ಯೋಗರಾಜ್ ಭಟ್ ಕಡೆಯಿಂದ ಬಂತು ಮತ್ತೊಂದು ಎಣ್ಣೆ ಸಾಂಗ್; ಹಾಡು ಬಿಡುಗಡೆ ಮಾಡಿದ ದುನಿಯಾ ವಿಜಯ್   | Glaasu Glaasige Lyrical Video song by Yogaraj Bhat released by Duniya Vijay


ಯೋಗರಾಜ್ ಭಟ್ ಕಡೆಯಿಂದ ಬಂತು ಮತ್ತೊಂದು ಎಣ್ಣೆ ಸಾಂಗ್; ಹಾಡು ಬಿಡುಗಡೆ ಮಾಡಿದ ದುನಿಯಾ ವಿಜಯ್  

ಹಾಡು ಬಿಡುಗಡೆ ಮಾಡಿದ ದುನಿಯಾ ವಿಜಯ್  

ಯೋಗರಾಜ್ ಭಟ್ ಅವರು (Yogaraj Bhat) ಹಾಡಿಗೆ ಸಾಹಿತ್ಯ ಬರೆದರು ಎಂದರೆ ಅಲ್ಲೊಂದು ಭಿನ್ನತೆ ಇರುತ್ತದೆ. ಹಾಡಿನ ಸಾಲುಗಳು ಮತ್ತೆಮತ್ತೆ ಕಿವಿಯಲ್ಲಿ ಗುನುಗುತ್ತವೆ. ಶರಣ್ (Actor Sharan) ನಟನೆಯ ‘ಖಾಲಿ ಕ್ವಾಟ್ರು ಬಾಟ್ಲಿ ಹಂಗೆ ಲೈಫು..’ ಚಿತ್ರದ ಹಾಡು ಸಖತ್ ಹಿಟ್ ಆಗಿತ್ತು. ಈ ಹಾಡನ್ನು ಬರೆದಿದ್ದು ಯೋಗರಾಜ್​ ಭಟ್ ಅವರು. ಕುಡಿಯುವವರಿಗೆ ಹಾಗೂ ಕುಡಿಯದವರಿಗೆ ಇಬ್ಬರಿಗೂ ಈ ಹಾಡು ಮೆಚ್ಚುಗೆಯಾಗಿತ್ತು. ಈಗ ಯೋಗರಾಜ್ ಭಟ್ ಕಡೆಯಿಂದ ಮತ್ತೊಂದು ಎಣ್ಣೆ ಸಾಂಗ್ ಹೊರ ಬಂದಿದೆ. ‘ಗಿರ್ಕಿ’ ಚಿತ್ರಕ್ಕಾಗಿ (Girki Movie) ‘ಗ್ಲಾಸು ಗ್ಲಾಸಿಗೆ ತಾಗೋ ಟೈಮಲಿ ದೇಶ ಚಿಂತನೆ ಮಾಡೋಣ..’ ಎಂಬ ಹಾಡನ್ನು ಬರೆದಿದ್ದಾರೆ. ವಿಜಯ್ ಪ್ರಕಾಶ್ ಅವರು ಈ ಹಾಡಿಗೆ ಧ್ವನಿ ಆಗಿದ್ದಾರೆ.

