ಪಕ್ಷ ಕಟ್ಟಿದ ಕಾರ್ಯಕರ್ತನನ್ನು ಕಳೆದುಕೊಂಡಾಗ ಆಕ್ರೋಶ ವ್ಯಕ್ತವಾಗುತ್ತದೆ. ನಮ್ಮಲ್ಲಿ ಬಾಡಿಗೆ ಹಣಕ್ಕೆ ಇರುವಂತ ಕಾರ್ಯಕರ್ತರಿಲ್ಲ. ಸೈದಾಂತಿಕಾವಾಗಿ ನಾವೆಲ್ಲ ಒಂದಾಗಿಯೇ ಇದ್ದೇವೆ ಎಂದು ಗೃಹಸಚಿವ ಅರಗ ಜ್ಞಾನೇಂದ್ರ ಹೇಳಿದ್ದಾರೆ.

ಗೃಹಸಚಿವ ಅರಗ ಜ್ಞಾನೇಂದ್ರ
ಶಿವಮೊಗ್ಗ: ಪ್ರವೀಣ್ ನೆಟ್ಟಾರು ಹತ್ಯೆ ಬಳಿಕ ಸ್ವಪಕ್ಷದ ಕಾರ್ಯಕರ್ತರೇ ಬುಗಿಲೆದ್ದಿದ್ದು, ಬಿಜೆಪಿಯನ್ನು ಇಕ್ಕಟ್ಟಿಗೆ ಸಿಲುಕಿಸುವಂತಾಗಿದೆ. ಕರಾವಳಿಯಲ್ಲಿ ಆರಂಭವಾದ ಪ್ರತಿಭಟನೆ ಇದೀಗ ಇಡೀ ರಾಜ್ಯಾದ್ಯಂತ ವ್ಯಾಪಿಸಿದ್ದು, ಗೃಹಸಚಿವರ ಸರ್ಕಾರಿ ನಿವಾಸಕ್ಕೆ ಎಬಿವಿಪಿ ಕಾರ್ಯಕರ್ತರು ಮುತ್ತಿಗೆ ಹಾಕಿದ್ದಾರೆ. ಈ ಬಗ್ಗೆ ಜಿಲ್ಲೆಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಗೃಹಸಚಿವ ಅರಗ ಜ್ಞಾನೇಂದ್ರ (Araga Jnanendra), ಎಬಿವಿಪಿ ಕಾರ್ಯಕರ್ತರು ಪಿಎಫ್ಐ, ಎಸ್ಡಿಪಿಐ ಸೇರಿದಂತೆ ಮತೀಯ ಸಂಘಟನೆಗಳನ್ನು ನಿಷೇಧಿಸುವಂತೆ ಹೋರಾಟ ಮಾಡಿದ್ದಾರೆ ಎಂದರು.
ಸೈದಾಂತಿಕಾವಾಗಿ ನಾವೆಲ್ಲ ಒಂದಾಗಿಯೇ ಇದ್ದೇವೆ. ಇಂದು ನಮ್ಮ ಮನೆ ಬಳಿ ಬಂದು ಎಬಿವಿಪಿಯವರು ಪ್ರತಿಭಟನೆ ನಡೆಸಿದ್ದಾರೆ. ಪಿಎಫ್ಐ, ಎಸ್ಡಿಪಿಐ ಸೇರಿದಂತೆ ಮತೀಯ ಸಂಘಟನೆಗಳನ್ನು ನಿಷೇಧಿಸುವಂತೆ ಹೋರಾಟ ಮಾಡಿದ್ದಾರೆ. ನಮ್ಮಲ್ಲಿ ಬಾಡಿಗೆ ಹಣಕ್ಕೆ ಇರುವಂತಹ ಕಾರ್ಯಕರ್ತರಿಲ್ಲ. ಒಬ್ಬ ಕಾರ್ಯಕರ್ತರಾಗಿ ಬೆಳೆಯಲು ಸಾಕಷ್ಟು ವರ್ಷ ಬೇಕು. ಬಡವನಾದರೂ ಆತ ಪಕ್ಷಕ್ಕೆ ಹಾಗೂ ಸಂಘಟನೆಗೆ ಒತ್ತುನೀಡುತ್ತಾನೆ. ಇಂಥ ಕಾರ್ಯಕರ್ತನನ್ನು ಕಳೆದುಕೊಂಡಾಗ ಆಕ್ರೋಶ ವ್ಯಕ್ತವಾಗುವುದು ಸಹಜ ಎಂದರು.
