ರಸ್ತೆಗಳನ್ನು ಕಂಗನಾ ಕೆನ್ನೆಗಿಂತ ಸುಗಮವಾಗಿಸುತ್ತೇನೆ: ಜಾರ್ಖಂಡ್​ ಕಾಂಗ್ರೆಸ್ ಶಾಸಕ ಇರ್ಫಾನ್ ಅನ್ಸಾರಿ ವಿವಾದಿತ ಹೇಳಿಕೆ | Jharkhand Congress MLA Dr Irfan Ansari says he will make roads smoother than Kangana Cheeks


ರಸ್ತೆಗಳನ್ನು ಕಂಗನಾ ಕೆನ್ನೆಗಿಂತ ಸುಗಮವಾಗಿಸುತ್ತೇನೆ: ಜಾರ್ಖಂಡ್​ ಕಾಂಗ್ರೆಸ್ ಶಾಸಕ ಇರ್ಫಾನ್ ಅನ್ಸಾರಿ ವಿವಾದಿತ ಹೇಳಿಕೆ

ಜಾರ್ಖಂಡ್ ಕಾಂಗ್ರೆಸ್ ಶಾಸಕ ಡಾ.ಇರ್ಫಾನ್ ಅನ್ಸಾರಿ ಮತ್ತು ಕಂಗನಾ ರಣಾವತ್ (ಸಾಂದರ್ಭಿಕ ಚಿತ್ರ)

ಜಾರ್ಖಂಡ್: ಬಾಲಿವುಡ್ ನಟಿಯರು ಉತ್ತರ ಭಾರತದ ರಾಜಕಾರಣಿಗಳಿಗೆ ಹೋಲಿಕೆಯಾಗುವ ಪರಂಪರೆ ಇಂದು ನಿನ್ನೆಯದಲ್ಲ. ಲಾಲು ಪ್ರಸಾದ್ ಯಾದವ್ (Lalu Prasad Yadav) ಪ್ರಾರಂಭಿಸಿದ್ದ ಈ ಮಾದರಿಯ ಹೇಳಿಕೆಗಳನ್ನು ಈಗಿನ ರಾಜಕಾರಣಿಗಳೂ ಮುಂದುವರೆಸಿದ್ದಾರೆ. ಇತ್ತೀಚೆಗೆ ಜಾರ್ಖಂಡ್​ನ (Jharkhand) ಕಾಂಗ್ರೆಸ್ ಶಾಸಕರೊಬ್ಬರು ಇದೇ ಮಾದರಿಯ ಹೇಳಿಕೆ ನೀಡಿ ವಿವಾದಕ್ಕೆ ಸಿಲುಕಿದ್ದಾರೆ. ಪ್ರಸ್ತುತ ವೈರಲ್ ಆಗಿರುವ ವಿಡಿಯೋ ಶಾಸಕ ಡಾ.ಇರ್ಫಾನ್ ಅನ್ಸಾರಿಯವರೇ (Dr Irfan Ansari) ರೆಕಾರ್ಡ್ ಮಾಡಿರುವ ಮಾದರಿಯಲ್ಲಿದೆ. ಅವರ ಕ್ಷೇತ್ರದ ರಸ್ತೆಗಳನ್ನು ಬಾಲಿವುಡ್ ನಟಿ ಕಂಗನಾ ರಣಾವತ್ (Kangana Ranaut) ಕೆನ್ನೆಗಿಂತ ಸುಗಮವಾಗಿಸುತ್ತೇನೆ ಎಂದು ಅವರು ವಿಡಿಯೋದಲ್ಲಿ ಹೇಳಿರುವುದು ದಾಖಲಾಗಿದೆ. ಅಂತಹ ರಸ್ತೆಗಳಲ್ಲಿ ಬುಡಕಟ್ಟು ಸಮುದಾಯದ ಮಕ್ಕಳು ಹಾಗೂ ರಾಜ್ಯದ ಯುವಕರು ಓಡಾಡಬಹುದು. ಅಂತಹ ಹದಿನಾಲ್ಕು ರಸ್ತೆಗಳ ನಿರ್ಮಾಣ ಸದ್ಯದಲ್ಲೇ ಆರಂಭವಾಗಲಿದೆ ಎಂದು ಶಾಸಕ ಅನ್ಸಾರಿ ಹೇಳಿದ್ದಾರೆ. ಜಾರ್ಖಂಡ್​ನ ಜಮ್ತಾರಾ ಕ್ಷೇತ್ರವನ್ನು ಅವರು ಪ್ರತಿನಿಧಿಸುತ್ತಿದ್ದಾರೆ.

