ಬೆಂಗಳೂರು: ಅಪಘಾತವಾಗಿ ಮೆದುಳು ನಿಷ್ಕ್ರಿಯಗೊಂಡಿದ್ದ ಸ್ಯಾಂಡಲ್​​ವುಡ್ ನಟ ಸಂಚಾರಿ ವಿಜಯ್ ಇಂದು ಮುಂಜಾನೆ ಇಹಲೋಕ ತ್ಯಜಿಸಿದ್ದಾರೆ. ವಿಜಯ್ ಅವರ ಹೃದಯಬಡಿತ ಇವತ್ತು ಮುಂಜಾನೆ 3.34ರ ಸುಮಾರಿಗೆ ನಿಂತಿದೆ ಎಂದು ಅಪೋಲೋ ಆಸ್ಪತ್ರೆ ವೈದ್ಯರು ಅಧಿಕೃತ ಹೆಲ್ತ್ ಬುಲೆಟಿನ್ ಬಿಡುಗಡೆಗೊಳಿಸಿದ್ದಾರೆ.

ರಾತ್ರಿಯಿಡೀ ಸಂಚಾರಿ ವಿಜಯ್ ಅಂಗಾಗ ದಾನ ಪ್ರಕ್ರಿಯೆ ನಡೆದಿದ್ದು, ಜೀವನ ಸಾರ್ಥಕತೆ ತಂಡ ವಿಜಯ್ ಅಂಗಾಂಗ ಸಂಗ್ರಹಿಸಿದೆ. ಅಪೋಲೋ ಆಸ್ಪತ್ರೆಯಲ್ಲೇ ವಿಕ್ಟೋರಿಯಾ ಆಸ್ಪತ್ರೆಯ ವೈದ್ಯರಿಂದ ನಟನ ಮರಣೋತ್ತರ ಪರೀಕ್ಷೆ ನಡೆಯಲಿದೆ. ನಂತರ ವಿಜಯ್ ಮೃತದೇಹವನ್ನ ಕುಟುಂಬಸ್ಥರಿಗೆ ಹಸ್ತಾಂತರಿಸಲಾಗುತ್ತದೆ.  ರವೀಂದ್ರ ಕಲಾಕ್ಷೇತ್ರದಲ್ಲಿ ಬೆಳಗ್ಗೆ 8ರಿಂದ 10ರವರೆಗೆ ಅಂತಿಮ ದರ್ಶನಕ್ಕೆ ಇಡಲಾಗುತ್ತದೆ. ಸ್ಥಳದಲ್ಲಿ  ಎಸ್​ಜೆ ಪಾರ್ಕ್ ಠಾಣೆಯ ಪೊಲೀಸರಿಂದ ಬಿಗಿ ಬಂದೋಬಸ್ತ್ ಏರ್ಪಡಿಸಲಾಗಿದೆ. ವಿಐಪಿ ಮತ್ತು ಸೆಲೆಬ್ರಿಟಿಗಳಿಗೆ ಟೌನ್ ಕಡೆಯಿಂದ ಹಾಗೂ ಅಭಿಮಾನಿಗಳಿಗೆ ಮತ್ತು ಸಾರ್ವಜನಿರಿಗೆ ರವೀಂದ್ರ ಕಲಾಕ್ಷೇತ್ರದ ದ್ವಾರದಿಂದ ಎಂಟ್ರಿ ನೀಡಲು ವ್ಯವಸ್ಥೆ ಮಾಡಲಾಗ್ತಿದೆ.

10 ಗಂಟೆ ಬಳಿಕ ವಿಜಯ್​ರ ಪಾರ್ಥಿವ ಶರೀರವನ್ನು ಸ್ವಗ್ರಾಮಕ್ಕೆ ರವಾನೆ ಮಾಡಲಾಗುತ್ತದೆ. ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನ ಪಂಚನಹಳ್ಳಿಯಲ್ಲಿ ಸಂಜೆ ವೇಳೆಗೆ ಸರ್ಕಾರಿ ಗೌರವಗಳೊಂದಿಗೆ ವಿಜಯ್ ಅಂತ್ಯಕ್ರಿಯೆ ನೆರವೇರಲಿದೆ.

The post ರವೀಂದ್ರ ಕಲಾಕ್ಷೇತ್ರದಲ್ಲಿ ವಿಜಯ್ ಅಂತಿಮದರ್ಶನ, ಚಿಕ್ಕಮಗಳೂರಿನಲ್ಲಿ ಅಂತ್ಯಕ್ರಿಯೆ appeared first on News First Kannada.

Source: newsfirstlive.com

Source link