ರಣಭೀಕರ ಕುಂಭದ್ರೋಣ ಮಳೆಗೆ ತ.ನಾಡಿನಲ್ಲಿ ನಾಲ್ವರು ಮೃತ.. ಇನ್ನೂ 3 ದಿನ ರೆಡ್ ಅಲರ್ಟ್!


ಚೆನ್ನೈ: ಕಳೆದ ನಾಲ್ಕು ದಿನಗಳಿಂದಲೂ ದ್ರಾವಿಡ ನಾಡಲ್ಲಿ ಬಿಟ್ಟು ಬಿಡದೇ ವರುಣ ರಾಯ ಆರ್ಭಟಿಸ್ತಿದ್ದಾನೆ. ರಣ ಭೀಕರ ಕುಂಭದ್ರೋಣ ಮಳೆಗೆ ತಮಿಳುನಾಡಿನ ಮಂದಿ ನಲುಗಿ ಹೋಗಿದ್ದು, ನಾಲ್ವರು ಉಸಿರು ಚೆಲ್ಲಿದ್ದಾರೆ. ಇತ್ತ ಇದೆಲ್ಲವನ್ನ ಗಮನಿಸಿದ ಮದ್ರಾಸ್​ ಹೈ ಕೋರ್ಟ್​, ರಾಜ್ಯದಲ್ಲಿ ಅರ್ಧ ವರ್ಷ ಕ್ರೈ ಇದ್ರೆ ಇನ್ನರ್ಧ ವರ್ಷ ಡೈ ಸ್ಥಿತಿ ಇರುತ್ತೆ ಅಂತಾ ಚೆನ್ನೈ ಪಾಲಿಕೆಯನ್ನ ತರಾಟೆಗೆ ತಗೆದುಕೊಂಡಿದೆ.

ದ್ರಾವಿಡ ನಾಡಲ್ಲಿ ಮುಂದುವರಿದ ವರುಣಾರ್ಭಟ
2015, ತಮಿಳುನಾಡಿಗೆ ಕಂಡು ಕೇಳರಿಯಂದತಹ ಮಳೆ ಅಪ್ಪಳಿಸಿತ್ತು. ಆ ರಣ ಭೀಕರ ಮಳೆಗೆ ಇಡೀ ತಮಿಳುನಾಡು, ಅದರಲ್ಲೂ ಚೆನ್ನೈ ನಗರ ಅಕ್ಷರಶಃ ನಲಗಿ ಹೋಗಿತ್ತು. ಭಾರೀ ಮಳೆಗೆ ಜನ ಬೀದಿಪಾಲಾಗಿದ್ದರು. ಸದ್ಯ ಇನ್ನೂ ಕೂಡ ತಮಿಳುನಾಡಿನ ಮಂದಿ ಆ ಭೀಕರ ಮಳೆಯ ಗುಂಗಿನಿಂದ ಹೊರಬಂದಿಲ್ಲ. ಹೀಗಿರುವಾಗ ಮತ್ತೊಂದು ರಣ ಭೀಕರ ಮಳೆ ದ್ರಾವಿಡ ನಾಡಿಗೆ ಬಂದಪ್ಪಳಿಸಿದೆ.

ಒಂದಲ್ಲ, ಎರಡಲ್ಲ, ಕಳೆದ ನಾಲ್ಕೈದು ದಿನಗಳಿಂದ ತಮಿಳುನಾಡಿನಲ್ಲಿ ಬಿಟ್ಟುಬಿಡದೇ ಮಳೆರಾಯ ಆರ್ಭಟಿಸ್ತಿದ್ದಾನೆ. ಸದ್ಯ ಇವತ್ತು ಕೂಡ ಮಳೆಯ ಆರ್ಭಟ ಮುಂದುವರಿದಿದ್ದು, ಚೆನ್ನೈ, ಚೆಂಗಲ್ಪಟ್ಟು, ತಿರುವಳ್ಳೂರು, ಕಾಂಚೀಪುರಂನಲ್ಲಿ ಬಿಟ್ಟುಬಿಡದೇ ಮಳೆ ಸುರೀತಿದೆ. ಇನ್ನು ಭೀಕರ ಕುಂಭದ್ರೋಣ ಮಳೆಗೆ ತಮಿಳುನಾಡಿನ ನಾಲ್ಕು ಮಂದಿ ಉಸಿರು ಚೆಲ್ಲಿದ್ದಾರೆ.

ತಮಿಳುನಾಡಿನ 14 ಜಿಲ್ಲೆಗಳಲ್ಲಿ ಆರೇಂಜ್ ಅಲರ್ಟ್ ಘೋಷಣೆ
ಸದ್ಯ ತಮಿಳುನಾಡಿನ ಕರಾವಳಿ ಭಾಗದಲ್ಲಿ ಅತಿ ಹೆಚ್ಚು ಮಳೆಯಾಗ್ತಿದ್ದು, ರಾಜ್ಯದ 14 ಜಿಲ್ಲೆಯ ಶಾಲಾ-ಕಾಲೇಜುಗಳು ಸಂಪೂರ್ಣ ಬಂದ್ ಆಗಿವೆ. ಇನ್ನೂ ಮೂರು ದಿನಗಳ ಕಾಲ ತಮಿಳುನಾಡಿನ ಹಲವೆಡೆ ಭಾರತೀಯ ಹವಾಮಾನ ಇಲಾಖೆ ರೆಡ್ ಅಲರ್ಟ್ ಘೋಷಿಸಿದೆ. ಶುಕ್ರವಾರದವರೆಗೂ ತಮಿಳುನಾಡಿನಾದ್ಯಂತ ಭಾರೀ ಮಳೆಯಾಗಲಿದೆ ಅಂತಾ ತಿಳಿಸಿದ್ದು, ಈಗಾಗಲೇ 14 ಜಿಲ್ಲೆಗಳಲ್ಲಿ ಆರೇಂಜ್ ಅಲರ್ಟ್ ಘೋಷಿಸಲಾಗಿದೆ.

