ನವದೆಹಲಿ: ಈಶಾನ್ಯ ರಾಜ್ಯಗಳಲ್ಲಿ ಒಂದಾದ ನಾಗಲ್ಯಾಂಡ್ ಪಾಲಿಗೆ ನಿನ್ನೆಯ ದಿನ ಕರಾಳದಿನ. ಇಂತಹದೊಂದು ದಿನ ಬರುತ್ತೆ ಎಂದು ನಾಗ ಜನರು ಮತ್ತು ಭಾರತೀಯ ಸೇನೆ ಕನಸು ಮನಸಿನಲ್ಲೂ ಯೋಚಿಸಿರಲಿಲ್ಲ. ಮಾನಾ ಜಿಲ್ಲೆಯ ತಿರು ಗ್ರಾಮದಲ್ಲಿ ಯೋಧರು ನಡೆಸಿದ ಫೈರಿಂಗ್ ಪ್ರಕರಣದಲ್ಲಿ ಒಟ್ಟು 18 ಮಂದಿ ಸಾವನ್ನಪ್ಪಿದ್ದಾರೆ. ಪರಿಣಾಮ ನಾಗಲ್ಯಾಂಡ್ ಬೂದಿಮುಚ್ಚಿದ ಕೆಂಡದಂತಾಗಿದೆ.
ಘಟನೆ ಬಗ್ಗೆ ಪ್ರತಿಕ್ರಿಯಿಸಿರುವ ಸೇನೆ.. ನಾಗಲ್ಯಾಂಡ್ನ ಮಾನ್ ಜಿಲ್ಲೆಯಲ್ಲಿ ನಡೆದ ಫೈರಿಂಗ್ ವೇಳೆ ಸೈನಿಕರೂ ಸೇರಿ ಒಟ್ಟು 14 ಮಂದಿ ಅಸುನೀಗಿದ್ದಾರೆ. ಇದು ದುರಾದೃಷ್ಟಕರ ಘಟನೆ. ಈ ಬಗ್ಗೆ ತನಿಖೆ ಆರಂಭಿಸಿದ್ದು, ತಪ್ಪಿತಸ್ಥರಿಗೆ ಕಾನೂನು ಕ್ರಮಕೈಗೊಳ್ಳಲಾಗುತ್ತದೆ ಎಂದಿದೆ.
ಹೇಗೆ ಬೆಳಕಿಗೆ ಬಂತು..?
ಸ್ಥಳೀಯರು ನೀಡಿರುವ ಮಾಹಿತಿ ಪ್ರಕಾರ.. ನಿನ್ನೆ ಮಧ್ಯಾಹ್ನ 4 ಗಂಟೆ ಸುಮಾರಿಗೆ ನಡೆದಿದೆ. ಗಣಿ ಒಂದರಲ್ಲಿ ಕೆಲಸ ಮಾಡುತ್ತಿದ್ದ ಕಾರ್ಮಿಕರು, ಪಿಕ್ಅಪ್ ವಾಹನದ ಮೇಲೆ ಮನೆಗೆ ವಾಪಸ್ ಆಗುತ್ತಿದ್ದರು. ಆದರೆ ಕೆಲಸ ಮುಗಿಸಿ ಎಷ್ಟೋ ಹೊತ್ತು ಕಳೆದರೂ ಮನೆಗೆ ವಾಪಸ್ ಬಾರದಿದ್ದಾಗ ಹುಡುಕಾಟ ನಡೆಸಲಾಗಿದೆ. ಈ ವೇಳೆ ಮೃತದೇಹಗಳು ವಾಹನದ ಮೇಲೆ ಪತ್ತೆಯಾಗಿವೆ ಎಂದು ತಿಳಿಸಿದ್ದಾರೆ.
