ರಚಿತಾ ರಾಮ್‌ ಇತ್ತೀಚೆಗೆ ನಾಯಕಿ ಪ್ರಧಾನ ಚಿತ್ರಗಳತ್ತ ಹೆಚ್ಚು ವಾಲುತ್ತಿದ್ದಾರೆ. ಈಗ ಈ ಸಾಲಿಗೆ ಹೊಸ ಸಿನಿಮಾವೊಂದು ಸೇರ್ಪಡೆಯಾಗಿದೆ. ಅದು “ಶಬರಿ’. ಇದು ರಚಿತಾ ನಾಯಕಿಯಾಗಿರುವ ಹೊಸ ಚಿತ್ರ. ಈ ಚಿತ್ರಕ್ಕೆ “ಸರ್ಚಿಂಗ್‌ ಫಾರ್‌ ರಾವಣ’ ಎಂಬ ಟ್ಯಾಗ್‌ ಲೈನ್‌ ಇದೆ.

“ಶಬರಿ ಸರ್ಚಿಂಗ್‌ ಫಾರ್‌ ರಾವಣ’ ಚಿತ್ರದ ಫ‌ಸ್ಟ್‌ ಲುಕ್‌ ಬಿಡುಗಡೆಯಾಗಿದೆ. ಮಹಿಳಾ ಪ್ರಧಾನ ರೀವೆಂಜ್‌ ಹಾಗೂ ಥ್ರಿಲ್ಲರ್‌ ಕಥಾಹಂದರ ಇರುವ ಈ ಚಿತ್ರದಲ್ಲಿ ರಚಿತಾ ಶಬರಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಇದು ಅವರ 36ನೇ ಚಿತ್ರವಾಗಿದೆ.

ಶ್ರೀರಾಮನವಮಿಯ ದಿನವೇ ರಚಿತಾರಾಮ್‌ ಶಬರಿಯಾಗಿ ಅಭಿಮಾನಿಗಳ ಮುಂದೆ ಬಂದಿದ್ದಾರೆ. ಪೋಸ್ಟರ್‌ಲ್ಲಿ ಉಗ್ರಾವತಾರ ತಾಳಿರುವ ರಚಿತಾರಾಮ್‌ ಅವರ ವಿಭಿನ್ನಲುಕ್‌ ಸಾಕಷ್ಟು ಕುತೂಹಲಗಳನ್ನು ಹುಟ್ಟುಹಾಕಿದೆ. ಇನ್ನು ಈ ಚಿತ್ರಕ್ಕೆ ಯುವ ನಿರ್ದೇಶಕ ನವೀನ್‌ ಶೆಟ್ಟಿ ಅವರು ನಿರ್ದೇಶನ ಮಾಡುತ್ತಿದ್ದಾರೆ. ಇದು ಇವರ ಚೊಚ್ಚಲ ಚಿತ್ರ.

ಇದನ್ನೂ ಓದಿ:ಸಿನಿಮಾ ಚಿತ್ರೀಕರಣ ಮಾಡಬಹುದಾ? ಮಾಡಬಾರದಾ?

ಕೇಶವ್‌-ಚೇತನ್‌ ಚಿತ್ರಕಥೆ ಹೆಣೆದಿದ್ದಾರೆ. ಈವರೆಗೆ ಸಂಕಲನಕಾರನಾಗಿ ಗುರುತಿಸಿಕೊಂಡಿದ್ದ ನವೀನ್‌ ಶೆಟ್ಟಿ “ಶಬರಿ’ ಚಿತ್ರದ ಮೂಲಕ ನಿರ್ದೇಶಕರಾಗಿ ಭಡ್ತಿ ಪಡೆದಿದ್ದಾರೆ. ಮಹಿಳಾ ಪ್ರಧಾನ ಕಥಾಹಂದರ ಒಳಗೊಂಡಿರುವ ಈ ಚಿತ್ರದಲ್ಲಿ ರಾವಣ ಯಾರಾಗಲಿದ್ದಾರೆ ಎನ್ನುವುದು ಇನ್ನೂ ಕುತೂಹಲವಾಗಿದೆ.

ಕರೋನಾ ಹಾವಳಿ ಕಡಿಮೆಯಾದರೆ, ಮೇ ತಿಂಗಳ ಕೊನೆಯಲ್ಲಿ ಈ ಚಿತ್ರದ ಚಿತ್ರೀಕರಣ ಪ್ರಾರಂಭಿಸಲು ಚಿತ್ರ ತಂಡ ಪ್ಲ್ರಾನ್‌ ಮಾಡಿ ಕೊಂಡಿದೆ. ಇನ್ನು “ಶಬರಿ’ಗೆ ಅನೂಪ್‌ ಸೀಳಿನ್‌ ಅವರ ಸಂಗೀತ ಸಂಯೋಜನೆ ಇದ್ದು, ಸುರೇಶ್‌ ಆರ್ಮುಗಂ ಅವರ ಸಂಕಲನ, ವಿಶಾಲ್‌ ಕುಮಾರ್‌ ಗೌಡ ಅವರ ಛಾಯಾಗ್ರಹಣವಿದೆ. ಚಿತ್ರದಲ್ಲಿ ರಘು ಮುಖರ್ಜಿ, ಅಚ್ಯುತ್‌ ಕುಮಾರ್‌, ಪ್ರದೀಪ್‌ ನಾರಾಯಣ್‌, ಅರ್ಚನಾ ಕೊಟ್ಟಿಗೆ ಇತರ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ.

ಸಿನೆಮಾ – Udayavani – ಉದಯವಾಣಿ
Read More