ರಮೇಶ್ ಜಾರಕಿಹೊಳಿಗೆ ಇಂದು ಬಿಗ್ ಡೇ – ಅತ್ಯಾಚಾರ ಪ್ರಕರಣ CBIಗೆ ವರ್ಗಾವಣೆ ಆಗುತ್ತಾ..?

ಬೆಂಗಳೂರು: ಮಾಜಿ ಸಚಿವರ ರಮೇಶ್ ಜಾರಕಿಹೊಳಿಗೆ ಇಂದು ಬಿಗ್ ಡೇ ಆಗಿದ್ದು, ರಾಸಲೀಲೆ ಪ್ರಕರಣ ಸಂಬಂಧ ಇಂದು ಹೈಕೋರ್ಟ್‍ನಲ್ಲಿ ಭವಿಷ್ಯ ನಿರ್ಧಾರವಾಗುತ್ತದೆ.

ಪ್ರಕರಣ ಸಂಬಂಧ ಹೈಕೋರ್ಟ್ ತನಿಖಾ ಪ್ರಗತಿ ವರದಿ ಕೇಳಿದೆ. ಈ ಹಿನ್ನೆಲೆಯಲ್ಲಿ ಎಸ್‍ಐಟಿ (Special Investigation Team) ಇಂದು ತನಿಖಾ ಪ್ರಗತಿ ವರದಿ ಸಲ್ಲಿಸಲಿದೆ. ವರದಿ ನೋಡಿದ ಬಳಿಕ ಹೈಕೋರ್ಟ್ ಎಸ್ ಐಟಿಯೇ ತನಿಖಾ ಮುಂದುವರೆಸಬೇಕಾ..? ಬೇರೆ ತನಿಖಾ ಸಂಸ್ಥೆಗೆ ವರ್ಗಾವಣೆ ಆಗ್ಬೇಕಾ..? ಎಂದು ತನಿಖಾ ಪ್ರಗತಿ ವರದಿ ನೋಡಿ ನ್ಯಾಯಾಲಯ ವಾದ ಪ್ರತಿವಾದ ಆಲಿಸಲಿದೆ.

ಬಳಿಕ ತನಿಖೆಯನ್ನು ಯಾರು ಮುಂದುವರಿಸಬೇಕು ಎಂದು ಆದೇಶ ಮಾಡಲಿದೆ. ವಿಶೇಷ ಅಂದರೆ ಯುವತಿಯ ಪರ ಹಿರಿಯ ವಕೀಲೆ ವಾದ ಮಂಡಿಸುತ್ತಾ ಇದ್ದಾರೆ. ಸುಪ್ರಿಂಕೋರ್ಟ್ ಹಿರಿಯ ವಕೀಲೆ ಇಂದ್ರ ಜೈಸಿಂಗ್ ವಾದ ಮಾಡ್ತಾ ಇದ್ದಾರೆ. ಬಹುತೇಕ ಇಂದು ರಮೇಶ್ ಜಾರಕಿಹೊಳಿ ಭವಿಷ್ಯ ನಿರ್ಧಾರ ಆಗಲಿದೆ.

ಏನಿದು ಪ್ರಕರಣ..?
ಮಾರ್ಚ್ 2ರಂದು ರಮೇಶ್ ಜಾರಕಿಹೊಳಿ ವಿರುದ್ಧ ಸಾಮಾಜಿಕ ಕಾರ್ಯಕರ್ತ ದಿನೇಶ್ ಕಲ್ಲಹಳ್ಳಿ ಬೆಂಗಳೂರಿನ ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಆ ಬಳಿಕ ಪೊಲೀಸರ ಮುಂದೆ ವಿಚಾರಣೆಗೆ ಹಾಜರಾಗಿ ತಮ್ಮ ಹೇಳಿಕೆ ದಾಖಲಿಸಿದ್ದರು. ಇತ್ತ ವೀಡಿಯೋ ಸಂಚಲನ ಸೃಷ್ಟಿಸಿ ರಮೇಶ್ ಜಾರಕಿಹೊಳಿ ತಮ್ಮ ಸ್ಥಾನಕ್ಕೆ ರಾಜೀನಾಮೆ ಸಹ ನೀಡಿದ್ದರು. ಆ ಬಳಿಕದಿಂದ ಅವರು ಎಲ್ಲೂ ಕಾಣಿಸಿಕೊಂಡಿರಲಿಲ್ಲ. ನಂತರ ಸ್ವತಃ ಸುದ್ದಿಗೋಷ್ಠಿ ಕರೆದು ಮಾಧ್ಯಮಗಳ ಮುಂದೆ ಭಾವುಕರಾಗಿದ್ದರು. ಇಷ್ಟೆಲ್ಲಾ ಆದ ನಂತರ ಮಾಜಿ ಸಚಿವರಿಗೆ ಕೊರೊನಾ ಪಾಸಿಟಿವ್ ದೃಢಪಟ್ಟು ಗೋಕಾಕ್ ಆಸ್ಪತ್ರೆಯಲ್ಲಿ ದಾಖಲಾಗಿದ್ದರು. ಬಳಿಕ ಪಿಪಿಇ ಕಿಟ್ ಧರಿಸಿ ಉಪಚುನಾವಣೆಗೆ ಮತದಾನ ಮಾಡಿದ್ದರು.

ಕೆಲ ದಿನಗಳ ಹಿಂದೆಯಷ್ಟೇ ಎಸ್‍ಐಟಿ ಮುಂದೆ ಹಾಜರಾಗಿದ್ದ ರಮೇಶ್ ಜಾರಕಿಹೊಳಿ, ಯುವತಿ ಸಮ್ಮತಿಯ ಮೇರೆಗೆ ಲೈಂಗಿಕ ಸಂಪರ್ಕದಲ್ಲಿ ಭಾಗಿಯಾಗಿದ್ದು, ಬಳಿಕ ಆಕೆಯೇ ವಿಡಿಯೋ ಮಾಡಿಕೊಂಡು ಈ ರೀತಿ ನಡೆದುಕೊಳ್ಳುತ್ತಾ ಇದ್ದಾಳೆ ಎಂದು ಅಧಿಕಾರಿಗಳ ಮುಂದೆ ಹೇಳಿಕೆ ನೀಡಿದ್ದರು. ಆದರೆ ಈ ಮಾಹಿತಿಯನ್ನು ಎಸ್‍ಐಟಿ ಅಧಿಕಾರಿಗಳು ಅಲ್ಲಗೆಳೆದಿದ್ದು, ಪ್ರಕರಣ ಇನ್ನೂ ತನಿಖಾ ಹಂತದಲ್ಲಿದೆ. ಯಾವುದೇ ಬೆಳವಣಿಗೆಯೂ ನಡೆದಿಲ್ಲ. ತನಿಖೆಯ ಬಳಿಕ ಸಂಪೂರ್ಣ ಸತ್ಯಾಸತ್ಯತೆ ಬೆಳಕಿಗೆ ಬರಲಿದೆ ಅಂತ ಈ ಸುದ್ದಿಗೆ ಎಸ್‍ಐಟಿ ಮೂಲಗಳು ಸ್ಪಷ್ಟಪಡಿಸಿತ್ತು.

The post ರಮೇಶ್ ಜಾರಕಿಹೊಳಿಗೆ ಇಂದು ಬಿಗ್ ಡೇ – ಅತ್ಯಾಚಾರ ಪ್ರಕರಣ CBIಗೆ ವರ್ಗಾವಣೆ ಆಗುತ್ತಾ..? appeared first on Public TV.

Source: publictv.in

Source link