Gaalipata 2 | Ravi Bopanna: ‘ರವಿ ಬೋಪಣ್ಣ’ ಹಾಗೂ ‘ಗಾಳಿಪಟ 2’ ಸಿನಿಮಾಗಳು ಇಂದು (ಆಗಸ್ಟ್ 12) ರಾಜ್ಯಾದ್ಯಂತ ಬಿಡುಗಡೆ ಆಗಿವೆ. ಈ ಎರಡೂ ಸಿನಿಮಾಗಳು ಬೇರೆ ಬೇರೆ ಕಾರಣದಿಂದ ನಿರೀಕ್ಷೆ ಮೂಡಿಸಿವೆ.

ಗಣೇಶ್, ರವಿಚಂದ್ರನ್
ಈ ವರ್ಷದ ಬಹುನಿರೀಕ್ಷಿತ ಸಿನಿಮಾಗಳಲ್ಲಿ ಒಂದಾದ ‘ಗಾಳಿಪಟ 2’ (Gaalipata 2) ಚಿತ್ರ ಇಂದು (ಆಗಸ್ಟ್ 12) ರಿಲೀಸ್ ಆಗಿದೆ. ಅದರ ಜೊತೆಗೆ ರವಿಚಂದ್ರನ್ ಅಭಿನಯದ ‘ರವಿ ಬೋಪಣ್ಣ’ (Ravi Bopanna) ಸಿನಿಮಾ ಕೂಡ ತೆರೆ ಕಂಡಿದೆ. ಹಾಗಾಗಿ ಈ ವಾರ ಸಿನಿಪ್ರಿಯರಿಗೆ ಡಬಲ್ ಧಮಾಕಾ. ಹಲವು ಕಾರಣದಿಂದ ಈ ಚಿತ್ರಗಳ ಮೇಲೆ ಅಭಿಮಾನಿಗಳಿಗೆ ನಿರೀಕ್ಷೆ ಇದೆ. ‘ಗಾಳಿಪಟ 2’ ಚಿತ್ರಕ್ಕೆ ಯೋಗರಾಜ್ ಭಟ್ ನಿರ್ದೇಶನ ಮಾಡಿದ್ದಾರೆ. ರವಿಚಂದ್ರನ್ ಅವರ ನಿರ್ದೇಶನದಲ್ಲಿ ‘ರವಿ ಬೋಪಣ್ಣ’ ಸಿನಿಮಾ ಮೂಡಿಬಂದಿದೆ. ಈ ಎರಡೂ ಸಿನಿಮಾಗಳು ಬೇರೆ ಬೇರೆ ಪ್ರಕಾರದಲ್ಲಿವೆ. ‘ಗೋಲ್ಡನ್ ಸ್ಟಾರ್’ ಗಣೇಶ್ (Golden Star Ganesh) ಹಾಗೂ ರವಿಚಂದ್ರನ್ ಅಭಿಮಾನಿಗಳು ಈ ಸಿನಿಮಾಗಳಿಗೆ ಹೇಗೆ ಪ್ರತಿಕ್ರಿಯಿಸುತ್ತಾರೆ ಎಂಬುದನ್ನು ತಿಳಿಯುವ ಸಮಯ ಬಂದಿದೆ.
