ರಜೆ ಘೋಷಣೆ ಹಿಂಪಡೆದ ಧಾರವಾಡ ಜಿಲ್ಲಾಧಿಕಾರಿ; ಸೋಂಕಿನ ಪ್ರಮಾಣ ಆಧರಿಸಿ ಶಾಲೆಗೆ ರಜೆ ನೀಡುವುದಾಗಿ ಆದೇಶ | Dharwad district collector on leave proclamation; Vacation to school based on infection rate


ರಜೆ ಘೋಷಣೆ ಹಿಂಪಡೆದ ಧಾರವಾಡ ಜಿಲ್ಲಾಧಿಕಾರಿ; ಸೋಂಕಿನ ಪ್ರಮಾಣ ಆಧರಿಸಿ ಶಾಲೆಗೆ ರಜೆ ನೀಡುವುದಾಗಿ ಆದೇಶ

ಧಾರವಾಡ ಜಿಲ್ಲಾಧಿಕಾರಿ ನಿತೇಶ್ ಪಾಟೀಲ್

ಧಾರವಾಡ : ಕರ್ನಾಟಕದಲ್ಲಿ ದಿನದಿಂದ ದಿನಕ್ಕೆ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾದ ಹಿನ್ನೆಲೆಯಲ್ಲಿ ಧಾರವಾಡ ಮತ್ತು ಹುಬ್ಬಳ್ಳಿ ತಾಲ್ಲೂಕಿನ ಶಾಲೆಗಳಿಗೆ  ಧಾರವಾಡ ಜಿಲ್ಲಾಧಿಕಾರಿ ನಿತೇಶ್ ಪಾಟೀಲ್  ಈ ಹಿಂದೆ ರಜೆ ಘೋಷಣೆ ಮಾಡುವುದಾಗಿ ಆದೇಶ ಹೊರಡಿಸಿದ್ದರು. ಆದರೆ ಇಂದು ಆ ಆದೇಶವನ್ನು ಹಿಂಪಡೆದಿದ್ದಾರೆ.

ಜಿಲ್ಲೆಯ ಧಾರವಾಡ ನಗರ ಮತ್ತು ಗ್ರಾಮೀಣ ಹಾಗೂ ಹುಬ್ಬಳ್ಳಿ ನಗರ ಹಾಗೂ ಗ್ರಾಮೀಣ ತಾಲೂಕಿನಾದ್ಯಂತ ಭೌತಿಕ ತರಗತಿಗಳು, ವಸತಿ ಶಾಲೆಗಳು ಹಾಗೂ ಅಂಗನವಾಡಿ ಕೇಂದ್ರಗಳನ್ನು ಒಳಗೊಂಡು ಎಲ್ಲ ಮಾಧ್ಯಮದ 1 ರಿಂದ 8ನೇ ತರಗತಿವರೆಗಿನ ಶಾಲೆಗಳಿಗೆ ಜ.13ರಿಂದ ಮುಂದಿನ ಆದೇಶದವರೆಗೂ ರಜೆ ಎಂದು ಆದೇಶ ಹೊರಡಿಸಲಾಗಿತ್ತು. ಆದರೆ ಇಂದು ಆ ಆದೇಶವನ್ನು ಹಿಂಪಡೆದ ಜಿಲ್ಲಾಧಿಕಾರಿ ನಿತೇಶ್ ಪಾಟೀಲ್ ಸೋಮವಾರದಿಂದ ಮತ್ತೆ ಶಾಲೆಗಳು ಯಥಾ ಪ್ರಕಾರ ನಡೆಯಲ್ಲಿದ್ದು, ಸೋಂಕಿನ ಪ್ರಮಾಣ ಆಧರಿಸಿ ಶಾಲೆಗೆ ರಜೆ ನೀಡುವುದಾಗಿ ಹೇಳಿದ್ದಾರೆ.

ಇನ್ನು, ಹುಬ್ಬಳ್ಳಿ ವಿಮಾನ ನಿಲ್ದಾಣ ಸಮೀಪವಿರುವ ಕೆಎಲ್​ಇ ಎಂಜಿನಿಯರಿಂಗ್ ಕಾಲೇಜಿನಲ್ಲಿ ಒಂದೇ ದಿನ 15 ವಿದ್ಯಾರ್ಥಿಗಳಲ್ಲಿ ಕೊರೊನಾ ಸೋಂಕು ವರದಿಯಾಗಿವೆ. ಸೋಂಕು ಪ್ರಮಾಣ ಹೆಚ್ಚಾದ ಹಿನ್ನೆಲೆಯಲ್ಲಿ ಭೌತಿಕ ತರಗತಿಗಳನ್ನು ರದ್ದುಗೊಳಿಸಿ ಆನ್​ಲೈನ್ ತರಗತಿ ನಡೆಸಲು ಕಾಲೇಜಿನ ಆಡಳಿತ ಮಂಡಳಿ ನಿರ್ಧರಿಸಿದೆ.

