ರಜನಿಕಾಂತ್ ಭೇಟಿ ವೇಳೆ ಪಂಚೆ ಬದಲು ಪ್ಯಾಂಟ್​ ಧರಿಸಿದ್ದಕ್ಕೆ ಕಾರಣ ನೀಡಿದ ನಟ ರಿಷಬ್ ಶೆಟ್ಟಿ – Actor Rishab Shetty reveals why he wore pants instead of dhoti during Rajinikanth’s meet


ನಟ ರಿಷಬ್​ ಶೆಟ್ಟಿ ಸೂಪರ್ ಸ್ಟಾರ್ ರಜನಿಕಾಂತ ಅವರೊಂದಿಗೆ ಕಳೆದ ಕೆಲ ಸುಂದರ ಕ್ಷಣಗಳನ್ನು ಹಂಚಿಕೊಂಡಿದ್ದಾರೆ.

ರಜನಿಕಾಂತ್ ಭೇಟಿ ವೇಳೆ ಪಂಚೆ ಬದಲು ಪ್ಯಾಂಟ್​ ಧರಿಸಿದ್ದಕ್ಕೆ ಕಾರಣ ನೀಡಿದ ನಟ ರಿಷಬ್ ಶೆಟ್ಟಿ

ಸೂಪರ್ ಸ್ಟಾರ್​ ರಜನಿಕಾಂತ್​, ನಟ ರಿಷಬ್​ ಶೆಟ್ಟಿ

ನಟ ರಿಷಬ್ ಶೆಟ್ಟಿ (Rishab Shetty) ನಟಿಸಿ, ನಿರ್ದೇಶಿಸಿರುವ ‘ಕಾಂತಾರ’ (Kantara) ಚಿತ್ರ ಎಲ್ಲೆಡೆ ಭರ್ಜರಿ ಪ್ರದರ್ಶನ ಕಾಣುತ್ತಿದೆ. ನ. 18ರಂದು 50 ದಿನಗಳನ್ನು ಸಹ ಪೂರ್ಣಗೊಳಿಸಲಿದೆ. ‘ಕಾಂತಾರ’ ಚಿತ್ರ ಕೇವಲ ಕನ್ನಡ ಭಾಷೆಯಲ್ಲಿ ಮಾತ್ರವಲ್ಲದೆ ಹಿಂದಿ, ತೆಲುಗು, ತಮಿಳು ಭಾಷೆಯಲ್ಲಿಯೂ ಬಿಡುಗಡೆಯಾಗಿ ಉತ್ತಮ ಗಳಿಕೆ ಮಾಡುತ್ತಿದೆ. ‘ಕಾಂತಾರ’ದ ಅಬ್ಬರಕ್ಕೆ ಇಡೀ ಭಾರತೀಯ ಚಿತ್ರರಂಗ ಫಿದಾ ಆಗಿದ್ದು ಮಾತ್ರ ಸುಳ್ಳಲ್ಲ. ಚಿತ್ರ ನೋಡಿದ ದೊಡ್ಡ ದೊಡ್ಡ ದಿಗ್ಗಜರುಗಳು ಹಾಡಿ ಹೊಗಳಿದಿದ್ದಾರೆ. ನಟ ಪ್ರಭಾಸ್​, ನಟಿ ಅನುಷ್ಕಾ ಶೆಟ್ಟಿ ಚಿತ್ರ ನೋಡಿ ಪ್ರತಿಕ್ರಿಯೆ ತಿಳಿಸಿದ್ದರು. ಈ ನಡುವೆ ನಟ ರಿಷಬ್​​ ಶೆಟ್ಟಿ ತಮಿಳು ನಟ ಕಾರ್ತಿ ಮತ್ತು ಸೂಪರ್ ಸ್ಟಾರ್​ ರಜನಿಕಾಂತ್​ (Superstar Rajinikanth) ರನ್ನ ಸಹ ಭೇಟಿ ಮಾಡಿದ್ದರು.