6 ಮಂದಿ ವಾಹನದಲ್ಲೇ ಸಾವು
ಗಣಿಯಲ್ಲಿ ಕೆಲಸ ಮಾಡುತ್ತಿದ್ದ ಕಾರ್ಮಿಕರು ಎಂದಿನಂತೆ ನಿನ್ನೆಯೂ ಕೂಡ ಕೆಲಸ ಮುಗಿಸಿ ಮನೆಗೆ pick-up ವ್ಯಾನ್ನಲ್ಲಿ ಬರುತ್ತಿದ್ದರು. ಈ ವೇಳೆ ಭದ್ರತಾ ಸಿಬ್ಬಂದಿ ಅವರ ಮೇಲೆ ಏಕಾಏಕಿ ಫೈರಿಂಗ್ ನಡೆಸಿದೆ ಎನ್ನಲಾಗಿದೆ. ಪರಿಣಾಮ 6 ಮಂದಿ ಕಾರ್ಮಿಕರು ಅಲ್ಲಿಯೇ ಸಾವನ್ನಪ್ಪಿದ್ದಾರೆ. ಬಳಿಕ ಇಬ್ಬರು ಆಸ್ಪತ್ರೆಗೆ ಸಾಗಿಸುವಾಗ ಮೃತಪಟ್ಟಿದ್ದಾರೆ.
ಇದರಿಂದ ಕೋಪಗೊಂಡ ಗ್ರಾಮಸ್ಥರು ಭದ್ರತಾ ಸಿಬ್ಬಂದಿ ಇರುವ ಸ್ಥಳಕ್ಕೆ ಹೋಗಿ ಪ್ರತಿಭಟನೆ ನಡೆಸಿದ್ದಾರೆ. ಅವರ ವಾಹನಗಳಿಗೆ ಬೆಂಕಿ ಹಚ್ಚಿದ್ದಾರೆ. ಆಗ ಭದ್ರತಾ ಸಿಬ್ಬಂದಿ ಸ್ಥಳೀಯರ ಮೇಲೆ ಪ್ರತಿದಾಳಿ ನಡೆಸಿದ್ದಾರೆ. ನಂತರ ಇದು ಹಿಂಸಾಚಾರಕ್ಕೆ ತಿರುಗಿ ಅಪಾರ ಜೀವಹಾನಿಯಾಗಿದೆ.
ಈಗ ಹೇಗಿದೆ ಅಲ್ಲಿನ ಪರಿಸ್ಥಿತಿ..?
ವರದಿಗಳ ಪ್ರಕಾರ, ಈಗ ಅಲ್ಲಿನ ಪರಿಸ್ಥಿತಿ ಸಂಪೂರ್ಣ ನಿಯಂತ್ರಣಕ್ಕೆ ಬಂದಿದೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ಭದ್ರತೆಯನ್ನ ನೀಡಿದ್ದಾರೆ. ಅಲ್ಲದೇ ತಮ್ಮದೇ ರೀತಿಯಲ್ಲಿ ತನಿಖೆಯನ್ನ ಆರಂಭಿಸಿದ್ದಾರೆ. ಆದರೂ ನಾಗಲ್ಯಾಂಡ್ನ ಮಾನ ಜಿಲ್ಲೆ ಬೂದಿಮುಚ್ಚಿದ ಕೆಂಡದಂತಾಗಿದೆ ಎನ್ನಲಾಗಿದೆ.
ತನಿಖೆ ಎಸ್ಐಟಿ ಹೆಗಲಿಗೆ..!