ಹರ್ಷ ಹತ್ಯೆ ಪ್ರಕರಣದಲ್ಲಿ ಆರೋಪಿಗಳು ಆರಾಮಾಗಿದ್ದಾರೆ ಎಂಬ ಆರೋಪ ಕೇಳಿ ಬಂದಿತ್ತು. ಹೀಗಾಗಿ ಕಾರಾಗೃಹದ ಮೇಲೆ ದಾಳಿ ನಡೆಸಿ 15 ಜನರನ್ನು ಸಸ್ಪೆಂಡ್ ಮಾಡಿದ್ದೇವೆ. ಅಧಿಕಾರಿಗಳನ್ನು ಬೇರೆ ಕಡೆಗೆ ವರ್ಗಾವಣೆ ಮಾಡಿದ್ದೇವೆ. ಕಾಂಗ್ರೆಸ್ ಮಾಡಿಟ್ಟಿರುವ ಅಸಹ್ಯವನ್ನು ತೊಳೆಯಲು ಸಮಯ ಹಿಡಿಯುತ್ತಿದೆ ಎಂದರು.
ಸರಣಿ ಕೊಲೆಗಳು ನಡೆದ ಮಂಗಳೂರು ಸ್ಥಿತಿಗತಿಗಳ ಬಗ್ಗೆ ಮಾತನಾಡಿದ ಗೃಹಸಚಿವರು, ಮಂಗಳೂರು ಇದೀಗ ಸಹಜ ಸ್ಥಿತಿಗೆ ಬಂದಿದೆ. ಎಲ್ಲ ರೀತಿಯ ಮುಂಜಾಗ್ರತಾ ಕ್ರಮ ಕೈಗೊಳ್ಳುತ್ತೇವೆ. ಶಾಂತಿ ಸಭೆ ನಡೆಯುತ್ತಿದೆ. ಪೊಲೀಸರು ಪರಿಸ್ಥಿತಿಯನ್ನು ಅವಲೋಕಿಸುತ್ತಿದ್ದಾರೆ. ಎನ್ಕೌಂಟರ್ಗಳು ಹಾಗೂ ಸಾವಿಗೆ ಇನ್ನೊಂದು ಸಾವು ಪರಿಹಾರವಲ್ಲ. ಘಟನೆ ನಡೆಸಿದಾಗ ಈ ರೀತಿ ಹೇಳುವುದು ಸಹಜ. ಪ್ರಾಣ ತೆಗೆಯುವುದು, ರಕ್ತ ಹರಿಸುವುದು ಹುಡುಗಾಟದ ಮಾತಲ್ಲ. ಇವೆಲ್ಲವೂ ನಿಲ್ಲಬೇಕು. ಈ ನಿಟ್ಟಿನಲ್ಲಿ ಫಾಸ್ಟ್ ಟ್ರಾಕ್ಕೋರ್ಟ್ಗೆ ಮನವಿ ಮಾಡುತ್ತಿದ್ದೇವೆ. ಬಿಸಿ ಇದ್ದಾಗಲೇ ತಟ್ಟಿದರೆ ಮುಂದೆ ಈ ಕೃತ್ಯ ನಡೆಸುವವರಿಗೆ ಎಚ್ಚರಿಕೆ ಗಂಟೆಯಾದಂತಾಗುತ್ತದೆ ಎಂದರು.
ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾದ ತಕ್ಷಣ ಮತಾಂದ ಶಕ್ತಿಗಳ ಮೇಲಿದ್ದ 2000 ಪ್ರಕರಣಗಳನ್ನು ಹಿಂಪಡೆದರು. ಟಿಪ್ಪು ಜಯಂತಿ ಆರಂಭಿಸುವ ಮೂಲಕ ರಕ್ತಪಾತ ಮಾಡಿಸಿದರು. ಇವರು ಮತ ಬ್ಯಾಂಕ್ಗಾಗಿ ಯಾರ್ಯಾರನ್ನೋ ಬೆಳೆಸಿದ್ದಾರೆ. ನಮ್ಮ ಮನೆ ಎದುರು ಪ್ರತಿಭಟನೆ ನಡೆಸಿದರು ಎಂದಾಕ್ಷಾಣ ಅವರು ಕಾಂಗ್ರೆಸ್ ಜೊತೆಗೆ ಹೋಗುತ್ತಾರೆ ಎಂದಲ್ಲ. ಸಿದ್ದರಾಮಯ್ಯ ಸರ್ಕಾರವಿದ್ದಾಗ ದುಷ್ಕೃತ್ಯ ನಡೆದರೆ ಪ್ರಕರಣವನ್ನೇ ದಾಖಲಿಸುತ್ತಿರಲಿಲ್ಲ ಎಂದರು.
