ಮಡಿಕೇರಿ: ಕೊಡಗಿನ ಕುವರಿ, ಬಹುಭಾಷಾ ತಾರೆ ರಶ್ಮಿಕಾ ಮಂದಣ್ಣ ಅವರನ್ನು ನೋಡಲು ಬಂದ ಅಭಿಮಾನಿಯೋರ್ವ ಪೇಚಿಗೆ ಸಿಲುಕಿದ ಘಟನೆ ಮಡಿಕೇರಿಯಲ್ಲಿ ನಡೆದಿದೆ.

ಅಭಿಮಾನಿಯನ್ನು ಆಕಾಶ್ ತ್ರಿಪಾಠಿ ಎಂದು ಗುರುತಿಸಲಾಗಿದೆ. ತೆಲಂಗಾಣ ಮೂಲದವನಾಗಿರುವ ಈತ ತನ್ನ ನೆಚ್ಚಿನ ನಟಿಯನ್ನು ನೋಡಲು ಶುಕ್ರವಾರ ರಾತ್ರಿ ಕೊಡಗಿನ ವಿರಾಜಪೇಟೆ ತಾಲೂಕಿನ ಮಗ್ಗುಲ ಗ್ರಾಮಕ್ಕೆ ಬಂದಿದ್ದಾನೆ.

ಮೈಸೂರಿನವರೆಗೆ ರೈಲಿನಲ್ಲಿ ಬಂದಿರುವ ಆಕಾಶ್, ಬಳಿಕ ವಿರಾಜಪೇಟೆಗೆ ತರಕಾರಿ ತೆಗೆದುಕೊಂಡು ಹೋಗುವ ಗೂಡ್ಸ್ ಆಟೋದಲ್ಲಿ ವಿರಾಜಪೇಟೆ ತಲುಪಿದ್ದಾನೆ. ಅಲ್ಲಿಂದ ವಿರಾಜಪೇಟೆ ನಗರದಿಂದ ಗೂಗಲ್ ಮ್ಯಾಪ್ ಹಾಕಿಕೊಂಡು ಮಗ್ಗುಲ ಗ್ರಾಮದಲ್ಲಿ ಮಂದಣ್ಣ ಎಂಬವರಿಗೆ ಸೇರಿದ ಜಾಗ ಇದ್ದು, ಇಲ್ಲೇ ರಶ್ಮಿಕಾ ಮಂದಣ್ಣ ಮನೆ ಇರಬೇಕು ಅಂದುಕೊಂಡು ಆಟೋದಲ್ಲಿ ಗ್ರಾಮಕ್ಕೆ ಬಂದಿಳಿದಿದ್ದಾನೆ. ನಂತರ ಅಕ್ಕಪಕ್ಕದ ಜನರ ಬಳಿ ರಶ್ಮಿಕಾ ಮಂದಣ್ಣ ಮನೆ ಎಲ್ಲಿ ಎಂದು ವಿಚಾರಿಸಿ ಹುಡುಕಾಟ ನಡೆಸಿದ್ದಾನೆ. ಇದನ್ನೂ ಓದಿ: ಸಂಜೆ ತಿಂಡಿಗೆ ಮಾಡಿ ಬ್ರೆಡ್ ವಡೆ

ಈತನ ನಡವಳಿಕೆ ಕಂಡ ಮಗ್ಗುಲ ಗ್ರಾಮಸ್ಥರು ವಿರಾಜಪೇಟೆ ಪೊಲೀಸರಿಗೆ ತಿಳಿಸಿದ್ದಾರೆ. ಕೂಡಲೇ ಸ್ಥಳಕ್ಕೆ ಬಂದ ಪೊಲೀಸರು, ಆತನನ್ನು ವಿಚಾರಿಸಿದಾಗ ಇಂಗ್ಲಿಷ್‍ನಲ್ಲಿ ಮಾತನಾಡಿದ್ದಾನೆ. ಅಲ್ಲದೆ ಆತ ನಾನು ಈಗಲೇ ರಶ್ಮಿಕಾ ಮಂದಣ್ಣನನ್ನು ಭೇಟಿಯಾಗಬೇಕೆಂದು ಬಂದಿದ್ದೇನೆ. ನಾನು ಅವರ ಅಪ್ಪಟ ಅಭಿಮಾನಿ ಎಂದು ತಿಳಿಸಿದ್ದಾನೆ ಎನ್ನಲಾಗಿದೆ.

ಪೊಲೀಸರು ಆತನ ವಿಚಾರಣೆ ನಡೆಸಿ ಕೊರೋನಾ ಸಂದರ್ಭದಲ್ಲಿ ಹೀಗೆಲ್ಲ ಬರಬಾರದು ಎಂದು ಎಚ್ಚರಿಕೆ ನೀಡಿ ತೆಲಂಗಾಣಕ್ಕೆ ವಿರಾಜಪೇಟೆ ಗ್ರಾಮಾಂತರ ಠಾಣೆ ಪೊಲೀಸರು ವಾಪಸ್ ಕಳುಹಿಸಿದ್ದಾರೆ.

The post ರಶ್ಮಿಕಾರನ್ನು ನೋಡಲು ತೆಲಂಗಾಣದಿಂದ ಬಂದು ಪೇಚಿಗೆ ಸಿಲುಕಿದ ಅಭಿಮಾನಿ..! appeared first on Public TV.

Source: publictv.in

Source link