ನ್ಯಾಗಲ್ಯಾಂಡ್ ರಾಜ್ಯಪಾಲ ಜಗದೀಶ್ ಮುಖಿ, ಘಟನೆ ಬಗ್ಗೆ ವಿಷಾದ ವ್ಯಕ್ತಪಡಿಸಿ ಪತ್ರಿಕಾ ಪ್ರಕಟಣೆ ಬಿಡುಗಡೆ ಮಾಡಿದ್ದಾರೆ. ಅದರ ಪ್ರಕಾರ.. ಈ ಫೈರಿಂಗ್ ಕೇಸ್ ತನಿಖೆಯನ್ನ ಎಸ್ಐಟಿಗೆ ವಹಿಸಲಾಗಿದೆ. ಹಿಂಸಾಚಾರ ಪ್ರಕರಣದಲ್ಲಿ ಭಾಗಿಯಾಗಿರುವ ಸೈನಿಕರ ವಿರುದ್ಧ ಕೋರ್ಟ್ ತನಿಖೆ ನಡೆಸಲಿದೆ. ನಾಗಲ್ಯಾಂಡ್ನ ನಾಗರಿಕರು ಶಾಂತಿಯನ್ನ ಕಾಪಾಡಬೇಕು ಎಂದು ತಿಳಿಸಿದ್ದಾರೆ.
ನಾಗಾಲ್ಯಾಂಡ್ನಲ್ಲಿ ನಿನ್ನೆ ನಡೆದ ಅಹಿತಕರ ಘಟನೆಯಿಂದ ತುಂಬಾ ನೋವಾಗಿದೆ. ಪ್ರಾಣ ಕಳೆದುಕೊಂಡವರ ಕುಟುಂಬಗಳಿಗೆ ತೀವ್ರ ಸಂತಾಪ ಸೂಚಿಸುತ್ತೇನೆ. ರಾಜ್ಯ ಸರ್ಕಾರ ರಚಿಸಿರುವ ಉನ್ನತ ಮಟ್ಟದ ಎಸ್ಐಟಿಯು ಈ ಘಟನೆಯನ್ನು ಕೂಲಂಕುಷವಾಗಿ ತನಿಖೆ ನಡೆಸಿ ಸಂತ್ರಸ್ತ ಕುಟುಂಬಕ್ಕೆ ನ್ಯಾಯ ನೀಡಲಿದೆ.
ಅಮಿತ್ ಶಾ, ಕೇಂದ್ರ ಸಚಿವ
ಘಟನೆ ಬಗ್ಗೆ ಪ್ರತಿಕ್ರಿಯಿಸಿರುವ ನಾಗಲ್ಯಾಂಡ್ ಸಿಎಂ, ನಿಫಿಯು ರಿಯೊ ನಾನು ಘಟನೆಯನ್ನ ತೀವ್ರವಾಗಿ ಖಂಡಿಸುತ್ತಿದ್ದೇನೆ. ಪ್ರಕರಣದ ಬಗ್ಗೆ ಉನ್ನದ ಅಧಿಕಾರಿಗಳ ನೇತೃತ್ವದಲ್ಲಿ ತನಿಖೆ ಆಗಲಿದೆ. ಸಂತ್ರಸ್ತರಿಗೆ ನ್ಯಾಯ ನೀಡಲಾಗುವುದು. ಎಲ್ಲರೂ ಶಾಂತಿಯನ್ನ ಕಾಪಾಡಬೇಕು ಎಂದು ಮನವಿ ಮಾಡಿಕೊಂಡಿದ್ದಾರೆ. ಮಾತ್ರವಲ್ಲ, ದೆಹಲಿಯಿಂದ ಕೊಹಿಮಾಗೆ ದೌಡಾಯಿಸಿದ್ದಾರೆ. ಅಲ್ಲದೇ ತುರ್ತು ಸಭೆ ಕರೆದು, ಅಗತ್ಯ ಕ್ರಮಕ್ಕೆ ಸೂಚಿದ್ದಾರೆ. ಹಾಗೆಯೇ ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಜೊತೆ ಮಹತ್ವದ ಸಭೆ ಕೂಡ ನಡೆಸಿದ್ದಾರೆ.
ಭದ್ರತಾ ಸಿಬ್ಬಂದಿ ಹೇಳಿದ್ದೇನು..?