ಜನರ ಪಾಲಿಗೆ ‘ಗಾಳಿಪಟ’ ಸಿನಿಮಾ ಎಂದರೆ ಒಂದು ಎಮೋಷನ್. ಈಗ ಆ ಚಿತ್ರದ ಎರಡನೇ ಪಾರ್ಟ್ ಬಂದಿದೆ. ಗಣೇಶ್ ಮತ್ತು ದಿಗಂತ್ ಜೊತೆಗೆ ಈ ಬಾರಿ ಪಾತ್ರವರ್ಗದಲ್ಲಿ ಪವನ್ ಕುಮಾರ್ ಸೇರಿಕೊಂಡಿದ್ದಾರೆ. ನಾಯಕಿಯರ ಸ್ಥಾನದಲ್ಲಿ ಶರ್ಮಿಳಾ ಮಾಂಡ್ರೆ, ವೈಭವಿ ಶಾಂಡಿಲ್ಯ, ಸಂಯುಕ್ತಾ ಮೆನನ್ ಇದ್ದಾರೆ. ಪೋಷಕ ಪಾತ್ರದಲ್ಲಿ ಕಲಾವಿದ ದಂಡೇ ನೆರೆದಿದೆ. ಅನಂತ್ ನಾಗ್, ಸುಧಾ ಬೆಳವಾಡಿ, ರಂಗಾಯಣ ರಘು, ಶ್ರೀನಾಥ್, ಪದ್ಮಜಾ ರಾವ್, ನಿಶ್ವಿಕಾ ನಾಯ್ಡು ಸೇರಿದಂತೆ ಅನೇಕರು ಈ ಸಿನಿಮಾದಲ್ಲಿ ನಟಿಸಿದ್ದಾರೆ.
ಹಾಡುಗಳ ಮೂಲಕ ‘ಗಾಳಿಪಟ 2’ ಸಿನಿಮಾ ಗಮನ ಸೆಳೆದಿದೆ. ‘ನೀನು ಬಗೆಹರಿದ ಹಾಡು..’, ‘ದೇವ್ಲೆ ದೇವ್ಲೆ..’, ‘ನಾವು ಬದುಕಿರಬಹುದು ಪ್ರಾಯಶಃ..’, ‘ನಾನಾಡದ ಮಾತೆಲ್ಲವ ಕದ್ದಾಲಿಸು..’ ಹಾಡುಗಳು ಜನರ ಮನ ಗೆದ್ದಿವೆ. ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಅವರ ಬತ್ತಳಿಕೆಯಿಂದ ಬಂದ ಹಾಡುಗಳಿಂದಾಗಿ ಸಿನಿಮಾ ಮೇಲಿನ ಹೈಪ್ ಹೆಚ್ಚಿದೆ. ರಮೇಶ್ ರೆಡ್ಡಿ ಅವರು ಈ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ.
ರವಿಚಂದ್ರನ್ ಸಿನಿಮಾ ಎಂದರೆ ಏನಾದರೂ ವಿಶೇಷ ಇದ್ದೇ ಇರುತ್ತದೆ ಎಂಬುದು ಅಭಿಮಾನಿಗಳ ನಂಬಿಕೆ. ಟ್ರೇಲರ್ ಮೂಲಕ ಈ ಚಿತ್ರ ಹೈಪ್ ಸೃಷ್ಟಿ ಮಾಡಿದೆ. ವಿಭಿನ್ನ ಗೆಟಪ್ನಲ್ಲಿ ‘ಕ್ರೇಜಿ ಸ್ಟಾರ್’ ಕಾಣಿಸಿಕೊಂಡಿದ್ದಾರೆ. ರಾಧಿಕಾ ಕುಮಾರಸ್ವಾಮಿ, ಕಾವ್ಯಾ ಶೆಟ್ಟಿ, ಪಾವನಾ ಗೌಡ, ಕಿಚ್ಚ ಸುದೀಪ್ ಮುಂತಾದವರು ಈ ಚಿತ್ರದಲ್ಲಿ ನಟಿಸಿದ್ದಾರೆ. ಯೂಟ್ಯೂಬ್ನಲ್ಲಿ ಈ ಸಿನಿಮಾದ ಟ್ರೇಲರ್ 10 ಲಕ್ಷಕ್ಕಿಂತಲೂ ಅಧಿಕ ವೀವ್ಸ್ ಪಡೆದಿದೆ. ಸೀತಾರಾಮ್ ಜಿಎಸ್ವಿ ಛಾಯಾಗ್ರಹಣ ಮಾಡಿದ್ದಾರೆ.