ರಷ್ಯಾದಿಂದ ಭಾರತದ ಇಂಧನ ಖರೀದಿ ನಿರ್ಬಂಧದ ಉಲ್ಲಂಘನೆಯಲ್ಲ: ನಿಲುವು ಬದಲಿಸಿದ ಅಮೆರಿಕ | America Agrees to India Needs Says purchase of Russian oil is no violation of its sanctions


ರಷ್ಯಾದಿಂದ ಭಾರತದ ಇಂಧನ ಖರೀದಿ ನಿರ್ಬಂಧದ ಉಲ್ಲಂಘನೆಯಲ್ಲ: ನಿಲುವು ಬದಲಿಸಿದ ಅಮೆರಿಕ

ಪ್ರಾತಿನಿಧಿಕ ಚಿತ್ರ

ವಾಷಿಂಗ್​ಟನ್: ಉಕ್ರೇನ್ ಮೇಲೆ ದಾಳಿ ನಡೆಸಿದ ರಷ್ಯಾ ವಿರುದ್ಧ ಅಮೆರಿಕ ಆರ್ಥಿಕ ನಿರ್ಬಂಧಗಳನ್ನು ವಿಧಿಸಿದೆ. ಈ ಬೆಳವಣಿಗೆಯ ನಂತರವೂ ಭಾರತವು ರಷ್ಯಾದೊಂದಿಗೆ ವಾಣಿಜ್ಯ ಸಂಬಂಧಗಳನ್ನು ಮುಂದುವರಿಸಿತ್ತು. ‘ರಷ್ಯಾ ವಿಚಾರದಲ್ಲಿ ಭಾರತ ಸ್ಪಷ್ಟ ನಿಲುವು ತಳೆಯಬೇಕು’ ಎಂದು ಅಮೆರಿಕ ಆಗ್ರಹಿಸಿತ್ತು. ಭಾರತವು ತನ್ನ ಅಗತ್ಯಗಳು ಮತ್ತು ಹಿತಾಸಕ್ತಿಗೆ ಪೂರಕವಾಗಿ ನಿರ್ಧಾರ ತೆಗೆದುಕೊಳ್ಳುವ ಸ್ವಾತಂತ್ರ್ಯ ಹೊಂದಿದೆ’ ಎಂದು ಭಾರತ ಸರ್ಕಾರ ಪ್ರತಿಪಾದಿಸಿತ್ತು. ಈ ವಾದ ವಿವಾದಗಳು ಇದೀಗ ಒಂದು ಹಂತಕ್ಕೆ ಬಂದಿದ್ದು, ‘ರಷ್ಯಾದಿಂದ ಇಂಧನ ಖರೀದಿಸುವ ಭಾರತದ ನಿರ್ಧಾರವು ಅಮೆರಿಕದ ನಿರ್ಬಂಧಗಳನ್ನು ಉಲ್ಲಂಘಿಸುವುದಿಲ್ಲ’ ಎಂದು ಅಮೆರಿಕ ಸರ್ಕಾರ ಸ್ಪಷ್ಟಪಡಿಸಿದೆ.

‘ಭಾರತವು ರಷ್ಯಾದಿಂದ ಹೆಚ್ಚಿನ ಪ್ರಮಾಣದಲ್ಲೇನೂ ಆಮದು ಮಾಡಿಕೊಳ್ಳುತ್ತಿಲ್ಲ. ಅವರ ಒಟ್ಟಾರೆ ವಹಿವಾಟು ನಮ್ಮ ದೇಶದೊಂದಿಗೆ ಹೆಚ್ಚಿನ ಪ್ರಮಾಣದಲ್ಲಿದೆ. ಭಾರತವು ತನ್ನ ಇಂಧನ ಬೇಡಿಕೆಯ ಶೇ 2ರಷ್ಟು ಪ್ರಮಾಣವನ್ನೂ ರಷ್ಯಾದಿಂದ ಆಮದು ಮಾಡಿಕೊಳ್ಳುತ್ತಿಲ್ಲ. ಹೀಗಾಗಿ ಇದರಲ್ಲಿ ಆತಂಕಕಾರಿಯಾದುದು ಏನೂ ಇಲ್ಲ’ ಎಂದು ಅಮೆರಿಕ ಅಧ್ಯಕ್ಷ ಭವನದ ಪತ್ರಿಕಾ ಕಾರ್ಯದರ್ಶಿ ಜೆನ್ ಸಾಕಿ ಹೇಳಿದರು. ಅಮೆರಿಕ ಅಧ್ಯಕ್ಷ ಜೋ ಬೈಡೆನ್ ಮತ್ತು ಭಾರತದ ಪ್ರಧಾನಿ ನರೇಂದ್ರ ಮೋದಿ ಅವರ ವರ್ಚುವಲ್ ಭೇಟಿ, ಮಾತುಕತೆಯ ನಂತರ ಜೆನ್ ಸಾಕಿ ಮೇಲಿನಂತೆ ಪ್ರತಿಕ್ರಿಯಿಸಿದರು. ಜೆನ್ ಸಾಕಿ ಅವರ ಮಾಧ್ಯಮಗೋಷ್ಠಿಯ ನಂತರ ಭಾರತ ಮತ್ತು ಅಮೆರಿಕ ಸರ್ಕಾರಗಳ ವಿದೇಶಾಂಗ ವ್ಯವಹಾರ ಹಾಗೂ ರಕ್ಷಣಾ ಇಲಾಖೆ ಸಚಿವರ ಸಭೆ ನಡೆಯಿತು.

