ಮುಂಬೈ: ಬಾಲಿವುಡ್‍ನ ಖ್ಯಾತ ನಟ ರಣ್‍ಧೀರ್ ಕಪೂರ್‍ ಗೆ ಕೊರೊನಾ ಪಾಸಿಟಿವ್ ಆಗಿದ್ದು, ಮುಂಬೈನ ಕೋಕಿಲಾಬೆನ್ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ವರದಿಯಾಗಿದೆ.

74 ವರ್ಷ ಪ್ರಾಯದ ರಣ್‍ಧೀರ್ ಕಪೂರ್ ಕೊರೊನಾ ದೃಢವಾಗುತ್ತಿದ್ದಂತೆ ಮುಂಬೈನ ಕೋಕಿಲಾಬೆನ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿನ ವೈದ್ಯರು ಪರೀಕ್ಷಿಸಿದ ಬಳಿಕ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಐಸಿಯುನಲ್ಲಿ ನಿಗಾ ವಹಿಸಲಾಗಿದೆ ಎಂದು ಸ್ಥಳೀಯ ಮಾಧ್ಯಮವೊಂದು ವರದಿಮಾಡಿದೆ.

ಈ ಕುರಿತು ಪ್ರತಿಕ್ರಿಯಿಸಿರುವ ಕೋಕಿಲಾಬೆನ್ ಆಸ್ಪತ್ರೆಯ ವೈದ್ಯರು, ಕಪೂರ್ ಅವರ ಆರೋಗ್ಯ ಇದೀಗ ಸ್ಥಿರವಾಗಿದೆ. ಆದರೂ ಕೂಡ ಅವರನ್ನು ಐಸಿಯುನಲ್ಲಿ ಇರಿಸಲಾಗಿದ್ದು ಮುಂದಿನ ಕೆಲದಿನಗಳವರೆಗೆ ಅವರ ಮೇಲೆ ಹೆಚ್ಚಿನ ನಿಗಾ ವಹಿಸಲಾಗುವುದು ಎಂದಿದ್ದಾರೆ.

ಕಳೆದ ವರ್ಷ ರಣ್‍ಧೀರ್ ಕಪೂರ್ ಅವರ ಕಿರಿಯ ಸಹೋದರ ರಿಷಿ ಕಪೂರ್ ಕ್ಯಾನ್ಸರ್ ಕಾಯಿಲೆಗೆ ತುತ್ತಾಗಿ ಮೃತಪಟ್ಟಿದ್ದರು. ಇವರೊಂದಿಗೆ ಇನ್ನೋರ್ವ ಸಹೋದರ ರಾಜೀವ್ ಕಪೂರ್ ಕೂಡ ಸಾವನ್ನಪ್ಪಿದ್ದಾರೆ.

ರಣ್‍ಧೀರ್ ಕಪೂರ್ ಅವರು ಕಲ್ ಅಜ್ ಕಲ್‍ರೆ ಕಲ್, ಜೀತ್, ಜವಾನಿ ದಿವಾನಿ, ಲಾಫಾಂಗೆ ರಾಂಪುರ್ ಕಾ ಲಕ್ಷ್ಮಣ್ ಹಾಥ್ ಕಿ ಸಫೈ ಸೇರಿದಂತೆ ಹಲವು ಉತ್ತಮ ಚಿತ್ರಗಳಿಗೆ ಬಣ್ಣ ಹಚ್ಚಿದ್ದಾರೆ. ಕಪೂರ್ ಅವರು ನಟಿ ಬಬಿತಾ ಅವರನ್ನು ಮದುವೆಯಾಗಿದ್ದರು. ಇವರಿಗೆ ಇಬ್ಬರು ಪುತ್ರಿಯರಿದ್ದು ಕರೀಷ್ಮಾ ಕಪೂರ್ ಮತ್ತು ಕರೀನಾ ಕಪೂರ್ ಇವರಿಬ್ಬರೂ ಕೂಡ ಹಿಂದಿ ಚಿತ್ರರಂಗದ ಖ್ಯಾತ ನಟಿಮನಿಯಾರಾಗಿ ಗುರುತಿಸಿಕೊಂಡಿದ್ದಾರೆ.

The post ರಣ್‍ಧೀರ್ ಕಪೂರ್‍ ಗೆ ಕೊರೊನಾ ಪಾಸಿಟಿವ್-ಐಸಿಯುನಲ್ಲಿ ಚಿಕಿತ್ಸೆ appeared first on Public TV.

Source: publictv.in

Source link