ಯೋಗಿ ಮಾದರಿಯೇ ಬೇರೆ, ನಮ್ಮ ಪರಿಸ್ಥಿತಿಯೇ ಬೇರೆ
ಬೆಂಗಳೂರಿನ ನನ್ನ ನಿವಾಸಕ್ಕೆ ಎಬಿವಿಪಿ ಕಾರ್ಯಕರ್ತರು ಎಂದು ಹೇಳಿಕೊಂಡ ಕೆಲವರು ಪ್ರತಿಭಟನೆ ಮಾಡಿದ್ದಾರೆ. ಆ ಬಗ್ಗೆ ಗಮನ ಹರಿಸುವಂತೆ ನಾನು ಪೊಲೀಸರರಿಗೆ ಹೇಳಿದ್ದೇನೆ. ಅವರು ಎಬಿವಿಪಿ ಕಾರ್ಯಕರ್ತರೇ ಆಗಿದ್ದರೆ ನಾನು ಅವರಿಗೆ ಮನವಿ ಮಾಡಿಕೊಳ್ಳುತ್ತೇನೆ. ಸರ್ಕಾರ ನಿಮ್ಮ ಭಾವನೆಯನ್ನು ಅರ್ಥ ಮಾಡಿಕೊಳ್ಳುತ್ತದೆ ಎಂದು ಗೃಹಸಚಿವರು ಹೇಳಿದ್ದಾರೆ. ನಾವು ಸಾಕಷ್ಟು ಪ್ರಕರಣಗಳಲ್ಲಿ ತಪ್ಪಿತಸ್ಥರ ವಿರುದ್ಧ ಎಫ್ಐಆರ್ ದಾಖಲಿಸಿದ್ದೇವೆ. ಯೋಗಿ ಮಾದರಿಯಲ್ಲಿ ಕ್ರಮ ಕೈಗೊಳ್ಳುವಂತೆ ಒತ್ತಾಯಗಳು ಕೇಳಿಬರುತ್ತಿವೆ. ಆದರೆ ಯೋಗಿ ಮಾದರಿಯೇ ಬೇರೆ ನಮ್ಮ ಪರಿಸ್ಥಿತಿಯೇ ಬೇರೆಯಾಗಿದೆ. ನಮಗೆ ನಮ್ಮದೇ ಆದ ಕಾರಣ ಇದೆ ಎಂದರು.
ಗೃಹ ಇಲಾಖೆಯ ವೈಫಲ್ಯವನ್ನು ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಟೀಕಿಸಿದ್ದರು. ಈ ಬಗ್ಗೆ ಪ್ರತಿಕ್ರಿಯಿಸಿದ ಗೃಹಸಚಿವರು, ಸಿದ್ದರಾಮಯ್ಯ ಅವರ ಯಾವುದೇ ಸರ್ಟಿಫಿಕೇಟ್ ಬೇಡ. ಅವರ ಕಾಲದಲ್ಲಿ ಪೊಲೀಸರೇ ಧರಣಿ ನಡೆಸಿದ್ದರು. ನಾನು ಅವರ ಹಿರಿತನವನ್ನು ಗೌರವಿಸುತ್ತೇನೆ. ಅವರ ಕಾಲದಲ್ಲಿ ಪೊಲೀಸ್ ಇಲಾಖೆ ಕೆಂಪಯ್ಯ ಕೈಯಲ್ಲಿತ್ತು. ಆಗ ಒಟ್ಟು ಒಟ್ಟು 32 ಕೊಲೆಗಳಾಗಿತ್ತು. ನಾನು ಸಮರ್ಥವಾಗಿ ಇಲಾಖೆಯನ್ನು ನಿಭಾಯಿಸಿದ್ದೇನೆ. ಸಚಿವನಾದ ಬಳಿಕ ಪ್ರತಿ ಪ್ರಕರಣವನ್ನೂ ಗಂಭೀರವಾಗಿ ಪರಿಗಣಿಸಿದ್ದೇನೆ ಎಂದರು.