ಬೆಂಗಳೂರು: ನಟ ಪುನೀತ್ ರಾಜ್ಕುಮಾರ್ ಸಾವಿನ ಕುರಿತು ಆಸ್ಪತ್ರೆ ಮತ್ತು ವೈದ್ಯರ ವಿರುದ್ಧ ಕೇಳಿಬರುತ್ತಿರುವ ಆರೋಪಗಳ ಹಿನ್ನೆಲೆ ರಾಜ್ಯ ಖಾಸಗಿ ಆಸ್ಪತ್ರೆಗಳ ಒಕ್ಕೂಟ (ಫನಾ) ಡಾ. ರಮಣರಾವ್ ಗೆ ಸೂಕ್ತ ರಕ್ಷಣೆ ನೀಡುವಂತೆ ಕೋರಿ ಸಿಎಂಗೆ ಪತ್ರ ಬರೆದಿದೆ.
ಸಾಮಾಜಿಕ ಜಾಲತಾಣಗಳಲ್ಲಿ ನಟ ಪುನೀತ್ ಸಾವಿಗೆ ವೈದ್ಯರ ನಿರ್ಲಕ್ಷ್ಯ ಕಾರಣ ಎಂದು ಅಭಿಮಾನಿಗಳು ಆರೋಪಿಸುತ್ತಿದ್ದು, ಈ ರೀತಿ ಅಭಿಪ್ರಾಯಗಳು ವೈದ್ಯ ವೃತ್ತಿಯನ್ನು ಆತಂಕಕ್ಕೀಡು ಮಾಡಿದೆ ಎಂದು ಫನಾ ಅಧ್ಯಕ್ಷ ಡಾ. ಪ್ರಸನ್ನ ಕಳವಳ ವ್ಯಕ್ತಪಡಿಸಿದ್ದಾರೆ. ಹೀಗಾಗಿ ಮುಂಜಾಗ್ರತಾ ಕ್ರಮವಾಗಿ ಪುನೀತ್ಗೆ ಚಿಕಿತ್ಸೆ ನೀಡಿದ ರಮಣಶ್ರೀ ಆಸ್ಪತ್ರೆಯ ವೈದ್ಯ ಡಾ.ರಮಣ್ ರಾವ್ ಮತ್ತು ಚಿಕಿತ್ಸೆಯಲ್ಲಿ ಭಾಗಿಯಾದ ವೈದ್ಯಕೀಯ ಸಿಬ್ಬಂದಿಗೆ ಭದ್ರತೆ ಕೋರಿ ಸಿಂಎಂಗೆ ಪತ್ರ ಬರೆಯಲಾಗಿದೆ ಎಂದು ಅವರು ಹೇಳಿದ್ದಾರೆ.
FIR ಅಥವಾ PCR ದಾಖಲಿಸಿಕೊಳ್ಳುವ ಮುನ್ನ ಸುಪ್ರೀಂ ಕೊರ್ಟ್ ಗೈಡ್ ಲೈನ್ಸ್ ಪ್ರಕಾರ ಪುನೀತ್ ಸಾವಿನ ಬಗ್ಗೆ ನಡೆದಿರೋ ಚರ್ಚೆಗಳು ವೈದ್ಯಕೀಯ ಗೌಪ್ಯತೆಯ ಉಲ್ಲಂಘನೆ ಮಾಡಿದೆ ಎಂದು ಗಮನಿಸಬೇಕು. ವೈದ್ಯರಿಗೆ ಅವರದ್ದೇ ಆದ ಇತಿ-ಮಿತಿಗಳಿವೆ. ಜೀವ ಉಳಿಸುವುದು ಎಲ್ಲಾ ಸಂದರ್ಭದಲ್ಲಿ ಸಾಧ್ಯವಾಗುವುದಿಲ್ಲ ಎಂದು ಡಾ. ಪ್ರಸನ್ನ ತಿಳಿಸಿದ್ದಾರೆ.
ಇನ್ನು ಮೆಡಿಕಲ್ ಟ್ರೀಟ್ಮೆಂಟ್ ಮತ್ತು ಮೆಡಿಕಲ್ ಪ್ರೋಫೆಷನ್ ಬಗ್ಗೆ ಸಾರ್ವಜನಿಕವಾಗಿ ಚರ್ಚಿಸುಸುತ್ತಿರುವ ಕುರಿತು ಕೂಡ ಫನಾ ಪತ್ರದಲ್ಲಿ ಉಲ್ಲೇಖಿಸಿದೆ. ಸುಪ್ರೀಂಕೋರ್ಟ್ ರೂಲ್ಸ್ ಪ್ರಕಾರ ಮೆಡಿಕಲ್ ಟ್ರೀಟ್ಮೆಂಟ್ ಮತ್ತು ಮೆಡಿಕಲ್ ಪ್ರೊಫೆಷನ್ ಬಗ್ಗೆ ಪಬ್ಲಿಕ್ ನಲ್ಲಿ ಡಿಬೆಟ್ ಮಾಡಬಾರದು ಅಂತಾ ನಿಯಮವಿದೆ. ಆದರೆ ಮಾಧ್ಯಮಗಳು ಮೆಡಿಕಲ್ ಟ್ರಿಟ್ಮೆಂಟ್ ಬಗ್ಗೆ ಸಾರ್ವಜನಿಕವಾಗಿ ಚರ್ಚೆ ನಡೆಸಿ ಕಾನೂನನ್ನು ಉಲ್ಲಂಘಿಸುತ್ತಿವೆ. ಹೀಗಾಗಿ ಈ ಬಗ್ಗೆ ಸೂಕ್ತ ಕೈಗೊಳ್ಳುವಂತೆ ಸಿಎಂಗೆ ಪತ್ರದ ಮೂಲಕ ಒಕ್ಕೂಟ ಮನವಿ ಮಾಡಿದೆ.