ರವಿಚಂದ್ರನ್​ ನಟನೆಯ ‘ದೃಶ್ಯ 2’ ಒಟಿಟಿ ರಿಲೀಸ್​ ದಿನಾಂಕ ಫಿಕ್ಸ್​; ಇಲ್ಲಿದೆ ಮಾಹಿತಿ | Drishya 2 Film Releasing In Zee5 Ott Platform on February 25th


ರವಿಚಂದ್ರನ್​ ನಟನೆಯ ‘ದೃಶ್ಯ 2’ ಒಟಿಟಿ ರಿಲೀಸ್​ ದಿನಾಂಕ ಫಿಕ್ಸ್​; ಇಲ್ಲಿದೆ ಮಾಹಿತಿ

‘ದೃಶ್ಯ 2’ ತಂಡ

ರವಿಚಂದ್ರನ್​ ಅಭಿನಯದ ‘ದೃಶ್ಯ’ ಸಿನಿಮಾ (Drishya Movie) 2014ರಲ್ಲಿ ತೆರೆಗೆ ಬಂದು ದೊಡ್ಡ ಮಟ್ಟದಲ್ಲಿ ಹಿಟ್​ ಆಗಿತ್ತು. ರಾಜೇಂದ್ರ ಪೊನ್ನಪ್ಪ ಆಗಿ ರವಿಚಂದ್ರನ್ (Ravichandran)​ ಕಾಣಿಸಿಕೊಂಡಿದ್ದರು. ಕಳೆದ ವರ್ಷ ರಿಲೀಸ್​ ಆದ ಈ ಸಿನಿಮಾದ ಸೀಕ್ವೆಲ್​ ಕೂಡ ಹಿಟ್​ ಆಗಿತ್ತು. ‘ದೃಶ್ಯ’ ಸಿನಿಮಾದಲ್ಲಿ ಪೊಲೀಸ್​ ರಾಣೆಯ ಒಳಗೆ ಹೆಣ ಹೂತಿಡುವ ಮೂಲಕ ರಾಜೇಂದ್ರ ಪೊನ್ನಪ್ಪ ತನ್ನ ಕುಟುಂಬವನ್ನು ಕಾಪಾಡಿದ್ದ. ಆದರೆ ‘ದೃಶ್ಯ 2’ (Drishya 2) ಸಿನಿಮಾದಲ್ಲಿ ಆ ಕೇಸ್​ ರೀ-ಓಪನ್​ ಆಗುತ್ತದೆ. ಈ ಬಾರಿ ರಾಜೇಂದ್ರ ಪೊನ್ನಪ್ಪನಿಗಿಂತಲೂ ಬುದ್ಧಿವಂತಿಕೆಯಿಂದ ಪೊಲೀಸರು ಕೆಲಸ ಮಾಡುತ್ತಾರೆ. ಅದಕ್ಕೆ ಎದುರಾಗಿ ರಾಜೇಂದ್ರ ಪೊನ್ನಪ್ಪ ಬೇರೆ ರೀತಿಯಲ್ಲಿ ಪ್ಲಾನ್​ ಮಾಡುತ್ತಾನೆ. ಇದು ಪಾರ್ಟ್​ 2ನ ಹೈಲೈಟ್ ವಿಷಯ​. ಈಗ ಇದನ್ನು ಒಟಿಟಿಯಲ್ಲಿ ಕಣ್ತುಂಬಿಕೊಳ್ಳೋಕೆ ಸಮಯ ಕೂಡಿ ಬಂದಿದೆ.