ಸೂಪರ್ ಸ್ಟಾರ್​ ರಜನಿಕಾಂತ್​​ರನ್ನು ಭೇಟಿ ಮಾಡಿದ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ರಿಷಬ್ ಶೆಟ್ಟಿ ಹಂಚಿಕೊಂಡಿದ್ದರು. ಈ ಫೋಟೋಗಳು ಸಾಕಷ್ಟು ವೈರಲ್​ ಕೂಡ ಆಗಿತ್ತು. ಸುಮಾರು ಒಂದು ಗಂಟೆಗಳ ಕಾಲ  ರಜನಿಕಾಂತರೊಂದಿಗೆ ರಿಷಬ್​ ಶೆಟ್ಟಿ ಕಾಲ ಕಳೆದಿದ್ದರು. ಆದರೆ ಅವರು ಭೇಟಿ ಸಂದರ್ಭದಲ್ಲಿ ಏನೆಲ್ಲಾ ಮಾತನಾಡಿದರು ಎನ್ನುವ ಅಚ್ಚರಿ ಮಾಹಿತಿ ಮಾತ್ರ ಇದುವರೆಗೂ ಹೊರಗೆ ಬಂದಿರಲಿಲ್ಲ. ಈ ಕುರಿತಾಗಿ ಕೆಲ ಇಂಟ್ರೆಸ್ಟಿಂಗ್ ಸಂಗತಿಗಳನ್ನು ಖುದ್ದು ರಿಷಬ್​ ಶೆಟ್ಟಿ ಅವರೇ ಹಂಚಿಕೊಂಡಿದ್ದಾರೆ.

ಸ್ಟಾರ್​ ಸುವರ್ಣ ವಾಹಿನಿಯಲ್ಲಿ ಪ್ರಸಾರಾಗುತ್ತಿರುವ ನಟ ಅಕುಲ್​​ ಬಾಲಾಜಿ ನಡೆಸಿಕೊಡುತ್ತಿರುವ ‘ಗಾನ ಬಜಾನ ಸೀಸನ್ 3’​​ ಶೋನಲ್ಲಿ ಇತ್ತೀಚೆಗೆ ‘ಕಾಂತಾರ’ ಚಿತ್ರ ತಂಡ ಪಾಲ್ಗೊಂಡಿತ್ತು. ಈ ವೇಳೆ ರಿಷಬ್​ ಶೆಟ್ಟಿ ರಜನಿಕಾಂತ್​ ಅವರೊಂದಿಗೆ ಕಳೆದ ಕೆಲ ಸುಂದರ ಕ್ಷಣಗಳನ್ನು ಹಂಚಿಕೊಂಡಿದ್ದಾರೆ. ‘ಕಾಂತಾರ’ ಚಿತ್ರ ನೋಡಿ ಖುದ್ದು ರಜನಿಕಾಂತ ಅವರೇ ರಿಷಬ್​ ಶೆಟ್ಟಿ ಅವರಿಗೆ ಫೋನ್ ಮಾಡಿ ತಮ್ಮ ಮನೆಗೆ ಕರೆಸಿಕೊಂಡಿದ್ದರು. ‘ತುಂಬಾ ವರ್ಷಗಳ ನಂತರ ಈ ರೀತಿಯ ಚಿತ್ರವನ್ನು ನಾನು ನೋಡಿದೆ’ ಎಂದು ರಜನಿಕಾಂತ್ ಹೇಳಿದ್ದಾಗಿ ರಿಷಬ್ ಶೆಟ್ಟಿ ಮಾಹಿತಿ ಹಂಚಿಕೊಂಡಿದ್ದಾರೆ. ರಜನಿ ಭೇಟಿ ಸಂದರ್ಭದಲ್ಲಿ ರಿಷಬ್ ಅವರನ್ನು ಸನ್ಮಾನಿಸಿ, ಚೈನ್​ ಕೂಡ ನೀಡಿದ್ದಾರೆ. ಚೈನ್​ನ ಒಂದು ಬದಿಯಲ್ಲಿ ರಜನಿಕಾಂತ ಆರಾಧಿಸುವ ಮಹಾ ಅವತಾರ ಬಾಬಾಜಿ ಫೋಟೋ ಇದ್ದರೆ ಇನ್ನೊಂದು ಬದಿಯಲ್ಲಿ ರಜನಿಕಾಂತ ಅವರ ಹಸ್ತ ಮುದ್ರೆ ಇದೆ.

