ನವದೆಹಲಿ: ರಕ್ಷಣಾ ಕ್ಷೇತ್ರದಲ್ಲಿ ಮತ್ತಷ್ಟು ಸಹಕಾರ ಸಂಬಂಧ ಬೆಸೆಯಲು ಸ್ನೇಹ ರಾಷ್ಟ್ರಗಳಾದ ಭಾರತ ಮತ್ತು ಇಸ್ರೇಲ್ ಮಹತ್ವದ ನಿರ್ಧಾರಕ್ಕೆ ಬಂದಿವೆ. 10 ವರ್ಷಗಳ ಯೋಜನೆಯನ್ನ ರೂಪಿಸುವ ಟಾಸ್ಕ್ ಫೋರ್ಸ್ ರಚಿಸಿವೆ.
ಟೆಲ್ ಅವಿವ್ನಲ್ಲಿ ನಡೆದ ಭಾರತ ಮತ್ತು ಇಸ್ರೇಲ್ ಜೆಡಬ್ಲ್ಯೂಜಿ (Joint Working Group) ಸಭೆಯಲ್ಲಿ ಈ ಒಪ್ಪಂದಕ್ಕೆ ಬಂದಿವೆ. ಡಿಫೆನ್ಸ್ ಸೆಕ್ರೆಟರಿ ಡಾ.ಅಜಯ್ ಕುಮಾರ್, ಇಸ್ರೇಲ್ ರಕ್ಷಣಾ ಸಚಿವಾಲಯದ ಡೈರೆಕ್ಟರ್ ಜನರಲ್ ಮಜ್ ಜೆ (Retd) ಅಮೀರ್ ಇಶೇಲ್ ನೇತೃತ್ವದಲ್ಲಿ ನಡೆದ ಸಭೆಯಲ್ಲಿ, ಎಸ್ಡಬ್ಲ್ಯೂಜಿ (Sub Working Groups) ರಚನೆಗೆ ನಿರ್ಧರಿಸಿವೆ.
ಇನ್ನು ಮೊನ್ನೆ ನಡೆದ ಸಭೆಯಲ್ಲಿ ಭಾರತ ಮತ್ತು ಇಸ್ರೇಲ್ ನಡುವಿನ ರಕ್ಷಣಾ ಸಹಕಾರದ ಎಲ್ಲಾ ಅಂಶಗಳನ್ನ ಸಮಗ್ರವಾಗಿ ಪರಿಶೀಲಿಸಲಾಗಿದೆ. ಮತ್ತು ಮುಂದಿನ ಯೋಜನೆಗಳ ಬಗ್ಗೆ ಚರ್ಚೆ ಮಾಡಲಾಗಿದೆ. ಯುದ್ಧ ತಾಲೀಮು, ಇಂಡಸ್ಟ್ರಿ ಕೊ-ಅಪರೇಷನ್ ಕುರಿತು ಮಾತುಕತೆ ನಡೆದಿದೆ ಎಂದು ರಕ್ಷಣಾ ಸಚಿವಾಲಯ ತಿಳಿಸಿದೆ.
ಡಿಫೆನ್ಸ್ ಪ್ರಕ್ಯೂರ್ಮೆಂಟ್, ಪ್ರೊಡೆಕ್ಷನ್, ಸಂಶೋಧನೆ ಮತ್ತು ಅಭಿವೃದ್ಧಿ ಬಗ್ಗೆಗೂ ಮೌಲ್ಯಮಾಪನ ಮಾಡಲಾಗಿದೆ. ನಂತರ ಎರಡೂ ದೇಶಗಳು ರಕ್ಷಣಾ ಕ್ಷೇತ್ರದಲ್ಲಿ ಮತ್ತಷ್ಟು ಪರಸ್ಪರ ಸಹಕಾರ ಪಡೆಯುವ ಉದ್ದೇಶದಿಂದ SWG ರಚಿಸಲು ಸಹಿ ಹಾಕಿವೆ. ಅಲ್ಲದೇ ಹತ್ತು ವರ್ಷಗಳ ರಕ್ಷಣಾ ಒಪ್ಪಂದಕ್ಕೂ ಸಹಿ ಹಾಕಲಿವೆ. ಈ SWG ರಚನೆಯು ದ್ವಿಪಕ್ಷೀಯ ಸಂಪನ್ಮೂಲಗಳ ಸಮರ್ಥ ಬಳಕೆ, ತಂತ್ರಜ್ಞಾನಗಳ ಪರಿಣಾಮಕಾರಿ ಬಳಕೆ ಮತ್ತು ಕೈಗಾರಿಕಾ ಸಾಮರ್ಥ್ಯಗಳನ್ನು ಹಂಚಿಕೊಳ್ಳಲು ಸಹಕಾರ ನೀಡಲಿದೆ. ಅಲ್ಲದೇ ಮುಂದಿನ ಬಾರಿ ಭಾರದಲ್ಲಿ JWG ಸಭೆ ನಡೆಸಲು ನಿರ್ಧರಿಸಲಾಗಿದೆ.