ಇತ್ತ ಭಾರೀ ಮಳೆಗೆ ತಮಿಳುನಾಡಿನ ಜನ ಜೀವನ ಸಂಪೂರ್ಣ ಅಸ್ತವ್ಯಸ್ತವಾಗಿದೆ. 2015ರ ಆ ದುಸ್ಥಿತಿಯೇ ತಮಿಳುನಾಡಿನಲ್ಲಿ ಮತ್ತೊಮ್ಮೆ ಬಂದೊದಗಿದೆ. ಸದ್ಯ ಇವೆಲ್ಲವನ್ನೂ ಗಮನಿಸಿದ ಮದ್ರಾಸ್​ ಹೈ ಕೋರ್ಟ್​, ಚೆನ್ನೈ ನಗರ ಪಾಲಿಕೆಯನ್ನ​ ತರಾಟೆಗೆ ತಗೆದುಕೊಂಡಿದೆ. ರಾಜ್ಯದಲ್ಲಿ ಅರ್ಧ ವರ್ಷ ಅರ್ಧವರ್ಷ ಕ್ರೈ, ಇನ್ನರ್ಧ ವರ್ಷ ಡೈ ಪರಿಸ್ಥಿತಿ ಇರುತ್ತೆ ಅಂತಾ ಬೇಸರ ವ್ಯಕ್ತಪಡಿಸಿದೆ.

ಮದ್ರಾಸ್​ ಹೈಕೋರ್ಟ್​ ಚಾಟಿ!
ರಾಜ್ಯದಲ್ಲಿ ಅರ್ಧ ವರ್ಷ ನೀರಿಗಾಗಿ ಅಳುವಂತ ಪರಿಸ್ಥಿತಿ ಇದ್ರೆ, ಇನ್ನರ್ಧ ವರ್ಷ ನೀರಿನಿಂದಲೇ ಸಾಯುವಂತ ಪರಿಸ್ಥಿತಿ ಇರುತ್ತೆ. ಅಂದರೆ ಅರ್ಧವರ್ಷ ಕ್ರೈ, ಇನ್ನರ್ಧ ವರ್ಷ ಡೈ ಸ್ಥಿತಿ ಇರುತ್ತೆ ಅಂತಾ ಮದ್ರಾಸ್​ ಹೈ ಕೋರ್ಟ್​ ಬೇಸರ ವ್ಯಕ್ತಪಡಿಸಿದೆ. ಮಳೆಯಿಂದ ಚೆನ್ನೈ ನಗರವನ್ನ ಸಂಕಷ್ಟದಿಂದ ತಡೆಯಲು ಚೆನ್ನೈ ಪಾಲಿಕೆ ವಿಫಲವಾಗಿದೆ. 2015ರ ಪ್ರವಾಹದ ಬಳಿಕ ಏನೆಲ್ಲಾ ಕ್ರಮ ಕೈಗೊಳ್ಳಲಾಗಿದೆ ಅಂತಾ ಪಾಲಿಕೆಯನ್ನ ಹೈಕೋರ್ಟ್​ ತರಾಟೆಗೆ ತಗೆದುಕೊಂಡಿದೆ. ಮಳೆಗಾಲದಲ್ಲಿ ರಸ್ತೆಗಳು ಜಲಾವೃತವಾಗದಂತೆ ಎಚ್ಚರವಹಿಸಿ, ಜಲಮಾರ್ಗ ಅತಿಕ್ರಮಣ ಮಾಡಿದವರ ವಿರುದ್ಧ ಕ್ರಮ ಕೈಗೊಳ್ಳಿ. ಒಂದು ವೇಳೆ ಸಮಸ್ಯೆ ಕಂಟ್ರೋಲ್​ಗೆ ಸಿಗದಿದ್ದರೆ ಸುಮೋಟೋ ಕೇಸ್​ ದಾಖಲಿಸಿ ಅಂತಾ ತಿಳಿಸಿದೆ.

ಒಂದು ಕಡೆ ಭಾರೀ ಮಳೆ ತಮಿಳುನಾಡಿನಲ್ಲಿ ಜನಜೀವನ ಅಸ್ತವ್ಯಸ್ತವಾಗೋದಕ್ಕೆ ಕಾರಣವಾದ್ರೆ. ಇನ್ನೊಂದು ಕಡೆ ಪಾಲಿಕೆಯ ಬೇಜವಬ್ದಾರಿತನವೂ ಇದಕ್ಕೆ ಪ್ರಮುಖ ಕಾರಣ ಅಂತಾ ಹೇಳಲಾಗ್ತಿದೆ. ಆದ್ರೆ ಕೇವಲ ಐದು ವರ್ಷದ ಅಂತರದಲ್ಲೇ ಮತ್ತೊಂದು ರಣಭೀಕರ ಮಳೆಗೆ ದ್ರಾವಿಡನಾಡಿನ ಮಂದಿ ತತ್ತರಿಸಿರೋದು ಮಾತ್ರ ದುರಂತ.

News First Live Kannada


Leave a Reply

Your email address will not be published. Required fields are marked *