ನಿನ್ನೆ ನಡೆದ ಘಟನೆಯ ಪ್ರದೇಶದಲ್ಲಿ ಸೇನೆ ವಿಶೇಷ ಕಾರ್ಯಾಚರಣೆ ನಡೆಸುತ್ತಿತ್ತು. ಬಂಡುಕೂರರ ವಿರುದ್ಧ ಅಸ್ಸಾಂ ರೈಫಲ್ಸ್ ಕಾರ್ಯಾಚರಣೆ ನಡೆಸುತ್ತಿತ್ತು. ಗುಪ್ತಚರ ಇಲಾಖೆ ನೀಡಿದ ಮಾಹಿತಿಯ ಆಧಾರದ ಮೇಲೆ ಸೇನೆ ಗಸ್ತಿನಲ್ಲಿ ಇತ್ತು ಅಂತಾ ಅಸ್ಸಾಂ ರೈಫಲ್ಸ್ ಅಧಿಕೃತ ಹೇಳಿಕೆ ನೀಡಿದೆ. ಘಟನೆ ಬಗ್ಗೆ ವಿಷಾದ ವ್ಯಕ್ತಪಡಿಸುತ್ತೇವೆ. ದುರಾದೃಷ್ಟವಾಗಿ ಸಾವನ್ನಪ್ಪಿರುವ ಬಗ್ಗೆ ನೋವಿದೆ. ಈ ಬಗ್ಗೆ ಉನ್ನತ ಅಧಿಕಾರಿಗಳ ನೇತೃತ್ವದಲ್ಲಿ ತನಿಖೆ ನಡೆಸಿ, ಕಾನೂನು ಕ್ರಮಕೈಗೊಳ್ಳುವುದಾಗಿ ತಿಳಿಸಿದೆ. ಅಲ್ಲದೇ ಈ ಪ್ರಕರಣದಲ್ಲಿ ಓರ್ವ ಯೋಧ ಕೂಡ ಸಾವನ್ನಪ್ಪಿದ್ದಾರೆ. ಹಲವು ಭದ್ರತಾ ಸಿಬ್ಬಂದಿ ಗಾಯಗೊಂಡಿದ್ದಾರೆ ಎಂದು ತಿಳಿಸಿದೆ.
‘ಹಾರ್ನ್ಬಿಲ್’ ಹಬ್ಬ ಬಂದ್
ಪೊಲೀಸ್ ಅಧಿಕಾರಿಗಳು ನೀಡಿರುವ ಹೇಳಿಕೆಯಲ್ಲಿ ನಿಷೇಧಿತ ಸಂಘಟನೆ ಎನ್ಎಸ್ಸಿಎನ್ (ಕೆ) ಉಗ್ರರ ಚಲವಲನ ಅಲ್ಲಿ ಪತ್ತೆಯಾಗಿತ್ತು. ಮಯನ್ಮಾರ್ ಗಡಿಯಿಂದ ಇಲ್ಲಿಗೆ ಬರುತ್ತಿದ್ದರು ಅನ್ನೋದ್ರ ಬಗ್ಗೆ ಮಾಹಿತಿ ಸಿಕ್ಕಿತ್ತು. ಹೀಗಾಗಿ ಕಾರ್ಯಾಚರಣೆ ನಡೆಸಲಾಗುತ್ತಿತ್ತು ಎಂದು ಪೊಲೀಸ್ ಅಧಿಕಾರಿಯೊಬ್ಬರು ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ. ಘಟನೆ ಬೆನ್ನಲ್ಲೇ ನಾಗಲ್ಯಾಂಡ್ನಲ್ಲಿ ಉದ್ವಿಗ್ನದ ವಾತಾವರಣ ನಿರ್ಮಾಣ ಆಗಿದೆ. ಈ ಹಿನ್ನೆಲೆಯಲ್ಲಿ ಅಲ್ಲಿ ಪ್ರಸಿದ್ಧ ಕೊಹಿಮಾದಲ್ಲಿ ನಡೆಯುತ್ತಿದ್ದ Hornbill ಫೆಸ್ಟಿವಲ್ ನಿಲ್ಲಿಸಲಾಗಿದೆ.