆ ನೀಡಿದ್ದಾಗಿ ಹೇಳಿದೆ. ಸದ್ಯ ಈ ಬಗ್ಗೆ ಅನುಮಾನ ವ್ಯಕ್ತಪಡಿಸಿರುವ ದೂರುದಾರ ಆದರ್ಶ್ ಐಯ್ಯರ್, ಇಲ್ಲಿ ಅವರಿಬ್ಬರ ರಕ್ಷಣೆ ಮಾಡಲು ಎಸಿಬಿ ಈ ಕಥೆ ಹೇಳುತ್ತಿದೆಯಾ? ಅಂತಲೂ ಪ್ರಶ್ನೆ ಮಾಡಿದ್ದಾರೆ. ಸದ್ಯ ಇದಕ್ಕೆ ಎಸಿಬಿ ಉನ್ನತ ಅಧಿಕಾರಿಗಳಿಂದಲೇ ಉತ್ತರ ಸಿಗಬೇಕಿದೆ.
ಸರ್ಕಾರಿ ಹುದ್ದೆಗಾಗಿ ಲಂಚ ನೀಡಿದ್ದೆಷ್ಟು..? (ಆರೋಪದ ಪ್ರಕಾರ)
- ಸುಧೀಂದ್ರ ರೆಡ್ಡಿ KSRTC ಅಧ್ಯಕ್ಷ ಹುದ್ದೆಗಾಗಿ ಸ್ವಾಮಿಗೆ 1 ಕೋಟಿ ಲಂಚ ನೀಡಲಾಗಿದೆ ಅನ್ನೋ ಆರೋಪ ಕೇಳಿಬಂದಿದೆ. ಈ ಸಂಬಂಧ ಭ್ರಷ್ಟಚಾರ ನಿಗ್ರಹ ಕಾಯ್ದೆಯಡಿ ಕೇಸ್ ದಾಖಲಾಗಿದೆ.
- ಗೋವಿಂದಯ್ಯ KMFನಲ್ಲಿ ಅಳಿಯನಿಗೆ ಹುದ್ದೆಗಾಗಿ ಸ್ವಾಮಿಗೆ 30 ಲಕ್ಷ ನೀಡಿದ್ದಾರೆ ಅನ್ನೋ ಆರೋಪ ಕೇಳಿಬಂದಿದೆ. ಮಾರ್ಕೆಟಿಂಗ್ ಮ್ಯಾನೇಜರ್ ಹುದ್ದೆಗೆ ಲಂಚ ನೀಡಿದ್ದರಿಂದ ಪ್ರಕರಣ ದಾಖಲಾಗಿದೆ
- ನರಸಿಂಹಸ್ವಾಮಿ ಮಗನಿಗೆ ಸರ್ಕಾರಿ ಎಂಜಿನಿಯರ್ ಹುದ್ದೆಗೆ ಲಂಚ ಕೊಟ್ಟಿದ ಆರೋಪ ಇದೆ. ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ಗಾಗಿ 30 ಲಕ್ಷ ರೂಪಾಯಿ ಲಂಚ ನೀಡಿದ ಆರೋಪ ಕೇಳಿಬಂದಿದೆ.
ಮೋಸ ಹೋದವರ ವಿರುದ್ಧ FIR
ಅದರಂತೆ ತಮಗೆ ಸ್ವಾಮೀಜಿಯಿಂದ ವಂಚನೆ ಆಗಿದೆ ಎಂದು ದೂರು ಕೊಟ್ಟವರಿಗೆ ಈಗ ಸಂಕಷ್ಟ ಎದುರಾಗಿದೆ. ಸದ್ಯ ವಂಚನೆಗೊಳಗಾದವರ ವಿರುದ್ಧ ಎಫ್ಐಆರ್ ದಾಖಲಾಗಿದೆ. ಭ್ರಷ್ಟಾಚಾರ ನಿಗ್ರಹ ಕಾಯ್ದೆ ಹಾಗೂ ಪಿಸಿ ಆಕ್ಟ್ 1988 ಸೆಕ್ಷನ್ 8ರ ಅಡಿ ಸುಧೀಂದ್ರ ರೆಡ್ಡಿ, ಗೋವಿಂದಯ್ಯ, ನರಸಿಂಹ ಸ್ವಾಮಿ.ಜಿ ವಿರುದ್ಧ ಎಫ್ಐಆರ್ ದಾಖಲಾಗಿದೆ.
