ಹಾವೇರಿ: ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಪ್ರಯುಕ್ತ ಕೃಷಿ ಸಚಿವರಾಗಿರುವ ಬಿ.ಸಿ.ಪಾಟೀಲ್ ಹಿರೇಕೆರೂರಿನ ಬಯಲು ಬಸವದೇವರ ದೇವಸ್ಥಾನದ ಆವರಣದಲ್ಲಿ ಅರ್ಚಕರಾದ ನಿಂಗಾಚಾರ್ ಮಾಯಾಚಾರ್ ನೇತೃತ್ವದಲ್ಲಿ ಪಟ್ಟಣ ಪಂಚಾಯಿತಿ ಸದಸ್ಯರೊಂದಿಗೆ ಯೋಗ ಮಾಡಿದ್ದಾರೆ.

ಮಾಧ್ಯಮದವರೊಂದಿಗೆ ಮಾತನಾಡಿದ ಅವರು, 224 ಕ್ಷೇತ್ರಗಳಲ್ಲಿಯೂ ಬಿಜೆಪಿ ವತಿಯಿಂದ ಇಂದು ಯೋಗ ದಿನಾಚರಣೆ ನಡೆಸಲಾಗುತ್ತಿದೆ. ಅಂತೆಯೇ ತಮ್ಮ ಮತಕ್ಷೇತ್ರದಲ್ಲಿಯೂ ಯೋಗ ದಿನಾಚರಣೆ ಆಚರಿಸಲಾಗಿದೆ. ಯೋಗ ಎನ್ನುವುದು ನಮ್ಮ ದೇಶದ ಪ್ರಾಚೀನ ಪದ್ಧತಿಯಾಗಿದ್ದು, ಯೋಗದ ಮಹತ್ವ ಇಡೀ ವಿಶ್ವಕ್ಕೆ ಸಾರಿದೆ. ಯೋಗವು ಭಾರತೀಯ ಮೂಲದ ಸುಮಾರು 6 ಸಾವಿರ ವರ್ಷ ಹಳೆಯದಾಗಿದೆ. ಭೌತಿಕ, ಮಾನಸಿಕ, ಮತ್ತು ಆಧ್ಯಾತ್ಮಿಕ ಅಭ್ಯಾಸವಾಗಿದೆ ಎಂದಿದ್ದಾರೆ.

ಭಾರತದ ಮಾನ್ಯ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ವಿಶ್ವ ಸಂಸ್ಥೆಯ ತಮ್ಮ ಭಾಷಣದಲ್ಲಿ ವರ್ಷದ ಅತಿ ದೀರ್ಘ ದಿನವಾದ ಜೂನ್ 21 ರಂದು ವಿಶ್ವ ಯೋಗ ದಿನ ಆಚರಿಸುವಂತೆ ಕರೆ ನೀಡಿದರು. ಮೊದಲ ಅಂತಾರಾಷ್ಟ್ರೀಯ ಯೋಗ ದಿನವನ್ನು ಹೊಸದಿಲ್ಲಿಯ ರಾಜಪಥ್‍ನಲ್ಲಿ ನೆಡೆಸಲು ಭಾರತ ಸರ್ಕಾರ ಕಾರ್ಯಕ್ರಮ ರೂಪಿಸಿತ್ತು ಎಂದರು.

ಯೋಗವೆನ್ನುವುದು ಆಚರಣೆಯಾಗದೇ ದೈನಂದಿನ ಭಾಗವಾಗಬೇಕು. ಯೋಗದಿಂದ ಫಿಟ್ ಎಂಡ್ ಫೈನ್ ಆಗಿರಬಹುದು. ಸದೃಢ ಆರೋಗ್ಯದ ಗುಟ್ಟು ಇದಾಗಿದ್ದು, ಮಾನಸಿಕ ಸ್ಥೈರ್ಯಕ್ಕೆ ಯೋಗ ಸಾಧನವಾಗಿದೆ. ಪ್ರತಿದಿನ 15 ನಿಮಿಷ ಒಂದೆರಡು ಆಸನವನ್ನಾದರೂ ದೈನಂದಿನ ರೂಢಿ ಮಾಡಿಕೊಳ್ಳಬೇಕು. ಯೋಗವೆನ್ನುವುದು ದೈಹಿಕ ಪ್ರಶಿಕ್ಷಣ ಮಾತ್ರವಲ್ಲದೇ ಮಾನಸಿಕ ಸಾಧನೆಯೂ ಆಗಬೇಕೆಂದು ಬಿ.ಸಿ.ಪಾಟೀಲ್ ಕರೆ ನೀಡಿದ್ದಾರೆ.

ಯೋಗ ದಿನಾಚರಣೆಯಲ್ಲಿ ಪಟ್ಟಣ ಪಂಚಾಯಿತಿ ಸದಸ್ಯರಾದ ಶಿವಕುಮಾರ್ ತಿಪ್ಪಶೆಟ್ಟಿ, ಕಂಠಾದರ ಅಂಗಡಿ, ರಮೇಶ್,ಕುಸುಮ ಬಣಕಾರ್,ಲತಾ ಬಣಕಾರ್ ಸೇರಿದಂತೆ ಮತ್ತಿತ್ತರರು ಪಾಲ್ಗೊಂಡಿದ್ದರು.

The post ಯೋಗವೆನ್ನುವುದು ದೈನಂದಿನ ಅಭ್ಯಾಸದ ಭಾಗವಾಗಬೇಕು: ಬಿ.ಸಿ.ಪಾಟೀಲ್ appeared first on Public TV.

Source: publictv.in

Source link