ರಶ್ಮಿಕಾ ಮಂದಣ್ಣ ಚಿತ್ರಕ್ಕೆ ಸಾಥ್​ ನೀಡಲಿದ್ದಾರೆ ಕೀರ್ತಿ ಸುರೇಶ್​, ಸಾಯಿ ಪಲ್ಲವಿ; ಅದ್ದೂರಿ ವೇದಿಕೆ ಸಜ್ಜು | Rashmika Mandanna starrer Adavallu Meeku Joharlu trailer will be released by Keerthy Suresh and Sai Pallavi


ರಶ್ಮಿಕಾ ಮಂದಣ್ಣ ಚಿತ್ರಕ್ಕೆ ಸಾಥ್​ ನೀಡಲಿದ್ದಾರೆ ಕೀರ್ತಿ ಸುರೇಶ್​, ಸಾಯಿ ಪಲ್ಲವಿ; ಅದ್ದೂರಿ ವೇದಿಕೆ ಸಜ್ಜು

ಕೀರ್ತಿ ಸುರೇಶ್, ರಶ್ಮಿಕಾ ಮಂದಣ್ಣ, ಸಾಯಿ ಪಲ್ಲವಿ

ಬಹುಭಾಷೆಯಲ್ಲಿ ರಶ್ಮಿಕಾ ಮಂದಣ್ಣ (Rashmika Mandanna) ಸದ್ದು ಮಾಡುತ್ತಿದ್ದಾರೆ. ತೆಲುಗಿನಲ್ಲಿ ಅವರು ನಟಿಸಿದ ‘ಪುಷ್ಪ’ ಸಿನಿಮಾ ಭರ್ಜರಿ ಯಶಸ್ಸು ಕಂಡಿತು. ಅದರಿಂದಾಗಿ ರಶ್ಮಿಕಾ ಮಂದಣ್ಣ ಅವರ ವೃತ್ತಿಜೀವನಕ್ಕೆ ದೊಡ್ಡ ಮೈಲೇಜ್​​ ಸಿಕ್ಕಿದೆ. ಟಾಲಿವುಡ್​ನಲ್ಲಿ ಅವರ ಇನ್ನೊಂದು ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ. ಶರ್ವಾನಂದ್​ ಜೊತೆ ರಶ್ಮಿಕಾ ಅಭಿನಯಿಸಿರುವ ‘ಆಡವಾಳ್ಳು ಮೀಕು ಜೋಹರ್ಲು’ (Adavallu Meeku Joharlu) ಸಿನಿಮಾ ಫೆ.25ರಂದು ತೆರೆಕಾಣಲಿದೆ. ಹಲವು ಕಾರಣಗಳಿಂದಾಗಿ ಈ ಚಿತ್ರ ನಿರೀಕ್ಷೆ ಮೂಡಿಸಿದೆ. ಈಗ ಈ ಚಿತ್ರದ ಟ್ರೇಲರ್​ ಬಿಡುಗಡೆಗೆ ಕ್ಷಣಗಣನೆ ಆರಂಭ ಆಗಿದೆ. ಅದಕ್ಕಾಗಿ ಹೈದರಾಬಾದ್​ನಲ್ಲಿ ಅದ್ದೂರಿ ವೇದಿಕೆ ಸಜ್ಜಾಗಿದೆ. ವಿಶೇಷ ಏನೆಂದರೆ, ‘ಆಡವಾಳ್ಳು ಮೀಕು ಜೋಹರ್ಲು’ ಸಿನಿಮಾದ ಟ್ರೇಲರ್​ ರಿಲೀಸ್​ ಕಾರ್ಯಕ್ರಮಕ್ಕೆ ದಕ್ಷಿಣ ಭಾರತದ ಸ್ಟಾರ್​ ನಟಿಯರಾದ ಕೀರ್ತಿ ಸುರೇಶ್​ (Keerthy Suresh) ಹಾಗೂ ಸಾಯಿ ಪಲ್ಲವಿ ಮುಖ್ಯ ಅತಿಥಿಗಳಾಗಿ ಆಗಮಿಸುತ್ತಿದ್ದಾರೆ. ಟಾಲಿವುಡ್​ ಅಂಗಳದಲ್ಲಿ ಈ ವಿಚಾರ ಚರ್ಚೆ ಆಗುತ್ತಿದೆ. ವೇದಿಕೆಯಲ್ಲಿ ಕೀರ್ತಿ ಸುರೇಶ್​ ಹಾಗೂ ಸಾಯಿ ಪಲ್ಲವಿ ಏನು ಮಾತನಾಡಲಿದ್ದಾರೆ ಎಂಬ ಕೌತುಕ ಮೂಡಿದೆ.

ಸಾಮಾನ್ಯವಾಗಿ ಯಾವುದೇ ಸಿನಿಮಾದ ಟ್ರೇಲರ್​ ರಿಲೀಸ್ ಅಥವಾ ಪ್ರೀ-ರಿಲೀಸ್​ ಕಾರ್ಯಕ್ರಮಕ್ಕೆ ಸ್ಟಾರ್​ ಹೀರೋಗಳನ್ನು ಆಹ್ವಾನಿಸಲಾಗುತ್ತದೆ. ಇನ್ನೂ ಕೆಲವೊಮ್ಮೆ ರಾಜಕಾರಣಿಗಳನ್ನು ಹಾಗೂ ಖ್ಯಾತ ಉದ್ಯಮಿಗಳನ್ನು ಕರೆಯಲಾಗುತ್ತದೆ. ಆದರೆ ‘ಆಡವಾಳ್ಳು ಮೀಕು ಜೋಹರ್ಲು’ ಸಿನಿಮಾ ತಂಡವು ನಟಿಯರಿಗೆ ಮಣೆ ಹಾಕಿರುವುದು ವಿಶೇಷ. ಕೀರ್ತಿ ಸುರೇಶ್​ ಹಾಗೂ ಸಾಯಿ ಪಲ್ಲವಿ ಅವರು ಈ ಚಿತ್ರದ ಟ್ರೇಲರ್​ ಬಿಡುಗಡೆ ಮಾಡಲಿದ್ದಾರೆ.