ಶಾಸಕ ಡಾ.ಇರ್ಫಾನ್ ಅನ್ಸಾರಿ ವೈದ್ಯ ವೃತ್ತಿಯ ಹಿನ್ನೆಲೆಯವರು. ಈ ಹಿಂದೆ ಕೂಡ ವಿವಾದಿತ ಹೇಳಿಕೆಗಳನ್ನು ನೀಡಿ ಸುದ್ದಿಯಾಗಿದ್ದರು. ಮಾಸ್ಕ್​​ಗಳನ್ನು ಹೆಚ್ಚುಕಾಲ ಧರಿಸಬೇಕಾಗಿಲ್ಲ ಎಂಬರ್ಥದ ಹೇಳಿಕೆಗಳನ್ನು ಅವರು ನೀಡಿದ್ದರು. ‘‘ಮಾಸ್ಕ್​​ಗಳನ್ನು ದೀರ್ಘಕಾಲ ಧರಿಸಬಾರದು. ವೃತ್ತಿಯಲ್ಲಿ ವೈದ್ಯನಾಗಿರುವ ನಾನೇ ಹೇಳುತ್ತಿದ್ದೇನೆ- ಮಾಸ್ಕ್ ದೀರ್ಘಕಾಲ ಧರಿಸಬೇಡಿ. ಸಾರ್ವಜನಿಕ ಸ್ಥಳಗಳಲ್ಲಿ ಧರಿಸಿ. ಕೊವಿಡ್ ಮೂರನೇ ಅಲೆಯ ಬಗ್ಗೆ ಭಯಬೇಡ. ಐದಾರು ದಿನದಲ್ಲಿ ಕೊವಿಡ್ ಸೊಂಕು ದೂರಾಗುತ್ತವೆ’’ ಎಂದು ಹೇಳಿಕೆ ನೀಡಿದ್ದರು. ಸಮಾರಂಭವೊಂದರಲ್ಲಿ ಮಾಸ್ಕ್ ಧರಿಸದ ಅನ್ಸಾರಿ, ಅದಕ್ಕೆ ಕಾರಣವನ್ನು ಕೇಳಿದಾಗ ಮೇಲಿನ ಉತ್ತರ ನೀಡಿದ್ದರು.

ಇತ್ತೀಚೆಗಷ್ಟೇ ಶಿವಸೇನೆ ನಾಯಕ, ಮಹಾರಾಷ್ಟ್ರ ಸಚಿವ ಗುಲಾಬ್​ರಾವ್ ಪಾಟೀಲ್ ರಸ್ತೆಗಳನ್ನು ಹೇಮಾ ಮಾಲಿನಿ ಕೆನ್ನೆಗಳಿಗೆ ಹೋಲಿಸಿದ್ದರು. ನಂತರ ಹೇಳಿಕೆ ವಿವಾದ ಪಡೆಯುತ್ತಿದ್ದಂತೆ ಕ್ಷಮೆ ಕೋರಿದ್ದರು. ರಾಜಸ್ಥಾನ ಸಚಿವ ರಾಜೇಂದ್ರ ಸಿಂಗ್ ತಮ್ಮ ಕ್ಷೇತ್ರದ ರಸ್ತೆಗಳನ್ನು ಕತ್ರಿನಾ ಕೈಫ್ ಕೆನ್ನೆಯಂತೆ ಮಾಡುತ್ತೇನೆ ಎಂದು ಆಶ್ವಾಸನೆ ನೀಡಿದ್ದು ಕೂಡ ಇತ್ತೀಚೆಗೆ ವಿವಾದ ಸೃಷ್ಟಿಸಿತ್ತು. ನಂತರ ಅವರೂ ಕ್ಷಮೆ ಕೋರಿದ್ದರು.