ಉಕ್ರೇನ್ ಮೇಲೆ ರಷ್ಯಾ ದಾಳಿ ನಡೆಸಿದ ದಿನದಿಂದಲೂ ಭಾರತವು ತನ್ನ ನಿಲುವು ಸ್ಪಷ್ಟಪಡಿಸಬೇಕೆಂದು ಅಮೆರಿಕ ಆಗ್ರಹಿಸುತ್ತಲೇ ಇದೆ. ಆದರೆ ರಕ್ಷಣೆ ಸೇರಿದಂತೆ ಹಲವು ವಿಚಾರಗಳಲ್ಲಿ ರಷ್ಯಾವನ್ನು ನೆಚ್ಚಿಕೊಂಡಿರುವ ಭಾರತ ಈವರೆಗೆ ಅಮೆರಿಕ ಆಗ್ರಹಕ್ಕೆ ಮಣಿದಿರಲಿಲ್ಲ. ‘ನಾವು ಇಂಧನ ಆಮದು ಮಾಡಿಕೊಳ್ಳುವುದನ್ನು ನಿರ್ಬಂಧಿಸಿರಲಿಲ್ಲ. ಹೀಗಾಗಿ ಭಾರತವು ನಮ್ಮ ನಿರ್ಬಂಧ ಸೂಚನೆಯನ್ನು ಉಲ್ಲಂಘಿಸಿಲ್ಲ. ಮುಂದಿನ ದಿನಗಳಲ್ಲಿ ಈ ಬಗ್ಗೆ ಪ್ರಧಾನಿ ಮೋದಿ ಹಾಗೂ ಭಾರತೀಯರೇ ಮಾತನಾಡಲಿ ಎಂದು ಬಯಸುವೆ’ ಎಂದು ಅವರು ಅಮೆರಿಕದ ನಿಲುವು ಸ್ಪಷ್ಟಪಡಿಸಿದರು.

ಅಮೆರಿಕ, ಬ್ರಿಟನ್ ಮತ್ತು ಐರೋಪ್ಯ ಒಕ್ಕೂಟಗಳು ರಷ್ಯಾದ ಮೇಲೆ ನಿರ್ಬಂಧ ವಿಧಿಸಿದ ನಂತರ ಭಾರತವು 1.3 ಕೋಟಿ ಬ್ಯಾರೆಲ್ ಕಚ್ಚಾತೈಲವನ್ನು ರಿಯಾಯ್ತಿ ದರದಲ್ಲಿ ಆಮದು ಮಾಡಿಕೊಂಡಿದೆ. ಭಾರತಕ್ಕೆ ಒಂದು ದಿನಕ್ಕೆ 50 ಲಕ್ಷ ಬ್ಯಾರೆಲ್ ಕಚ್ಚಾತೈಲ ಬೇಕಿದೆ. ರಷ್ಯಾದಿಂದ ತೈಲ ಖರೀದಿಸುವ ಭಾರತದ ನಿಲುವನ್ನು ವಿದೇಶಾಂಗ ವ್ಯವಹಾರಗಳ ಖಾತೆ ಸಚಿವ ಎಸ್.ಜೈಶಂಕರ್ ಮತ್ತು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಈ ಮೊದಲೂ ಸಮರ್ಥಿಸಿಕೊಂಡಿದ್ದರು. ‘ಅಮೆರಿಕದ ವಿದೇಶಾಂಗ ಮತ್ತು ರಕ್ಷಣಾ ಇಲಾಖೆ ಕಾರ್ಯದರ್ಶಿಗಳ ಸಭೆಯ ನಂತರ ಪ್ರತಿಕ್ರಿಯಿಸಿದ್ದ ಜೈಶಂಕರ್, ‘ರಷ್ಯಾದಿಂದ ಇಂಧನ ಖರೀದಿಸುವ ಕುರಿತು ನಿಮಗೆ ತಕರಾರುಗಳಿದ್ದರೆ ಮೊದಲು ಯೂರೋಪ್​ನತ್ತ ನೋಡಿ. ಐರೋಪ್ಯ ದೇಶಗಳ ಒಂದು ದಿನದ ಖರೀದಿಯು ನಾವು ಒಂದು ತಿಂಗಳಲ್ಲಿ ಖರೀದಿಸುವ ಮಟ್ಟಕ್ಕಿಂತ ಹೆಚ್ಚು’ ಎಂದು ಹೇಳಿದ್ದರು.

TV9 Kannada


Leave a Reply

Your email address will not be published. Required fields are marked *