‘ಗ್ಲಾಸು ಗ್ಲಾಸಿಗೆ ತಾಗೋ ಟೈಮಲಿ ದೇಶ ಚಿಂತನೆ ಮಾಡೋಣ’ ಹಾಡನ್ನು ಇತ್ತೀಚೆಗೆ ದುನಿಯಾ ವಿಜಯ್ ಬಿಡುಗಡೆ ಮಾಡಿ, ಚಿತ್ರತಂಡಕ್ಕೆ ಶುಭ ಕೋರಿದ್ದಾರೆ. ಎ2 ಮ್ಯೂಸಿಕ್ ಸಂಸ್ಥೆ ಈ ಹಾಡನ್ನು ಹೊರತಂದಿದೆ. ಈ ಹಾಡಿಗೆ ಎಲ್ಲ ಕಡೆಗಳಿಂದ ಮೆಚ್ಚುಗೆ ವ್ಯಕ್ತವಾಗಿದೆ. ಎಣ್ಣೆ ಪ್ರಿಯರಿಗೆ ಹೆಜ್ಜೆ ಹಾಕೋಕೆ ಮತ್ತೊಂದು ಹಾಡು ಸಿಕ್ಕಿದೆ. ಚಿತ್ರ ಸದ್ಯದಲ್ಲೇ ತೆರೆ ಕಾಣಲಿದೆ.

ಎದಿತ್ ಫಿಲಂ ಫ್ಯಾಕ್ಟರಿ ಮತ್ತು ವಾಸುಕಿ ಮೂವೀಸ್ ಸಹಯೋಗದೊಂದಿಗೆ ತರಂಗ ವಿಶ್ವ ‘ಗಿರ್ಕಿ’ ಚಿತ್ರವನ್ನು  ನಿರ್ಮಿಸಿದ್ದಾರೆ. ಯೋಗರಾಜ್ ಭಟ್ ಅವರ ಗರಡಿಯಲ್ಲಿ ಪಳಗಿದ ವೀರೇಶ್ ಪಿ.ಎಂ ಚಿತ್ರವನ್ನು ನಿರ್ದೇಶಿಸಿದ್ದಾರೆ‌. ಲವ್, ಥ್ರಿಲ್ಲರ್ ಹಾಗೂ ಕಾಮಿಡಿ, ಆ್ಯಕ್ಷನ್ ಅಂಶಗಳನ್ನು ಒಳಗೊಂಡಿರುವ ಈ ಚಿತ್ರಕ್ಕೆ ವೀರೇಶ್ ಅವರೇ ಕಥೆ, ಚಿತ್ರಕಥೆ ಹಾಗೂ ಸಂಭಾಷಣೆ ಬರೆದಿದ್ದಾರೆ.

ವಾಸುಕಿ ಭುವನ್ ಅವರ ಸಹ ನಿರ್ಮಾಣವಿರುವ ಈ ಚಿತ್ರಕ್ಕೆ ವೀರ್ ಸಮರ್ಥ್ ಸಂಗೀತ ನೀಡಿದ್ದಾರೆ‌. ಯೋಗರಾಜ್ ಭಟ್, ಜಯಂತ ಕಾಯ್ಕಿಣಿ, ವೀರೇಶ್.ಪಿ.ಎಂ ಹಾಡುಗಳನ್ನು ಬರೆದಿದ್ದಾರೆ. ನವೀನ್ ಕುಮಾರ್ ಛಲ್ಲ ಛಾಯಾಗ್ರಹಣ, ಮಧು ತುಂಬಕೆರೆ ಅವರ ಸಂಕಲನ ಈ ಚಿತ್ರಕ್ಕೆ ಇದೆ. ವಿನೋದ್ ಮಾಸ್ಟರ್ ಸಾಹಸ ನಿರ್ದೇಶನ ಹಾಗೂ ರಾಮು, ಮೋಹನ್ ಅವರ ನೃತ್ಯ ನಿರ್ದೇಶನವಿದೆ. ತರಂಗ ವಿಶ್ವ ಹಾಗೂ ವಿಲೋಕ್ ರಾಜ್ ನಾಯಕರಾಗಿ ನಟಿಸಿದ್ದು, ದಿವ್ಯ ಉರುಡುಗ ಹಾಗೂ ರಾಶಿ ಮಹದೇವ್ ನಾಯಕಿಯಾಗಿ ನಟಿಸಿದ್ದಾರೆ.

TV9 Kannada


Leave a Reply

Your email address will not be published. Required fields are marked *