ರಾಜ್ಯ ಸರ್ಕಾರದ ಉನ್ನತ ಹುದ್ದೆ ಗಿಟ್ಟಿಸಿಕೊಳ್ಳಲು ಲಂಚ ನೀಡಿದ ಆರೋಪದ ಮೇಲೆ ಮೂವರ ವಿರುದ್ಧ ನವೆಂಬರ್ 8 ರಂದು ಎಫ್ಐಆರ್ ದಾಖಲಾಗಿದೆ. ಪಿಸಿ ಆಕ್ಟ್ ಸೆಕ್ಷನ್ 8ರ ಪ್ರಕಾರ ಇದು ಅಕ್ಷಮ್ಯ ಅಪರಾಧ ಅನ್ನೋದು ಸ್ಪಷ್ಟವಾಗಿದೆ. ಹುದ್ದೆಗಳ ಬದಲಾಗಿ ಹಣ ನೀಡುವುದು ಅನೈತಿಕ ಮತ್ತು ಕಾನೂನಿಲ್ಲಿ ಅಕ್ರಮ. ಇದರ ತನಿಖೆ ನಡೆಸಿರುವ ಪೊಲೀಸರು ಹಣ ಪಡೆದ ಸ್ವಾಮಿ ವಿರುದ್ಧ ಮಾತ್ರ ಕ್ರಮ ತೆಗೆದುಕೊಂಡಿದ್ದಾರೆ. ಆದರೆ ದೂರು ನೀಡಿದರವರು ಸ್ವಾಮಿಗೆ ಲಂಚ ನೀಡಿದ್ದಾರೆ ಅನ್ನೋದು ಗೊತ್ತಾಗಿದ್ದರೂ ಕ್ರಮ ತೆಗೆದುಕೊಂಡಿಲ್ಲ ಎನ್ನಲಾಗಿದೆ.
ಪೊಲೀಸರಿಗೂ ಸಂಕಷ್ಟ..!
ಆದರೆ ಇಷ್ಟು ಲಂಚ ಕೊಟ್ಟ ಇವರ ವಿರುದ್ಧ ಯಾಕೆ ಕ್ರಮ ತೆಗೆದುಕೊಂಡಿಲ್ಲ ಅನ್ನೋ ಪ್ರಶ್ನೆ ಎದ್ದಿದೆ. ಇನ್ನು ಲಂಚವನ್ನು ಚೆಕ್ ಮತ್ತು ಆರ್ಟಿಜಿಎಸ್ ಮೂಲಕ ನೀಡಲಾಗಿದೆ ಎಂದು ತಿಳಿದುಬಂದಿದೆ. ಪೊಲೀಸರು ಐಪಿಸಿ 39ನ್ನು ಪಾಲಿಸದೇ ಇದ್ದರೆ ಕೇಸ್ನಲ್ಲಿ ಶಿಕ್ಷಾರ್ಹ ಅಪರಾಧವಾಗಿದೆ. ಸ್ವಾಮಿಗೆ ಇಷ್ಟು ಮಂದಿ ಲಂಚ ಕೊಟ್ಟಿದ್ದನ್ನು ಮುಚ್ಚಿಟ್ಟು ಅಕ್ರಮವೆಸಗಿದ್ದಾರೆ. ಈ ಕೇಸ್ ಆದ ತಕ್ಷಣ ಸೆಕ್ಷನ್ 39ರ ಪ್ರಕಾರ ಎಸಿಬಿಗೆ ಈ ಬಗ್ಗೆ ತಿಳಿಸಬೇಕಿತ್ತು. ಹೀಗಾಗಿ ಇವರ ವಿರುದ್ಧ ಐಪಿಸಿ ಸೆ 217 ರ ಅಡಿಯಲ್ಲಿ ಕ್ರಮ ತೆಗೆದುಕೊಳ್ಳಬೇಕಿದೆ.
ಕೊಟ್ಟ ಲಂಚದ ಹಣ ವಾಪಸ್ ಪಡೆಯಲು ಪೊಲೀಸ್ ಶಕ್ತಿ ಬಳಕೆ ಆಗಿದೆ. ಅಂದಿನ ಗೃಹಮಂತ್ರಿ ಇಂದಿನ ಸಿಎಂ ಈ ಬಗ್ಗೆ ಕ್ರಮತೆಗೆದುಕೊಳ್ಳಬೇಕಿತ್ತು. ಇದು ಬಸವರಾಜ್ ಬೊಮ್ಮಾಯಿ ಅವರ ನಿಷ್ಕ್ರಿಯತೆಯ ಕೆಲಸವಾಗಿದೆ. ಅವರಿಗೆ ಭ್ರಷ್ಟಚಾರದ ವಿರುದ್ಧದ ಇರುವ ಬದ್ಧತೆಯನ್ನು ಇದು ತೋರಿಸುತ್ತಿದೆ ಎಂದು ದೂರುದಾರ ಆದರ್ಶ್ ಆಯ್ಯರ್ ಟೀಕೆ ಮಾಡಿದ್ದಾರೆ.