ದಾವಣಗೆರೆ: 71 ವಿದ್ಯಾರ್ಥಿಗಳಿಗೆ ಸೋಂಕು

ದಾವಣಗೆರೆ ಜಿಲ್ಲೆ ಚನ್ನಗಿರಿ ತಾಲೂಕಿನ ಮಾವಿನಹೊಳೆ ಬಳಿಯಿರುವ ಇಂದಿರಾಗಾಂಧಿ ವಸತಿ ಶಾಲೆಯ 71 ವಿದ್ಯಾರ್ಥಿಗಳಿಗೆ ಕೊರೊನಾ ಸೋಂಕು ದೃಢಪಟ್ಟಿದೆ ಎಂದು ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಮಾಹಿತಿ ನೀಡಿದ್ದಾರೆ. ನಿಟ್ಟುವಳ್ಳಿ ಮಾರುತಿ ಶಾಲೆಯಲ್ಲಿ ಐವರಿಗೆ ಸೋಂಕು ಕಾಣಿಸಿಕೊಂಡಿದೆ. ಅವರಗೊಳ್ಳ, ವಡ್ಡಿನಹಳ್ಳಿಯಲ್ಲಿ ಇಬ್ಬರು ಮಕ್ಕಳಲ್ಲಿ ಸೋಂಕು ದೃಢಪಟ್ಟಿದೆ. ಜಗಳೂರಿನ ಎನ್​ಎಂಕೆ ಶಾಲೆಯಲ್ಲಿ 6, ಗವಿಸಿದ್ದೇಶ್ವರ ಶಾಲೆಯ ಮೂವರು ಮಕ್ಕಳಲ್ಲಿ ಸೋಂಕು ದೃಢಪಟ್ಟಿದೆ. ಯಾವುದೇ ಕಾರಣಕ್ಕೂ ಜಿಲ್ಲೆಯ ಎಲ್ಲ ಶಾಲೆಗಳನ್ನು ಬಂದ್ ಮಾಡುವುದಿಲ್ಲ. ಸೋಂಕು ಕಾಣಿಸಿಕೊಂಡ ನಿರ್ದಿಷ್ಟ ಶಾಲೆಗಳನ್ನು ಮಾತ್ರ ಏಳು ದಿನ ಬಾಗಿಲು ಹಾಕುತ್ತೇವೆ ಎಂದು ಜಿಲ್ಲಾಧಿಕಾರಿ ಸ್ಪಷ್ಟಪಡಿಸಿದ್ದಾರೆ.

ಮಕ್ಕಳ ಶೈಕ್ಷಣಿಕ ಹಿತದೃಷ್ಟಿಯಿಂದ ಮಕ್ಕಳ ಶಿಕ್ಷಣ ದೃಷ್ಟಿಯಿಂದ ಯಾವುದೇ ಶಾಲೆಗಳನ್ನು ಬಂದ್ ಮಾಡುವುದಿಲ್ಲ. ಆರೋಗ್ಯ ಇಲಾಖೆ ಕೂಡ ಟೆಸ್ಟಿಂಗ್ ಹೆಚ್ಚಿಸಲಿದೆ. ಏಕಾದಶಿ ಹಿನ್ನಲೆಯಲ್ಲಿ ಕೇವಲ 50 ಜನರಿಗೆ ಮಾತ್ರ ದೇಗುಲ ಪ್ರವೇಶಕ್ಕೆ ಅವಕಾಶ ನೀಡಲಾಗಿದೆ. ಸಾಮಾಜಿಕ ಅಂತರ ಹಾಗೂ ಮಾಸ್ಕ್ ಕಡ್ಡಾಯ ಮಾಡಲಾಗಿದೆ. ಕೊವಿಡ್ ನಿಯಮಾವಳಿ ಉಲ್ಲಂಘನೆ ‌ಮಾಡಿದವರಿಗೆ ಶಿಕ್ಷೆ ವಿಧಿಸಲಾಗುವುದು ಎಂದು ಹೇಳಿದರು. ಭಕ್ತಾದಿಗಳು ದೇವಾಲಯಗಳಿಗೆ ತೆರಳುವ ಬದಲು ಮನೆಗಳಲ್ಲಿಯೇ ಪ್ರಾರ್ಥನೆ ಮಾಡಬೇಕು ಎಂದು ಮನವಿ ಮಾಡಿದರು.

TV9 Kannada


Leave a Reply

Your email address will not be published. Required fields are marked *