ಯೂ ರಿಸೈನ್ ಅಂಡ್ ಗೆಟೌಟ್, ನೀವು ಹತಾಶರಾಗಿದ್ದೀರಿ: ತಮ್ಮ ವಿರುದ್ಧ ಏಕವಚನ ಬಳಸಿದ ಸಿಎಂ ಬೊಮ್ಮಾಯಿಗೆ ಸಿದ್ದರಾಮಯ್ಯ ಆಗ್ರಹ | Congress Leader Siddaramaiah Reacts to Statement of Basavaraj Bommai demands Resignation


ಸಿದ್ದರಾಮಯ್ಯ ಕಾಲದಲ್ಲೂ ಕೊಲೆಗಳಾಗಿದ್ದವು ಎನ್ನುವ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಆಗ ಕೊಲೆ ಆಯ್ತು ಈಗಲೂ ಕೊಲೆಯಾಗಿದೆ ಎನ್ನುವುದು ಯಾವುದಕ್ಕಾದರೂ ಸಮರ್ಥನೆ ಆಗಬಹುದೇ ಎಂದು ಪ್ರಶ್ನಿಸಿದರು.

ಯೂ ರಿಸೈನ್ ಅಂಡ್ ಗೆಟೌಟ್, ನೀವು ಹತಾಶರಾಗಿದ್ದೀರಿ: ತಮ್ಮ ವಿರುದ್ಧ ಏಕವಚನ ಬಳಸಿದ ಸಿಎಂ ಬೊಮ್ಮಾಯಿಗೆ ಸಿದ್ದರಾಮಯ್ಯ ಆಗ್ರಹ

ವಿಪಕ್ಷ ನಾಯಕ ಸಿದ್ದರಾಮಯ್ಯ


ಮೈಸೂರು: ‘ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಒತ್ತಡ ನಿಭಾಯಿಸಲು ಆಗುತ್ತಿಲ್ಲ. ಹೀಗಾಗಿಯೇ ನನ್ನ ಬಗ್ಗೆ ಏಕವಚನ ಬಳಸಿದ್ದಾರೆ. ಸರ್ಕಾರ ನಡೆಸಲು ಆಗದಿದ್ದರೆ ರಾಜೀನಾಮೆ ಕೊಟ್ಟು ಹೋಗಲಿ’ ಎಂದು ತಮ್ಮ ಬಗ್ಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಏಕವಚನ ಬಳಸಿರುವ ಕುರಿತು ಸಿದ್ದರಾಮಯ್ಯ ವ್ಯಂಗ್ಯವಾಡಿದರು. ಕಾಂಗ್ರೆಸ್ ಅವಧಿಯಲ್ಲಿ ಪ್ರಕರಣ ಹಿಂಪಡೆದಿರುವ ಕುರಿತು ಕಂದಾಯ ಸಚಿವ ಆರ್.ಅಶೋಕ್ ಮಾಡಿರುವ ಆರೋಪಗಳ ಕುರಿತು ಪ್ರತಿಕ್ರಿಯಿಸಿದ ಅವರು, ನಾನು ವಿದ್ಯಾರ್ಥಿಗಳ ಪ್ರಕರಣವನ್ನು ವಾಪಸ್​ ಪಡೆದಿದ್ದೆ. ಎಲ್ಲ ಪಕ್ಷದವರೂ ಅದಕ್ಕೆ ಒಪ್ಪಿದ್ದರು. ಅದಕ್ಕೂ-ಇದಕ್ಕೂ ಏನು ಸಂಬಂಧ? ಎಸ್​ಡಿಪಿಐ, ಪಿಎಫ್‌ಐ ಬಗ್ಗೆ ಸಾಕ್ಷಿ ಇದ್ದರೆ ಆ ಸಂಘಟನೆಗಳನ್ನು ನಿಷೇಧಿಸಲಿ ಎಂದು ಸವಾಲು ಹಾಕಿದರು.