‘ನೀವು ಯಾಕೆ ಅವರನ್ನು ಭೇಟಿ ಮಾಡುವಾಗ ಪಂಚೆ ಧರಿಸಿರಲಿಲ್ಲ’ ಎಂದು ಅಕುಲ್​​ ಬಾಲಾಜಿ ಕೇಳಿದ್ದಾರೆ. ಅದಕ್ಕೆ ಉತ್ತರಿಸಿದ ರಿಷಬ್ ‘ನಾನು ಆ ಸಂದರ್ಭದಲ್ಲಿ ಕೇಳರ, ಕೊಚ್ಚಿ, ವೈಜಾಕ್​​ ನಗರಗಳಲ್ಲಿ ಥಿಯೇಟರ್​​ಗಳಿಗೆ ಭೇಟಿ ನೀಡುತ್ತಿದೆ. ಎಲ್ಲಾ ಕಡೆನೂ ವಿಮಾನದಲ್ಲಿ ಹೋಗಬೇಕಿತ್ತು. ಒಂದು ವೇಳೆ ಪ್ಯಾನ್​ಗೆ ಪಂಚೆ ಎಲ್ಲಾದರೂ ಹಾರಿ ಹೊದ್ರೆ ಕಷ್ಟ ಎಂದು ಪ್ಯಾಂಟ್ ಧರಿಸಿದ್ದೆ’  ಎಂದು ನಕ್ಕರು.

ಸಾಮಾಜಿಕ ಜಾಲತಾಣದಲ್ಲೂ ಇದೇ ವಿಚಾರವಾಗಿ ಫ್ಯಾನ್ಸ್​ಗಳಿಗೂ ಬೇಸರವಿದೆ. ‘ರಜನಿಕಾಂತ್​ ಭೇಟಿ ವೇಳೆ ನೀವು ಯಾಕೆ ಪಂಚೆ ಧರಿಸಿಲ್ಲ ರಿಷಬ್ ಅವರೇ. ಪಂಚೆ ಮಿಸ್ಸಿಂಗ್​ ಎಂದು ಫ್ಯಾನ್ಸ್ ಕಮೆಂಟ್ ಮಾಡಿದ್ದರು’ ಎಂಬುದನ್ನು ರಿಷಬ್ ಹೇಳಿದ್ದಾರೆ . ಸದ್ಯ ‘ಕಾಂತಾರ’ ಚಿತ್ರ 300 ಕೋಟಿಗೂ ಅಧಿಕ ಗಳಿಕೆ ಮಾಡಿದ್ದು, ಕೆಲವು ಕಡೆಗಳಲ್ಲಿ ಇನ್ನು ಹೌಸ್​ಫುಲ್​ ಪ್ರದರ್ಶನ ಕಾಣುತ್ತಿದೆ. ‘ಕಾಂತಾರ’ ಚಿತ್ರ ತಂಡ ಗೆಲುವಿನಿಂದ ಖುಷಿಯಲ್ಲಿದೆ. ಇನ್ನೇನು ಕೆಲವೇ ದಿನಗಳಲ್ಲಿ ಸಿನಿಮಾ ಓಟಿಟಿಗೂ ಬರಲಿದೆ.

ಮತ್ತಷ್ಟು ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

ತಾಜಾ ಸುದ್ದಿ

TV9 Kannada


Leave a Reply

Your email address will not be published.