ಈ ಹಿಂದೆ ಬಿಹಾರದ ಮುಖ್ಯಮಂತ್ರಿಯಾಗಿದ್ದ ಲಾಲು ಪ್ರಸಾದ್ ಯಾದವ್ ರಸ್ತೆಗಳನ್ನು ನಟಿ ಹೇಮಾ ಮಾಲಿನಿ ಕೆನ್ನೆಗಳಿಗೆ ಹೋಲಿಸಿದ್ದರು. ಈ ಹೋಲಿಕೆಯನ್ನು ಈಗಿನ ರಾಜಕೀಯ ಮುಖಂಡರು ಮುಂದುವರೆಸಿದ್ದಾರೆ. ಅಂತಹ ಹೇಳಿಕೆಗಳ ಕುರಿತು ಇತ್ತೀಚೆಗೆ ಪ್ರತಿಕ್ರಿಯಿಸಿದ್ದ ಮಥುರಾ ಕ್ಷೇತ್ರದ ಸಂಸದೆ ಹೇಮಾ ಮಾಲಿನಿ, ‘‘ನನ್ನ ಕೆನ್ನೆಗಳನ್ನು ಸರಿಯಾಗಿ, ಸುರಕ್ಷಿತವಾಗಿ ಇಟ್ಟುಕೊಳ್ಳುವುದು ಉತ್ತಮ’’ ಎಂದು ಮಾರ್ಮಿಕವಾಗಿ ಹೇಳಿದ್ದರು.

ಇಂತಹ ಹೇಳಿಕೆಗಳಿಗೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದ ಹೇಮಾ ಮಾಲಿನಿ, ‘‘ಇಂಥದ್ದು ಆಗಬಾರದು’’ ಎಂದು ಹೇಳಿದ್ದರು. ಅಂತಹ ಹೇಳಿಕೆಗಳನ್ನು ಸಾರ್ವಜನಿಕರು ಹೇಳಿದರೆ ನಿರ್ಲಕ್ಷಿಸಬಹುದು. ಆದರೆ ರಾಜಕೀಯ ಮುಖಂಡರು, ಸಂಸತ್ ಸದಸ್ಯರು ಇಂತಹ ಹೇಳಿಕೆಗಳನ್ನು ನೀಡಿದರೆ ಅದು ಉತ್ತಮ ಅಭಿರುಚಿಯಲ್ಲಿದೆ ಎಂದು ತಮಗನ್ನಿಸುವುದಿಲ್ಲ ಎಂದು ಅವರು ಹೇಳಿದ್ದರು. ಅಲ್ಲದೇ ಇಂತಹ ಪದಪ್ರಯೋಗ ಬಳಸುವ ಮುನ್ನ ಎಚ್ಚರಿಕೆಯಿಂದಿರಬೇಕು ಎಂದಿದ್ದ ಅವರು, ‘‘ಯಾವುದೇ ಮಹಿಳೆಗೆ ಅಂತಹ ವಿಷಯಗಳನ್ನು ಹೋಲಿಸಿ ಮಾತನಾಡಬಾರದು’’ ಎಂದು ರಾಜಕೀಯ ನಾಯಕರಿಗೆ ಕಿವಿಮಾತು ಹೇಳಿದ್ದರು.

TV9 Kannada


Leave a Reply

Your email address will not be published. Required fields are marked *