ಕಳೆದ ವರ್ಷ ಡಿಸೆಂಬರ್ 10ರಂದು ‘ದೃಶ್ಯ 2’ ಸಿನಿಮಾ ದೊಡ್ಡ ಪರದೆಯಲ್ಲಿ ಬಿಡುಗಡೆ ಆಗಿತ್ತು. ಒಂದು ಮರ್ಡರ್​ ಮಿಸ್ಟರಿ ಕಥೆಯನ್ನು ಬಹಳ ಅಚ್ಚುಕಟ್ಟಾಗಿ ತೆರೆಗೆ ತಂದಿದ್ದರು ನಿರ್ದೇಶಕ ಪಿ. ವಾಸು. ರವಿಚಂದ್ರನ್​, ನವ್ಯಾ ನಾಯರ್​, ಆರೋಹಿ ನಾರಾಯಣ್​ ಮುಂತಾದವರು ನಟಿಸಿದ್ದ ದೃಶ್ಯ 2’ ಸಿನಿಮಾದ ಕ್ಲೈಮ್ಯಾಕ್ಸ್​ ಸಖತ್ ಥ್ರಿಲ್​ ನೀಡಿತ್ತು. ಮಲಯಾಳಂ ‘ದೃಶ್ಯಂ 2’ ಸಿನಿಮಾವನ್ನು ಕನ್ನಡದ ಸೊಗಡಿಗೆ ತಕ್ಕಂತೆ ಹೊಂದಾಣಿಕೆ ಮಾಡಲಾಗಿತ್ತು. ಈ ಸಿನಿಮಾ ಈಗ ಜೀ5ಗೆ ಫೆಬ್ರವರಿ 25ರಂದು ಎಂಟ್ರಿ ಕೊಡುತ್ತಿದೆ.

‘ದೃಶ್ಯ 2’ನಲ್ಲಿ ಪ್ರಮೋದ್ ಶೆಟ್ಟಿ ಖಡಕ್ ಪೊಲೀಸ್ ಅಧಿಕಾರಿಯಾಗಿ ಗಮನ ಸೆಳೆದಿದ್ದರು. ಅನಂತ್ ನಾಗ್ ಎಂದಿನಂತೆ ತಮ್ಮ ಪಾತ್ರಕ್ಕೆ ನ್ಯಾಯ ಒದಗಿಸಿದ್ದರು. ಉಳಿದಂತೆ ಸುರೇಶ್​ ಅರಸ್​ ಸಂಕಲನ, ಜಿಎಸ್​ವಿ ಸೀತಾರಾಮ್​ ಛಾಯಾಗ್ರಹಣ, ಅಜನೀಶ್​ ಬಿ. ಲೋಕನಾಥ್​ ಹಿನ್ನೆಲೆ ಸಂಗೀತ ‘ದೃಶ್ಯ 2’ ಸಿನಿಮಾಕ್ಕಿದೆ.

ಜೀ5ನಲ್ಲಿ ಇತ್ತೀಚೆಗೆ  ಕನ್ನಡದ ಹಲವು ಸಿನಿಮಾಗಳು ರಿಲೀಸ್​ ಆಗಿ ಸದ್ದು ಮಾಡಿವೆ. ಶಿವರಾಜ್​ಕುಮಾರ್​ ನಟನೆಯ ‘ಭಜರಂಗಿ 2’ ಹಾಗೂ ರಾಜ್​ ಬಿ. ಶೆಟ್ಟಿ ನಟನೆಯ ‘ಗರುಡ ಗಮನ ವೃಷಭ ವಾಹನ’ ಚಿತ್ರಗಳು  ಜೀ5ನಲ್ಲಿ ರಿಲೀಸ್​ ಆಗಿದೆ. ಈಗ ‘ದೃಶ್ಯ 2’ ಕೂಡ ಜೀ5ನಲ್ಲೇ ತೆರೆಗೆ ಬರುತ್ತಿದೆ. ಚಿತ್ರಮಂದಿರದಲ್ಲಿ ಸಿನಿಮಾ ಮಿಸ್​ ಮಾಡಿಕೊಂಡವರು ಮನೆಯಲ್ಲೇ ಕೂತು ಈ ಚಿತ್ರ ವೀಕ್ಷಿಸಬಹುದಾಗಿದೆ.

TV9 Kannada


Leave a Reply

Your email address will not be published. Required fields are marked *