ಈ ಸಿನಿಮಾದಲ್ಲಿ ಶರ್ವಾನಂದ್​ಗೆ ಜೋಡಿಯಾಗಿ ರಶ್ಮಿಕಾ ಮಂದಣ್ಣ ನಟಿಸಿದ್ದಾರೆ. ತಿರುಮಲ ಕಿಶೋರ್​ ಅವರು ಈ ಚಿತ್ರಕ್ಕೆ ನಿರ್ದೇಶನ ಮಾಡಿದ್ದಾರೆ. ಎಸ್​ಎಲ್​ವಿ ಸಿನಿಮಾಸ್​ ಬ್ಯಾನರ್​ ಮೂಲಕ ‘ಆಡವಾಳ್ಳು ಮೀಕು ಜೋಹರ್ಲು’ ಸಿನಿಮಾ ನಿರ್ಮಾಣ ಆಗಿದೆ. ಚಿತ್ರದ ಪ್ರಚಾರ ಕಾರ್ಯದಲ್ಲಿ ತಂಡ ಬ್ಯುಸಿ ಆಗಿದೆ.

ರಶ್ಮಿಕಾ ಕೈಯಲ್ಲೀಗ ಹಲವು ಸಿನಿಮಾಗಳಿವೆ. ಅವರು ನಟಿಸಿರುವ ‘ಆಡವಾಳ್ಳು ಮೀಕು ಜೋಹಾರ್ಲು’ ತೆಲುಗು ಚಿತ್ರ ಫೆ.25ರಂದು ಬಿಡುಗಡೆ ಆಗಲಿದೆ. ಹಿಂದಿಯಲ್ಲಿ ‘ಮಿಷನ್​ ಮಜ್ನು’, ‘ಗುಡ್​ ಬೈ’ ಸಿನಿಮಾಗಳು ಬಿಡುಗಡೆಗೆ ಸಜ್ಜಾಗುತ್ತಿವೆ. ತೆಲುಗಿನ ‘ಪುಷ್ಪ 2’ ಸಿನಿಮಾದ ಕೆಲಸಗಳಲ್ಲಿ ರಶ್ಮಿಕಾ ಪಾಲ್ಗೊಳ್ಳಬೇಕಿದೆ. ಈ ನಡುವೆ ರಶ್ಮಿಕಾ ಅವರ ಖಾಸಗಿ ಜೀವನದ ಬಗ್ಗೆ ಕೂಡ ಆಗಾಗ ಚರ್ಚೆ ಆಗುತ್ತದೆ. ಇತ್ತೀಚೆಗೆ ಅವರು ನೀಡಿದ ಸಂದರ್ಶನದಲ್ಲಿ ಮದುವೆ ಬಗ್ಗೆ ಪ್ರಸ್ತಾಪ ಆಯಿತು.

‘ನನ್ನ ಪ್ರಕಾರ ಲವ್​ ಎಂದರೆ ಪರಸ್ಪರ ಸಮಯ, ಗೌರವ ನೀಡುವುದು. ಒಬ್ಬರ ಜೊತೆ ಸುರಕ್ಷಿತ ಭಾವ ಮೂಡುವುದೇ ಲವ್​. ಪ್ರೀತಿ ಎಂಬುದು ಪೂರ್ತಿಯಾಗಿ ಭಾವನೆಗಳಿಗೆ ಸಂಬಂಧಿಸಿದ ವಿಷಯ ಆದ್ದರಿಂದ ಅದನ್ನು ವಿವರಿಸುವುದು ಕಷ್ಟ. ಎರಡೂ ಕಡೆಯಿಂದಲೂ ಸರಿಯಾಗಿದ್ದಾಗ ಪ್ರೀತಿ ಫಲಿಸುತ್ತದೆ. ಕೇವಲ ಒಬ್ಬರ ಕಡೆಯಿಂದ ಸಾಧ್ಯವಿಲ್ಲ. ಮದುವೆ ಬಗ್ಗೆ ಏನು ಆಲೋಚನೆ ಮಾಡಬೇಕು ಅಂತ ನನಗೆ ತಿಳಿದಿಲ್ಲ. ಮದುವೆ ಆಗಲು ನಾನಿನ್ನೂ ತುಂಬ ಚಿಕ್ಕವಳು. ಮದುವೆ ಬಗ್ಗೆ ನಾನು ನಿರ್ಧಾರ ಮಾಡಿಲ್ಲ. ನಿಮಗೆ ಕಂಫರ್ಟಬಲ್​ ಎನಿಸುವವರ ಜೊತೆ ನೀವು ಇರಬೇಕು’ ಎಂದು ರಶ್ಮಿಕಾ ಮಂದಣ್ಣ ಹೇಳಿದ್ದರು.

TV9 Kannada


Leave a Reply

Your email address will not be published. Required fields are marked *