ಪ್ರವೀಣ್ ಮನೆಗೆ ಭೇಟಿ ನೀಡಿದ್ದ ಮುಖ್ಯಮಂತ್ರಿ ಮಸೂದ್ ಮತ್ತು ಫಾಜಿಲ್ ಅವರ ಮನೆಗಳಿಗೆ ಹೋಗಿಲ್ಲ. ಕೊಲೆಯಾದ ಮುಸ್ಲಿಂ ಯುವಕರ ಮನೆಗಳಿಗೆ ಭೇಟಿ ನೀಡಲಿಲ್ಲ ಏಕೆ ಎಂದು ವಾಗ್ದಾಳಿ ನಡೆಸಿದರು. ಬಾದಾಮಿಯಲ್ಲಿಯೂ ಕೆಲ ಸಚಿವರು ಇದೇ ರೀತಿ ಮಾತನಾಡಿದರು. ಗಾಯವಾದ ತಮ್ಮ ಪಕ್ಷದವರನ್ನು ನೋಡಲು ಹೋಗುತ್ತಾರೆ. ಮುಸ್ಲಿಮರನ್ನು ನೋಡಲು ಹೋಗುವುದಿಲ್ಲ. ಇವರು ಸರ್ಕಾರ ನಡೆಸಲು ಯೋಗ್ಯರಾ? ಸರ್ಕಾರ ನಡೆಸಲು ಆಗದಿದ್ದರೆ ಬಿಟ್ಟು ಹೋಗಿ. ಪ್ರಜಾಪ್ರಭುತ್ವದಲ್ಲಿ ನಂಬಿಕೆ ಇಲ್ಲದಿದ್ದರೆ, ವಿರೋಧ ಪಕ್ಷದ ವಿಶ್ವಾಸದ ಮಾತು ಕೇಳದಿದ್ದರೆ ‘ರಿಸೈನ್ ಅಂಡ್ ಗೆಟ್ ಔಟ್’ ಎಂದು ಆಗ್ರಹಿಸಿದರು.

ಸಿದ್ದರಾಮಯ್ಯ ಕಾಲದಲ್ಲೂ ಕೊಲೆಗಳಾಗಿದ್ದವು ಎನ್ನುವ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಆಗ ಕೊಲೆ ಆಯ್ತು ಈಗಲೂ ಕೊಲೆಯಾಗಿದೆ ಎನ್ನುವುದು ಯಾವುದಕ್ಕಾದರೂ ಸಮರ್ಥನೆ ಆಗಬಹುದೇ? ಕಾಂಗ್ರೆಸ್ ಪಕ್ಷವಿದ್ದರೆ ಕಲ್ಲು ಹೊಡೆಯಬಹುದಿತ್ತು ಎನ್ನುವುದು ಸಂಸದ ತೇಜಸ್ವಿ ಸೂರ್ಯ ನೀಡಿರುವ ಬೇಜವಾಬ್ದಾರಿ ಹೇಳಿಕೆ. ನಾವಿದ್ದರೆ ಕಲ್ಲು ಹೊಡೆಯಬೇಕು ಅಂತಾರೆ. ಇವರ ಸರ್ಕಾರಕ್ಕೆ ಕೊಳಕು ಮೊಟ್ಟೆ, ಚಪ್ಪಲಿಯಲ್ಲಿ ಹೊಡೆಯಬೇಕು ಎಂದು ಕೆಂಡಾಮಂಡಲವಾದರು. ನಂತರ ಚಪ್ಪಲಿ ಪದ ಬಳಸಿದ ಬಗ್ಗೆ ವಿಷಾದ ವ್ಯಕ್ತಪಡಿಸಿ, ಆ ಪದವನ್ನು ನಾನು ಹಿಂಪಡೆಯುತ್ತೇನೆ ಎಂದು ಹೇಳಿದರು.

ಕರ್ನಾಟಕದಲ್ಲಿಯೂ ಉತ್ತರ ಪ್ರದೇಶ ಅಥವಾ ಬಿಹಾರ ಮಾದರಿಯಲ್ಲಿ ಬುಲ್​ಡೋಜರ್ ಬಳಕೆಯಾಗಬೇಕು ಎನ್ನುವ ಆಗ್ರಹ ಕುರಿತು ಪ್ರತಿಕ್ರಿಯಿಸಿದ ಅವರು, ಕರ್ನಾಟಕವೇನು ಬಿಹಾರ ಅಥವಾ ಉತ್ತರ ಪ್ರದೇಶದ ಸ್ಥಿತಿ ತಲುಪಿದೆಯೇ? ನಮ್ಮ ಸಿಎಂ ಒಪ್ಪಿಕೊಂಡ ರೀತಿ ಹೀಗಿದೆ. ಇವರ ಪ್ರಕಾರ ಇಲ್ಲಿಯೂ ಕಾನೂನು ಸುವ್ಯವಸ್ಥೆ ಸರಿಯಿಲ್ಲ. ನಮ್ಮ ರಾಜ್ಯವೂ ಉತ್ತರ ಪ್ರದೇಶ, ಬಿಹಾರದ ರೀತಿ ಆಗಿದೆ. ಹೀಗೆ ಹೋಲಿಸಲು ಇವರು ಅಧಿಕಾರಕ್ಕೆ ಬರಬೇಕಿತ್ತೇ ಎಂದು ಪ್ರಶ್ನಿಸಿದರು.

ತಾಜಾ ಸುದ್ದಿ

TV9 Kannada


Leave a Reply

Your email address will not be published. Required fields are marked *